ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಂಕ ಆರೋಪದ ಹಿಂದೆ ರಾಜಕಾರಣ

Last Updated 3 ಮೇ 2018, 19:30 IST
ಅಕ್ಷರ ಗಾತ್ರ

ಬಳ್ಳಾರಿ ಸಂಸದರಾಗಿರುವ ಬಿ. ಶ್ರೀರಾಮುಲು ಬಿಜೆಪಿಯ ರಾಜ್ಯ ಉಪಾಧ್ಯಕ್ಷರಲ್ಲಿ ಒಬ್ಬರು. ವಿಧಾನಸಭಾ ಚುನಾವಣೆಯಲ್ಲಿ ಮೊಳಕಾಲ್ಮುರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸುತ್ತಿರುವ ಬಾದಾಮಿ ಹೀಗೆ ಎರಡು ಕ್ಷೇತ್ರಗಳಲ್ಲಿ ಕಣಕ್ಕೆ ಇಳಿದಿದ್ದಾರೆ. ಮುಖ್ಯಮಂತ್ರಿ ಎದುರು ಸ್ಪರ್ಧೆ ಮಾಡುವಂತೆ ಪಕ್ಷ ಕೊನೆಗಳಿಗೆಯಲ್ಲಿ ಅವರಿಗೆ ನೀಡಿದ ಸವಾಲು. ಈ ಎಲ್ಲ ವಿಷಯಗಳ ಕುರಿತು ರಾಮುಲು ಮಾತನಾಡಿದ್ದಾರೆ.

ಮುಖ್ಯಮಂತ್ರಿ ಎದುರು ಬಾದಾಮಿಯಲ್ಲಿ ಕಣಕ್ಕೆ ಇಳಿದಿದ್ದೀರಿ? ಅಲ್ಲಿನ ಸವಾಲು ಹೇಗಿದೆ?

ಪ್ರಧಾನಿ ನರೇಂದ್ರ ಮೋದಿ, ಪಕ್ಷದ ಅಧ್ಯಕ್ಷರಾದ ಅಮಿತ್ ಶಾ, ನಾಯಕರಾದ ಯಡಿಯೂರಪ್ಪನವರು ನನ್ನ ಮೇಲೆ ವಿಶ್ವಾಸ ಇಟ್ಟು ಬಾದಾಮಿಯಲ್ಲಿ ಕಣಕ್ಕೆ ಇಳಿಸಿದ್ದಾರೆ. ಅನೇಕ ಚುನಾವಣೆಗಳನ್ನು ಎದುರಿಸಿದರೂ ಇದು ಹೊಸ ಅನುಭವ. ಕ್ಷೇತ್ರದಲ್ಲಿರುವ ಅಪಾರ ಪ‍್ರಮಾಣದಲ್ಲಿರುವ ಬಿಜೆಪಿ ಕಾರ್ಯಕರ್ತರ ಬೆಂಬಲ, ನಾಯಕರ ಆಶೀರ್ವಾದ ಹಾಗೂ ಕಾಂಗ್ರೆಸ್ ಸರ್ಕಾರದ ಐದು ವರ್ಷದ ದುರಾಡಳಿತದ ವಿರುದ್ಧದ ಜನರ ತೀರ್ಪು ನನ್ನ ಕೈಹಿಡಿಯಲಿದೆ. ಈ ಚುನಾವಣೆ ನಮ್ಮ ಪಕ್ಷದ ಅಭಿವೃದ್ಧಿ ಪರವಾದ ಸಿದ್ಧಾಂತ ಹಾಗೂ ಕಾಂಗ್ರೆಸ್‌ನ ಭ್ರಷ್ಟ ಆಡಳಿತ ಮಧ್ಯೆ ನಡೆಯುತ್ತಿರುವ ಸ್ಪರ್ಧೆ. ಅಲ್ಲಿ ನಾನು ನೆಪಮಾತ್ರ; ಪಕ್ಷದ ಕಾರ್ಯಕರ್ತರು ಕಾಂಗ್ರೆಸ್‌ಗೆ ಪಾಠ ಕಲಿಸಲಿದ್ದಾರೆ.

ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಅಗತ್ಯವಿತ್ತಾ?

ಅದು ನನ್ನ ತೀರ್ಮಾನವಲ್ಲ. ಪಕ್ಷದ ವರಿಷ್ಠರು ಹೇಳಿದಂತೆ ನಾನು ನಡೆದುಕೊಂಡಿದ್ದೇನೆ. ಅವರು ನನ್ನ ಮೇಲೆ ಇಟ್ಟಿರುವ ಭರವಸೆಗೆ ನಾನು ಋಣಿ. ಹಿಂದೆ ನಾನು ಪ್ರತಿನಿಧಿಸಿದ್ದ ಬಳ್ಳಾರಿ ಗ್ರಾಮಾಂತರ ಕ್ಷೇತ್ರವನ್ನು ಬಿಟ್ಟು ಮೊಳಕಾಲ್ಮುರಿನಲ್ಲಿ ಸ್ಪರ್ಧಿಸುವಂತೆ ಸೂಚಿಸಿದರು. ಅದನ್ನು ಗೌರವಿಸಿದ್ದೇನೆ.

ಎರಡರಲ್ಲೂ ಗೆದ್ದರೆ ಯಾವ ಕ್ಷೇತ್ರ ಉಳಿಸಿಕೊಳ್ಳುತ್ತೀರಾ?

ಫಲಿತಾಂಶ ಬಂದ ಮೇಲೆ ಪಕ್ಷದ ನಾಯಕರು, ಕಾರ್ಯಕರ್ತರು, ಮತದಾರರ ಜತೆ ಸಮಾಲೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇನೆ.

ನೀವೀಗ ಎರಡು ಕಡೆ ಸ್ಪರ್ಧಿಸಿದ್ದೀರಿ. ಅಲ್ಲದೇ, ವಿಧಾನಸಭೆ ಚುನಾವಣೆಯಲ್ಲಿ ಗೆದ್ದರೆ, ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಉಪ ಚುನಾವಣೆಗೆ ಸಾರ್ವಜನಿಕರ ಹಣ ವ್ಯರ್ಥವಾಗುವುದಿಲ್ಲವೇ?

ಐದು ವರ್ಷ ನುಡಿದಂತೆ ನಡೆದಿದ್ದೇವೆ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಕೂಡ ಸೋಲಿನ ಭೀತಿಯಿಂದ ಎರಡು ಕಡೆ ಸ್ಪರ್ಧಿಸಿದ್ದಾರಲ್ಲವೇ? ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ಕಾಲಕಾಲಕ್ಕೆ ಪಕ್ಷ ಅಪೇಕ್ಷೆ ಪಟ್ಟಂತೆ ನಡೆದುಕೊಳ್ಳಬೇಕಾಗುತ್ತದೆ. ಅದನ್ನಷ್ಟೇ ನಾನು ಮಾಡಿದ್ದೇನೆ.

ಮಿಷನ್ –150 ಗುರಿ ಸಾಧನೆ ವಾಸ್ತವದಲ್ಲಿ ಸಾಧ್ಯ ಇದೆಯಾ?

ಮೋದಿ ನೇತೃತ್ವದ ಸರ್ಕಾರದ ನಾಲ್ಕು ವರ್ಷದ ಸಾಧನೆ, ಜನಪರ ಕಾರ್ಯಕ್ರಮಗಳು, ಶಾ ಅವರ ತಂತ್ರಗಾರಿಕೆ ಹಾಗೂ ಯಡಿಯೂರಪ್ಪ ಅವರ ಜನಪ್ರಿಯತೆಗಳು ಪಕ್ಷದ ಕೈ ಹಿಡಿದು ಮುನ್ನಡೆಸಲಿವೆ. ಭ್ರಷ್ಟ ಕಾಂಗ್ರೆಸ್‌ ಸರ್ಕಾರದ ಆಳ್ವಿಕೆಯಿಂದ ಜನ ಬೇಸತ್ತು ಹೋಗಿದ್ದಾರೆ. ಬಿಜೆಪಿ ಮತ್ತೆ ವಿಜಯ ಪತಾಕೆ ಹಾರಿಸುವುದು ಖಚಿತ.

ಮೋದಿ ನೇತೃತ್ವದ ಸರ್ಕಾರ ಕೊಟ್ಟ ಭರವಸೆಗಳನ್ನು ಎಲ್ಲಿ ಈಡೇರಿಸಿದೆ? ಉದ್ಯೋಗ ಸೃಷ್ಟಿ ಎಲ್ಲಿ ಆಗಿದೆ? ಯಾರ ಖಾತೆಗೂ 15 ಲಕ್ಷ ಹಣ ಬಂದಿಲ್ಲವಲ್ಲಾ? ನಿಮ್ಮ ಖಾತೆಗೆ ಬಂದಿದೆಯಾ?

ನನ್ನ ಖಾತೆಗೆ ಬಂದಿಲ್ಲ. ಭಾರತೀಯರು ವಿದೇಶಿ ಖಾತೆಗಳಲ್ಲಿ ಇರಿಸಿದ್ದ ಕಪ್ಪುಹಣದ ಜಾಡು ಹಿಡಿದು ದೇಶಕ್ಕೆ ವಾಪಸ್ ತರುವ ಯತ್ನವನ್ನು ಕೇಂದ್ರ ಸರ್ಕಾರ ಮಾಡಿದೆ. ಇಲ್ಲಿಯವರೆಗೆ ಆಳಿದ್ದ ಕಾಂಗ್ರೆಸ್ ಆ ಕೆಲಸ ಮಾಡಿತ್ತಾ? ಮುದ್ರಾ ಯೋಜನೆಯಡಿ ಸ್ವಯಂ ಉದ್ಯೋಗ ಕಲ್ಪಿಸಲು ಕ್ರಮವಹಿಸಲಾಗಿದೆ. ಆಡಳಿತ ಶಾಹಿಯಲ್ಲಿದ್ದ ಭ್ರಷ್ಟಾಚಾರ ತೊಲಗಿಸಿ, ಉತ್ತಮ ಆಡಳಿತ ನೀಡಲಾಗಿದೆ. ಉದ್ಯಮ ಸ್ನೇಹಿ ನೀತಿ ಜಾರಿಗೊಳಿಸಲಾಗಿದೆ. ಇದರ ಫಲ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ನಿಮ್ಮ ಸರ್ಕಾರದ ಸಚಿವರೊಬ್ಬರು ಸಂವಿಧಾನ ಬದಲಿಸುವ ಮಾತನಾಡಿದ್ದಾರೆ. ಅದಕ್ಕೆ ನಿಮ್ಮ ಸಹಮತ ಇದೆಯೇ?

ಖಂಡಿತಾ ಇಲ್ಲ. ಜಗತ್ತೇ ಮೆಚ್ಚುವ ಸಂವಿಧಾನವನ್ನು ಕೊಟ್ಟ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ನಮಗೆ ಗೌರವ ಇದೆ. ಸಂವಿಧಾನದ ಆಶಯಗಳು ಎಂದಿಗೂ ಮಾರ್ಗದರ್ಶಕ. ಸಚಿವರು ತಮ್ಮ ಹೇಳಿಕೆಗೆ ಈಗಾಗಲೇ ಕ್ಷಮೆ ಯಾಚಿಸಿದ್ದಾರೆ. ಅದು ಮುಗಿದ ಅಧ್ಯಾಯ.

ಸಂಸದರಿಗೆ ಟಿಕೆಟ್ ಇಲ್ಲ ಎಂದು ಪ‍್ರತಿಪಾದಿಸುತ್ತಿದ್ದ ನಿಮ್ಮ ಪಕ್ಷ ಇಬ್ಬರಿಗೆ ಟಿಕೆಟ್ ಕೊಟ್ಟಿದ್ದೇಕೆ?

ಪಕ್ಷವನ್ನು ಅಧಿಕಾರಕ್ಕೆ ತರಲು ಯಾವ ತಂತ್ರ ಹೆಣೆಯಬೇಕು ಎಂದು ವರಿಷ್ಠರು ಚಿಂತನೆ ನಡೆಸಿದ್ದಾರೆ. ಅದರಂತೆ ಇಬ್ಬರಿಗೆ ಟಿಕೆಟ್ ಕೊಟ್ಟಿದೆ.

ಪಕ್ಷ ಅಧಿಕಾರಕ್ಕೆ ಬಂದರೆ ನೀವು ಉಪಮುಖ್ಯಮಂತ್ರಿನಾ? ಅಂತಹ ಭರವಸೆಯನ್ನು ಪಕ್ಷ ಕೊಟ್ಟಿದೆಯಾ?

ಆ ರೀತಿ ಏನನ್ನೂ ಹೇಳಿಲ್ಲ. ಪಕ್ಷ ನೀಡುವ ಎಲ್ಲ ಜವಾಬ್ದಾರಿಯನ್ನು ವಹಿಸಲು ನಾನು ಬದ್ಧ. ಅಧಿಕಾರದ ಆಸೆ ನನಗಿಲ್ಲ.

ವಂಶಪಾರಂಪರ್ಯ ರಾಜಕಾರಣವನ್ನು ನಿಮ್ಮ ಪಕ್ಷ ವಿರೋಧಿಸುತ್ತದೆಯಲ್ಲವೇ? ಹಾಗಿದ್ದರೆ, ನಾಲ್ಕು ಜನರ ಮಕ್ಕಳಿಗೆ ಟಿಕೆಟ್ ಕೊಟ್ಟಿದ್ದೇಕೆ.

ಈ ವಿಷಯದಲ್ಲಿ ವರಿಷ್ಠರ ತೀರ್ಮಾನ ಅಂತಿಮ. ಪಕ್ಷವನ್ನು ಅಧಿಕಾರಕ್ಕೆ ತರಲು ಯಾವ ಕ್ಷೇತ್ರದಲ್ಲಿ ಯಾರನ್ನು ಕಣಕ್ಕೆ ಇಳಿಸಬೇಕು ಎಂದು ಪಕ್ಷ ನಿರ್ಧರಿಸಿದೆ. ಇದರ ಬಗ್ಗೆ ನಾನು ಹೆಚ್ಚು ಹೇಳುವುದಿಲ್ಲ.

ಭ್ರಷ್ಟಚಾರ ಮುಕ್ತ ಎನ್ನುತ್ತೀರಿ, ಕಳಂಕ, ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವವರಿಗೆ ಪಕ್ಷ ಟಿಕೆಟ್ ನೀಡಿದೆಯಲ್ಲ?

ಕೆಲವರ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಲಾಗಿದೆ. ದುರುದ್ದೇಶದ ಕಾರಣಕ್ಕೆ ನೀಡಿದ ದೂರು, ವರದಿ ಆಧರಿಸಿ ಕೆಲವರ ಮೇಲೆ ಕಳಂಕ ಹೊರಿಸಲಾಗಿದೆ. ಇದರ ಹಿಂದೆ ರಾಜಕಾರಣ ಕೆಲಸ ಮಾಡಿದೆ. ಈಗ ಎಲ್ಲರೂ ಕಳಂಕ ಮುಕ್ತರಾಗಿದ್ದಾರೆ.

ನಿಮ್ಮ ಆಪ್ತರೂ ಆಗಿರುವ ಜನಾರ್ದನ ರೆಡ್ಡಿ ಪ್ರಚಾರದಲ್ಲಿ ಪಾಲ್ಗೊಳ್ಳಬಾರದು ಎಂದು ವರಿಷ್ಠರು ಹೇಳಿದ್ದಾರಲ್ಲ?

ಪಕ್ಷದ ಪರವಾಗಿ ಅವರು ಪ್ರಚಾರ ಮಾಡಬಾರದು ಎಂದು ಸೂಚಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ನೋಡಿದ್ದೇನೆ. ರೆಡ್ಡಿಯವರು ನನ್ನ ಬಾಲ್ಯಕಾಲದ ಸ್ನೇಹಿತ. ಅವರು ನನ್ನ ಗೆಲುವಿಗೆ ಶ್ರಮಿಸಿದರೆ ನಾನು ಏಕೆ ಬೇಡ ಎನ್ನಲಿ? ಅಷ್ಟಲ್ಲದೇ ನಾಲ್ಕು ಜಿಲ್ಲೆಗಳಲ್ಲಿ ಅವರ ಪ್ರಭಾವ ಇದ್ದು, ಪಕ್ಷದ ಗೆಲುವಿಗೆ ಅನುಕೂಲವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT