ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನಿವಾರಿಕೆಯ ಕುಸುರಿ, ನದಿ ಹರಹಿನ ವಿಸ್ತಾರ

Last Updated 5 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಸರ್,

‘ನನ್ನ ಹೆಸರು ಗೇಬ್ರಿಯಲ್ ಗಾರ್ಸಿಯ ಮಾರ್ಕೇಸ್. ಸಾಮಾನ್ಯ ಸ್ಥಳನಾಮಗಳ ಗೊಂಚಲಾಗಿರುವ ಈ ಹೆಸರು ನನಗೆ ಪ್ರಿಯವೇನೂ ಅಲ್ಲ. ಇದರೊಂದಿಗೆ ಗುರುತಿಸಿಕೊಳ್ಳಲು ಮುಜುಗರ, ಕ್ಷಮಿಸಿ. ನಲ್ವತ್ತು ವರ್ಷಗಳ ಹಿಂದೆ ಕೊಲಂಬಿಯದ ಅರಕಟಕದಲ್ಲಿ ನಾನು ಹುಟ್ಟಿದೆ. ಆ ಕುರಿತು ಈವರೆಗೆ ದುಃಖಿತನೇನೂ ಆಗಿಲ್ಲ.

‘ನನ್ನದು ಮೀನರಾಶಿ, ಹೆಂಡತಿ ಮೆರ್ಸೆಡೆಸ್. ಇವೆರಡು ನನ್ನ ಬದುಕಿನ ಅತ್ಯಂತ ಮಹತ್ವದ ಸಂಗತಿಗಳಾಗಿದ್ದು, ನನ್ನ ಸಂಗಾತಿಯಿಂದಾಗಿಯೇ ಈವರೆಗೂ ಬರಹದ ಮೂಲಕ ಬದುಕಲು ಸಾಧ್ಯವಾಗಿದೆ. ನಾನೊಬ್ಬ ಸಂಕೋಚದ ಲೇಖಕ. ನನ್ನ ನಿಜವಾದ ವೃತ್ತಿ ಯಕ್ಷಿಣಿಯಾಗಿದರೂ ಕೈಚಳಕವೊಂದನ್ನು ಮಾಡಲು ಯತ್ನಿಸಿದಾಗ ಯಡವಟ್ಟು ಮಾಡಿಕೊಂಡೆ. ಆ ಕಾರಣವಾಗಿ ನನ್ನ ಏಕಾಂತಕ್ಕಾಗಿ ಸಾಹಿತ್ಯವನ್ನು ಆಶ್ರಯಿಸಬೇಕಾಯಿತು. ಅದೇನೇ ಆಗಲಿ, ಈ ಎರಡೂ ಚಟುವಟಿಕೆಗಳು ಬಾಲ್ಯದಿಂದಲೂ ನನ್ನ ತೀವ್ರ ಆಸಕ್ತಿಯಾದ ಗೆಳೆಯರ ಪ್ರೀತಿ ಸಂಪಾದನೆಯಡೆಗೇ ಕರೆದೊಯ್ಯುವವು.

‘ನನ್ನ ಮಟ್ಟಿಗೆ ಲೇಖಕನಾಗಿರುವುದು ನಾವು ಪಡೆಯಬಹುದಾದ ಅತ್ಯುತ್ತಮ ಅರ್ಹತೆಯಾಗಿದೆ. ಬರವಣಿಗೆಯ ವಿಷಯಕ್ಕೆ ಬಂದಾಗ ನಾನು ಮಹಾ ನಿಷ್ಕರುಣಿ. ಅರ್ಧಪುಟದ ಬರಹ ಮುಗಿಸಲು ಎಂಟು ಗಂಟೆಗಳ ಕಠಿಣ ಪರಿಶ್ರಮಕ್ಕೆ, ಕಟುಶಿಸ್ತಿಗೆ ಒಳಪಡಬೇಕಾಗುತ್ತದೆ. ಪ್ರತಿ ಪದದೊಂದಿಗೂ ಗುದ್ದಾಡಬೇಕಾಗುತ್ತದೆ. ಗೆಲ್ಲುವುದು ಯಾವಾಗಲೂ ಶಬ್ದಲೋಕವೇ. ನಾನೂ ಕಡಿಮೆ ಹಟಮಾರಿಯಲ್ಲ, ಈ ಇಪ್ಪತ್ತು ವರ್ಷಗಳಲ್ಲಿ ನಾಲ್ಕು ಪುಸ್ತಕ ಪ್ರಕಟಿಸುವಲ್ಲಿ ಯಶಸ್ವಿಯಾಗಿದ್ದೇನೆ.

‘ಈಗ ಪ್ರಕಟಿಸಬೇಕಿರುವ ಐದನೆಯ ಕೃತಿ ಉಳಿದೆಲ್ಲವುಗಳಿಗಿಂತ ಆಮೆವೇಗದಲ್ಲಿ ಸಾಗುತ್ತಿರುವುದಕ್ಕೆ ಕಾರಣವಿದೆ. ಸಾಲಗಾರರಿಂದ ಹಾಗೂ ನರದೌರ್ಬಲ್ಯದಿಂದ ತಪ್ಪಿಸಿಕೊಂಡು ನಾನು ಬರವಣಿಗೆಗೆ ಸಮಯವನ್ನು ಹೊಂದಿಸಿಕೊಳ್ಳಬೇಕಿದೆ. ಸಾಹಿತ್ಯದ ಕುರಿತು ಮಾತನಾಡದಿರಲು ಕಾರಣ ಆ ಕುರಿತು ನನಗೆ ತಳಬುಡ ತಿಳಿದಿಲ್ಲದಿರುವುದು, ಜತೆಗೆ, ಸಾಹಿತ್ಯವಿಲ್ಲದೆ ಲೋಕವು ಮೊದಲಿದ್ದಂತೆಯೇ ಸಾಗಬಲ್ಲುದು ಎಂದು ನನಗೆ ಮನವರಿಕೆಯಾಗಿರುವುದು.’

ಮೇಲಿನ ಮಾತುಗಳನ್ನು ಮೂವತ್ತೊಂಬತ್ತು ವರ್ಷಗಳ ಮಾರ್ಕೇಸ್ ಅರ್ಜೆಂಟೀನದಲ್ಲಿ 1966ರಲ್ಲಿ ಅನಾಮಧೇಯ ಸಂಪಾದಕರಿಂದ ಪ್ರಕಟವಾದ ‘ಟೆನ್ ಕಮಾಂಡ್‍ಮೆಂಟ್ಸ್’ ಎಂಬ ಸಂಕಲನದಲ್ಲಿದ್ದ ತಮ್ಮ ಕಥೆಗೆ ಬರೆದ ಆರಂಭಿಕ ಟಿಪ್ಪಣಿ. ಈ ಬರಹದಲ್ಲಿ ಮಾರ್ಕೇಸ್‍ರ ಒಟ್ಟಾರೆ ಸಾಹಿತ್ಯದಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವ ಲ್ಯಾಟಿನೊ ವಿನೋದಪ್ರಜ್ಞೆ, ವಿಚಾರಗಳನ್ನು ಹೊರಗೆಡಹುವಲ್ಲಿ ಬಳಸುವ ವಿಶಿಷ್ಟ ಭಾಷೆ ಮತ್ತು ಅವರಿಗೆ ಮಾತ್ರ ಹೊಂದುವ ವಿಲಕ್ಷಣ ಸಂವೇದನಾಶೀಲತೆ ಎದ್ದು ಕಾಣುತ್ತವೆ.

ಈ ಮಾತುಗಳು ಪ್ರಕಟವಾದ ಮೇಲೆ ಮಾರ್ಕೇಸ್ ನಲ್ವತ್ತೇಳು ವರ್ಷ ಬದುಕಿ, ಬರೆದರು. ಆದರೆ, ಒಟ್ಟಾರೆಯಾಗಿ ಬದುಕು, ಸಾಹಿತ್ಯ ಮತ್ತು ಕಾಳಜಿಗಳ ಕುರಿತು ಮೂಲಭೂತ ಬದಲಾವಣೆಗಳು ಆಗಲಿಲ್ಲವೆಂಬುದು ಗಮನಾರ್ಹ. ಕೊಂಚ ಮಾತ್ರ ವ್ಯಂಗ್ಯ ಬೆರೆತ ಅವರ ಹಾಸ್ಯ, ಬರಹದಲ್ಲಿ ಸಾಧಿಸುವ ಮಾಂತ್ರಿಕತೆ, ಹೆಣ್ಣು ಮತ್ತು ಸಂಬಂಧಗಳಿಗೆ ಅವರು ನೀಡುವ ಮಹತ್ವ ಎಲ್ಲವೂ ಕೊನೆಯವರೆಗೂ ಹಾಗೆಯೇ ಉಳಿದುಬಂದವು. 2004ರಲ್ಲಿ ಪ್ರಕಟಗೊಂಡ ಮಾರ್ಕೇಸ್‍ರ ಕೊನೆಯ ಕಾದಂಬರಿ `ಮೆಮೊರೀಸ್ ಆಫ್ ಮೈ ಮೆಲಂಕಲಿ ವ್ಹೋರ್ಸ್' ಕೃತಿಗೂ ಈ ಮಾತು ಅನ್ವಯ.

***

`ಗಾಬಿಟೋ', `ಗಾಬೋ', ಎಂದು ಇಡೀ ಲ್ಯಾಟಿನ್ ಅಮೆರಿಕದ ಜನರಿಂದ ಪ್ರೀತಿಯಿಂದ ಕರೆಸಿಕೊಳ್ಳುವ ಗೇಬ್ರಿಯಲ್ ಗಾರ್ಸಿಯ ಮಾರ್ಕೇಸ್ ಹುಟ್ಟಿದ್ದು ಮಾರ್ಚ್ 6, 1927ರಲ್ಲಿ, ಸ್ಥಳೀಯರು ‘ಕಟಕ’ ಎಂದು ಗುರುತಿಸುವ ಅರಕಟಕ ಪಟ್ಟಣದಲ್ಲಿ. ದಕ್ಷಿಣ ಅಮೆರಿಕದ ಕೊಲಂಬಿಯ ದೇಶದಲ್ಲಿ. ತಾನೊಬ್ಬ ‘ಕೆರಿಬಿಯನ್ ಕರಾವಳಿ ಮನುಷ್ಯ’, ಎಂದು ಹೇಳಿಕೊಳ್ಳುವಲ್ಲಿ ಮಾರ್ಕೇಸ್‍ಗೆ ಹೆಮ್ಮೆ.

***

ಶಾಲಾ ದಿನಗಳಲ್ಲಿ ಗಾರ್ಸಿಯಾಗೆ ಚಿತ್ರ ಬಿಡಿಸುವ ಹುಚ್ಚು. ಹತ್ತನೇ ವಯಸ್ಸಿನ ಆಸುಪಾಸಿನಲ್ಲಿದ್ದ ಬಾಲಕನ ಮೇಲೆ ಅಪಾರವಾಗಿ ಪ್ರಭಾವ ಬೀರಿದ ಪುಸ್ತಕ, ‘ಸಾವಿರದೊಂದು ರಾತ್ರಿಗಳು!’ ಕಥೆ ಹೇಳಿ ಜೀವ ಉಳಿಸಿಕೊಳ್ಳಬೇಕಾದ ಶಹರಜಾದೆ. ಅರಿತು-ಅರಿಯದೆಯೋ ಬದುಕಿನ `ರೂಪಕ'ವಾಗಿ ಬದಲಾದಳು. ಶಹರಜಾದೆ ಕಥೆ ಹೇಳುವುದು ಜೀವಿಸುವ ಅನಿವಾರ್ಯತೆಗಾಗಿ. ಆದರೆ, ಗಾರ್ಸಿಯಾರದ್ದು, 'ಕಥೆ ಹೇಳಲೆಂದೇ ಬದುಕಿ’ ಉಳಿಯುವ ಸಂಕಲ್ಪ.

***

ತನ್ನ ಕೃತಿಯ ಮೂಲಕ ಲೋಕವನ್ನು ಬೆಳಗುವುದು ಮಾತ್ರವಲ್ಲ, ದಕ್ಷಿಣ ಅಮೆರಿಕದ ಕುರಿತು ಪಾಶ್ಚಾತ್ಯರಿಗಿರುವ ಪೂರ್ವಗ್ರಹವನ್ನೂ ನಿವಾರಿಸಬೇಕೆಂಬುದು ಗಾರ್ಸಿಯ ಆಶಯವಾಗಿತ್ತು. ‘ದಕ್ಷಿಣ ಅಮೆರಿಕದ ಮನುಷ್ಯರು ಅಂದಕೂಡಲೇ ಭರ್ಜರಿ ಮೀಸೆ, ಕೈಯಲ್ಲಿ ಗಿಟಾರ್ ಮತ್ತು ಬಂದೂಕು ಎಂಬುದು ಯುರೋಪಿಯನ್ನರ ಗ್ರಹಿಕೆ. ಅವರಿಗೆ ಸಮಸ್ಯೆಯ ಆಳವೇ ತಿಳಿದಿಲ್ಲ,’ ಎಂದು ಬರೆದಿದ್ದ ಗಾರ್ಸಿಯ, ಆ ಅಭಿಪ್ರಾಯ ಬದಲಿಸಬೇಕಿರುವುದು ಕಲಾವಿದರೇ ಎಂದು ನಂಬಿದ್ದರು. ಆದರೆ, ಕಾದಂಬರಿ ಪ್ರಕಾರ ಪ್ರಮುಖವಾಗಿ ಯುರೋಪಿಯನ್ ಸಾಹಿತ್ಯದ ಆವಿಷ್ಕಾರವಾಗಿತ್ತು. ಪ್ರಕಾರವನ್ನು ಮರುವ್ಯಾಖ್ಯಾನಿಸಲು ಇದು ತಕ್ಕ ಸಮಯವಾಗಿತ್ತು. ಅದಕ್ಕೆ ದಕ್ಷಿಣ ಅಮೆರಿಕವೂ ಒಳಗೊಂಡಂತೆ ಆಫ್ರಿಕ, ಏಷ್ಯಾ, ಏಷ್ಯಾ ಪೆಸಿಫಿಕ್ ಬರಹಗಾರರು ಸಜ್ಜಾಗುತ್ತಿದ್ದರು. ಗಾಬೋ ಅಂಥ ಪ್ರಯತ್ನದ ಮುಂಚೂಣಿ ಲೇಖಕರಾಗಿ ಹೊಮ್ಮತೊಡಗಿದ್ದರು. ಮಕೊಂದೊ, ಕಾಂತಾಪುರ, ಮಾಲ್ಗುಡಿಯಂಥ ಕಾಲ್ಪನಿಕ ಸ್ಥಳಗಳು ಹೊಸ ಮತ್ತು ಕಂಡರಿಯದ ಬದುಕಿನ ಅನುಭವವನ್ನು ಕಟ್ಟಿಕೊಡತೊಡಗಿದವು.

***

ಅದೊಂದು ಯೋಗಾಯೋಗದ ಗಳಿಗೆ. ಕುಟುಂಬದೊಂದಿಗೆ ಮೆಕ್ಸಿಕೊ-ಅಕಪುಲ್ಕೊ ಹೆದ್ದಾರಿಯಲ್ಲಿ ಪಯಣಿಸುವಾಗ ಇದ್ದಕ್ಕಿದ್ದಂತೆ ಪರವಶತೆ ಆವರಿಸಿತು! 1942ರಿಂದ ವ್ಯಸನದಂತೆ ಕಾಡುತ್ತಿದ್ದ ವಸ್ತುವೊಂದು ಬಸಿರ ಚೀಲವನು ಒದ್ದುಕೊಂಡು ಹೊರ ಬರುವ ಮಗುವಿನಂತೆ ಅಲುಗತೊಡಗಿತ್ತು. ಮಾರ್ಕೇಸ್ ಅವರು ಎಷ್ಟೊಂದು ಭಾವಪರವಶರಾಗಿದ್ದರೆಂದರೆ, ‘ನನ್ನೊಳಗೆ ಹಣ್ಣಾಗಿದ್ದ ಕೃತಿಯ ಮೊದಲ ಅಧ್ಯಾಯದ ಪದ, ಪದವನ್ನು ಟೈಪಿಸ್ಟ್‌ನಿಗೆ ಉಕ್ತಲೇಖನದ ಮೂಲಕ ಹೇಳಿ ಬರೆಸಬಲ್ಲವನಾಗಿದ್ದೆ,’ ಎಂದು ಮುಂದೆ ಬರೆದುಕೊಂಡರು.

ಕಾದಂಬರಿ ಬರೆದು ಮುಗಿಸುವವರೆಗೆ, ಮುಂದಿನ ಆರು ತಿಂಗಳು ಸಂಸಾರವನ್ನು ಹೇಗಾದರೂ ನಿಭಾಯಿಸು ಎಂದು ಹೆಂಡತಿ ಮೆರ್ಸೆಡೆಸ್‍ರನ್ನು ಕೇಳಿಕೊಂಡರು. ತಮ್ಮ ಬರಹದ `ಗುಟ್ಟಿನ ಗವಿ'ಯನ್ನು ಸೇರಿಕೊಂಡರು. ಮೈಮೇಲೆ ಬಂದವರಂತೆ ಪ್ರತಿದಿನ ಎಂಟು ಗಂಟೆಗಳ ಬರಹ. ತಿಂಗಳುಗಳು ಕಳೆಯತೊಡಗಿದವು. ಹದಿನೆಂಟು ತಿಂಗಳಲ್ಲಿ ಹತ್ತು ಸಾವಿರ ಡಾಲರ್‌ಗಳ ಸಾಲ ಬೆಳೆದಿತ್ತು. ಇತ್ತ, ಟೈಪ್ ಮಾಡಿದ ಹಸ್ತಪ್ರತಿ ಸಾವಿರದ ಮುನ್ನೂರು ಪುಟಗಳಿಗೆ ಏರಿತ್ತು!

ಟೈಪ್ ಮಾಡಿದ ಪ್ರತಿಯನ್ನು ಬಾಕ್ಸ್ ಮಾದರಿ ಪ್ಯಾಕಿಂಗ್ ಮಾಡಿ ಪ್ರಕಾಶಕರಿಗೆ ಕಳಿಸಲು ದಂಪತಿ ಅಂಚೆಕಚೇರಿಗೆ ಹೋಗುವಾಗ ದುರದೃಷ್ಟಕ್ಕೆ ಬಿರುಗಾಳಿ ಬೀಸಬೇಕೆ! ಕೆಲವು ಪುಟಗಳು ಹಾರಿ ಹೋದವು. ಒಪ್ಪ ಮಾಡಿಕೊಂಡು ಅಂಚೆಕಚೇರಿ ತಲುಪಿದಾಗ ಅಂಚೆಚೀಟಿಗೆ ಬೇಕಾಗುವಷ್ಟು ಹಣ ಇಬ್ಬರ ಬಳಿಯೂ ಇರಲಿಲ್ಲ. ಅರ್ಧ ಹಸ್ತಪತ್ರಿಯನ್ನಷ್ಟೇ ಕಳಿಸಲಾಯಿತು. ದಿನದ ಕೊನೆಯ ಅವಧಿಗೆ ಹಣ ಹೊಂದಿಸಿಕೊಂಡು ಉಳಿದ ಭಾಗವನ್ನು ಅಂಚೆಗೆ ಹಾಕಿದರು!

***

ಗೇಬ್ರಿಯಲ್ ಗಾರ್ಸಿಯ ಮಾರ್ಕೇಸ್‍ರನ್ನು ಇಪ್ಪತ್ತನೆಯ ಶತಮಾನದ ಬಹುದೊಡ್ಡ ಕಾದಂಬರಿಕಾರರೆಂದು ಗುರುತಿಸಲಾಗುತ್ತದೆ. ಅವರು ರಚಿಸಿದ ಕಾದಂಬರಿಗಳು ಮತ್ತು ಸೃಷ್ಟಿಸಿದ ಪಾತ್ರಗಳು ಗಾರ್ಸಿಯರನ್ನು ನೊಬೆಲ್ ಪುರಸ್ಕಾರದ ವೇದಿಕೆಯವರೆಗೂ ನಡೆಸಿಕೊಂಡು ಹೋಗಿವೆ. ಅವರೊಬ್ಬ ಅಪ್ಪಟ ಗದ್ಯ ಲೇಖಕರು. ತಮ್ಮ ಕಾದಂಬರಿಗಳ ಮೂಲಕ ವಿಶ್ವಸಾಹಿತ್ಯಕ್ಕೆ ಮೆಚ್ಚಿನ ಲೇಖಕರಾದಂತೆಯೇ ಅವರೊಬ್ಬ ಅತ್ಯಂತ ಜನಪ್ರಿಯ ಅಂಕಣಕಾರರೂ ಆಗಿದ್ದರು. ಪತ್ರಿಕಾರಂಗ ಗಾರ್ಸಿಯರ ಯಾವತ್ತೂ ಮೊದಲ ಆದ್ಯತೆಯಾಗಿತ್ತು. ‘ಮೂಲತಃ ನಾನೊಬ್ಬ ಪತ್ರಕರ್ತ. ನನ್ನ ಪುಸ್ತಕಗಳು ಪತ್ರಕರ್ತನೊಬ್ಬನ ಕೃತಿಗಳು. ಅವು ಜನರ ಗಮನ ಸೆಳೆಯದ ಕಾಲದಲ್ಲೂ ಸಹ,' ಎಂದೊಮ್ಮೆ ಬರೆದರು.

ಈ ಕೃತಿ ಮಾರ್ಕೇಸ್‍ರ ಅಂಕಣ ಮತ್ತು ಗದ್ಯಬರಹಗಳ ಸೊಬಗು, ಉಲ್ಲಾಸ, ವಿಸ್ಮಯ, ವಿಚಾರಗಳ ವಿಸ್ತರಣೆ ಹಾಗೂ ಅಂತಿಮವಾಗಿ ಮನುಷ್ಯ ಪ್ರೀತಿಯಿಂದ ಹುಟ್ಟುವ ನಿಷ್ಕಲ್ಮಶ ಕಾಳಜಿಗಳನ್ನು ತೆರೆದಿಡುತ್ತದೆ. ಸುಮಾರು ಮೂರೂವರೆ ದಶಕಗಳಲ್ಲಿ-1955ರಿಂದ 1985ರವರೆಗಿನ ಕಾಲಾವಧಿ- ಗಾಬೋ ಕೆತ್ತಿದ ಬರಹಗಳ ಭಾಷಾ ಬೆರಗನ್ನು ನಾವಿಲ್ಲಿ ಕಾಣಲು ಸಾಧ್ಯ. ಲೇಖಕನೊಬ್ಬನ ಸೂಕ್ಷ್ಮತೆ, ಸಂವೇದನಾಶೀಲತೆ, ಭಾಷಾ ಚಮತ್ಕಾರ, ವಿಷಯ ಗ್ರಹಿಕೆಯಲ್ಲಿ ತೋರುವ ನವೀನತೆ, ಸಾಂದ್ರತೆ, ಒಂದಕ್ಕಿನ್ನೊಂದು ಬೆಸೆಯುವ ಬಗೆ ಇಂತಹ ಅನೇಕ ಕಾರಣಗಳಿಂದ ಈ ಬರಹಗಳು ಚೆಲುವಾಗಿವೆ, ಮುಖ್ಯವಾಗಿವೆ.

(ಕೃತಿಗೆ ಬರೆದ ಪರಿಚಯದ ಸಂಗ್ರಹಿತ ಭಾಗ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT