ಜಿಜ್ಞಾಸೆಗಳ ಕೃತಿ ‘ಸಿದ್ಧಾರ್ಥ’

7

ಜಿಜ್ಞಾಸೆಗಳ ಕೃತಿ ‘ಸಿದ್ಧಾರ್ಥ’

Published:
Updated:

ಗುರು ಅನುಭವಿಸಿದ್ದನ್ನು ಅನುಯಾಯಿಗಳು ಅನುಭವಿಸುವುದು ಸಾಧ್ಯವಿಲ್ಲ. ಅವರವರ ಅನುಭವ ಅವರವರಿಗೆ ಮಾತ್ರ ದಕ್ಕುವಂಥದ್ದು. ಹೀಗಾಗಿ ಗುರುವಿನ ಉಪದೇಶ, ಈ ಮಾರ್ಗ ತನ್ನದು ಎಂಬ ವಿವರಣೆಯಾಗಬಹುದೇ ಹೊರತು ಅದು ಅನುಯಾಯಿಯನ್ನು ಯಾವ ಕಡೆಗೂ ಒಯ್ಯಲಾರದು ಎಂಬ ಜಿಜ್ಞಾಸೆಯನ್ನು ಒಳಗೊಂಡಿದೆ ಹರ್ಮನ್‌ ಹೆಸ್ ಅವರ ‘ಸಿದ್ಧಾರ್ಥ’ ಕಾದಂಬರಿ. ಇದನ್ನು ಕನ್ನಡಕ್ಕೆ ಅನುವಾದಿಸಿದವರು ಡಾ. ಸುರೇಶ ಪಾಟೀಲ.

ಸಿದ್ಧಾರ್ಥ ಬಾಲ್ಯದಲ್ಲಿ ಯಜ್ಞ ಯಾಗಾದಿಗಳ ಬಗ್ಗೆ ಆಸಕ್ತಿ ತಾಳುತ್ತಾನೆ. ತಾರುಣ್ಯಕ್ಕೆ ಕಾಲಿಟ್ಟಾಗ ಚಿಂತನೆ ಮತ್ತು ತಪಸ್ಸುಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾನೆ. ತಾರುಣ್ಯದಲ್ಲಿ ಸಾಧಿಸಲು ಹವಣಿಸಿದ್ದು ವ್ಯತ್ಯಯವಾದಾಗ ಪ್ರಾಯಶ್ಚಿತ್ತಕ್ಕೆ ಹವಣಿಸುತ್ತಾನೆ. ಕಾಡಿನಲ್ಲಿ ಜೀವಿಸುತ್ತಾನೆ. ಚಳಿ–ಬಿಸಿಲುಗಳಿಗೆ ಮೈ ಒಡ್ಡುತ್ತಾನೆ. ಉಪವಾಸ ಮಾಡುವುದು, ದೇಹ ದಂಡಿಸುವುದನ್ನು ಕಲಿಯುತ್ತಾನೆ. ನಂತರದಲ್ಲಿ ಬುದ್ಧನ ಉಪದೇಶಗಳಿಂದ ವಿಸ್ಮಯಗೊಳ್ಳುತ್ತಾನೆ. ಜ್ಞಾನ ಮತ್ತು ಜಗತ್ತಿನ ಐಕ್ಯ ಭಾವ, ನಮ್ಮ ದೇಹದ ರಕ್ತಚಲನೆಯಂತೆ ಪರಿಕ್ರಮಿಸುತ್ತಿರುತ್ತದೆ ಎಂದು ಅನಿಸಿದಾಗ ಬುದ್ಧನನ್ನು ತ್ಯಜಿಸುತ್ತಾನೆ.

ಬಳಿಕ ಕಮಲೆಯಿಂದ ಪ್ರೇಮಕಲೆಯನ್ನು ಕಲಿತು ಸುಖಪಡುತ್ತಾನೆ. ಕಾಮಸ್ವಾಮಿಯಿಂದ ವ್ಯಾಪಾರ ಕಲಿತು ಹಣವಂತನಾಗುತ್ತಾನೆ. ದುಂದು ವೆಚ್ಚ ಮಾಡುತ್ತಾನೆ. ಶ್ರೀಮಂತರ ಊಟ–ಉಪಚಾರಗಳಲ್ಲಿ ರುಚಿ ಕಾಣುತ್ತಾನೆ. ಹೀಗೆ ಅನೇಕ ವರ್ಷಗಳನ್ನು ಕಳೆಯುವ ಸಿದ್ಧಾರ್ಥನಿಗೆ ಬುದ್ಧಿ ಭ್ರಮಣೆಯಾಗುತ್ತದೆ. ಅವನ ಚಿಂತನೆಯ ಶಕ್ತಿ ಕುಂದುತ್ತದೆ. ಎಲ್ಲವೂ ಒಂದು ಎಂಬ ಐಕ್ಯಭಾವ ಕಳೆದುಕೊಳ್ಳುತ್ತಾನೆ. ಈ ಎಲ್ಲ ವಿಷಯಾಂತರಗಳಿಂದ ಮನುಷ್ಯನಾಗಿದ್ದವನು ಮಗುವಾಗಿ ಬದಲಾಗುತ್ತಾನೆ.

ಆತ್ಮಹತ್ಯೆಯ ಹಾದಿ ತುಳಿಯುತ್ತಾನೆ. ಅದರ ಮಧ್ಯೆ ‘ಓಂ’ ಧ್ವನಿಸುತ್ತಲೇ ಆಳವಾದ ನಿದ್ರೆಗೆ ಜಾರುತ್ತಾನೆ. ನಂತರ ಎಚ್ಚರಗೊಂಡಾಗ ಉಲ್ಲಸಿತನಾಗುತ್ತಾನೆ. ಆಂತರ್ಯದ ಆತ್ಮವನ್ನು ಕಂಡುಕೊಳ್ಳಲು ತಾನೊಮ್ಮೆ ದಡ್ಡನಾಗಬೇಕಾಯಿತು. ಮತ್ತೆ, ಬದುಕಲು ಪಾಪ ಮಾಡಬೇಕಾಯಿತು ಎಂದು ಯೋಚಿಸುತ್ತಾನೆ. ಹೀಗೆ ಯಾವುದೋ ಅಸದೃಶವಾದ ಆನಂದ ತನ್ನೊಳಗೆ ಉಕ್ಕಿಬಂದ ಅರಿವು ಸಿದ್ಧಾರ್ಥನಿಗಾಗುತ್ತದೆ. ಇವೆಲ್ಲದರ ವಿವರಣೆಯನ್ನು ಅತ್ಯಂತ ಸ್ವಾರಸ್ಯಕರವಾಗಿ ಪುಸ್ತಕ ಕಟ್ಟಿಕೊಟ್ಟಿದೆ.

ಕಾದಂಬರಿಯಲ್ಲಿ ಬರುವ ‘ಅಂಬಿಗ’ ಎಂಬ ಅಧ್ಯಾಯ ಹೆಸ್ ಅವರ ಚಿಂತನೆಯನ್ನು ಸಮರ್ಥವಾಗಿ ಹಿಡಿದಿಡುತ್ತದೆ. ಅಂಬಿಗನ ಒಡನಾಟ ಸದಾ ನದಿಯ ಜೊತೆಯಲ್ಲಿ. ನದಿ ಮತ್ತು ಅಂಬಿಗ ಎರಡೂ ಕಾದಂಬರಿಯ ಅದ್ಭುತ ಪ್ರತಿಮೆಗಳು. ಜೀವನ ಎಂದರೆ ನೀರೂ ಹೌದು, ಬದುಕೂ ಹೌದು. ಹರಿಯುವುದಷ್ಟೇ ಅದರ ಪರಿ. ಒಟ್ಟಾರೆ ಬದುಕು ಎಂದರೆ ಏನೋ ಯಾರಿಗೆ ಗೊತ್ತು? ಅದು ಏನಾದರಾಗಲಿ, ಬಂದಿದ್ದನ್ನು ಎದುರಿಸುತ್ತ, ಸ್ವೀಕರಿಸುತ್ತ ಸಾಗಬೇಕು. ಪ್ರಜ್ಞೆ ಮೂಡುವ ಮೊದಲು ಮನುಷ್ಯ ಬದುಕಿದ್ದು ಹೀಗೆಯೇ ಇರಬೇಕು.

ಕೊನೆಗೂ ಅದೇ ಸರಿ ಎನಿಸುತ್ತದೆ. ನಮ್ಮಲ್ಲಿ ಒಂದು ಬಗೆಯ ಜಿಜ್ಞಾಸೆಯನ್ನು ಕೆದಕಿದರೂ, ನಮ್ಮನ್ನು ಯಾವ ದಾರಿಗೂ ಕಟ್ಟಿಹಾಕದೆ ಸ್ವಾತಂತ್ರ್ಯವನ್ನು ನೀಡುವ ಬರವಣಿಗೆ ‘ಸಿದ್ಧಾರ್ಥ’. ಪ್ರತಿಯೊಬ್ಬರೂ ಇಂಥ ಸಿದ್ಧಾರ್ಥರೇ, ಯಾರನ್ನೂ ಅನುಸರಿಸದೆ ತಮ್ಮ ದಾರಿಯನ್ನು ತಾವೇ ಹುಡುಕಿಕೊಳ್ಳಬೇಕು ಎಂದು ಪಿ.ವಿ.ನಾರಾಯಣ ಅವರು ತಮ್ಮ ಮುನ್ನುಡಿ ಬರಹದಲ್ಲಿ ಹೇಳಿರುವುದು ಸಮಂಜಸವೆನಿಸುತ್ತದೆ.

ಬರಹ ಇಷ್ಟವಾಯಿತೆ?

 • 9

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !