ಊರು ಕೇರಿಯ ಕಥೆಗಳು

7

ಊರು ಕೇರಿಯ ಕಥೆಗಳು

Published:
Updated:
Prajavani

ಕವಿ ಡಾ.ಸಿದ್ಧಲಿಂಗಯ್ಯ ಅವರ ಆತ್ಮಕಥನ ಇದು. ‘ದಲಿತನ ಸಿಟ್ಟಿನಿಂದ ಲೋಕ ಒಡೆದು ಹೋಗುವುದು ಅನುಮಾನದ ಸಂಗತಿ. ಆದರೆ, ಇಲ್ಲಿ ಆತ ಗೊಳ್ಳೆಂದು ನಗುವ ರೀತಿಗೆ ಲೋಕ ಬೆಚ್ಚಿ ಜಾರಿ ಬೀಳುವುದು ಖಾತ್ರಿ’ ಎಂದು ಲೇಖಕ ಡಿ.ಆರ್. ನಾಗರಾಜ್ ಈ ಕೃತಿಯ ಮುಖಪುಟದಲ್ಲಿ ಮುನ್ನುಡಿಯ ಮುದ್ರೆ ಒತ್ತಿದ್ದಾರೆ. ‘ಊರು ಕೇರಿ– 3’ರಲ್ಲಿ ಏನೋ ವಿಶೇಷವಾದದ್ದು ಇದೆ ಎನ್ನುವ ಕುತೂಹಲದಲ್ಲೇ ಓದುಗರನ್ನು ಕೃತಿ ತನ್ನೊಳಗೆ ಇಳಿಸಿಕೊಳ್ಳುತ್ತದೆ.

ಈ ಆತ್ಮಕಥೆಯಲ್ಲಿ ದಲಿತ ಲೇಖಕರ ಕೃತಿಗಳಲ್ಲಿ ನಿರೀಕ್ಷಿಸಬಹುದಾದ ಅನೇಕ ಸಂಗತಿಗಳಿವೆ. ಬಡತನ, ಜಾತಿ, ಅವಮಾನ, ಭೀತಿಗಳಿರದ ದಲಿತ ಕಥೆ ಸುಳ್ಳು. ಆದರೆ, ಅವನ್ನು ಪ್ರತಿಭೆಯಿಂದ ಲೇಖಕ ಗೆಲ್ಲುತ್ತಾನೆ ಎಂಬ ಮಾತು ನಿಜ.

ಬದುಕಿನಲ್ಲಿನ ಹಸಿವು, ಅವಮಾನಗಳನ್ನು ಕೊಂಚ ವಕ್ರೀಕರಣಗೊಳಿಸುವ ಮೂಲಕ ಸಿದ್ಧಲಿಂಗಯ್ಯ ಅವುಗಳನ್ನು ದಾಟುವ ಮಾರ್ಗವನ್ನೂ ತೋರಿದ್ದಾರೆ. ಬಡತನ, ಹೋರಾಟದ ಬದುಕು ಈ ಕಥಾನಕದಲ್ಲಿ ತುಂಟತನ, ವ್ಯಂಗದಲ್ಲಿ ನಿರೂಪಿತವಾಗಿದೆ. ಆ ಮೂಲಕ ಪ್ರತಿಭೆಯು ಗೆಲ್ಲುವ ಆತ್ಮವಿಶ್ವಾಸವೊಂದನ್ನು ಆವಿಷ್ಕರಿಸುವ ಅಪರೂಪದಲ್ಲಿ ಅಪರೂಪ ಬರವಣಿಗೆ ಇದು.

ಸಮಕಾಲೀನ ದಲಿತ ರಾಜಕಾರಣಕ್ಕಿಂತ ಭಿನ್ನವಾಗುವ, ದಲಿತ ರಾಜಕಾರಣದ ಸಾಂಸ್ಕೃತಿಕ ರೋಷದ ಒಳಗಿದ್ದು ಭಿನ್ನವಾಗುವ ಸ್ವಾರಸ್ಯಕರ ಪ್ರಯತ್ನವನ್ನು ಸಿದ್ಧಲಿಂಗಯ್ಯ ಈ ಕೃತಿಯಲ್ಲಿ ನಡೆಸಿದ್ದಾರೆ. ಈ ಬರವಣಿಗೆಯಲ್ಲಿ ರೋಷವನ್ನು ರಮಣೀಯಗೊಳಿಸಿದ್ದಾರೆ. ಈ ಕೃತಿ ದಲಿತ ಸಾಂಸ್ಕೃತಿಕ ರಾಜಕಾರಣ ಪ್ರಜ್ಞಾಪೂರ್ವಕವಾಗಿ ನಂಬಿಕೊಂಡಿರುವ ಅನೇಕ ಕೀಳರಿಮೆಗಳನ್ನು ಕಾಲೆಳೆದು ಬೀಳಿಸುತ್ತದೆ.

ಈ ಆತ್ಮಕಥನ ಸಿದ್ಧಲಿಂಗಯ್ಯ ಅವರ ಬಾಲ್ಯ ಮತ್ತು ಕಾಲೇಜು ದಿನಗಳ ಮುಂದಿನ ಭಾಗವಾಗಿ ವಿಧಾನ ಪರಿಷತ್ ಸದಸ್ಯರಾಗಿದ್ದ ಅವಧಿಯಲ್ಲಿ ತಮಗೆ ದಕ್ಕಿದ ಅನೇಕ ಅನುಭವಗಳ ಸ್ವಾರಸ್ಯಕರ ಪ್ರಸಂಗಗಳ ಹೂರಣವನ್ನು ವ್ಯಾಪಿಸಿಕೊಂಡಿದೆ. ಜೊತೆಗೆ, ಆಧುನಿಕ ಕನ್ನಡ ಸಾಹಿತ್ಯ ಸಂವೇದನೆಯಲ್ಲಿ ಬೇರೂರಿರುವ ಒಂದು ಪ್ರಮುಖ ನಂಬಿಕೆಯ ಮೇಲೂ ಕಣ್ಣು ಹಾಯುವಂತೆ ಮಾಡಿದೆ.

ಮೇಲ್ಮನೆ ಸದಸ್ಯರಾಗಿ ಅವರು ಭಾಗವಹಿಸಿದ ಕಲಾಪಗಳಲ್ಲಿನ ಕೆಲವು ಗಂಭೀರ ವಿಷಯಗಳ ಬಗ್ಗೆ, ಸದನದ ಸದಸ್ಯರ ಮಾತಿನ ಎಡವಟ್ಟುಗಳಿಂದ ಉದ್ಭವಿಸಿದ್ದ ‘ಕಲಾಪ ಗದ್ದಲ’ ಸನ್ನಿವೇಶಗಳಲ್ಲಿ ತಮ್ಮ ತಿಳಿಹಾಸ್ಯ ಪ್ರಜ್ಞೆಯ ಮಾತುಗಾರಿಕೆಯ ಸೂಕ್ಷ್ಮತೆಯಿಂದ ಕಲಾಪ ಸುಸೂತ್ರಗೊಳಿಸಿದ ಅನೇಕ ಪ್ರಸಂಗಗಳು ಈ ಕೃತಿಯಲ್ಲಿ ಓದುಗರಿಗೆ ದಕ್ಕುತ್ತವೆ.

‘ರಾಜ್ಯಪಾಲರಿಗೆ ಅವಮಾನ’, ‘ಪರಿಷತ್ತಿನಲ್ಲಿ ವರಾಹ’, ‘ಖರ್ಗೆ ಕೊಡಿಸಿದ ಟೀ’, ‘ಸಜ್ಜನ ಸಚಿವರು ಮುಗ್ಧ ನಾಡಿಗರು’, ‘ದಾಖಲೆಯಲ್ಲಿ ಸತ್ತವನು’ ಇಂತಹ ಪ್ರಸಂಗಗಳಿಂದ ನಗುವಿಗೆ ಕೊರತೆ ಆಗದು. 

ಊರು ಕೇರಿ 3
ಆತ್ಮಕಥನ
ಲೇ: ಡಾ.ಸಿದ್ಧಲಿಂಗಯ್ಯ
ಪ್ರ. ಅಂಕಿತ ಪುಸ್ತಕ, ಬೆಂಗಳೂರು
ಪುಟ: 168
ಬೆಲೆ: ₹150

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !