ಅಃ! ಬೆಳಕೆ, ಕಣ್ಣು ಹಾಳಾದ ಮೇಲೆ ಕಣ್ಣು ತೆರೆವೆಯಲ್ವೆ?

7

ಅಃ! ಬೆಳಕೆ, ಕಣ್ಣು ಹಾಳಾದ ಮೇಲೆ ಕಣ್ಣು ತೆರೆವೆಯಲ್ವೆ?

Published:
Updated:

ಸುಮಂತ್ರನು ಗಂಗೆಯ ಬಳಿ ರಾಮನನ್ನು ಬಿಟ್ಟು ಬಂದನು. ಆತನ ಸಂದೇಶವನ್ನು ದಶರಥನಿಗೆ ಹೇಳಿದನು. ಮೌನ ಶಿಲಾ ಪ್ರತಿಮೆಯಂತೆ ಅದನ್ನು ಕೇಳಿದ ದೊರೆ ವಜ್ರಾಘಾತಕ್ಕೆ ಒಳಗಾಗಿ ಮಂಚದಿಂದ ನೆಲಕ್ಕೆ ಬಿದ್ದನು. ವಾಮದೇವ ವಸಿಷ್ಠಾದಿಗಳು ಸಮಾಧಾನ ಪಡಿಸಲು, ಅದನ್ನು ಕೇಳಿ ರಾಜನ ಎದೆಯಲ್ಲಿ ದುಃಖದ ಜ್ವಾಲೆ ನೂರ್ಮಡಿಸಿತು. ಬಳಿಯಿದ್ದವರನ್ನು ಬಡಿದಟ್ಟಿದನು. ಕೈಗೆ ಯಾರೂ ಸಿಗದಿರಲು ‘ಸಿಟ್ಟು ಸೀಕರಿಸುರಿಯಿತು’. ಅವನ ಶೋಕವು ರೌದ್ರರೂಪ ತಾಳಿ, ಘೋರವಾಗಿ ಭಯವನ್ನುಂಟು ಮಾಡಿತು.

‘ಸೀಕರಿ’ ಎಂದರೆ ಸೀದು ಕರಕಲಾಗುವುದು. ಅದನ್ನು ‘ಸೀಕಲು’ ಎಂದು ಗ್ರಾಮೀಣರು ಇಂದೂ ಬಳಸುತ್ತಾರೆ. ಕವಿ ಕುವೆಂಪು ಅವರು ರಾಜನ ಕೆರಳಿದ ಕೋಪ ಸೀದು ಹೋದುದನ್ನು ಅಂದರೆ ಇಲ್ಲವಾದುದನ್ನು ‘ಸೀಕರಿಸುರಿಯಿತು’ ಪದದಲ್ಲಿ ಧ್ವನಿಸಿದ್ದಾರೆ. ಆ ಸ್ಥಿತಿಯಲ್ಲಿ ಹೊರಕ್ಕೆ ಇತರರ ಕಡೆಗೆ ಹರಿವ ಕೋಪ ತನ್ನ ಕಡೆಗೆ ಹೊರಳಿ, ಇತರರಿಗೆ ಭೀತಿಯುಂಟಾಗುವಂತೆ ತನ್ನ ಕಣ್ಣನ್ನು ತಾನೇ ಕಿತ್ತುಕೊಂಡನು! ಕೈಕೆಯನ್ನು ಕೂಗಿ ಬೊಬ್ಬಿರಿದನು.

‘ನೆಣವಸೆಯ ನೆತ್ತರಂ ಸೋರಿರ್ದ

ಕಣ್ಣದಂ ಕೈಲಾಂತು, ಸುಟ್ಟಿದೋರ್‍ದು, ಕನಲ್ದು:

‘ದೇಶ ಕೋಸಲವಿದೆಕೊ ಕರತಲಾಮಲಕ ಮೆನೆ

ಕಣ್ಗೊಳಿಸುತಿದೆ. ನನ್ನ ರಾಮನನೆನಗೆ ಕುಡಾ

ನಯನಾಭಿರಾಮನಂ! ಕಣ್ಣಾರ್ವಿನಂ ನೋಡಿ

ತೊರೆವೆನಸುವಂ, ಪ್ರಿಯತಮಾ ಪಿಶಾಚಿನಿ, ಕೈಕೆ!–

ಪಾಳ್ ಕಣ್ಗಳಿವೆ ಕಾರಣಂ, ನಿನ್ನ ರೂಪಲ್ತು,

ರಾಣಿ! ಈಗೆಲ್ಲಿ ಪೇಳಾ ನಿನ್ನ ರೂಪ ಪಾಪಂ?...

(ಶ್ರೀರಾಮಾಯಣ ದರ್ಶನಂ, ಭರತೆ ಮಾತೆ, ಸಾಲು 54–59)

ಕಣ್ಣು ಪೂರ್ಣ ಮಾಂಸದ ಮುದ್ದೆ. ಅದು ಕೊಬ್ಬಿನ ಅಂಶದಿಂದ ಕೂಡಿದ್ದು. ಯಾವುದೇ ಮೂಳೆ ಅದರಲಿಲ್ಲ. ದಶರಥ ತನ್ನ ಕಣ್ಣನ್ನು ತಾನೇ ಕ್ರೂರವಾಗಿ ಕಿತ್ತುಕೊಂಡು ಕೈಲಿ ಹಿಡಿದುಕೊಂಡುದನ್ನು ಕವಿ ಗ್ರಾಮೀಣ ಪದ ‘ನೆಣ ವಸೆ’ (ಕೊಬ್ಬು) ಬಳಸಿ ಅದರ ಲಕ್ಷಣವನ್ನು ತಿಳಿಸಿದ್ದಾರೆ. ಆ ಕೊಬ್ಬು ಕಣ್ಣು ರಕ್ತವನ್ನು ಸೋರುತ್ತಯಿತ್ತು. ಅದನ್ನು ಕೈಯಲ್ಲಿ ಹಿಡಿದುಕೊಂಡು ಸಂಕಟದ ಉರಿಯಿಂದ ರಾಜನು ರೇಗುತ್ತಾನೆ (ಕನಲ್ದು). ಕವಿಯು ಅವನ ಆ ದುರಂತ ಸ್ಥಿತಿಗೆ ಕಾರಣವಾದ ಕೈಕೆಯನ್ನು ಸೂಚಿಸಿ ಹೇಳುವಾಗ ದೇಸಿಪದ ‘ಸುಟ್ಟಿದೋರು’ ಬಳಸಿದ್ದಾರೆ. ಅದರ ವಾಚ್ಯಾರ್ಥ ‘ಬೆರಳಿನಿಂದ ತೋರಿಸು’. ಆದರೆ ಅದರೊಳಗಿರುವ ‘ಸುಟ್ಟು’– ಬೇಗೆಯಿಂದ ಸುಡುವ ತಳಮಳದ ಕಾರಣವನ್ನು ನಿರ್ದೇಶಿಸುತ್ತದೆ.

ಅತ್ಯಂತ ಸ್ಪಷ್ಟವಾದುದಕ್ಕೆ ಬಳಸುವ ನುಡಿಗಟ್ಟು ‘ಕರತಲಾಮಲಕ’– ಅಂಗೈಯೊಳಗಿನ ನೆಲ್ಲಿ. ಅಯೋಧ್ಯೆಯ ಅರಸುತನ ಒಂದು ಆಕರ್ಷಣೆ. ಅಲ್ಲಿ ಕಂಗೊಳಿಸುವುದು ರಾಜನ ಮಗನಾಗಿ ಹುಟ್ಟಿದುದರ ಹಕ್ಕು ಮತ್ತು ಸಾರ್ಥಕ್ಯ ಎಂಬುದು ಕೈಕೆಯ ಅರಿವು. ಅದಕ್ಕಾಗಿ ಅವಳು ದಶರಥನನ್ನು ವರದ ಇಕ್ಕಳದಲ್ಲಿ ಸಿಲುಕಿಸಿ ರಾಮನನ್ನು ಕಾಡಿಗೆ ಕಳಿಸುವಲ್ಲಿ ಯಶಸ್ವಿಯಾಗಿದ್ದಾಳೆ. ‘ರಾಜರ್ಷಿ, ದೀರ್ಘದರ್ಶಿ, ಸಮದರ್ಶಿ’ಯಾದ ರಾಜ ದಶರಥ ಕಣ್ಣನ್ನು ಸೆಳೆಯುವ ರಾಜ ವೈಭೋಗ ಮತ್ತು ಹೆಣ್ಣಿನ ರೂಪು ಲಾವಣ್ಯಗಳ– ತಾನು ಇದುವರೆಗೂ ಕಾಣದ ಮುಖವನ್ನು ಕಂಡು ದುಃಖಿತನಾಗಿದ್ದಾನೆ. ಎಲ್ಲವನ್ನು ಸೆಳೆದು ಆಶಿಸುವ ತನ್ನ ಕಣ್ಣು ಘೋರ ದುರ್ಗತಿಯ ದುರಂತ ದುಃಖಕ್ಕೆ ಕಾರಣವೆಂಬ ತೀರ್ಮಾನಕ್ಕೆ ಬಂದಿದ್ದಾನೆ. ಕಣ್ಣನ್ನು ಕಿತ್ತು ಅಂಗೈಲಿ ಹಿಡಿದುಕೊಂಡು ಕೈಕೆಯನ್ನು ಬೆಟ್ಟು ಮಾಡಿ ತೋರಿಸುತ್ತ ಹೇಳುತ್ತಾನೆ:

‘ನಾನು ಕಂಗೊಳಿಸಲು ಕಾರಣವಾದ ಈ ಕಣ್ಣು ನನ್ನ ದೇಶ ಕೋಸಲದ ಪ್ರತೀಕ. ನೋಡು ಅಂಗೈನ ನೆಲ್ಲಿಕಾಯಿಯಂತೆ ಸ್ಪಷ್ಟವಾಗಿ ಕಾಣಿಸುತ್ತಿದೆ. ಇದನ್ನು ತೆಗೆದುಕೊ. ನನ್ನ ಕುವರ ನಯನಾಭಿರಾಮನನ್ನು ನನಗೆ ಕೊಡು! ಕಣ್ಣಾರ್ವಿನಂ ನೋಡಿ ತೆರೆವೆನಸುವಂ.’

ಕವಿಯು ರಾಮನು ತಂದೆ ದಶರಥನ ಆಂತರ್ಯದ, ಸೊಗಸಿನ ಮನೋಹರತೆಯ ಪ್ರತೀಕ ಎಂಬುದನ್ನು ‘ನಯನಾಭಿರಾಮ’ ಪದದಲ್ಲಿ ಅಭಿವ್ಯಕ್ತಿಸಿದ್ದಾರೆ. ಅವರು ದೊರೆಯ ಪುತ್ರ ವಾತ್ಸಲ್ಯವನ್ನು ‘ಕಣ್ಣಾರ್’ ಪದದಲ್ಲಿ ಪ್ರಕಟಪಡಿಸಿರುವ ರೀತಿ ಅನನ್ಯವಾಗಿದೆ. ‘ಕಣ್ಣಾರ್’ ಪದ ತೃಪ್ತಿಯಾಗುವಂತೆ ಎಂದು ಅರ್ಥ ಹೊಮ್ಮಿಸುತ್ತದೆ. ಅದಕ್ಕೆ ‘ಕಣ್ಣು ತುಂಬುವಂತೆ’ ಎಂಬ ಇನ್ನೊಂದು ಅರ್ಥವೂ ಇದೆ.

‘ಕಣ್ಣು ತುಂಬುವಂತೆ’ ಪದ ಅಸುವನ್ನು ನೀಗುತ್ತೇನೆ ಎಂಬ ಧ್ವನ್ಯಾರ್ಥವನ್ನು ಒಳಗೊಂಡಿದೆ. ಈ ರೂಪಕದಲ್ಲಿ ದಶರಥನ ಪ್ರೀತಿ, ವೇದನೆ, ತಳಮಳ, ಮಾನಸಿಕ ವಿಕಾರದ ಹಲವು ಭಾವಗಳು ಹೆಪ್ಪುಗಟ್ಟಿವೆ.

ದಶರಥನು ಆತ್ಮಶೋಧಕ್ಕೆ ಒಳಗಾಗಿ ಮನುಜ ಲೋಕದ ದುರಂತಕ್ಕೆ ಅವನ ಪಂಚೇಂದ್ರಿಯಗಳೇ ಕಾರಣ ಎಂಬ ಅರಿವಿಗೆ ಬರುತ್ತಾನೆ. ಅಂಗೈಲಿರುವ ಕಣ್ಣುಗಳನ್ನು– ಪ್ರಿಯತಮೆ ಪಿಶಾಚಿನಿ ಕೈಕೆಗೆ ತೋರಿಸುತ್ತ ಹೇಳುತ್ತಾನೆ‘ ‘ಎಲ್ಲಕ್ಕೂ ಕಾರಣ ನಿನ್ನ ರೂಪು ಅಲ್ಲ, ನನ್ನ ಕಣ್ಣುಗಳು! ಈಗೆಲ್ಲಿ ಹೇಳು ನಿನ್ನ ರೂಪ ಪಾ‍ಪ!’

***

ಅಂತರಾತ್ಮವನ್ನು ಶುದ್ಧಿಗೊಳಿಸಿಕೊಳ್ಳುತ್ತ ಸಾಗಿದಂತೆ ದಶರಥನಿಗೆ ಹಠಾತ್ತನೆ ತನ್ನ ಯೌವನ ಕಾಲದಲ್ಲಿ ನಡೆದ ಒಂದು ಘಟನೆ ನೆನಪಾಗುತ್ತದೆ. ಅದನ್ನು ಹೀಗೆ ಪ್ರಕಟಪಡಿಸುತ್ತಾನೆ.

ಓ ಅಂಧತಾಪಸ, ನಿನ್ನ ಕಂದನಂ, ನೀರ್ ಕುಡಿವ

ಕೋಳ್ಮಿಗಂಗೆತ್ತು, ಕಣ್ಣರಿಯದಾ ಕಳ್ತಲೊಳ್,

ಶಬ್ದವೇಧೀ ಧನುರ್ವಿದ್ಯಾ ಪ್ರತಿಷ್ಠೆಯಿಂ

ಕೊಂದುದಕೆ, ವಿಧಿ ನನಗೆ ವಿಧಿಸಿಧೀ ಶಾಪಮಂ ಕಾಣ್!

‘ಓ ಅಂಧ ತಪಸ್ವಿಯೇ, ಕತ್ತಲಿನಲ್ಲಿ ನಿನ್ನ ಮಗ ಶ್ರವಣಕುಮಾರನನ್ನು ಕ್ರೂರವಾದ ಪ್ರಾಣಿ ಎಂದು ಭಾವಿಸಿದೆ. ನನ್ನ ಶಬ್ದವೇಧಿ ಧನುರ್ವಿದ್ಯೆಯ ಬಲದಿಂದ ಕೊಂದು ಬಿಟ್ಟೆ. ಅದಕ್ಕೆ ವಿಧಿ ವಿಧಿಸಿದ ಶಾಪವನ್ನು ನೋಡು’

ಆತನು ತನ್ನ ತಪ್ಪಿಗೆ ವಿಧಿ ಶಿಕ್ಷೆ ವಿಧಿಸಿದೆ ಇದಕ್ಕೆಲ್ಲಾ ತಾನೆ ಹೊಣೆ ಎಂದು ಶುದ್ಧಸತ್ತ್ವ (ಸತ್ತ್ವರಜಸ್ತಮೋಗುಣಗಳಿಗೆ ಅತೀತವಾಗಿ ಪ್ರಸನ್ನತೆ, ತೃಪ್ತಿ, ಅತಿ ಹರ್ಷ, ಬ್ರಾಹ್ಮೀಸ್ಥಿತಿ ಹೊಂದಿದ ಸತ್ವಗುಣ)ದಲ್ಲಿ ಒಂದಾಗುತ್ತಾನೆ.

ಇದೇನ್ ಶಾಂತಿ ತುಂಬುತಿಹುದೆನ್ನಾತ್ಮಮಂ?

ಮತ್ತಿದೇನ್ ಕಾಂತಿ? ಅಃ! ಬೆಳಕೆ, ನೀಂ ಕಣ್ ಕಿಡಲ್

ಕಣ್ದೆರೆವೆಯಲ್ತೆ? ಕುರುಡಿನ ಮಹಿಮೆ ಕುರುಡಂಗೆ

ಗೋಚರಂ! ಏಂ ದಿವ್ಯದರ್ಶನಂ!

ಇದೇನು ಇಂತಹ ಶಾಂತಿ ನನ್ನ ಆತ್ಮವನ್ನು ತುಂಬುತ್ತಿದೆ? ಮತ್ತೆ ಇದೆಂತಹ ಕಾಂತಿ! ಅಃ ಬೆಳಕೆ ನೀನು ಕಣ್ಣು ಹಾಳಾದ ಮೇಲೆ ಕಣ್ ತೆರೆವೆಯಲ್ಲವೆ? ಓ ಹೊರಗಿನ ಅನಂತ ಬೆಳಕೆ ನನ್ನ ಒಳಗೆ ಹರಿ. ನನ್ನನ್ನು ಬೆಳಗಿಸು ಎಂದು ಹೇಳುತ್ತ ತನ್ನ ಒಳಗಣ್ಣಿನ ಬೆಳಕಿನಲ್ಲಿ ದಿವ್ಯದರ್ಶನವನ್ನು ಕಾಣುತ್ತಾನೆ. ಅನಂತ ಶಕ್ತ ತನ್ನ ಮಗ ರಾಮನಾಗಿ ಜನಿಸಿದುದಕ್ಕೆ ತನ್ನ ಜನ್ಮ ಸಾರ್ಥಕವಾಯಿತು ಎಂಬ ಭಾವದಲ್ಲಿ ‘ನಿನಗಿದೊ ನಮಸ್ಕಾರಂ! ಧನ್ಯನಾದೆನ್ ದೇವ!’ ಎಂದು ಪ್ರಕೃತಿ ಚೇತನದಲ್ಲಿ ಒಂದಾಗುತ್ತಾನೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !