ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವ, ಜೀವ ಸಂಗಮ ಬೊಳ್ಳೊಣಕಯ್ಯ

Last Updated 2 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಸುವರ್ಣ ಕಥನ
ಲೇ:
ಡಾ.ಎಂ.ವೆಂಕಟಸ್ವಾಮಿ
ಪ್ರ: ಪ್ರಸಾರಾಂಗ, ಕನ್ನಡ ವಿ.ವಿ ಹಂಪಿ
ದೂ: 080–22372388

**

‘ಒಳ್ಳೆಯದು ಬೇಕಿದ್ರೆ ಹಳ್ಳಿಗೆ ಹೋಗು’ ಎಂಬ ಮಾತೊಂದಿದೆ. ಅರ್ಥಾತ್ ಹಳ್ಳಿಗಳಲ್ಲಿ ಸ್ಪಂದನೆ, ಪ್ರತಿಕ್ರಿಯೆ, ತುಡಿತ, ಮಿಡಿತಗಳಿಗೆ ಒತ್ತು ಹೆಚ್ಚು ಎಂಬುದೇ. ಕ್ರಿಯೆಗೆ ಅರ್ಥ ಮೈಗೂಡಿಸಿಕೊಂಡಿರುವುದರಿಂದಲೇ ಹಳ್ಳಿಗೆ ಒಳ್ಳೆಯದರ ಪಟ್ಟ. ದುರಂತವೆಂದರೆ ಕಾಲ ಉರುಳಿದಂತೆಲ್ಲ ಮನಸ್ಥಿತಿಗಳೂ, ಬಂಧ, ಭಾವ, ಸಂಬಂಧಗಳು ಹಾಸುಂಡ ಬದುಕನ್ನು ಬೀಸಿ ಒಗೆದು ನಡೆಯುತ್ತವೆ. ಇಂತಹದ್ದೇ ನೊಂದ ಜೀವದ ಸೆಲೆ ‘ಬೊಳ್ಳೊಣಕಯ್ಯ’. ಸಂಬಂಧಗಳು ಸರಿದುಹೋದಾಗ ವ್ಯಕ್ತಿ ಖಿನ್ನನಾಗುವ ಬಗೆಯನ್ನು ಪ್ರೇಮಶೇಖರ ಮನೋಜ್ಞವಾಗಿ ಚಿತ್ರಿಸಿದ್ದಾರೆ ಈ ಕಾದಂಬರಿಯಲ್ಲಿ.

ಬೊಳ್ಳೊಣಕಯ್ಯ ಹೆಸರಿನಿಂದಲೇ ಭಿನ್ನವಾಗಿ ಗುರುತಿಸಲ್ಪಟ್ಟ, ಹಾದ ಹಾದಿಯಲ್ಲಿ ಬಾರಿ ಬಾರಿಗೂ ನೋವನ್ನೇ ಭೆಟ್ಟಿಯಾದವ. ಇದನ್ನು ಮೀರಿ ಘಾಸಿಗೊಳಿಸಿದ್ದು ಜನರ ವರ್ತನೆ, ಅಪಹಾಸ್ಯ, ನಿಂದೆ, ಅಣಕ. ಎದೆಯಲ್ಲೇ ಉಳಿದ ನೋವು ಹೆಪ್ಪುಗಟ್ಟಿ ಹುಚ್ಚನಂತಾಡುವ ಆತ ಎಲ್ಲರಿಗೂ ಅಪಥ್ಯ. ವೃದ್ಧಾಪ್ಯ, ಅಶುಚಿ, ಕಪಟವಿಲ್ಲದ ಆತನ ವರ್ತನೆಯೇ ಜನಕ್ಕೆ ಬಂಡವಾಳ, ವಿಚಿತ್ರ ಪ್ರಾಣಿಯೆಂಬಂತ ಭಾವ. ಸತ್ತ ಮಗನ ರೂಪವೇ ಹುಂಜವೆಂದು ಬಗಲಿಗಿರಿಸಿಕೊಂಡು ತಿರುಗುವ ಆತನ ವರ್ತನೆ ಹಲವರ ನಗೆಗೆ ವಸ್ತು. ಇವೆಲ್ಲವುಗಳ ನಡುವೆಯೇ ಜೀವನ ಜೀಕುವ ಬೊಳ್ಳೊಣಕಯ್ಯನೊಳಗೊಬ್ಬ ಬೇರೆಯದ್ದೇ ವ್ಯಕ್ತಿಯಿದ್ದ. ಅದನರಿಯುವಲ್ಲಿ ಮಂದಿ ವಿಫಲರಾದರು. ಅಂತೆಯೇ ಈ ಪುಸ್ತಕ ಅದೆಷ್ಟೋ ಬೊಳ್ಳೊಣಕಯ್ಯರ ಪ್ರತಿನಿಧಿ.

ಅನುಭವದ ಗಾಢತೆ ಪ್ರೇಮಶೇಖರ ಅವರ ಬರಹಗಳಲ್ಲಿ ಎದ್ದು ಕಾಣುತ್ತದೆ. ಅವರು ಕಂಡ, ಕೇಳಿದ, ಕಲ್ಪಿತ ಕಥೆಗಳಲ್ಲೂ ವಾಸ್ತವಕ್ಕೆ ಕನ್ನಡಿ ಹಿಡಿಯುವ ಬರಹ ರೂಢಿಸಿಕೊಂಡವರು. ಅವರ ‘ಕಾಗದದ ದೋಣಿಗಳು’, ‘ಖೆಡ್ಡಾ’ ಕಥಾ ಸಂಕಲನ ಬದುಕಿನ ವಿವಿಧ ಏರಿಳಿತಗಳನ್ನು ಪರಿಚಯಿಸುತ್ತವೆ. ನೋವು, ನಿಟ್ಟುಸಿರು, ಪ್ರೇಮ, ವೈರಾಗ್ಯ, ದುರಾಸೆಗಳ ನವಿರು ಚಿತ್ರಣದ ಹಾದಿ ಓದುಗರನ್ನು ಕಾಡುವುದು ಖಚಿತ. ಯಾರದ್ದೋ ಬದುಕಿಗೆ ಇನ್ಯಾರದ್ದೋ ನಿರ್ದೇಶನ, ಮಡಿ–ಮೈಲಿಗೆಗಳ ಪರಿಕಲ್ಪನೆ, ಧರ್ಮದ ಚೌಕಟ್ಟು.

ಪರಿಣಾಮ ಮರೆಯಲ್ಲೇ ಬಿಕ್ಕಿ, ಸೊರಗುವ ಮನಸುಗಳು, ಕನಸುಗಳು ಅಲ್ಲಲ್ಲೇ ಕಮರಿ ಹೋಗುವುದನ್ನು ಲೇಖಕರು ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ ಇಲ್ಲಿ. ‘ಗತ–ಗತಿ’ ಕೃತಿಯೂ ಈ ರೀತಿಯದ್ದೇ ಧರ್ಮಸೂಕ್ಷ್ಮಗಳನ್ನು, ಅದು ಹುಟ್ಟಿಸಬಹುದಾದ ಅಸಂಗತತೆಗಳನ್ನು ಧ್ವನಿ‌ಸುತ್ತದೆ. ಕಥೆಯ ವೇಗದಲ್ಲಿ ತಾರ್ಕಿಕತೆ ಎಂದಿಗೂ ಮುಕ್ಕಾಗಕೂಡದು ಎಂಬ ಲೇಖಕರ ಅಂಬೋಣಕ್ಕೆ ನಿದರ್ಶನದಂತಿವೆ ಅವರ ‘ಅಡವಿಯ ಹುಡುಗಿ’ ಪುಸ್ತಕದಲ್ಲಿನ ಏಳು ಅತಿಮಾನುಷ ಕಥೆಗಳು. ಇದರ ಮೂಲ ಉದ್ದೇಶ ಮನರಂಜನೆಯೇ ಆದರೂ ಅದರಲ್ಲೊಂದಿಷ್ಟು ಸ್ವಾರಸ್ಯವಿರಬೇಕು, ಓದುಗರನ್ನು ಒರೆಗೆ ಹಚ್ಚುವ ಕೆಲಸವಾಗಬೇಕು ಎನ್ನುವ ಲೇಖಕರ ಈ ಬರಹಗಳಲ್ಲಿ ವೈವಿಧ್ಯತೆ ಕಾಣಬಹುದು. ಪದೇಪದೇ ನೆನಪಾಗುವ ಕಥೆಗಳು ಈ ಪುಸ್ತಕಗಳಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT