ಮಂಗಳವಾರ, ಅಕ್ಟೋಬರ್ 15, 2019
29 °C

ಒಂದು ಮಿದಿಕೆ ಸಗಣಿ – ಮೇಲೆ ಬೆಳಗುವ ಜ್ಯೋತಿ

Published:
Updated:
Prajavani

(ಕೃತಿ: ಕಣಸು ಕವಣೆತಿರಿ, ಕವಿ: ಎಸ್.ಜಿ.ಸಿದ್ಧರಾಮಯ್ಯ, ಪ್ರಕಾಶಕರು: ಪಲ್ಲವ ಪ್ರಕಾಶನ, ಚನ್ನಪಟ್ಟಣ, ಬೆಲೆ:160 / 2018)

ಕಗ್ಗತ್ತಲಲ್ಲಿ ಮುಳುಗಿರುವ ನೀರವ ನಡುರಾತ್ರಿ

ಬಾರದ ನಿದ್ದೆಗೆ ಮುಕುರುತ್ತಿವೆ ನೆನಪುಗಳು

ಅರುವತ್ತು ವಸಂತಗಳ ಹಿಂದೆ ತೋಟದ ದಾರಿಯಲ್ಲಿ

ಗೂದೆ ಹನುಮ ಕಾಣುವ ಹಾಗೆ ಕೂತು

ಅಪ್ಪನ ಬಗ್ಗೆ ಕೇಳಿದ್ದು ಅಣಕಿಸಿದ್ದು

ಹದಿನೈದರ ಹರೆಯದಲ್ಲಿದ್ದಾಗ ಕರಿಸಿದ್ಧನ ಜೊತೆ

ಸೂಜಿಗಲ್ಲು ದಾರಿಯಲ್ಲಿ ಸೈಕಲ್ಲಿನಿಂದ ಬಿದ್ದದ್ದು

ಸಂಜೆಯಾದ ಮೇಲೆ ಅರಿಶಿಣ ಕುಂಕುಮ ಮಾರದ್ದು

ನೆನಪಾಗಿ ಗೋಧೂಳಿಗೆ ಮುನ್ನ ಬೂದಾಳಿಗೆ ಹಿಂತಿರುಗಿದ್ದು

ಅದೇ ಹಣೆಯ ಗಾಯದ ಕಲೆ ಇಪ್ಪತ್ತಾರರ ಹೊತ್ತಿನಲ್ಲಿ

ನೋಡಲು ಹೋದ ಹೆಣ್ಣಿನ ನಿರಾಕರಣೆಗೆ ಕಾರಣವಾದದ್ದು

. . .

ಎಲ್ಲಿಂದೆಲ್ಲಿಗೆ ಸಂಬಂಧ?

ಕಾಲತಂತುವಿನಲ್ಲಿ ಕಂಡದ್ದು ಮಾತ್ರ ಕೊಂಡಿಯಾದರೆ ಕಾಣದ್ದು?

ಸಂಗತವೆಂಬುದು ಕಣ್ಣಿನ ತುತ್ತು

ಅಸಂಗತವೆಂಬುದು ಮಣ್ಣಿನ ಬಿತ್ತು (ನಡುರಾತ್ರಿಯ ನೆನಪುಗಳು)

ಸುಮಾರು ನಾಲ್ಕು ದಶಕಗಳಿಂದ ಕಾವ್ಯೋದ್ಯೋಗದಲ್ಲಿ ತೊಡಗಿಕೊಂಡಿರುವ ಎಸ್.ಜಿ. ಸಿದ್ಧರಾಮಯ್ಯನವರ ಇತ್ತೀಚಿನ ಕವನ ಸಂಕಲನದ ಈ ಸಾಲುಗಳು ಅವರ ಕಾವ್ಯದ ಅನುಸಂಧಾನಕ್ಕೆ ಒದಗಿಬರುವ ಮೀಮಾಂಸಾ ನಿಲುವೊಂದನ್ನು ಒದಗಿಸುತ್ತವೆ. ಕಾಣಿಸದ್ದನ್ನೂ ಒಳಗೊಳ್ಳುವುದು ಕಾವ್ಯ ‘ದರ್ಶನದ’ ಹೆಚ್ಚುಗಾರಿಕೆ. ದ್ರಾವಿಡ ಕಾವ್ಯ ಮೀಮಾಂಸೆಯ ನಿಲುವುಗಳಲ್ಲಿ ಒಂದಾದ ‘ಅಗಂ’ ಕಾವ್ಯಪ್ರಕಾರಕ್ಕೆ ಉದಾಹರಣೆಗಳಂತಿರುವ ಈ ಕವನಗಳ ಗುಣವೇ ಸ್ವ-ನಿರಸನ. ಅವರ ಮೂಲಕ ಈವರೆಗೆ ಒಡಮೂಡಿ ಬಂದ ನೂರಾರು ಕವನಗಳ ಪ್ರಾತಿನಿಧಿಕ ಕವನದಂತಿರುವ ಈ ಸಾಲುಗಳು ನಾನೆಂಬ ನಾನು ನಿರಸನಗೊಂಡು, ಅದರ ಪರಿಣಾಮವಾಗಿ ಇದಿರೂ ಇಲ್ಲವಾಗಿ, ಲೋಕಪ್ರವಾಹವೊಂದು ತನ್ನಿಚ್ಛೆಗೆ ಹರಿದಂತಿದೆ. ಎಚ್ಚರವಾಗಿರುವಷ್ಟು ಹೊತ್ತೂ ತನ್ನನ್ನೇ ಧ್ಯಾನಿಸುವುದು ಸಾಮಾನ್ಯ ಸ್ವಭಾವ. ಅದನ್ನು ಮೀರಲು ಸಂತನ ಲೋಕಪ್ರೀತಿಯೋ, ದಾರ್ಶನಿಕನ ಎಚ್ಚರವೋ, ಕವಿಕಲಾವಿದರ ದಾಟಿಸುವಿಕೆಯೋ ಯಾವುದಾದರೊಂದರ ನೆರವಿರಬೇಕು. ದೇಸಿ ಶ್ರಮಣ ಧಾರೆಗಳ ದರ್ಶನವನ್ನು ತನ್ನ ಜೀವದ್ರವ್ಯವಾಗಿಸಿಕೊಂಡ, ತಾನೂ ಇದಿರೂ ಕಲಸಿಹೋಗುವ. ಅತ್ತ ಎಚ್ಚರವೂ ಅಲ್ಲದ ಇತ್ತ ನಿದ್ದೆಯೂ ಅಲ್ಲದ ಬೆಳಗಿನಜಾವದ ಈ ಕವನಗಳು ತಮಗೆ ಸಹಜವಾದ ಸಂಧಾಭಾಷೆಯನ್ನು ತೊಟ್ಟು ಬಂದಿವೆ. ಇದು ಕಾವ್ಯ ಕವಿಯಿಂದ ಬಿಡುಗಡೆಗೊಂಡು ಸ್ವತಂತ್ರವಾಗುವ ಹೊತ್ತು. ಕಾವ್ಯದ ಮೇಲಿನ ಹಕ್ಕನ್ನು ಕವಿ ಬಿಟ್ಟುಕೊಟ್ಟಷ್ಟು ಅದು ಓದುಗರ ಸ್ವತ್ತಾಗುತ್ತದೆ. ಕವನದ ಸಾಲುಗಳಿಗೂ ಓದುಗರಿಗೂ ತಂತಾನೇ ಸಂಬಂಧಗಳೇರ್ಪಟ್ಟು ಕವಿ ಕರಗಿಹೋಗುತ್ತಾನೆ. ತನ್ನನ್ನು ಇಲ್ಲವಾಗಿಸಿಕೊಳ್ಳುವುದು ಅನುಭಾವಿಗಷ್ಟೇ ಅಲ್ಲ ಕವಿಕಲಾವಿದರಿಗೂ ಒಂದು ಸವಾಲು. ಓದುಗರು ಮತ್ತು ಕಾವ್ಯದ ನಡುವೆ ಮೂಗುತೂರಿಸುವ ಕವಿಯನ್ನು ಕಾವ್ಯವೂ ಸಹಿಸುವುದಿಲ್ಲ, ಓದುಗರೂ ಸಹಿಸುವುದಿಲ್ಲ. ಅಂತಹ ಕಡೆಗಳಲ್ಲಿ ಓದುಗರು ಕವಿಯನ್ನು ಬೈಪಾಸ್ ಮಾಡುವುದಕ್ಕೆ ಹಿಂಜರಿಯುವುದಿಲ್ಲ. ಕಾವ್ಯದ ಮೂಸೆಯಲ್ಲಿ ಕವಿ ತನ್ನ ಅನುಭವಗಳನ್ನು ಮಾತ್ರ ಕರಗಿಸುವುದಿಲ್ಲ; ತನ್ನನ್ನೂ ಕರಗಿಸಿಕೊಳ್ಳಬೇಕಾಗುತ್ತದೆ.

‘ಉರಿವ ಬತ್ತಿ ತೈಲ’ ಈ ಕವಿಯಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವ ಪ್ರತಿಮೆ. ಸಂಬಂಜವೆಂಬುದು ದೊಡ್ಡದು ಕನಾ ಎಂಬಂತೆ ಇದನ್ನ್ತು ಮುಂದಕ್ಕೆ ಚಾಚಿ ಹಿಡಿಯುತ್ತಾರೆ. ಈ ನೆಲದ ಕಾವ್ಯ ಮೀಮಾಂಸೆಯ ಒಂದು ಮುಖ್ಯ ಪರಿಕಲ್ಪನೆಯಾಗಿ ಈ ನೆಲದ ಶ್ರಮಣಧಾರೆಗಳು ಅಂಗೈಯಲ್ಲಿ ಮುಂಗೈಯಲ್ಲಿ ಹಾದಿ ಬೀದಿಯಲ್ಲಿ ತಿಪ್ಪೆಮೇಲೆ ಸಮಾಧಿಮೇಲೆ ಕಸಿಮಡಗಿ ಇಟ್ಟು ಬೆಳಕ ಚೆಲ್ಲಿದ್ದಾರೆ. ಈ ಕವಿ ಕೂಡ ಅದನ್ನು ಜನಪದ ಜೀವಸತ್ವದ ಸಂಕೇತವಾದ ಒಂದು ಮಿದಿಕೆ ಸಗಣಿಯ ಮೇಲಿಟ್ಟಿದ್ದಾರೆ. ಅದು ಈ ಕವಿಗೆ ಸಮೃದ್ಧ ಬೆಳಸನ್ನು ನೀಡಿದೆ. ನೀಡಿದ ಅನ್ನಕ್ಕೆ, ಅದರ ಲೋಕಪೋಷಣ ಗುಣಕ್ಕೆ ಕವಿ ಋಣಿಯಾಗಿದ್ದಾರೆ. ಕಾವ್ಯದಲ್ಲಿ ಪದೇ ಪದೇ ಅದು ವ್ಯಕ್ತವಾಗುತ್ತಲೇ ಇರುತ್ತದೆ. ಅದು ನಮ್ಮ ಬದುಕಿಗೆ ಅನ್ನ ಒದಗಿಸುವ ಗಂಗಾಳವೆಂಬ ಎಚ್ಚರ ಒಕ್ಕಲು ಮೂಲದ ಎಲ್ಲ ಕವಿಗಳಿಗೂ ಇರುವ ಋಣಪ್ರಜ್ಞೆ.

ಕನ್ನಡದಲ್ಲಿ ಬೆಳಗಿನ ಜಾವದ ಸ್ಫುರಣೆಗಳನ್ನು ಇಷ್ಟು ಪ್ರಮಾಣದಲ್ಲಿ ಕಾವ್ಯವಾಗಿಸಿದವರು ಸಿದ್ಧರಾಮಯ್ಯನವರು ಮಾತ್ರ. ಅತ್ತ ಬೆಳಕೂ ಅಲ್ಲದು ಇತ್ತ ಕತ್ತಲೂ ಅಲ್ಲದ ಸಂಧ್ಯಾ ಕಾಲವು ತೋರಿಸಿಕೊಡುವ ಲೋಕಸತ್ಯಗಳು ಬೇರೆ ಇರುತ್ತವೆ. ಸಂಧಾಭಾಷೆಯೆಂಬುದೊಂದು ಪರಿಕಲ್ಪನೆ. ಅತ್ತ ಸ್ಪಷ್ಟತೆಗೂ ವಾಲದೆ, ತೀರ ಅಸ್ಪಷ್ಟತೆಗೂ ದೂಡದೆ ಕವಿ ಓದುಗರಿಬ್ಬರೂ ತಮ್ಮದೇ ದಾರಿ ಹುಡುಕಿ ನಡೆಯುವಂತೆ ಮಾಡುವ ಈ ಯಾನಮಾಧ್ಯಮವನ್ನು ದಾರ್ಶನಿಕರು, ಕವಿಗಳು ಮತ್ತು ಕಲಾವಿದರು ಸಮರ್ಥವಾಗಿ ಬಳಸುತ್ತಾರೆ. ಕನ್ನಡದ ದಾರ್ಶನಿಕ ಕವಿ ಪು.ತಿ.ನ ತಮ್ಮ ಶಾರದಯಾಮಿನಿ ಕವನದಲ್ಲಿ ಇದನ್ನು ಕಾಣಿಸಿಕೊಟ್ಟಿದ್ದಾರೆ.

ನಾವಿಬ್ಬರೂ ಒಂದು ಭೌಗೋಳಿಕ ಮತ್ತು ಸಾಂಸ್ಕøತಿಕ ಆವರಣದಲ್ಲಿ ಹುಟ್ಟಿ ಬೆಳೆದವರು. ಅಲ್ಲಿಯ ಲೋಕಪ್ರೀತಿಯ ಪ್ರವಾಹದಲ್ಲಿ ಕರಗಿ ಹೋದ ಬಾಲ್ಯವನ್ನು ಕಂಡುಂಡವರು. ಆ ನೆಲದ ಸಮೃದ್ಧ ಜಾನಪದೀಯ ನುಡಿ ನಡೆಯ ಗಾಢ ಪ್ರಭಾವವೊಂದು ಈ ಕವಿಯ ಕೈಹಿಡಿದು ನಡೆಸಿದೆ. ಆದರೆ ಕವಿಗೆ ತಾನು ಹಿಡಿದು ನಡೆಯುತ್ತಿರುವ ಅವ್ವನ ಕಿರುಬೆರಳ ತಂತು ಎಲ್ಲಿ ಕಳಚಿಕೊಂಡುಬಿಡುವುದೋ ಎಂಬ ಆತಂಕವೊಂದು ಯಾವಾಗಲೂ ಕಾಡುತ್ತಲೇ ಇರುತ್ತದೆ. ಮತ್ತೆ ಮತ್ತೆ ಅದರ ಸಂಬಂಧವನ್ನು ಖಾತರಿಪಡಿಸಿಕೊಳ್ಳುತ್ತಿರುತ್ತಾರೆ. ಎಪ್ಪತ್ತರ ಹರೆಯದಲ್ಲೂ ಹಂಬಲಿಸುವ ಅವ್ವನ ಕಿರುಬೆರಳ ಸಂಬಂಧದ ಸ್ಪರ್ಶವನ್ನು ಅವರ ಕಾವ್ಯ ಓದುಗರಿಗೆ ಮುಟ್ಟಿಸಬಲ್ಲದು.

ಇಂತಪ್ಪ ಘಳಿಗೆಯಲಿ ಸುಳಿದಾಲಿಸಿದ ಕರಿನೆರಳ ನಡೆದಾಟ

ಹೊಗರು ಬೆಳೆ ನಡುವೆ ಅತ್ತಲಿಂದ ಇತ್ತ ಇತ್ತಲಿಂದ ಸುತ್ತ

ಬಳಸಿ ಹರಿದಾಡಿದ್ದು ನಾಯೋ ನರಿಯೋ ಚಿರತೆಯೋ ಬರೀ ಭ್ರಾಂತೋ

ದಿಗ್ಭ್ರಮೆಯ ದಿಗಿಲೊಳಗೆ ಜೋಡಿಸಿದ ಬೆರಳು ಜಾರಿ ಹೋಗದ ಬಿಗಿತ

ಹೇಳಿದರೆ ತಾಳಲಾರದು ಜೀವ ಹೇಳದಿರೆ ನೀಸಲಾರದು ಭಾವ

ಅವರ್ ಬಿಟ್ಟ್ ಇವರ್ ಬಿಟ್ ಅವರ‍್ಯಾರು

.. ಎಪ್ಪತ್ತರ ಈ ಹೊತ್ತಿನ ಮುಂಜಾವದಲ್ಲಿ ಕಂಡ ಕನಸು ಬೆಳಗಾದರೂ ಕರಗದ್ದು

ಕಾಡುತ್ತಿದೆ ಮತ್ತೆ ಮತ್ತೆ ಜೋಡಿಸಿದೆ ಜೀವ ಭಾವಗಳ ನೆನಪಾಗಿ

ತುಂಡು ಅರಿವೆಯ ಗೊಪ್ಪೆ ಸಿಂಡು ಪರಿಮಳವಾಗಿ ಕರಿನೆರಳ ಕನಸಾಗಿ (ಕವಣೆತಿರಿ)

ಪಕ್ಕದಲ್ಲೇ ಹರಿದರೂ ಎಟುಕಿಸಿಕೊಳ್ಳಲು ತೊಳಲಾಡುವಂತೆ ಮಾಡುವ ಕಾವ್ಯ ಪ್ರವಾಹವು ಒಮ್ಮೊಮ್ಮೆ ಕವಿಗಳನ್ನೂ ಓದುಗರನ್ನು, ಭೂಮಿಗೂ ಆಕಾಶಕ್ಕೂ ಜೋಲಿ ಕಟ್ಟಿ ಲಾಳಿ ಹೊಡೆಸಬಲ್ಲದು. ಈ ಪ್ರಕ್ರಿಯೆಯಲ್ಲಿ ಲೋಕದ ನಿತ್ಯ ಚಲನೆಯ ಗತಿ ಮತ್ತು ಗಾತ್ರಗಳನ್ನು ಪಲ್ಲಟಗೊಳಿಸಿ ಯಾವುದು ನಿಜ ಯಾವುದು ಭ್ರಾಂತಿ ಎಂಬುದರ ಪುನರ್ ವ್ಯಾಖ್ಯಾನಕ್ಕೆ ಒಡ್ಡಬಲ್ಲದು. ಹೀಗೆ ಓದುಗನನ್ನು ನಿತ್ಯದ ಸಾಮಾನ್ಯ ಸ್ತರದಿಂದ ದಾಟಿಸಿ ಲೋಕವನ್ನು ಕಾಣಿಸಿಕೊಡಲು ಸಂಧ್ಯೆಯ ಲೋಕಾನುಸಂಧಾನ ಮತ್ತು ಅದಕ್ಕೆ ಒದಗಿಬರುವ ಸಂಧಾಭಾಷೆಗಳು ಅನೇಕಾಂತದ ಮೀಮಾಂಸಾ ಅನುಸಂಧಾನಕ್ಕೆ ಕೂಡ ಹೇಳಿಮಾಡಿಸಿದ ಮಾಧ್ಯಮವಾಗಬಲ್ಲವು. ಈ ಸಂಬಂಧದ ಸರಪಣಿಯು ಜೋಡಿಸುತ್ತಿರುವ ನೂರಾರು ತುದಿಗಳನ್ನು ಕಾವ್ಯ ಬೆಸೆಯುತ್ತಿದೆ.

ಎಸ್.ಜಿ.ಸಿದ್ಧರಾಮಯ್ಯನವರ ಕಾವ್ಯಾನುಸಂಧಾನದ ಭಿತ್ತಿಯಲ್ಲಿ ಶ್ರಮಣಧಾರೆಗಳ ಪರಂಪರಾನುಗತವಾದ ಅಪಾರ ನೆನಪಿನ ಕೋಶವಿದೆ. ಈ ನೆಲದ ಕಾವ್ಯಮೀಮಾಂಸೆಯ ಪ್ರಧಾನ ಪರಿಕಲ್ಪನೆಗಳಾದ ಅನೇಕಾಂತವಾದ, ಪ್ರಮಾಣ ನಿರಾಕರಣೆ, ಕಸುಬು ಶ್ರಮವನ್ನಾಧರಿಸಿದ ಜ್ಞಾನ ಮೀಮಾಂಸೆ, ದುಃಖದ ಅನುಸಂಧಾನ, ಸಂಬಂಧಾಧಾರಿತ ಲೋಕವ್ಯಾಖ್ಯಾನ, ನಡೆ ನುಡಿ ಸಾಮರಸ್ಯ ಮುಂತಾದುವು ದುಡಿಯುತ್ತಿವೆ. ಲಂಕೇಶರ ಅವ್ವನೂ ಈ ನೆಲದ ಮೀಮಾಂಸೆಗೆ ದುಡಿದವಳೇ. ವಚನ, ತತ್ವ, ಜನಪದ ಮಹಾಕಾವ್ಯಗಳೊಡನೆ ಕವಿ ಸ್ಥಾಪಿಸಿಕೊಂಡಿರುವ ಅವಿನಾಭಾವ ಸಂಬಂಧದ ಅನೇಕ ಕವನಗಳಿವೆ. ವರ್ತಮಾನದ ಅನೇಕ ವಿಷಮ ಸಂಬಂಧಗಳೂ ಸಂದುಗೊಂದುಗಳಲ್ಲಿ ಗೂಡು ಕಟ್ಟಿಕೊಂಡಿವೆ.

ಸಿದ್ಧರಾಮಯ್ಯನವರ ಈ ನಿಡುಗಾಲದ ಕಾವ್ಯ ಯಾನದಲ್ಲಿ ಒಡೆದು ಕಾಣುವ ಗುಣವೊಂದಿದೆ. ತನ್ನ ಜೊತೆಯಲ್ಲಿ ಮಬ್ಬುಗತ್ತಲಲ್ಲಿ ನಡೆಯುತ್ತಿರುವ ಓದುಗರ ಜೊತೆ ಮಾತ ಮಾತನಾಡುತ್ತಲೇ ಮೆಲ್ಲಗೆ ದನಿತಗ್ಗಿಸಿ ಅರುಗಾಗಿ ಹೋಗಿ, ಅವರವರ ಪಾಡಿಗೆ ಅವರವರ ಗಂತವ್ಯಕ್ಕೆ ತಲುಪುವ ಸ್ವಾತಂತ್ರ್ಯವನ್ನು ಎಸ್ ಜಿ ಎಸ್ ಗೌರವಿಸಿದ್ದಾರೆ. ಕಾವ್ಯ ಕೂಡ ಪ್ರಜಾ ಸತ್ತಾತ್ಮಕವಾದುದು. ಕವಿರಾಜಮಾರ್ಗದಲ್ಲಿ ಆಳುವವರು, ಕವಿಗಳು ಮತ್ತು ಓದುಗರು ಸಮಾನ ಸ್ವತಂತ್ರರು. ಅದು ಜೀವಿಜೀವಿಗಳ ನಡುವಿನ ಹೊರಗೋಡೆಗಳನ್ನು, ಮನುಷ್ಯನ ಅಂತರಂಗದೊಳಗೆ ಬೆಳೆದು ನಿಂತಿರುವ ಒಳಗೋಡೆಗಳನ್ನು ನೆಲಸಮಗೊಳಿಸಿ ಎಲ್ಲವನ್ನೂ ಬಟಾಬಯಲಾಗಿಸಬಲ್ಲದು. ಬಯಲೆಂದರೆ ಬರೀ ಬಯಲಲ್ಲ; ಎಲ್ಲವನ್ನೂ ತುಂಬಿ ನೀಡಬಲ್ಲ ತಾಯಿಮಡಿಲು.

ಬಯಲೆಂದರೆ ಬೇಲಿ ಕಿತ್ತ ಬದುಕಲ್ಲ. ‘ಹಕ್ಕಕ್ಕೀ ನಮ್ಮೊಲಕೆ ಬರಬ್ಯಾಡಾ, ನಮ್ಮಾವ ಕಂಡರೇ. .’ ಎನ್ನುವಲ್ಲಿ ನಿಸರ್ಗಕ್ಕೆ ಎಂದೂ ವಿಮುಖವಾಗದೆ ನನ್ನ ಪಾಲಿನ ಬದುಕನ್ನು ನನಗೆ ಬಾಳಲು ಬಿಡು ನೀನೂ ಬದುಕು ಎನ್ನುವ ಸಾಮರಸ್ಯದ ಬಾಳಿದೆ. ಅದನ್ನು ಕದಡುತ್ತಿರುವವರ ಬಗೆಗೆ, ಮತ್ತೊಂದು ಜೀವಿಯ ಬದುಕನ್ನು, ಮತ್ತೊಬ್ಬರ ಎಲೆಯ ಅನ್ನವನ್ನು ಬಾಚಿಹಾಕಿಕೊಳ್ಳುತ್ತಿರುವವರ ಬಗೆಗೆ ಸಿಟ್ಟಿದೆ. ತಾತ್ವಿಕ ಸಂಘರ್ಷ ತೀವ್ರಗೊಂಡಿರುವ ಈ ಹೊತ್ತಿನಲ್ಲಿ ಅದರ ನಟ್ಟನಡುವೆ ನಿಂತಿರುವ ಕವಿ ಸಿದ್ಧರಾಮಯ್ಯನವರು ಸಹಜವಾಗಿ ತಮ್ಮ ನಿಲುವುಗಳನ್ನು ಮೂರ್ತಗೊಳಿಸಿಕೊಂಡ ನಡೆಯನ್ನು ನಡೆಯುತ್ತಿದ್ದಾರೆ. ಇತ್ತೀಚೆಗೆ ಅದು ಅವರ ಕಾವ್ಯದ ಹೆಚ್ಚು ಭಾಗವನ್ನು ಆವರಿಸಿಕೊಳ್ಳುತ್ತಿದೆ. ಅದೊಂದು ರೀತಿಯಲ್ಲಿ:

ನಿಭಾಯಿಸಬೇಕಾದ ವರ್ತಮಾನದ ತುರ್ತಿಗೆ ಪ್ರತಿಕ್ರಿಯೆಯಾಗಿ ಹುಟ್ಟಿಕೊಂಡ ಹೆಚ್ಚಿನ ಕವನಗಳು ‘ಪರಂ’ ಕವನಗಳಾಗಿವೆ. ಕವಿ ತನ್ನನ್ನು ಹೊರಗೆ ಹಾಕಿಕೊಂಡ ಈ ಕವನಗಳು ಎಲ್ಲರಿಗೂ ತಮ್ಮವೆಂದೆನಿಸಬೇಕಿಲ್ಲ. ಹಾಗೆ ಹೊರಗೆ ನಿಲ್ಲುವ ಕವನಗಳೂ ಕೆಲವರ ಪಾಲಿಗೆ ಇವೆ. ಅವು ಕೂಡ ಕಾವ್ಯದ ಒಳಗು ಎಂದೇ ನನ್ನ ಗ್ರಹಿಕೆ. ಮತ್ತೂ ಒಳಗೆ ಹೋದರೆ, ಕಾವ್ಯದ ಅನುಸಂಧಾನಕ್ಕೆ ಮೀಮಾಂಸೆಯ ಹತಾರುಗಳೂ ಅನಿವಾರ್ಯವಲ್ಲ. ಆದರೆ ಕವಿಯ ಕಾವ್ಯ ಹೂರಣದಲ್ಲಿ ಈ ನೆಲದ ಮೀಮಾಂಸೆಯ ಜೀವದ್ರವ್ಯವಿದೆ ಎನ್ನುವುದನ್ನು ಸೂಚಿಸಲು ಅವುಗಳು ನೆಪವೆನ್ನಲು ಅಡ್ಡಿಯಿಲ್ಲ.

ದಾಟಿ ಬಯಲ ಸೇರುವ ಮುನ್ನ ಕಾಳರಾತ್ರಿಯ ಅನುಭವಕ್ಕೆ ಒಳಗಾಗುವ ಅನುಭಾವಿಯ ತಳಮಳ, ಲೋಕಪ್ರವಾಹದಲ್ಲಿ ಕವಿ ಕರಗಿ ಹರಿಯುವ ಸದ್ದು ಓದುಗರಿಗೆ ಕೇಳಿದರೆ ಅಂತಹ ಅಭಿವ್ಯಕ್ತಿ ಸಾರ್ಥಕವೆನ್ನಿಸುತ್ತದೆ. ಈ ನೆಲದ ಅಂತಃಸತ್ವದ ದೀವಿಗೆಯನ್ನು ತಂದು ನಮ್ಮ ಅಂಗೈಯ ಮೇಲಿಡುವ ಕೆಲಸವನ್ನು ಈ ಕವನ ಸಂಕಲನ ಮಾಡಿದೆ.

Post Comments (+)