ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಚಿಂತಾಮಣಿಯ ಚಪ್ಪರದಡಿ...

Last Updated 26 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ಕವಿತೆ ಅಂತರಂಗದ ಕನ್ನಡಿ ಆಗುವಷ್ಟರಮಟ್ಟಿಗೆ ಸಾಹಿತ್ಯದ ಉಳಿದ್ಯಾವ ಪ್ರಕಾರವೂ ಆಗುವುದಿಲ್ಲ ಎನ್ನುವುದಕ್ಕೆ ಉದಾಹರಣೆಯಂತಿದೆ, ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ‘ಚಿಂತಾಮಣಿ’ ಕವನಸಂಕಲನ. ಚಿಂತಾಮಣಿ ಎನ್ನುವುದು ಕವಿಯ ಪಾಲಿಗೆ ಒಂದು ಮಣಿಯಷ್ಟೇ ಆಗಿಲ್ಲ; ಅದು ಒಳಗು ಮತ್ತು ಹೊರಗನ್ನು ನೋಡಿಕೊಳ್ಳಲು ಬೇಕಾದ ಬೆಳಕನ್ನು ಬೀರುವ ದಿವ್ಯಮಣಿಯಾಗಿದೆ. ಆ ಬೆಳಕು ವಿಮರ್ಶಾಪ್ರಜ್ಞೆಯೊಂದಿಗೆ ವಿನಯ–ವಿವೇಕದ ಜೀವಂತಿಕೆಯನ್ನೂ ಹೊಂದಿರುವಂತಹದ್ದು.

ಸಮಕಾಲೀನ ಕಾವ್ಯದಲ್ಲಿ ತೀರಾ ವಿರಳವೆನ್ನಬಹುದಾದ ಪ್ರಸನ್ನಭಾವ ಪಟ್ಟಣಶೆಟ್ಟರ ಕವಿತೆಗಳ ಸ್ಥಾಯಿಭಾವವೇ ಆಗಿದೆ. ಅದಕ್ಕೆ ಕಾರಣ, ಸಮಕಾಲೀನ ವಿದ್ಯಮಾನಗಳಿಗೆ ಸ್ಪಂದಿಸುವಾಗ ಕವಿ ಕಟುವಾಗದಿರುವುದು, ಕಹಿಯಾಗದಿರುವುದು. ಬದುಕು ಹಾಗೂ ಸಮಾಜ ಎರಡೂ ಪ್ರತ್ಯೇಕವಲ್ಲ ಎನ್ನುವ ಸ್ಥಿತಿಯಲ್ಲಿ ನಿಂತು ನೋಡುವ ಸಾವಧಾನ ಸ್ಥಿತಿ ಹಾಗೂ ಮಾಗುವಿಕೆ ಸಾಧ್ಯವಾಗಿರುವುದು ಪಟ್ಟಣಶೆಟ್ಟರ ಕವಿತೆಗಳಿಗೆ ಪ್ರಸನ್ನಭಾವವನ್ನು ಕರುಣಿಸಿದೆ.

‘ಮಗಳೆ, ಹಾಲು ಕೆನೆ ಕಟ್ಟುವವರೆಗೆ ಕಾಯಬೇಕು’ ಎಂದು ಆರಂಭವಾಗುವ ‘ಕವಿತೆ’ ಎನ್ನುವ ಕವಿತೆಯನ್ನು ನೋಡಿ. ಬದುಕೇ ಕಾವ್ಯವಾಗುವ, ಅಂತಃಕರಣ ಕಾವ್ಯದ ಹೂರಣವಾಗುವ ಬೆರಗಿಗೆ ಈ ‘ಕವಿತೆ’ ಉದಾಹರಣೆಯಂತಿದೆ. ಇಲ್ಲಿನ ಕವಿತೆ ಭಾಷಾರಚನೆಯ ಕಲಾಕೃತಿಯಷ್ಟೇ ಅಲ್ಲ; ಜೀವಂತ ಕೂಸೂ ಹೌದು. ತಂದೆಯೊಬ್ಬ ತನ್ನ ಮಗಳಿಗೆ ಬದುಕಿನ ಚೆಲುವು ಮತ್ತು ಅದನ್ನು ಸಾಧಿಸಿಕೊಳ್ಳಬೇಕಾದ ಬಗೆಯನ್ನು ತಿಳಿಸುವ ಕಿವಿಮಾತೇ ‘ಕವಿತೆ’.

ತಟ್ಟನೇ ಎದುರಾಡಿ ‍ಪದಕೋಶ ಚೆಲ್ಲಾಡಿ

ಎದುರಾಳಿ ಬೆಚ್ಚಿ, ವೈರಿಗಳ ಹೆಚ್ಚಿ

ಕೆಡದಿರಲಿ ಬದುಕು, ನಿಗ್ರಹಿಸು

ಎನ್ನುವ ಮಾತುಗಳಲ್ಲಿನ ತಾತ್ವಿಕತೆ ಮಾತುಗಾರಿಕೆಯಲ್ಲಿ ಹುಟ್ಟಿದ್ದಲ್ಲ; ಅದು ಬದುಕಿನ ಅನುಭವಫಲ. ‘ಅಡುಗೆ ನೀನೇ ಮಾಡು / ಎಲ್ಲರಿಗೆ ಮಿಗುವಂತೆ ನೋಡು’ ಎನ್ನುವ ಕವಿ, ‘ಹಾಸಿಗೆಯ ಹಸಿವಿರಲಿ / ಬತ್ತಲೆಗೆ ಬೆಲೆಯಿರಲಿ / ಮಾತು ಮೌನದ ಮಹಿಮೆ ಅರಿತಿರಲಿ’ ಎಂಬ ಮಾತುಗಳ ಮೂಲಕ ಆರೋಗ್ಯಕರ ಬದುಕಿಗೆ ಅಗತ್ಯವಾದ ರುಚಿಗಳನ್ನೂ ಸೂಚಿಸುತ್ತಾರೆ.

‘ಚಿಂತಾಮಣಿ’ ಸಂಕಲನದ ಅನೇಕ ಕವಿತೆಗಳು ಕವಿಗೆ ತನ್ನ ಬದುಕನ್ನು ಹಿಂತಿರುಗಿ ನೋಡಲು ಅವಕಾಶ ಕಲ್ಪಿಸಿವೆ. ‘ನೀಲವ್ವಕ್ಕ’, ‘ಋಣಮುಕ್ತಿ’, ‘ಶುದ್ಧಿ’, ‘ಪರಿಣತಿ’, ‘ಹರಿಗೀತ’, ಮುಂತಾದವು ಕವಿಯ ಆತ್ಮಗೀತಗಳೇ ಆಗಿವೆ. ಬದುಕಿನ ಬಗೆಗಿನ ಕೃತಜ್ಞತೆ ಪಟ್ಟಣಶೆಟ್ಟಿಯವರ ಕವಿತೆಗಳಲ್ಲಿ ಮತ್ತೆ ಮತ್ತೆ ತುಳುಕುತ್ತದೆ; ಅದು ಅವರ ವ್ಯಕ್ತಿತ್ವದ ಭಾಗವೇ ಎನ್ನುವಂತೆ. ತನ್ನ ಬದುಕು ಅರಳಲು, ಹೂಗಟ್ಟಿ ಹಣ್ಣಾಗಲು ಕಾರಣರಾದವರನ್ನು ಕವಿ ನೆನಪಿಸಿಕೊಳ್ಳುತ್ತಾರೆ, ಮಂಜುಗಣ್ಣಾಗುತ್ತಾರೆ. ‘ಕೋರಿಕೆ’ ಕವನದಲ್ಲಿ, ತನ್ನ ಬದುಕಿಗೆ ದ್ರವ್ಯವಾದವರೊಂದಿಗೆ, ‘ಅವರ ಜೊತೆ ಹಾಕಿದೆ ಹೆಜ್ಜೆ ತಟ್ಟಿದೆ ತಾಳ / ಗಿಲಿಗಿಲಿಗುಟ್ಟಿದುವು ಅವರ ಕಾಲಿನ ಗೆಜ್ಜೆ ನಾನೇ’ ಎಂದು ನೆನಪಿನ ನವಿಲುಗರಿ ನೇವರಿಸುವ ಕವಿ, ‘ಈಗ ಹೆಜ್ಜೆ ಏಳುತ್ತಿಲ್ಲ / ಗೆಜ್ಜೆ ಕಟ್ಟುತ್ತಿಲ್ಲ ನಿಮ್ಮ ಕಡೆಗೆ ಬರಲು’ ಎನ್ನುವ ಸ್ಥಿತಿಯಲ್ಲಿದ್ದಾರೆ. ‘ಈಗ ಕೇವಲ ನಿರಹಂಕಾರ / ಕ್ಷಮೆಯ ಕೋರಿಕೆ ಮಾತ್ರ / ಕೃತಜ್ಞತೆಗಳು / ನಿಮ್ಮಿಂದ ಪಡೆದದ್ದಕ್ಕೆ / ನೀವು ನೀಡಿದ್ದಕ್ಕೆ’ ಎನ್ನುವ ನಿಲುವಿಗೆ ಬರುತ್ತಾರೆ. ಇದಲ್ಲವೆ ಮನುಷ್ಯಪ್ರೀತಿ? ಬದುಕನ್ನು ನೋಡಿಕೊಳ್ಳುವ ರೀತಿ?

ಹಿಂತಿರುಗಿ ನೋಡಿದಾಗ ಕವಿಗೆ ಕಂಡ ‘ನನ್ನ ಹಳ್ಳಿ’, ಬಹಳ ಕಾಲದ ನಂತರದ ಭೇಟಿಯಲ್ಲಿ ‘ಸ್ವಂತದ ಗೋರಿ’ಯಂತೆ ಕಾಣಿಸುತ್ತಿದೆ.

ನನ್ನ ದೇಶದ ನನ್ನ ಪ್ರತಿಬಿಂಬ ನನ್ನೂರು

ಗೊಂದಲದ ಗೂಡು ಈ ಹಳ್ಳಿ

ಹೊಸ ಕಾಲದ ಹಳೆಯ ಒಣಗಿದ ಬಳ್ಳಿ

‘ಕಾಲಧರ್ಮ’ ಕವಿತೆಯಲ್ಲಿ ಒಣಗಿದ ಬಳ್ಳಿಯ ಕುರಿತ ನಿಟ್ಟುಸಿರು ಗಟ್ಟಿಯಾಗಿಯೇ ಕೇಳಿಸುತ್ತದೆ. ಕೆಲವು ವರ್ಷಗಳ ಹಿಂದೆ ಮನೆ, ಅಟ್ಟ, ಹಿತ್ತಿಲ ತುಂಬ ಗುದುಮುರಿಗೆ ಹಾಕುತ್ತಿದ್ದ, ಕುಣಿದು ತಣಿದು ಹಾಡುತ್ತಿದ್ದ ಮಕ್ಕಳು ತರುಣರೆಲ್ಲ ಈಗ ಅಲ್ಲಿಲ್ಲ. ‘ಈಗ ಇಲ್ಲಿ ಕೇವಲ ಮುದುಕರು’ ಎನ್ನುತ್ತದೆ ಕವಿತೆ. ಈ ಕಾಲಧರ್ಮ ಬದುಕಿಗೂ ಸಂಬಂಧಿಸಿದ್ದು. ‘ನಾಲ್ಕಾರು ಹೆಣ್ಣುಗಳ ನಿಭಾಯಿಸದೆ ಹೋದರೆ / ಬೈಗುಳದ ಪದಕೋಶ ಬಾಯಿಪಾಠ ಮಾಡದಿರೆ / ಹಿರಿಯರಿಗೆ ಮರ್ಯಾದೆ ಸಲಿಸಿದರೆ / ಯೌವನಕೆ ಅರ್ಥವೇ ಇಲ್ಲ, ಬೆಲೆಯೇ ಇಲ್ಲ’ ಎನ್ನುವಂಥ ಉಕ್ಕು ವಾಂಛೆಗಳ ಸ್ಥಿತಿಯನ್ನು ದಾಟಿ, ‘ಅವ್ವಾ, ಅರಿವಾಗಿದೆ ಈಗ / ಬದುಕು ಕೇವಲ ಉರುಳು / ಕಂಡೆ ಮರಳು ದಂಡೆ ಜಾರು ಬಂಡೆ / ಉರುಳು ಜಾರು ತಿಳಿದತ್ತ ಹೊರಳು / ಕಂಡದ್ದೆ ಕಂಡಷ್ಟೆ ಕನಸಿನ ಕಣಸು / ಈಗ ನಿರಾಳ ಮನಸು...’ (ನಿರಾಳ) ಎನ್ನುವ ಅರಿವಿನ ತುದಿಗೆ ಕವಿ ತಲುಪಿದ್ದಾರೆ.

ಇದೆಲ್ಲ ಅಂತರಂಗದ ಮಾತಾಯಿತು. ಹೊರಗಿನ ಕಥೆಯೇನು? ಹಾಗೆ ಹೊರಗೆ ನೋಡಿದಾಗ ಬುದ್ಧ ಕಾಣುತ್ತಾನೆ, ಗಾಂಧಿಯೂ ಜೊತೆಗಿದ್ದಾನೆ. ಬುದ್ಧನನ್ನು ಮೊದಲು ಕಠೋರ ಬೇಡಿಗಳಿಂದ, ಮೀಸಲು ಬೇಡಿಕೆಗಳಿಂದ, ಮಿತಿರಹಿತ ಬಳಕೆಗಳಿಂದ ಬಿಡುಗಡೆ ಮಾಡಿ ಎನ್ನುವ ಕವಿ – ‘ಕೇವಲಬುದ್ಧನಿಗೆ ಬೇಕು / ಕೇವಲ ಸಂರಕ್ಷಣೆ’ ಎನ್ನುತ್ತಾರೆ. ಬುದ್ಧ ಆಡಂಬರಕ್ಕೆ ದಕ್ಕುವವನಲ್ಲ ಎನ್ನುವುದನ್ನು ಸೂಚಿಸುತ್ತ, ‘ಬುದ್ಧ ಸಲ್ಲುತ್ತಾನೆ / ಕೇವಲ ತನ್ನ ಬದ್ಧ ಶುದ್ಧರಿಗೆ / ಬಯಕೆ ಹಣ್ಣಾದರೆ / ಆಸೆಗಳು ಬೀಜ ಮೊಳೆಯಿಸುವ / ಹುಲುಸು ಮಣ್ಣಾದರೆ / ತಾನೆ ಲಭಿಸುತ್ತಾನೆ’ ಎನ್ನುತ್ತಾರೆ. ‘ಬೇಕಾಗಿಲ್ಲ ಅಂದಿನ ನಮ್ಮ ಗಾಂಧಿ / ಇಂದಿಗೆ ಇಂದಿನ ಮಂದಿಗೆ’ ಎನ್ನುತ್ತ, ‘ಇದು ಕಾಲಧರ್ಮವೇ?’ ಎನ್ನುವ ಪ್ರಶ್ನೆ ಮುಂದಿಡುತ್ತಾರೆ. ‘ಕಲಬುರ್ಗಿ ಮಾರ್ಗ’ ಕವಿತೆಯಲ್ಲಿ, ಕನ್ನಡದ ಸಂಸ್ಕೃತಿಗೆ ಸಜ್ಜನಿಕೆ ಕಲ್ಪನೆಗೆ ಪೆಟ್ಟುಬಿದ್ದುದನ್ನು ವಿಷಾದದಿಂದ ದಾಖಲಿಸುತ್ತಾರೆ.

‘ಚಿಂತಾಮಣಿ’ಯ ಬೆಳಕು ಚೆಲ್ಲಿದ ದಾರಿಗಳಲ್ಲಿ ಪಟ್ಟಣಶೆಟ್ಟರು ಏಕಾಂಗಿ ಪಥಿಕರಲ್ಲ. ನಮ್ಮನ್ನೂ ಕೈಹಿಡಿದು ನಡೆಸುತ್ತಾರೆ.ಹಾಗೆ ಸಾಗುವಾಗ, ಬದುಕಿನಲ್ಲಿ ಕಳೆವುದೇನು ಉಳಿವುದೇನು ಎನ್ನುವುದರತ್ತ ನಮ್ಮ ಮನಸ್ಸನ್ನು ಸೆಳೆಯುತ್ತಾರೆ. ಬದುಕಿನ ಬಗೆಗಿನ ಬೆರಗು ಮತ್ತು ಪ್ರೀತಿಯನ್ನು ಉದ್ದೀಪಿಸುವಂತಹ ಕವಿತೆಗಳ ಈ ಗುಚ್ಛವನ್ನು, ಎಚ್‌.ಎಸ್‌. ರಾಘವೇಂದ್ರ ರಾವ್‌ ಅವರು ತಮ್ಮ ಮುನ್ನುಡಿಯಲ್ಲಿ – ‘ಇಲ್ಲೈತಿ ಬೆಳುದಿಂಗಳು’ ಎಂದು ಕರೆದಿರುವುದು ಬಹು ಸೊಗಸಾಗಿದೆ. ಆ ಬೆಳುದಿಂಗಳ ಸುಖ–ಸೌಂದರ್ಯವನ್ನು ಓದಿಯೇ ಆನಂದಿಸಬೇಕು.

‘ಋಣಮುಕ್ತಿ’ ಕವಿತೆಯಲ್ಲಿ – ‘ನಾ ಕೊಡುವುದುಳಿದಿದೆ / ಎಂದು ಹೇಳಿದರೆ ಯಾರಾದರೂ / ನನ್ನನ್ನು ನೆನೆಸಿ ಕ್ಷಮಿಸಿ ತೀರಿಸಿ ಬಿಡಿರಿ’ ಎನ್ನುತ್ತಾರೆ ಕವಿ. ಅವರು ದೊಡ್ಡವರು. ಕಾವ್ಯರಸಿಕರೇನು ಕುಬ್ಜರೆ? ‘ಚಿಂತಾಮಣಿ’ ಸಂಕಲನ ಓದಿದ ನಂತರ ಅವರ ಮನಸಿನಲ್ಲಿ ಉಳಿಯುವುದೂ ‘ಕೊಡುವುದುಳಿದಿದೆ ಕವಿಗೆ’ ಎನ್ನುವ ಭಾವವೇ. ಹೀಗೆ, ‘ಚಿಂತಾಮಣಿ’ಯ ಚಪ್ಪರದಡಿ ಕವಿ–ಸಹೃದಯಿ, ಇಬ್ಬರ ಮನಸ್ಸಿನಲ್ಲೂ ಕೃತಜ್ಞತಾ ಭಾವ ಜಿನುಗುತ್ತದೆಂದರೆ ಅದು ಸಾಹಿತ್ಯದ ಬಹು ದೊಡ್ಡ ಪ್ರಯೋಜನವೇ ಸರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT