ಜಾನಪದ ಸಿರಿ

7

ಜಾನಪದ ಸಿರಿ

Published:
Updated:

‘ಬಿಸಿಲ ಸೀಮಯೆಯ ಜಾನಪದ ಸಿರಿ‘ ಒಂದು ಅಪರೂಪದ ಮತ್ತು ಮಾದರಿ ಪುಸ್ತಕವಾಗಿದೆ. ಇದರ ಸಂಪಾದಕರು ಲಕ್ಷ್ಮಣ ಬಾದಾಮಿ. ಸಂಗ್ರಹಿಸಿದವರು ಸರ್ಕಾರಿ ಪ್ರೌಢಶಾಲೆಯ ಮಕ್ಕಳು. ಈ ಮಕ್ಕಳು ಕುರಕುಂದ (ರಾಯಚೂರು ಜಿಲ್ಲೆಯ ಸಿರಿವಾರ ತಾಲ್ಲೂಕು) ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಹೆಸರೇ ಸೂಚಿಸುವಂತೆ, ಹಳ್ಳಿಗರ ಸಾಹಿತ್ಯ ಅಭಿವ್ಯಕ್ತಿಗೊಂಡು, ಸಂಗ್ರಹವಾಗಿ ಜಾನಪದ ಸಿರಿ ‘ಹೆಸರಿನೊಂದಿಗೆ ಪ್ರಕಟವಾಗಿದೆ ಪ್ರತಿ ಶಾಲೆಯಲ್ಲಿ ‘ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ’ ಯೋಜನೆ ವಿದ್ಯಾರ್ಥಿಗಳಿಗಾಗಿ ರೂಪಗೊಂಡು ಚಾಲ್ತಿಯಲ್ಲಿದೆ.

ಕಲಾವಿದ, ಕತೆಗಾರ ಶಿಕ್ಷಕರಾಗಿರುವ ಲಕ್ಷಣ ಬದಾಮಿ ಕುರಕುಂದ ಶಾಲೆಯಲ್ಲಿ ವೃತ್ತಿನಿರತರಾಗಿದ್ದು, ಈ ಯೋಜನೆಯ ಅಡಿಯಲ್ಲಿ ಮಕ್ಕಳನ್ನು ತೊಡಗಿಸಿದ ಫಲವಾಗಿ ಈ ಪುಸ್ತಕವನ್ನು ರೂಪಿಸಿದ್ದಾರೆ. ಕುರಕುಂದ ಶಾಲೆಯಲ್ಲಿ ಕಲಿಯುವ ಮಕ್ಕಳೆಲ್ಲ ಗ್ರಾಮೀಣ ಪ್ರದೇಶದವರು ತಮ್ಮ ತಮ್ಮ ಹಳ್ಳಿಗಳಲ್ಲಿ ಜನಪದರು, ಹಾಡುವ ಹಾಡುಗಳನ್ನು ಹೇಳುವ ಕತೆಗಳನ್ನು, ಒಡಪು, ಒಗಟು ಮತ್ತು ನುಡಿಗಟ್ಟುಗಳನ್ನುಕೇಳಿ, ಬರೆದುಕೊಂಡು ಸಂಪಾದಿಸಿದ್ದಾರೆ.

ಇದನ್ನು ನೋಡಿದಾಗ ನಮ್ಮ ಹಳ್ಳಿಗಳು, ಜನಪದರು ಮೌಖಿಕವಾಗಿ ಸಾಹಿತ್ಯವನ್ನು ಉಳಿಸಿಕೊಂಡು ಬದುಕುತ್ತಿದ್ದಾರೆಂದು ತಿಳಿಯುತ್ತದೆ. 21ನೇ ಶತಮಾನದಲ್ಲಿ ವಿಜ್ಞಾನ ತಂತ್ರಜ್ಞಾನ ಅಬ್ಬರಿಸುತ್ತಿರುವ ಸಂದರ್ಭದಲ್ಲಿ ,ಪೋಷಕರು ಮಕ್ಕಳು ಸೇರಿಕೊಂಡು ಇಂಗ್ಲಿಷ್ ಕಲಿಕೆಯ ವ್ಯಸನಿಗಳಾಗಿರುವ ಈ ಕಾಲದಲ್ಲಿ ಈ ಸರ್ಕಾರಿ ಶಾಲೆಯ ಕನ್ನಡ ಕಲಿಯುವ ಮಕ್ಕಳು ‘ಜಾನಪದ ಸಿರಿ’ ಪ್ರಕಟಿಸಿರುವುದು ಅಭಿಮಾನ  ಸಂಗತಿಯಾಗಿ ಮಾತ್ರವಾಗಿ ಉಳಿಯುತ್ತದೆ. ಇಚ್ಛಾಶಕ್ತಿಯಿದ್ದರೆ ಏನನ್ನಾದರೂ ಮಾಡಬಹುದು ಎಂಬುದಕ್ಕೆ ಸಾಕ್ಷಿಯಾಗುತ್ತದೆ.

ಕುರಕುಂದ ಶಾಲೆಯ ಕನ್ನಡ ಮಾಧ್ಯಮದ ವಿದ್ಯಾರ್ಥಿನಿಯರು, ವಿದ್ಯಾರ್ಥಿಗಳು ಒಬ್ಬ ಆಸಕ್ತ ಶಿಕ್ಷಕನ ನೆರವಿನಿಂದ ಈ ಹೊತ್ತಿಗೆಯನ್ನು ಹೊರತಂದಿರುವುದು. ಇತ್ತ ಶಾಲೆಯ ಮಕ್ಕಳಿಗೆ ಪ್ರೇರಣೆಯಾದರೆ ಅದರಿಂದ ಕ್ರಿಯಾಶೀಲರಾದರೆ ಒಂದೊಂದು ಶಾಲೆಯಿಂದ ಇಂತಹ ‘ಜಾನಪದ ಸಿರಿ’ ಹೊರಬಂದರೆ, ಇನ್ನೂ ಜೀವಂತವಾಗಿರುವ ಜಾನಪದ ಸಾಹಿತ್ಯದ ರಾಶಿಯೇ ಹೊರಬಂದೀತು. ಅದಕ್ಕಾಗಿ ಈ ಕೃತಿ ಮಾದರಿಯದ್ದು ಎಂದು ಹೇಳಬೇಕಾಯ್ತು. ಬಹಳ ವರ್ಷಗಳ ಹಿಂದೆ ನಮ್ಮ ಹಿರಿಯರಾದ ಶ್ರೀ ಸಿಂಪಿ ಲಿಂಗಣ್ಣ, ಶ್ರೀ ದ.ರಾ. ಬೇಂದ್ರೆ, ಶ್ರೀ ರೇವಪ್ಪ ಕಾಪಸೆ ಮುಂತಾದ ಜನಪದ ಅರಿವಿನವರು ಸಂಗ್ರಹಿಒಸಿ, ಸಂಪಾದಿಸಿದ ‘ಜೀವನ ಸಂಗೀತ’, ‘ಗರತಿ ಹಾಡು’ ಮುಂತಾದ ಕೆಲಸಗಳ ಮುಂದುವರಿಕೆಯಾಗಿ ಈ ಕೃತಿ ಕಾಣುತ್ತದೆ.

‘ಜಾನಪದ ಸಿರಿ’ ಯಲ್ಲಿ ಐದು ಭಾಗಗಳಿವೆ. ‍ಪದಗಳು, ಕಥೆಗಳು, ಒಡಪುಗಳು, ಒಗಟುಗಳು ಮತ್ತು ನುಡಿಗಟ್ಟುಗಳು ಪ್ರಕಾರಗಳಲ್ಲಿ ಜನಪದ ಸಾಹಿತ್ಯ ಅಭಿವ್ಯಕ್ತಿಗೊಂಡಿದೆ. ‘ಪದಗಳು’ ಭಾಗದಲ್ಲಿ ಸ್ಥಳೀಯ ದೈವಗಳನ್ನು ಕುರಿತ ಹಾಡುಗಳಿವೆ. ಕಳ್ಳು ಬಳ್ಳಿ ಸಂಬಂಧದಲ್ಲಿ ಕಾಣುವ ಸುಖ–ದುಃಖಗಳು ಹಾಡುಗಳಿವೆ. ಇನ್ನೂ ಈ ಭಾಗದ ಯಾವುದೇ ಹಳ್ಳಿಯಲ್ಲಿ ಕಾಣುವ, ಕೇಳುವ ಮೊಹರಂ ಕುಣಿತ, ಹಲಾಯಿ ಹಾಡುಗಳು, ಕರ್ಬಲಾದ ಕತೆಗಳು ಇವೆ. ಅಂಬೇಡ್ಕರ್ ಜನಪದವಾಗಿ ನಿಂತಿರುವ ಹಾಡುಗಳಿವೆ. ‘ಕತೆ’ ವಿಭಾಗದಲ್ಲಿ ತಮ್ಮ ಬದುಕಿನ ವಾಸ್ತವವೇ .........

ಗ್ರಾಮೀಣ ಭಾಗದಲ್ಲಿರುವ ಮನೋರಂಜನೆಯನ್ನು ಇಲ್ಲಿ ಕಾಣುತ್ತೇವೆ  ಮುದುಕರು ಆದಿಯಾಗಿ ಮಕ್ಕಳು ಸೇರಿಕೊಂಡು ಕಟ್ಟುವ ಒಗಟು, ಒಡಪು, ನುಡಿಗಟ್ಟುಗಳಲ್ಲಿ ವ್ಯಕ್ತವಾಗುವ ಚಿಂತನೆಗಳು ಅವರ ಪ್ರತಿಭೆಯನ್ನು ತೋರಿಸುತ್ತವೆ.

ಹೆಣ್ಣು ತನ್ನ ಗಂಡನ ಹೆಸರನ್ನು ಹೇಳುವ ರೀತಿ ಹೀಗಿದೆ:

’ಆರು ರೂಪಾಯಿ ಅಂಗಿ, ಮೂರು ರೂಪಾಯಿ ಒಕ್ಕಣೆ

ಧೀಡ್ ರುಪಾಯಿ ಕಾಟಗೊಂಡ ಧಿಯಾಕ ಮಾಡ್ತಾನ’

‘ಬಂಗಾರದ ಬಾಚಣಿಕೆ, ಬೆಳ್ಳಿ ಕಟ್ಟಿನ ಕನ್ನಡಿ

ಬಾಚಿಗೊಂಡು ಹೋಗು ಅಂದ, ನಾಚಿಕೊಂಡು ಹೋಗುತಾನ’

ಒಡಪಿನಲ್ಲಿ ಗಂಡನ ಹೆಸರೇಳುವ ಪ್ರತಿಭೆಯಿದೆ.

‘ಒಗಟುಗಳು’ ಮಕ್ಕಳ ಸೃಜನಶೀಲತೆಗೆ ಸಾಕ್ಷಿಯಾಗುತ್ತವೆ:

‘ಒಂದೇ ಹಪ್ಪಳ, ಲೋಕಕ್ಕೆಲ್ಲ ಅದೇ ಹಪ್ಪಳ’

ಉತ್ತರ: ಚಂದ್ರ

‘ಅಂಗೈಯಲ್ಲಿ ಗದ್ದೆ, ಗದ್ಯಾಗ ನೀರು, ನೀರಿನ್ಯಾಗ ಬೇರು, ಬೇರಿಗೆ ಬೆಂಕಿ‘

ಉತ್ತರ: ಪ್ರಣಿತಿ

‘ಜನಪದ ಸಿರಿ’ ಕೃತಿಯನ್ನು ಓದಿದಾಗ ನಮ್ಮ ಜನಪದ ಸಾಹಿತ್ಯ ಸಂಸ್ಕೃತಿಯ ಆಸಕ್ತಿ ಬೆರಗನ್ನುಂಟು ಮಾಡುತ್ತದೆ. ಜನಪದರ ಸಾಹಿತ್ಯ, ಸಂಸ್ಕೃತಿಯ ಆಸಕ್ತಿ ಬೆರನ್ನುಂಟು ಮಾಡುತ್ತದೆ. ಜನಪದರ ಲೋಕಾನುಭವ, ನೆನಪಿನ ಶಕ್ತಿ, ಸೃಷ್ಟಿಸುವ ಸಾಮರ್ಥ್ಯ ಎದ್ದು ಕಾಣುತ್ತದೆ. ಇಲ್ಲಿಂದ ಆಧುನಿಕರು ಕಲಿಯುವುದಿದೆ. ಕುರಕುಂದ ಶಾಲೆಯ 73 ವಿದ್ಯಾರ್ಥಿನಿ–ವಿದ್ಯಾರ್ಥಿಗಳು ತಮ್ಮ ತಮ್ಮ ಊರುಗಳಿಂದ 39 ಜನಪದರನ್ನು ಅನುಸಂಧಾನ ಮಾಡಿ ಈ ಸಾಹಿತ್ಯವನ್ನು ಸಂಗ್ರಹಿಸಿ ಪ್ರಕಟಿಸಿದ್ದಾರೆ. 

ಬಿಸಿಲ ಸೀಮಯಯ ಜಾನಪದ ಸಿರಿ

ಸಂ: ಲಕ್ಷ್ಮಣ ಬಾದಾಮಿ

ಪ್ರ: ಅಭಿಲಾಷ ಪ್ರಕಾಶನ

ಸಿರೂರ

ಪುಟ: 176

ಬೆಲೆ: ₹ 160

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !