ಎರಡು ಪುಸ್ತಕಗಳು ಒಟ್ಟೊಟ್ಟಿಗೆ

7

ಎರಡು ಪುಸ್ತಕಗಳು ಒಟ್ಟೊಟ್ಟಿಗೆ

Published:
Updated:

‘ಸಂಬಂಧಗಳು ನಂಟೊ... ಕಗ್ಗಂಟೋ...’ (Relationships Bond or Bondage) ಮತ್ತು ‘ಭಾವನೆಗಳು ಬದುಕಿನ ಸಾರ’ (Emotion: The Juice of life). ಈಶ ಫೌಂಡೇಶನ್‌ ಪ್ರಕಟಿಸಿರುವ ಈ ವಿಶಿಷ್ಟ ಪುಸ್ತಕ ಈಗಾಗಲೇ ಇಂಗ್ಲಿಷ್‌ನಲ್ಲಿ ಜನಪ್ರಿಯವಾಗಿರುವ ಪುಸ್ತಕಗಳ ಅನುವಾದ. ಎರಡೂ ಪುಸ್ತಕ ಸೇರಿಸಿದರೆ ಬೆಲೆ ₹ 160. ಅನುವಾದ ಮೂಲ ಪುಸ್ತಕದಷ್ಟೇ ಸರಳವೂ ಲಾಲಿತ್ಯಪೂರ್ಣವೂ ಆಗಿರುವುದು ವಿಶೇಷ.

ಸಂಬಂಧಗಳನ್ನು ನಿಭಾಯಿಸುವುದೇ ಸದ್ಯದ ಸವಾಲು ಎಂಬಂತೆ ಆಗಿರುವ ಈ ದಿನಗಳಲ್ಲಿ ಒಬ್ಬ ಆಪ್ತ ಸಮಾಲೋಚಕನ ಕೆಲಸ ಮಾಡುವಂಥ ಲೇಖನಗಳು ಇಲ್ಲಿವೆ.

ಸ್ವಾಭಿಮಾನವೆಂದುಕೊಳ್ಳುವ ದರ್ಪ ಅಥವಾ ಅಹಂಕಾರ, ಪ್ರೀತಿ ಎಂದುಕೊಳ್ಳುವ ಕಾಳಜಿ, ಕಾಳಜಿಯನ್ನೇ ಮೋಹ ಎಂದುಕೊಳ್ಳುವುದು, ಕೊನೆಗೆ ಎಲ್ಲವನ್ನೂ ಕಗ್ಗಂಟಾಗಿಸಿಕೊಂಡು, ನಮ್ಮವರನ್ನು ದೂರ ತಳ್ಳುವುದು, ನಮ್ಮನ್ನು ಕಡೆಗಣಿಸುವವರಿಗಾಗಿ ಹಪಹಪಿಸುವುದು ಈ ಜಮಾನಾದ ಬಾಂಧವ್ಯ ನಿರ್ವಹಣೆಯ ಸವಾಲಾಗಿದೆ.

ಇಲ್ಲಿರುವ ಲೇಖನಗಳನ್ನು ಓದುವಾಗ ನಮ್ಮೊಳಗಿನ ಅರಿವಿನ ಕಣ್ಣು ತೆರೆಯುತ್ತದೆ. ಅದು ಸದ್ಗುರುವಾಣಿಯಾಗಿರುವುದರಿಂದ ಸ್ವ ಮೌಲ್ಯಮಾಪನಕ್ಕೆ ಒಳಪಡಿಸುತ್ತದೆ. ಕೀಳರಿಮೆ ಹುಟ್ಟದಂತೆ, ಯಾವುದಕ್ಕೂ ಯಾರನ್ನೂ ದೂಷಿಸದೆ, ನಮ್ಮನ್ನೇ ನಾವು ಅಪರಾಧಿ ಸ್ಥಾನದಲ್ಲಿಯೂ ನಿಲ್ಲಿಸಿಕೊಳ್ಳದೇ ಕೆಲವು ಸಮಸ್ಯೆಗಳಿಗೆ ಪರಿಹಾರ ಸಿಗುವಂಥ ಲೇಖನಗಳು ಇಲ್ಲಿವೆ.

ಜೀವನ ಸಂಕೀರ್ಣವಾಗಿದೆ. ಓದುವ ಸಮಯ ಇಲ್ಲ. ಓದಿ, ಅರಿತದ್ದನ್ನು ನಮ್ಮೊಳಗೆ ಪ್ರೊಸೆಸ್‌ ಮಾಡಿಕೊಂಡು, ಅದರ ಅಂತಿಮ ಫಲಿತವನ್ನು ಅನುಭವಿಸುವಷ್ಟು ಸಂಯಮ ಯಾರಿಗೂ ಉಳಿದಿಲ್ಲ. ಆ ಕ್ಷಣಕ್ಕೆ ತೀವ್ರವಾಗಿ ಪ್ರತಿಸ್ಪಂದಿಸಿ, ನಮ್ಮನ್ನೂ ಸಂಬಂಧಗಳನ್ನೂ ಘಾಸಿ ಮಾಡಿಕೊಳ್ಳುವ ಪ್ರವೃತ್ತಿಯೇ ಹೆಚ್ಚು. ಅದೆಲ್ಲವನ್ನೂ ಕೇವಲ ಮನದೊಳಗಿನ ಸಮಾಧಾನದಿಂದಲೇ ನಿಭಾಯಿಸುವ ಕಲೆ ಈ ಓದಿನಿಂದ ಸಿದ್ಧಿಸಬಹುದು.

ಮನಸಿನೊಳಗಣ ಶಾಂತಿ ಎಂದಾಗ ಇದೊಂದು ಭಾವವೇ ಅಥವಾ ಸ್ಥಿತಿಯೇ ಎಂಬ ಪ್ರಶ್ನೆ ಎದುರಾಗದೇ ಇರದು. ಕೆಲವೊಮ್ಮೆ ಇದೊಂದು ಭಾವನೆಯೆನಿಸಿದರೆ, ಇನ್ನೂ ಕೆಲವೊಮ್ಮೆ ಇದೊಂದು ಸ್ಥಿತಿ ಎನಿಸಬಹುದು. ಯಾವುದನ್ನು ಸಾಧಿಸಿದರೆ ಏನಾದೀತು ಎನ್ನುವುದೇ ಈ ಪುಸ್ತಕದ ಇನ್ನೊಂದು ವಿಷಯ. ‘ಭಾವನೆ ಬದುಕಿನ ಸಾರ’.

ಶಾಂತಿ ಎನ್ನುವುದು ನಮ್ಮೊಳಗಿನ ಸ್ಥಿತಿ. ಅದು ಮೂಲಭೂತ ಸ್ಥಿತಿ ಎನ್ನುವುದು ಸದ್ಗುರು ಅವರ ಪ್ರತಿಪಾದನೆ. ಇದಕ್ಕಾಗಿ ಏನನ್ನೂ ಸಾಧಿಸುವುದು ಬೇಕಾಗಿಲ್ಲ. ನಿರ್ಮೋಹಿಗಳಾಗಬೇಕು ಎನ್ನುತ್ತಾರೆ ಅವರು. ಒಂದೆಡೆ ನಿರ್ಮೋಹಿಗಳಾಗುವುದನ್ನೂ ಸರಳವಾಗಿ ಸ್ಪಷ್ಟಪಡಿಸುತ್ತಾರೆ. ನಿರ್ಮೋಹಿಗಳಾಗುವುದೆಂದರೆ ಯಾವುದರಿಂದಲೂ ಪ್ರತ್ಯೇಕವಾಗಿರುವುದು ಎಂದರ್ಥವಲ್ಲ. ಉಳಿದುದೆಲ್ಲವನ್ನೂ ದೂರ ತಳ್ಳುವುದೆಂದಲ್ಲ. ಯಾವ ಭಾವತೀವ್ರತೆಗೂ ಒಳಗಾಗದೇ ಎಲ್ಲವನ್ನೂ ಸಮೈಕ್ಯಗೊಳಿಸುವುದು.

ಎಲ್ಲವನ್ನೂ ಒಳಗೊಂಡಾಗ ನಾವು ಯಾವ ನಿರೀಕ್ಷೆಗಳನ್ನೂ ಇರಿಸಿಕೊಳ್ಳುವುದಿಲ್ಲ. ನಿರೀಕ್ಷೆಗಳಿಲ್ಲದಿದ್ದಾಗ ನಿರಾಸೆಯಾಗುವುದಿಲ್ಲ. ನಿರಾಸೆಯಾಗದಿದ್ದರೆ ಯಾವ ಮೋಹಗಳೂ ಉಳಿಯುವುದಿಲ್ಲ. ಇದು ನಿರ್ಮೋಹಿಯಾಗುವ ಸರಳ ಸೂತ್ರ. ಬರಹವನ್ನು ಓದಿದಾಗ ನಮ್ಮೊಳಗಿನ ಗೊಂದಲ ನಮಗೆ ತಿಳಿಯಾಗಿ ಕಾಣಿಸಿಕೊಳ್ಳುತ್ತದೆ.

ಜೀವನ ಸಂಕೀರ್ಣವಾಗಿದೆ. ನಮ್ಮನ್ನೇ ನಾವು ಮರೆಯುತ್ತಿರುವ ಈ ಧಾವಂತದ ಬದುಕಿನಲ್ಲಿ, ನಮ್ಮನ್ನು ಯಾರಾದರೂ ಗುರುತಿಸಲಿ ಎಂದು ತಹತಹಿಸುವುದು ಸಾಮಾನ್ಯ. ಅಂಥ ನಿರೀಕ್ಷೆಗಳ ಬಲೆಯಲ್ಲಿ ನಾವೇ ಸಿಲುಕಿಕೊಂಡು ಎಲ್ಲದಕ್ಕೂ ಪರರನ್ನು ದೂಷಿಸುತ್ತ, ಒಳಗೊಳಗೆ ನಮ್ಮನ್ನೇ ದೋಷಿ ಎಂದುಕೊಳ್ಳುತ್ತ ಸಾಗುತ್ತಿರುವವರಿಗೆ ಈ ಪುಸ್ತಕಗಳು ದಾರಿದೀಪ. ಎರಡೂ ಪುಸ್ತಕಗಳೂ ಒಂದರಲ್ಲೇ ಅಡಕವಾಗಿವೆ. ಎರಡೂ ವಿಷಯಗಳೂ ಒಂದೇ ನಾಣ್ಯದ ಎರಡು ಮುಖಗಳಂತೆ ಎನ್ನುವುದನ್ನು ಬಿಂಬಿಸುವಂತೆಯೇ ಪುಸ್ತಕದ ವಿನ್ಯಾಸ ಇದೆ. ನಾವು ನಮ್ಮ ನೇರಕ್ಕೆ ಹಿಡಿದು ಓದುತ್ತಿದ್ದರೂ ಎದುರಿನವರಿಗೆ ಅದು ಉಲ್ಟಾ ಆಗಿಯೇ ಕಾಣಿಸುತ್ತದೆ. ಲೋಕದ ಎಲ್ಲ ಟೀಕೆಗಳೂ ಹಾಗೆಯೇ ಎಂಬುದನ್ನು ಸಂಕೇತಿಸುವಂತಿದೆ. ನಮ್ಮ ನೇರಕ್ಕೆ ನಾವಿದ್ದರೆ, ನಮ್ಮೊಳ ಹೊರಗಿನ ಭಾವಶುದ್ಧಿ ಇದ್ದಲ್ಲಿ ಯಾವ ಗೊಂದಲವೂ ಕಾಡದು. ಇದು ಈ ಎರಡೂ ಪುಸ್ತಕಗಳ ಓದಿನ ಫಲಿತ. 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !