ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ | ಆಟಗಾಯಿ: ಮನುಷ್ಯ ಸಂಬಂಧಗಳ ‘ಮೌಲ್ಯ’ಮಾಪನ

Last Updated 9 ಜುಲೈ 2022, 20:15 IST
ಅಕ್ಷರ ಗಾತ್ರ

‘ಆಟಗಾಯಿ’ ಆನಂದ್ ಗೋಪಾಲ್ ಅವರ ಮೊದಲ ಸಂಕಲನ. ಮೊದಲ ಸಂಕಲನವೆಂಬ ಯಾವ ಮೀಸಲಾತಿಯನ್ನೂ ಬೇಡದೆ ಇಂದಿನ ಗಮನಾರ್ಹ ಕಥೆಗಳ ಸಾಲಿನಲ್ಲಿ ನಿಲ್ಲಬಲ್ಲ ಹಲವು ಕಥೆಗಳು ಇಲ್ಲಿವೆ.ಇಲ್ಲಿನ ಕಥೆಗಳು ಮೆಲ್ಲಗೆ ತುಂಬಿಕೊಳ್ಳುವ ಗುಣ ಹೊಂದಿರುವಂಥವು. ಹಾಗೆ ತುಂಬಿಕೊಳ್ಳುತ್ತಲೇ, ನಮ್ಮ ಮನಸ್ಸಿನಾಳದಲ್ಲಿ ಕಚ್ಚಿ ಕೂತಿರುವ ಜೊಳ್ಳುಗಳನ್ನು ಕಿತ್ತು ತೇಲುವ ಹಾಗೆ ಮಾಡುವಂಥವು. ಕಥೆಗಳನ್ನು ಓದಿ ಮುಗಿಸಿದ ಮೇಲೆ ಒಂದು ರೀತಿಯ ವಿಷಣ್ಣ ಭಾವ ಆವರಿಸುತ್ತದೆ.

ಈ ಕಥೆಗಳ ವಸ್ತು, ವಿಷಯ, ಕಟ್ಟುವ ರೀತಿಗಳಲ್ಲಿ ತುಂಬ ಹೊಸತನವೇನೂ ಇಲ್ಲ. ಕೆಲವು ವಸ್ತುಗಳ ಸುತ್ತಲೇ ಸುರಳಿ ಹಾಕುವ ಅವರ ಕಥೆಗಳು, ಮಹತ್ವಾಕಾಂಕ್ಷೆ ಇಲ್ಲದೆ ಸೊರಗಿದ ಹಾಗೆಯೂ ಭಾಸವಾಗುತ್ತವೆ. ಆದರೆ ಈ ಕಥನಪ್ರಪಂಚವನ್ನು ಪ್ರವೇಶಿಸಬೇಕಾದ ದಾರಿ ಕೊಂಚ ಬೇರೆಯೇ ಇರುವಂತಿದೆ.

ಇಲ್ಲಿನ ಬಹುತೇಕ ಕಥೆಗಳಲ್ಲಿ ಮೂರು ಮುಖ್ಯ ಅಂಶಗಳು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ.ಆ ಮೂರೂ ಅಂಶಗಳೂ ‘ನಾಗರಿಕ ಸಮಾಜ’ವು ಒಕ್ಕೊರಲಿನಿಂದ ‘ಅನೈತಿಕ’ ಎಂದು ಒಪ್ಪಿಕೊಂಡಿರುವಂಥವು. ಮೊದಲನೆಯದ್ದು, ಕೌಟುಂಬಿಕ ಜೀವನದಲ್ಲಿನ ವಿವಾಹಬಾಹಿರವಾದ ಪ್ರೇಮ–ಕಾಮದ ಸಂಬಂಧಗಳು. ಎರಡನೆಯದ್ದು, ಸಾಮಾಜಿಕ ಜೀವನದಲ್ಲಿನ, ಕಾನೂನುಬಾಹಿರವಾದ ಸ್ವಾರ್ಥ–ಸಮಯಸಾಧಕತೆಗಾಗಿ ಹುಟ್ಟಿಕೊಂಡ ಸಂಬಂಧಗಳು. ಮೂರನೆಯದ್ದು, ಅನುಭವದ ಸತ್ವ ಇಲ್ಲದ ಆದರ್ಶ, ಅಂಥ ಪೊಳ್ಳುತನವನ್ನು ಪ್ರತಿಪಾದಿಸುವ ಸಾಹಿತ್ಯ ಮತ್ತು ಬದುಕಿನ ಕಟುವಾಸ್ತವದ ನಡುವಿನ ಸಂಬಂಧಗಳು.

ಹಲವು ಖಂಡಿಕೆಗಳನ್ನು ಪಕ್ಕ ಪಕ್ಕ ಜೋಡಿಸಿಟ್ಟು, ‘ಕೂಡಿಸಿಕೊಂಡು ಏನು ಕಾಣುತ್ತದೆಯೋ ನೋಡಿ’ ಎಂದು ಓದುಗರಿಗೇ ಬಿಡುವ ಕತೆಗಾರರು, ಯಾವುದರ ಬಗ್ಗೆಯೂ ಜಡ್ಜ್‌ಮೆಂಟ್‌ ನೀಡಲು ಹೋಗುವುದಿಲ್ಲ. ಇದು ದ್ವಂದ್ವ ಅಲ್ಲ; ಬಿಡಿಸಿ ಹೇಳಹೊರಟರೆ ಹಗುರಗೊಳ್ಳಬಹುದಾದದ್ದನ್ನು ಅದರೆಲ್ಲ ಸಂಕೀರ್ಣತೆಯೊಟ್ಟಿಗೆ ಅವರೇ ಅರಿತುಕೊಳ್ಳುತ್ತಾರೆ ಎಂಬ ನಂಬಿಕೆ.

ಈ ಇಡೀ ಸಂಕಲನವನ್ನು ಹಲವು ಭಾಗಗಳ ಒಂದೇ ಕಥೆಯಾಗಿಯೂ ಓದಿಕೊಳ್ಳಬಹುದು; ಇಲ್ಲಿನ ಒಂದು ಕಥೆಯೊಳಗೆ ಹಲವು ಕಥೆಗಳನ್ನೂ ಕಾಣಬಹುದು!‘ರೂಪ ರೂಪಗಳನು ದಾಟಿ’ಯಲ್ಲಿ ಬರುವ ನಾಯಕ ಮತ್ತು ಅವನ ಸ್ನೇಹಿತ ಸುರೇಶ ಬೇರೆ ಬೇರೆಯಲ್ಲ. ಒಬ್ಬ ತನ್ನ ಬರಹದಿಂದ, ಮಾತಿನಿಂದ, ವರ್ತನೆಗಳಿಂದ ಪ್ರಗತಿಪರ, ಕ್ರಾಂತಿಕಾರಿ ಅನಿಸಿಕೊಂಡರೂ ಸ್ವಂತ ಅಕ್ಕ ಬೇರೆ ಜಾತಿಯ ಹುಡುಗನ ಮದುವೆಯಾಗಹೊರಟಾಗ ‘ಅದು ಬೇರೆ, ಇದು ಬೇರೆ’ ಎಂದು ಸ್ಪಷ್ಟವಾಗಿ ಹೇಳಬಲ್ಲವ. ಇನ್ನೊಬ್ಬ, ಓಡಿಹೋದ ತನ್ನ ತಾಯಿ ಮರಳಿ ಬಂದಾಗ, ಅವಳನ್ನು ಕೊಲ್ಲುವ ಮಟ್ಟಕ್ಕೆ ಮುಟ್ಟಿದರೂ, ಅವಳ ಜೊತೆಗೇ ಅಪಾರ ಸಂಪತ್ತೂ ಬರುತ್ತದೆ ಎಂದು ತಿಳಿದಾಗ ತೆಪ್ಪಗೆ ಅವಳನ್ನು ಒಳಬಿಟ್ಟುಕೊಳ್ಳಬಲ್ಲವ.

ಜಾತಿ ಸಮಸ್ಯೆ, ಶೋಷಣೆ, ಗಂಡು ಹೆಣ್ಣಿನ ಸಂಬಂಧಗಳನ್ನು ಒಂದು ಕುಟುಂಬದ ಆವರಣದಲ್ಲಿಟ್ಟು ಪರೀಕ್ಷಿಸುವುದು ಈ ಕಥೆಗಳಿಗೊಂದು ಅನನ್ಯತೆಯನ್ನು ಕೊಟ್ಟಿದೆ. ಈ ಸಂಕಲನದ ಯಶಸ್ವಿ ಕಥೆಗಳಲ್ಲೊಂದಾದ ‘ರಂಕುರಾಟ್ನ’ದಲ್ಲಿ ಈ ಪ್ರಯತ್ನ ಇನ್ನಷ್ಟು ಸ್ಪಷ್ಟವಾಗಿ ಮತ್ತು ಸಮರ್ಥವಾಗಿ ಹರಳುಗಟ್ಟಿದೆ. ಪ್ಯಾಂಟ್‌ರಾಮನ ಇಡೀ ಕುಟುಂಬ ನಿರಂತರವಾಗಿ ದೌರ್ಜನ್ಯವನ್ನು ಅನುಭವಿಸುತ್ತ ಬಂದಿರುವುದು. ಪ್ಯಾಂಟ್‌ರಾಮನ ಮೊದಲ ಹೆಂಡತಿ ಸುನಂದಾ, ಸಣ್ಣಪಾಪಯ್ಯನ ಜೊತೆಗಿನ ಸಂಬಂಧ ಬಯಲಿಗೆ ಬಂದು ಆತ್ಮಹತ್ಯೆ ಮಾಡಿಕೊಂಡವಳು. ಎರಡನೇ ಹೆಂಡತಿ, ಸುನಂದಾಳ ತಂಗಿಯೇ ಆಗಿರುವ ಸರೋಜಾ, ದೊಡ್ಡಪಾಪಯ್ಯನ ಜೊತೆ ಚೆನ್ನಾಗಿದ್ದುಕೊಂಡು ಬದುಕುವ ದಾರಿ ಹುಡುಕಿಕೊಳ್ಳಲು ಯತ್ನಿಸುತ್ತಾಳೆ.ಪ್ಯಾಂಟ್‌ರಾಮ, ಅವನ ಮಗ ಸೀನ ಎಲ್ಲರಿಗೂ ಈ ವಿಷಯ ಗೊತ್ತಿರುವುದೇ. ಅವರೂ ತಮ್ಮ ಕಾರ್ಯಸಾಧನೆಗಾಗಿ ಸರೋಜಾಳನ್ನು ಬಳಸಿಕೊಳ್ಳುತ್ತಿರುತ್ತಾರೆ. ಕೊನೆಗೆ ಮಗ ಸೀನ ಕೋರ್ಟಿಗೆ ಅರ್ಜಿ ಹಾಕಿ ಜಮೀನು ಪಡೆದುಕೊಳ್ಳುವ ಸೂಚನೆಯೊಂದಿಗೆ ಕಥೆ ಕೊನೆಗೊಳ್ಳುತ್ತದೆ. ಇಲ್ಲಿಯೂ ಯಾವುದು ತಪ್ಪು, ಯಾವುದು ಸರಿ ಎಂದು ನಿರ್ಣಯ ಕೊಡುವ ಹಂಬಲ ಕಥೆಗಾರರಿಗೆ ಇಲ್ಲ. ಅದರ ಬದಲಿಗೆ ನಮ್ಮ ಸಮಾಜವೆಂಬ ವ್ಯವಸ್ಥೆ ಹೇಗೆ ಒಂದು ವರ್ಗದ ಜನರನ್ನು ಮೂಕರನ್ನಾಗಿಸಿದೆ ಮತ್ತು ಆತ್ಮಗೌರವದ ಅರಿವನ್ನೇ ನೀಡದೆ ಮೇಲುವರ್ಗ ತಮ್ಮ ಐಷಾರಾಮಕ್ಕೆ, ಭೋಗ್ಯಕ್ಕೆ ಬಳಸಿಕೊಳ್ಳುತ್ತಿದೆ ಎಂಬುದನ್ನು ಈ ಕಥೆ ಬಹುಸೂಕ್ಷ್ಮವಾಗಿ ತೆರೆದಿಡುತ್ತದೆ.

‘ಬೇಬಿ’ ಕೂಡ ಒಂದು ಗಮನಾರ್ಹ ಕಥೆ. ಮಾದಿಗರ ಕೇರಿಗೆ ಪ್ರವೇಶ ನಿಷಿದ್ಧವಾಗಿದ್ದ ಕರಗ, ಸಣ್ಣವೀರಪ್ಪನ ಮನೆಗೆ ಹಾಕಿದ್ದ ಬಣ್ಣದ ಲೈಟು ನೋಡಿ, ದಿಕ್ಕುತಪ್ಪಿ ಮಾದಿಗರ ಕೇರಿ ಹೊಕ್ಕು ಅವನ ಮನೆಗೇ ಬಂದುಬಿಡುತ್ತದೆ. ಅದು ಸಣ್ಣವೀರಪ್ಪನಿಗೆ ಆ ಕ್ಷಣದ ಸಂಭ್ರಮ. ಆದರೆ ಆ ಸಂಭ್ರಮ ಅವನ ಇಡೀ ಬದುಕನ್ನೇ ಇನ್ನಷ್ಟು ಹಿಂದಕ್ಕೆ ನೂಕಿಬಿಡುತ್ತದೆ. ಶೋಷಣೆಯ ಮತ್ತೊಂದು ಚಕ್ರಕ್ಕೆ ಅವನನ್ನು ಸಿಗಿಸುತ್ತದೆ. ಶೋಷಿತರು ವ್ಯಕ್ತಪಡಿಸುವ ಪ್ರತಿಭಟನೆಯೂ ಅವರನ್ನು ಇನ್ನಷ್ಟು ಆಳಕ್ಕೆ ತಳ್ಳುತ್ತದೆ‌ಎಂಬ ಮಾತಿನಂತೆ, ಸಣ್ಣವೀರಪ್ಪನ ಮಗನೂ ಕೊನೆಗೆ ಪೊಲೀಸರ ಪಾಲಾಗುತ್ತಾನೆ. ಒಂದರ ಮೇಲೆ ಇನ್ನೊಂದರಂತೆ ಸಂಕಷ್ಟಗಳು ಎಗರಿದರೂ ‘ಬೇಬಿ’ಯನ್ನು ಒಳಬಿಟ್ಟುಕೊಂಡು ‘ತಟ್ಟೆ ಹಾಕು’ ಎಂದು ಹೇಳಿ ತೂರಾಡುತ್ತ ಹಿತ್ತಿಲಕಡೆಗೆ ನಡೆಯುವ ಸಣ್ಣವೀರಪ್ಪ, ಕಡುಗತ್ತಲಲ್ಲಿ ಕಣ್ಣಬೆಳಕನ್ನೇ ನೆಚ್ಚಿಕೊಂಡು ದಾರಿ ಸವೆಸುವವನಂತೆ ಕಾಣಿಸುತ್ತಾನೆ.

ಆನಂದ್ ಅವರು ತಮ್ಮ ಕಥೆಗಳಲ್ಲಿ ಪತ್ರಗಳನ್ನು ಬಳಸಿಕೊಂಡಿರುವ ರೀತಿ ಕುತೂಹಲಕಾರಿಯಾಗಿದೆ. ಇದುವರೆಗೆ ಮುಚ್ಚಿಟ್ಟಿದ್ದ ಆಯಾಮವನ್ನು ಸ್ಫೋಟಗೊಳಿಸುವ ಮದ್ದಿನ ಹಾಗೆ, ವೈರುಧ್ಯದ ಮುಖಾಮುಖಿಯನ್ನು ಕಾಣಿಸಿ ಅಂತಃಸಾಕ್ಷಿಯನ್ನು ಚುಚ್ಚುವ ಸೂಜಿಮೊನೆಯ ಹಾಗೆ ಇಲ್ಲಿ ಪತ್ರಗಳು ಬರುತ್ತವೆ. ‘ರೂಪ ರೂಪಗಳನು ದಾಟಿ’ ಕಥೆಯ ಕೊನೆಯಲ್ಲಿ ಬರುವ ಎರಡು ಪತ್ರಗಳು, ‘ಧರೆಗಿಳಿದ ನಕ್ಷತ್ರಗಳು’ ಕಥೆಯಲ್ಲಿ ಅನಕ್ಷರಸ್ಥ ತಾಯಿಗೆ ಸೌಭಾಗ್ಯ ಟೀಚರ್ ಬರೆದಿಟ್ಟಿರುವ ಪತ್ರ, ‘ಅಕಾಲ ಹಣ್ಣು’ ಕಥೆಯುದ್ದಕ್ಕೂ ಬರುವ ಪತ್ರಗಳು, ‘ನಾಲ್ವರು’ ಕಥೆಯಲ್ಲಿ ಮಾಧವಿ ಮೇಡಂ ಬರೆದ ಪತ್ರ ಎಲ್ಲವೂ ಅದುವರೆಗೆ ಗೊತ್ತಿದ್ದಿದ್ದರ ಆಚೆಗಿನ ಇನ್ನೊಂದು ಆಯಾಮವನ್ನು ಕಾಣಿಸಲು, ಸ್ಫೋಟಿಸಲು ಒದಗಿಬರುತ್ತವೆ.

ಹೀಗೆ ಮೇಲೆ ಕಾಣಿಸುವುದರ ಆಚೆಗೆ ಇರುವ ‘ಇನ್ನೊಂದು ಆಯಾಮ’ವನ್ನು ಕಾಣಿಸುವುದು, ಅದರ ಮೂಲಕವೇ ಮನುಷ್ಯ ಸಂಬಂಧಗಳನ್ನು ಅರ್ಥಮಾಡಿಕೊಳ್ಳುವ ತಾತ್ವಿಕತೆ ಆನಂದ್ ಅವರ ಎಲ್ಲ ಕಥೆಗಳ ಹಿನ್ನೆಲೆಯಲ್ಲಿಯೂ ಕಾಣಿಸುತ್ತದೆ. ಆದರೆ ಈ ತಾತ್ವಿಕತೆಗೆ ಎಲ್ಲ ಕಥೆಗಳಲ್ಲಿಯೂ ಗಾಢವಾದ ಒಳನೋಟ ಸಿಕ್ಕಿಲ್ಲ. ಆನಂದ್ ಅವರ ಕಥೆಗಳು ಹೊರಗಿನ ಸಮಾಜದಲ್ಲಿ ನಡೆದಷ್ಟೇ ತೀವ್ರವಾಗಿ ಪಾತ್ರಗಳ ಮನಸ್ಸಿನೊಳಗಿನ ಪ್ರಪಂಚದಲ್ಲಿ ಘಟಿಸುವುದಿಲ್ಲ. ಹಾಗಾಗಿಯೇ ಇಲ್ಲಿನ ಹಲವು ಕಥೆಗಳು (ರಂಕುರಾಟ್ನ, ಬೇಬಿಯಂಥ ಕೆಲವು ಕಥೆಗಳ ಹೊರತುಪಡಿಸಿ) ಹೊರಗಿನ ವಿದ್ಯಮಾನಗಳಾಗಿ, ನಮ್ಮೊಳಗೆ ಈ ಸಮಾಜದ ಕುರಿತು, ವ್ಯವಸ್ಥೆಯ ಕುರಿತು ಪ್ರಶ್ನೆಗಳನ್ನು ಹುಟ್ಟಿಸುತ್ತವೆ; ಆದರೆ ಆಳವಾಗಿ ನಮ್ಮೊಳಗನ್ನು ಕಲಕುವುದಿಲ್ಲ. ಆದರೆ ಸಶಕ್ತ ಭಾಷೆ, ಕಥನಶಿಲ್ಪದ ಕುರಿತು ಅರಿವು ಮತ್ತು ಆಸಕ್ತಿ ಇರುವ ಆನಂದ್ ಅವರಿಗೆ ಇದು ಅಸಾಧ್ಯವಾದದ್ದೇನೂ ಅಲ್ಲ. ಹಾಗಾಗಿಯೇ ಅವರ ಮುಂದಿನ ರಚನೆಯ ಕುರಿತು ನಂಬಿಕೆಯನ್ನಿಟ್ಟು ಕಾಯಬಹುದು.

ಕೃತಿ: ಆಟಗಾಯಿ

ಲೇ: ಆನಂದ್ ಗೋಪಾಲ್‌

ಪ್ರ: ಸಂಕಥನ

ಸಂ: 9019529494

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT