ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೂಡಾಮಣಿ, ದೇವ್ರ ಮಗಳು ಪುಸ್ತಕಗಳ ವಿಮರ್ಶೆ

Last Updated 12 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಪುಸ್ತಕ: ದೇವ್ರ ಮಗಳು

ಲೇಖಕರು: ಅಕ್ಬರ್‌ ಸಿ. ಕಾಲಿಮಿರ್ಚಿ

ಪ್ರಕಾಶನ: ಕನ್ನಡ ಮೈತ್ರಿ ಪ್ರಕಾಶನ, ಕೊಪ್ಪಳ

ಪುಟಗಳು: 88

ಬೆಲೆ: 80

ದೂರವಾಣಿ: 94482466280

ವೈವಿಧ್ಯ ಕಥಾವಸ್ತುಗಳನ್ನೊಳಗೊಂಡ 15 ಕಥೆಗಳ ಸಂಕಲನ ಈ ಪುಸ್ತಕ. ಇಲ್ಲಿನ ‘ದೇವ್ರ ಮಗಳು’ ಕಥೆ ದೇವರ ಹೆಸರಿನಲ್ಲಿ ಹೆಣ್ಣುಮಕ್ಕಳನ್ನು ‘ಬಸವಿ’ ಬಿಡುವ ಅನಿಷ್ಟ ಪದ್ಧತಿಯ ಕುರಿತು ಚರ್ಚಿಸುತ್ತದೆ. ದೇವರ ಮಗಳು ಎಂಬುದನ್ನೇ ಸಾಧನವಾಗಿಸಿ, ಮುಗ್ಧ ಹೆಂಗಳೆಯರನ್ನು ತಮ್ಮ ಕಾಮ ತಣಿಕೆಗೆ ಬಳಸಿಕೊಳ್ಳುವ ಗಂಡಸರು ಆಕೆಯನ್ನು ಸೀಮಿತ ಚೌಕಟ್ಟಿನಲ್ಲೇ ಇಡುವ ವ್ಯವಸ್ಥಿತ ನಿಯಮ ರೂಪಿಸುತ್ತಾರೆ. ಆದರೆ ಆಕೆಗೆ ಹುಟ್ಟುವ ಮಕ್ಕಳಿಗೆ ಅಪ್ಪನ ಸ್ಥಾನ ತುಂಬಲು ಯಾವೊಬ್ಬನೂ ಬರಲೊಲ್ಲ. ಇಂತಿಪ್ಪ ಸಂಧಿಗ್ಧದಲ್ಲಿ ಆಕೆ ಮತ್ತು ಮಕ್ಕಳು ಪಡುವ ಪಡಿಪಾಟಲು, ಸಮಾಜದ ನಿಂದೆ,ಅಣಕ, ಅಪಮಾನಗಳನ್ನು ನವಿರಾಗಿ ಚಿತ್ರಿಸಿದ್ದಾರೆ ಲೇಖಕರು. ಹಳ್ಳಿಯಿಂದಿಡಿದು ಪಟ್ಟಣವ್ಯಾಪಿ ವ್ಯವಸ್ಥೆಯ ಒಳ, ಹೊರಗು, ಮನುಷ್ಯನ ಬಹುಕೃತ ವೇಷ, ದೈವೀ ಆವಾಹನೆಗಳ ದೃಶ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿವೆ ಇಲ್ಲಿನ ಕಥೆಗಳು. ‘ಕಥೆಗಳು ಬರೀ ಬರೆದವನ/ಳ ಕಥೆ ಅಲ್ಲ. ಲೋಕದ ಸಂಕಟಗಳ ಬಿಡುಗಡೆಯ ದ್ಯೋತಕ‌’ ಎಂಬ ಲೇಖಕರ ಮಾತು ಇಡೀ ಪುಸ್ತಕದ ಧನಿ.

ಪುಸ್ತಕ: ಚೂಡಾಮಣಿ

ಲೇಖಕರು: ಆಶಾ ರಘು

ಪ್ರಕಾಶನ: ಸಾಹಿತ್ಯಲೋಕ ಪಬ್ಲಿಕೇಷನ್ಸ್‌, ಬೆಂಗಳೂರು

ಪುಟಗಳು: 80

ಬೆಲೆ: 80

ದೂರವಾಣಿ: 080 26606061

ರಾಮಾಯಣ ಎಂದಾಕ್ಷಣ ನೆನಪಾಗುವುದು ರಾಮನ ಪಟ್ಟ, ವನವಾಸ, ಸೀತಾಪಹರಣ, ಯುದ್ಧ ಇತ್ಯಾದಿ. ಅಂತೆಯೇ ಅವುಗಳ ಆಧಾರದ ಮೇಲೆ ಅದೆಷ್ಟೋ ಸಾಹಿತ್ಯ ಪ್ರಕಾರಗಳು ಹುಟ್ಟಿಕೊಂಡಿವೆ. ಆದರೆ ಅಲ್ಲಿ ಪ್ರೇಮದ ಹೊಸ ಭಾಷ್ಯವೇ ಏರ್ಪಟ್ಟಿತ್ತು. ರಾಮಾಯಣ ಶೋಕದ ಕಥೆಯಲ್ಲ, ಪ್ರೇಮಕಥೆ ಎಂಬ ಲೇಖಕಿಯ ಮಾತು ‘ಚೂಡಾಮಣಿ’ ನಾಟಕ ಓದಿಂದತೆಲ್ಲ ನಿಜವೆನಿಸದೇ ಇರದು. ಮಾತ್ರವಲ್ಲ ಸೀತಾ, ರಾಮರ ನಡುವಿನ ಪ್ರೇಮ ಬಾಂಧವ್ಯ ಅವರ ಮಾತುಗಳಿಂದಲೇ ತಮ್ಮ ಸಖ, ಸಖಿಯರೊಡನೆ ಹಂಚಿಕೊಳ್ಳುವ, ಆ ಮೂಲಕ ಓದುಗರನ್ನು ಹಿಡಿದಿಡುವ ಪ್ರಯೋಗಶೀಲ ರಚನೆ ನಾಟಕದ ವಿಶೇಷತೆ. ವಾಲ್ಮೀಕಿ ಆಶ್ರಮದಲ್ಲಿದ್ದ ಸೀತೆ ಅಲ್ಲಿನ ಕಸ್ತೂರಿಯೊಡನೆ ತನ್ನ ನೆನಪಿನ ಬುತ್ತಿ ಬಿಚ್ಚುತ್ತಾ ಪ್ರೇಮದ ಪ್ರತಿರೂಪದಂತಿರುವ ಚೂಡಾಮಣಿಯ ಮೂಲಕ ನಾಟಕದ ಆಶಯ ಬೆಳೆಯುತ್ತದೆ. ದಾಂಪತ್ಯದ ದ್ಯೋತಕದಂತಿರುವ ಚೂಡಾಮಣಿಯ ಸಾಧನದೊಂದಿಗೆ ಕುಟೀರ ಮತ್ತು ಅಯೋಧ್ಯೆ ಎಂಬೆರಡು ಪ್ರತಿಮೆಗಳ ಮೂಲಕ ಸಮಾಜದ ಭಿನ್ನ ಸಂಧರ್ಭಗಳನ್ನು ನಿರೂಪಿಸಿವುದು ಈ ನಾಟಕದ ಶಕ್ತಿಗಳಲ್ಲಿ ಮುಖ್ಯವಾದುದು. ದೇಸಿ ಭಾಷೆಯ ಸರಳ ನಿರೂಪಣಾ ಶೈಲಿ, ಪ್ರೇಮ ಪದ್ಯ ಹಾಗೂ ಸಂಭಾಷಣೆಗಳು ನಾಟಕದ ಒಟ್ಟಂದವನ್ನು ಹೆಚ್ಚಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT