ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸೆ ಮಾವ ಮತ್ತು ಮಾಮರವೇ... ಮಾಮರವೇ’  ಪುಸ್ತಕಗಳು

Last Updated 2 ಮಾರ್ಚ್ 2019, 20:00 IST
ಅಕ್ಷರ ಗಾತ್ರ

ಏಳು ಕಥೆಗಳ ಈ ಸಂಕಲನದಲ್ಲಿ ಲೇಖಕರು, ಸುದ್ದಿಮನೆಯಲ್ಲಿ ಸಾಮಾನ್ಯವಾಗಿ ವರದಿಯಾಗುವಂತಹ ಕೆಲವು ಸಾಮಾಜಿಕ ವಿಷಯಗಳು, ನಿತ್ಯದ ತವಕ ತಲ್ಲಣಗಳನ್ನು ಕಥಾಲೋಕಕ್ಕೆ ಸುರಳೀತವಾಗಿ ತಂದಿದ್ದಾರೆ. ಸ್ವಂತದ್ದೊಂದು ವಿಳಾಸವಿಲ್ಲದೆ ಪಡಿತರ ಚೀಟಿ ಪಡೆಯಲಾಗದ ಹಾಗೂ ಪಡಿತರ ಚೀಟಿ ಇಲ್ಲದೆ ಅಸ್ತಿತ್ವದ ದ್ವಂದ್ವಕ್ಕೊಳಗಾಗುವ ಕುಟುಂಬವೊಂದರ ತೊಳಲಾಟವಿರುವ ‘ಎಡ್ರೆಸ್’, ಮ್ಯಾನ್‌ಹೋಲ್‌ ಸ್ವಚ್ಛಗೊಳಿಸುವ ಪೌರಕಾರ್ಮಿಕರು ತಮ್ಮ ದೇಹಕ್ಕೆಅಂಟಿಕೊಳ್ಳುವ ವಾಸನೆಯಿಂದ ಕೌಟುಂಬಿಕವಾಗಿ ಹೇಗೆಲ್ಲಾ ಯಾತನೆ ಎದುರಿಸುತ್ತಾರೆ, ಮಾನವೀಯತೆಯುಳ್ಳ ಕೆಲಸ ಗಿಟ್ಟಿಸಿಕೊಳ್ಳಲು ಪರದಾಡುತ್ತಾರೆ ಎನ್ನುವುದನ್ನು ಹೇಳುವ ‘ಮ್ಯಾನ್‌ಹೋಲ್‌’ ಇದಕ್ಕೆ ಉದಾಹರಣೆ.

ಬಡ್ತಿ ಪಡೆಯಲುಕಾರ್ಪೊರೇಟ್ ಜಗತ್ತಿನಲ್ಲಿ ಸ್ನೇಹವನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವ ನಾಜೂಕುತನ, ಗಂಡ-ಹೆಂಡಿರ ಮನೋಲೋಕವನ್ನು ಹೇಗೆಲ್ಲಾ ಅಸ್ತವ್ಯಸ್ತಗೊಳಿಸುತ್ತದೆ ಎನ್ನುವುದನ್ನು ಚಿತ್ರಿಸುವ ‘ಮೌನಿಮತ್ತು ಪಪ್ಪಾಯಿಮರ’ ಈ ಸಂಕಲನದಲ್ಲಿ ಸೆಳೆಯುವಂತಹ ಕಥೆ.

ಆಧ್ಯಾತ್ಮದ ಹೊಳಹುಗಳನ್ನು ಸಂಕಲನದಲ್ಲಿ ಅಲ್ಲಲ್ಲಿ ಕಾಣಬಹುದು.

ಮೀಸೆ ಮಾವ
ಲೇ: ಭಾಸ್ಕರ ಹೆಗಡೆ
ಪ್ರ: ಮನೋಹರ ಗ್ರಂಥಮಾಲಾ, ಧಾರವಾಡ
ಪುಟ: 152

₹ 130

***

ಮಾಮರವೇ... ಮಾಮರವೇ’
ಎ.ಆರ್‌. ಪಂಪಣ್ಣ ಅವರ ಮೂರನೇ ಪುಸ್ತಕ ಹಾಗೂ ಮೊದಲನೇ ಪ್ರಬಂಧ ಸಂಕಲನ. ಮಳೆ, ಚಳಿ, ಕೃಷಿ, ತಾಯಿ, ಗೋಡೆ, ಬಯಲಾಟ... ಹೀಗೆ ಹಲವಾರು ವಿಷಯಗಳನ್ನಾಧರಿಸಿದ ಬರಹಗಳು ಇಲ್ಲಿವೆ. ತಮ್ಮ ಬಾಲ್ಯದ ಅನುಭವಗಳನ್ನು ಲೇಖಕ ಹೃದಯಸ್ಪರ್ಶಿಯಾಗಿ ಕಟ್ಟಿಕೊಟ್ಟಿದ್ದಾರೆ.

ಆರಂಭದಲ್ಲಿಯೇ ಮಳೆಯ ಬಗ್ಗೆ ಬರೆಯುತ್ತಾ, ಮಳೆ ತರುವ ಸಡಗರ–ಸಂಭ್ರಮವನ್ನು ಓದುಗರ ಮನಸ್ಸಿನಲ್ಲೂ ತುಂಬುತ್ತಾರೆ. ‘ಎಲ್ಲೋದ್ಯೋ ಮಳೆರಾಯ’ ಪ್ರಬಂಧ ಅಕಾಲಿಕ ಮಳೆ ತರುವ ಆತಂಕದ ಮುಖವನ್ನು ತೆರೆದಿಡುತ್ತದೆ. ‘ಅಂತರಂಗದಲ್ಲಿ ನೆಲೆ ನಿಂತವರು’ ಎಂಬ ಶೀರ್ಷಿಕೆಯ ಮೂರೂ ಬರಹಗಳು ವಿಭಿನ್ನ ರೀತಿಯ ವ್ಯಕ್ತಿಚಿತ್ರಗಳಾಗಿವೆ. ಇಂದಿನ ಪೀಳಿಗೆಗೆ ಬಹುಶಃ ಪರಿಚಯವೇ ಇಲ್ಲದ, ಹಿರಿಯರೂ ಬಹುತೇಕ ಮರೆತೇ ಬಿಟ್ಟಿರುವ ಅನೇಕ ವಿಶಿಷ್ಟ ಪದಸಂಪತ್ತುಗಳು ಇಲ್ಲಿನ ಲೇಖನಗಳ ಜೀವಾಳ.

‘ಕೆಂಪಿಂಡಿ’, ‘ಮೊಸರಬುತ್ತಿ’, ‘ದ್ಯಾಮಿಕಟ್ಟಿ’, ‘ಜಾಲಿಮರ’, ‘ಮುಂಚೀಮರ’ ಎನ್ನುವಂತಹ ವಿಶೇಷ ಪದಪ್ರಯೋಗಗಳು ಹಳೇ ಹುಬ್ಬಳ್ಳಿಯ ಅಂದಿನ ಪರಿಸರವನ್ನು, ಹುಬ್ಬಳ್ಳಿಗರ ಅಂದಿನ ಜೀವನಶೈಲಿಯನ್ನೂ ನೆನಪಿಸುತ್ತವೆ. ಜನಸಾಮಾನ್ಯರಿಗೂ ಓದಲು ಅನುವಾಗುವಂತಹ ಸರಳ– ಸುಲಭ ಭಾಷೆ, ಯಾವುದೇ ಅಬ್ಬರಗಳಿಲ್ಲದ ಸುಲಲಿತ ಶೈಲಿಯನ್ನು ಈ ಬರಹಗಳ ಮಿತಿ ಅಂದುಕೊಳ್ಳದೇ ಓದಿದರೆ ಮಾತ್ರ
ಮತ್ತೊಮ್ಮೆ ಬಾಲ್ಯಕ್ಕೆ ಹೋಗಿಬರಲು
ಸಾಧ್ಯವಾಗುತ್ತದೆ

ಪುಸ್ತಕ: ‘ಮಾಮರವೇ... ಮಾಮರವೇ’

ಲೇಖಕ: ಎ.ಆರ್‌. ಪಂಪಣ್ಣ

ಬೆಲೆ: 90

ಪ್ರಕಾಶಕರು: ಆಹ್ವಾನ ಪ್ರಕಾಶನ

ಪುಟಗಳು: 88‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT