ಭಕ್ತಿಯ ರೂಪದ ಶಕ್ತಿಯ ದರ್ಶನ

7
ಮೊದಲ ಓದು

ಭಕ್ತಿಯ ರೂಪದ ಶಕ್ತಿಯ ದರ್ಶನ

Published:
Updated:

ಭಾರತೀಯ ಪರಂಪರೆಯಲ್ಲಿ ಭಕ್ತಿಯ ಹಲವು ಮುಖಗಳನ್ನು ಪರಿಚಯಿಸುತ್ತ, ವಿಶ್ಲೇಷಿಸುತ್ತ, ಭಾರತೀಯತೆಗೆ ಭಕ್ತಿ ಪರಂಪರೆ ನೀಡಿದ ಅನನ್ಯ ಕೊಡುಗೆಯನ್ನು ಕಟ್ಟಿಕೊಡುವ ಕೃತಿ ‘ಭಾರತೀಯ ಭಕ್ತಿ ಚಳವಳಿಗಳು’.

ಭಕ್ತಿಯ ಮೂಲಧಾತು ಶರಣಾಗತಿ. ಆದರೆ, ಭಾರತೀಯ ಪರಂಪರೆಯಲ್ಲಿ ಭಕ್ತಿಯನ್ನು ಬಂಡಾಯದ ರೂಪದಲ್ಲಿಯೂ ಒಂದು ಚಳವಳಿಯ ರೂಪದಲ್ಲೂ ಗುರುತಿಸಲಾಗುತ್ತದೆ. ಕರ್ನಾಟಕದಲ್ಲಿ ಹನ್ನೆರಡನೇ ಶತಮಾನದ ಶರಣರಿಗೆ ‘ಭಕ್ತಿಮಾರ್ಗ’ ತಮ್ಮ ಸಾಮಾಜಿಕ ನಂಬಿಕೆಗಳ ಅಭಿವ್ಯಕ್ತಿಗೆ ಒಂದು ದಾರಿಯಾಗಿತ್ತು. ದಾಸರು ಕೂಡ ಭಕ್ತಿಯ ಮೂಲಕವೇ ಸಾಮಾಜಿಕ ಓರೆಕೋರೆಗಳ ವಿಮರ್ಶೆಯಲ್ಲಿ ತೊಡಗಿಕೊಂಡರು. ಕಬೀರನಿಗೆ ಕೂಡ ಭಕ್ತಿ ತನ್ನ ಸಾಮಾಜಿಕ ಒಲವು ನಿಲುವುಗಳ ಪ್ರತಿಪಾದನೆಯ ಮಾರ್ಗವಾಗಿತ್ತು. ಇಂಥ ಹಲವು ಧಾರೆಗಳನ್ನು ಗುರುತಿಸುವ ಹಾಗೂ ಅವುಗಳನ್ನು ಭಾರತೀಯ ಪರಂಪರೆಯ ಒಟ್ಟಂದದಲ್ಲಿ ನೋಡುವ ಪ್ರಯತ್ನ ಯತೀಶ್ವರ ಅವರ ಕೃತಿಯಲ್ಲಿದೆ.

ಕೃತಿಯ ವಸ್ತು ವೈವಿಧ್ಯ ದಂಗುಬಡಿಸುವಂತಿದೆ, ಸಮೃದ್ಧತೆಯಿಂದ ಕೂಡಿದೆ. ಭಕ್ತಿ ಚಳವಳಿಯ ಲಕ್ಷಣ, ಸ್ವರೂಪಗಳು, ಅವುಗಳು ರೂಪುಗೊಂಡ ಸಾಮಾಜಿಕ ಸಂದರ್ಭ ಹಾಗೂ ಭಾರತದ ವಿಭಿನ್ನ ಧಾರ್ಮಿಕ ಸಂಪ್ರದಾಯಗಳ ಯಥೇಚ್ಛ ವಿವರಗಳು ಇಲ್ಲಿವೆ. ಉತ್ತರ ಭಾರತದ ಭಕ್ತಿ ಚಳವಳಿಗಳ ಅಡಿಯಲ್ಲಿ ಕಬೀರರ ಪಂಥದ ಕುರಿತ ಮಾಹಿತಿ ಅಪಾರವಾಗಿದೆ. ಕಬೀರರ ವ್ಯಕ್ತಿತ್ವ, ಸಾಹಿತ್ಯಿಕ ಸಂದೇಶಗಳ ವಿಶ್ಲೇಷಣೆಯಿಂದ ಹಿಡಿದು – ಕಬೀರರ ಪ್ರೇರಣೆಯಲ್ಲಿ ಮೂಡಿಬಂದ ವಿವಿಧ ಸಂತರ ಕುರಿತೂ ಕೃತಿ ಚರ್ಚಿಸುತ್ತದೆ. ‘ಕಾಶ್ಮೀರಿ ಭಕ್ತಿ ಚಳವಳಿ’ ಶೀರ್ಷಿಕೆಯಲ್ಲಿ ಲಲ್ಲಯೋಗೀಶ್ವರಿ, ಶೇಖ ನೂರುದ್ದೀನ್, ಸಂತರಮಣಿ ರೂಪಭವಾನಿ ಕುರಿತು ವಿಶ್ಲೇಷಣೆಯಿದೆ.

‘ಸಗುಣಧಾರೆ: ರಾಮಭಕ್ತಿ ಶಾಖೆ’ ಶೀರ್ಷಿಕೆಯಲ್ಲಿ ರಾಮಾನಂದರು, ತುಳಸೀದಾಸ, ಸ್ವಾಮಿ ಅಗ್ರದಾಸ, ನಾಭಾದಾಸ, ಪ್ರಾಣಚಂದ ಚೌಹಾನ್‌, ಹೃದಯರಾಮ, ಕೇಶವದಾಸರ ಕುರಿತ ಚರ್ಚೆಯಿದೆ. ಇದೇ ರೀತಿಯಲ್ಲಿ ‘ಕೃಷ್ಣಭಕ್ತಿ ಶಾಖೆ’ಗೆ ಸಂಬಂಧಿಸಿದಂತೆ ಸೂರದಾಸ, ನಂದದಾಸ, ಕೃಷ್ಣದಾಸ, ಪರಮಾನಂದದಾಸ, ಮುಂತಾದವರ ಕುರಿತು ವಿಶ್ಲೇಷಣೆಯಿದೆ.

ದಕ್ಷಿಣ ಭಾರತದ ಭಕ್ತಿ ಚಳವಳಿಗಳ ಹಿನ್ನೆಲೆಯಲ್ಲಿ ಪ್ರಮುಖವಾಗಿ ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿನ ಭಕ್ತಿ ಪರಂಪರೆಯನ್ನು ಗಮನಿಸಲಾಗಿದೆ. ಕರ್ನಾಟಕಕ್ಕೆ ಸಂಬಂಧಿಸಿದಂತೆ ಶರಣರು, ಹರಿದಾಸರು ಹಾಗೂ ತತ್ವಪದಕಾರರ ಕುರಿತು ವಿವರವಾಗಿ ಚರ್ಚಿಸಲಾಗಿದೆ.

ಯತೀಶ್ವರ್ ಅವರ ಈ ಕೃತಿ ಭಕ್ತಿಮಾರ್ಗದ ಮೈಲುಗಲ್ಲುಗಳನ್ನು ಗುರ್ತಿಸಿ ಮುಂದೆ ಹೋಗುವ ಕೆಲಸವನ್ನಷ್ಟೇ ಮಾಡುವುದಿಲ್ಲ. ಈ ಚಳವಳಿಗಳನ್ನು ರೂಪಿಸಿರಬಹುದಾದ ಸಾಮಾಜಿಕ– ಸಾಂಸ್ಕೃತಿಕ ಸಂದರ್ಭವನ್ನು ಅರ್ಥೈಸುವ ಪ್ರಯತ್ನವೂ ಇಲ್ಲಿದೆ. ಇದರಿಂದಾಗಿ ಈ ಕೃತಿ ಭಾರತೀಯ ಇತಿಹಾಸವನ್ನು ನೋಡುವ ವಿಶಿಷ್ಟ ರೂಪವಾಗಿಯೂ ಮುಖ್ಯವೆನ್ನಿಸುತ್ತದೆ. ಭಾರತಕ್ಕೂ ವಿಶ್ವದ ಉಳಿದ ದೇಶಗಳ ಇತಿಹಾಸಕ್ಕೂ ಇರುವ ಪ್ರಮುಖ ವ್ಯತ್ಯಾಸವನ್ನೂ ಕೃತಿಯ ಮೂಲಕ ಗುರ್ತಿಸಬಹುದಾಗಿದೆ.

ಭಕ್ತಿಪಂಥವನ್ನು ಪೊರೆದವರಲ್ಲಿ ಜನಸಾಮಾನ್ಯರ ಸಂಖ್ಯೆಯೇ ಹೆಚ್ಚು. ಜನಸಾಮಾನ್ಯರ ಕಥನ ಎನ್ನುವ ಕಾರಣಕ್ಕಾಗಿಯೂ ‘ಭಾರತೀಯ ಭಕ್ತಿ ಚಳವಳಿಗಳು’ ಕೃತಿಗೆ ವಿಶೇಷ ಮಹತ್ವವಿದೆ. ಸಂಸ್ಕೃತಿ, ರಾಷ್ಟ್ರೀಯತೆಯ ಕುರಿತು ಚರ್ಚೆ– ವಾಗ್ವಾದಗಳು ನಡೆಯುತ್ತಿರುವ ಸಂದರ್ಭದಲ್ಲಿ, ಈ ಕೃತಿಯ ಓದು ಭಾರತೀಯತೆಯ ನಿಜ ಚಹರೆಗಳನ್ನು ನಮಗೆ ಕಾಣಿಸಬಲ್ಲದು.

ಭಾರತೀಯ ಭಕ್ತಿ ಚಳವಳಿಗಳು
ಲೇಖಕ: ಸೀ.ಚ. ಯತೀಶ್ವರ
ಪ್ರಕಾಶನ: ಮಹಿಮಾ ಪ್ರಕಾಶನ
ಪುಟ: 1156
ಬೆಲೆ: ₹1000

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !