ಬಹೂಪಯೋಗಿ ‘ಆರೋಗ್ಯ ತರಂಗ’

7

ಬಹೂಪಯೋಗಿ ‘ಆರೋಗ್ಯ ತರಂಗ’

Published:
Updated:
Deccan Herald

ವೈದ್ಯಕೀಯ ಲೇಖನಗಳ ಮೂಲಕ ಓದುಗರಿಗೆ ಚಿರಪರಿಚಿತರಾಗಿರುವ ಡಾ.ಕರವೀರಪ್ರಭು ಕ್ಯಾಲಕೊಂಡ ತಮ್ಮ ಲೇಖನಗಳ ಒಟ್ಟು ಸಂಗ್ರಹವನ್ನು ‘ಆರೋಗ್ಯ ತರಂಗ’ ಕೃತಿಯ ಮೂಲಕ ಪ್ರಕಟಿಸಿದ್ದಾರೆ. ಒಟ್ಟು 25 ಲೇಖನಗಳಿರುವ ಈ ಕೃತಿಯಲ್ಲಿ ಜನಸಾಮಾನ್ಯರಿಗೆ ಅಗತ್ಯವಾಗಿ ಬೇಕಾದ ವೈದ್ಯಕೀಯ ಲೋಕದ ಮಾಹಿತಿಗಳಿವೆ. ಸರಳವಾದ ಭಾಷೆ ಮತ್ತು ನಿರೂಪಣೆ ಕೃತಿಯ ಸೊಬಗನ್ನು ಹೆಚ್ಚಿಸಿದೆ.

ಅಪಘಾತ ಅಥವಾ ಆಕಸ್ಮಿಕ ಅವಘಡಗಳಲ್ಲಿ ಪ್ರಥಮ ಸಹಾಯದ ಮಹತ್ವವೇನು ಎಂಬುದನ್ನು ‘ಪ್ರಥಮ ಸಹಾಯ ತಪ್ಪಿಸುವುದು ಅಪಾಯ’ ಲೇಖನದಲ್ಲಿ ಲೇಖಕರು ಸರಳವಾಗಿ ಓದುಗರಿಗೆ ಮನಮುಟ್ಟುವಂತೆ ವಿವರಿಸಿದ್ದಾರೆ. ಅಂತೆಯೇ ನಿತ್ಯವೂ ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳಲು ಬಳಸುವ ಸೊಳ್ಳೆ ನಿವಾರಕಗಳ ಕುರಿತು ಪ್ರಯೋಗಾಲಯಗಳ ವರದಿ ಬೆಚ್ಚಿಬೀಳಿಸುತ್ತದೆ. ವಿಜ್ಞಾನ ಜರ್ನಲ್‌ಗಳಲ್ಲಷ್ಟೇ ಪ್ರಕಟವಾಗುವ ಕೆಲವು ಸಂಶೋಧನಾ ವರದಿಗಳು ಜನಸಾಮಾನ್ಯರಿಗೆ ಅರ್ಥವಾಗುವುದು ಕಷ್ಟ. ಆದರೆ, ಲೇಖಕರು ಅಂಥ ವಿಷಯಗಳನ್ನು ಸರಳವಾದ ಭಾಷೆಯಲ್ಲಿ ನಿರೂಪಿಸಿರುವುದು ಕೃತಿಯ ಮಹತ್ವದ ಅಂಶಗಳಲ್ಲೊಂದು.

ಪುಟ್ಟ ಕಂದಮ್ಮಗಳಿಗೆ ಕಾಟ ಕೊಡುವ ಕಿವಿ ಸೋರುವಿಕೆ, ನ್ಯೂಮೋನಿಯ, ನವಜಾತ ಶಿಶುಗಳಿಗೆ ಕಾಂಗರೂ ಚಿಕಿತ್ಸೆಯ ಮಹತ್ವ, ಎದೆಹಾಲಿನ ಮಹತ್ವವನ್ನು ಸಾರುತ್ತಲೇ ವಿಜಯಪುರ ಜಿಲ್ಲೆಯಲ್ಲಿ ತಲೆದೋರಿದ ರಿಕ್ಸೆಟ್ಸೆಯಾದಂಥ ಅಪರೂಪದ ಕಾಯಿಲೆಗಳ ಕುರಿತು ಸಮಗ್ರ ಮಾಹಿತಿಯನ್ನು ಕೃತಿ ಒಳಗೊಂಡಿದೆ.

ಮೂವತ್ತೈದರ ನಂತರ ಗರ್ಭಿಣಿಯಾದರೆ ಆಗುವ ಅಪಾಯಗಳನ್ನು ಸೋದಾಹರಣವಾಗಿ ವಿವರಿಸುತ್ತಲೇ ಆರೋಗ್ಯಕರ ರಕ್ತದಾನದ ಮಹತ್ವವನ್ನೂ ಮನಗಾಣಿಸುತ್ತಾರೆ. ತಲೆಯ ರಕ್ಷಣೆಗೆ ಹೆಲ್ಮೆಟ್ ಹೇಗೆ ಉಪಯೋಗಿ? ಸ್ಟೈಲಿಷ್‌ ಆಗಿ ತೋರಲು ಮತ್ತು ಸ್ಟೇಟಸ್ ಸಂಕೇತವಾಗಿರುವ ಬಹುರಾಷ್ಟ್ರೀಯ ಕಂಪನಿಗಳ ತಂಪು ಪಾನೀಯ ಕುಡಿಯುವ ಯುವಜನರಿಗೆ ಅದರಲ್ಲಿರುವ ರಾಸಾಯನಿಕಗಳ ವಿವರಣೆ ಮತ್ತು ಅದರಿಂದಾಗುವ ಅಪಾಯಗಳ ಉದ್ದುದ್ದ ಪಟ್ಟಿ ನಿಜಕ್ಕೂ ಬೆಚ್ಚಿಬೀಳಿಸುವಂತಿವೆ.

ದೈಹಿಕ ಆರೋಗ್ಯವಷ್ಟೇ ಅಲ್ಲ ಮಾನಸಿಕ ಆರೋಗ್ಯದ ಮಹತ್ವ ಸಾರುವ ಲೇಖನವನ್ನೊಳಗೊಂಡಿರುವುದು ಕೃತಿಯ ಹೆಗ್ಗಳಿಕೆ. ಮಕ್ಕಳ ತಂದೆತಾಯಿ ಮತ್ತು ಆರೋಗ್ಯದ ಬಗ್ಗೆ ಕಾಳಜಿ ವಹಿಸುವವರು ಓದಲೇಬೇಕಾದ ಕೃತಿಯಿದು. 

ಬರಹ ಇಷ್ಟವಾಯಿತೆ?

 • 15

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !