ಶುಕ್ರವಾರ, ಆಗಸ್ಟ್ 12, 2022
25 °C

ಪುಸ್ತಕ ವಿಮರ್ಶೆ: ಕಪ್ಪು ನೆಲದ ಕೆಂಪು ರಂಗಿನ ಕಥೆ

ದೀಪಾ ದೇವಕತೆ Updated:

ಅಕ್ಷರ ಗಾತ್ರ : | |

Prajavani

ಗುಂಡಿಗೆಯ ಬಿಸಿರಕ್ತ (ಆಫ್ರಿಕನ್‌ ಸಂಕಥನ)
ಕನ್ನಡ ರೂಪ: ಕೇಶವ ಮಳಗಿ
ಪ್ರ: ದೀಪಂಕರ
ಸಂ: 9886279441

‘ಗುಂಡಿಗೆಯ ಬಿಸಿರಕ್ತ’ - ಆಫ್ರಿಕನ್ ಸಂಕಥನವು ಕಥೆಗಾರ ಕೇಶವ ಮಳಗಿಯವರು ಅನುವಾದಿಸಿದ ಕೃತಿ. ಆಯ್ದ 30 ಆಫ್ರಿಕನ್ ಲೇಖಕರ ಒಟ್ಟು 34 ಪ್ರಬುದ್ಧ ಲೇಖನಗಳನ್ನು ಈ ಕೃತಿಯು ಒಳಗೊಂಡಿದೆ. ವಿಶಾಲ ಆಫ್ರಿಕನ್ ಜಗತ್ತಿನ ಒಡಲು ಮತ್ತು ಒಡಲಿಗಂಟಿದ ಸಾಹಿತ್ಯ, ಕಲೆ, ಸಂಸ್ಕೃತಿ, ರಾಜಕೀಯ, ಸ್ತ್ರೀತ್ವದ ಸಾಹಿತ್ಯಾತ್ಮಕ ಅಸ್ತಿತ್ವ, ಅಭಿವ್ಯಕ್ತಿ ಹಾಗೂ ನೆಲಮೂಲದ ಸೂಕ್ಷ್ಮ ಸಂವೇದನಾಶೀಲತೆಯನ್ನೇ ಜೀವಾಳವಾಗಿ ಹೊಂದಿದ ಬರಹಗಳ ಬಹುತ್ವದ ಹೊತ್ತಗೆ ಇದು.

ಜಗತ್ತಿನಾದ್ಯಂತ ವಿದ್ಯಾರ್ಥಿಗಳು ಚರಿತ್ರೆಯ ಪಠ್ಯಗಳಲ್ಲಿ ‘ಕತ್ತಲೆಯ ಖಂಡ’ವೆಂದು ಅಭ್ಯಸಿಸಲ್ಪಡುವ ಆಫ್ರಿಕಾದ ಕಥೆ ಕರುಣಾಜನಕ. ತಮ್ಮದಲ್ಲದ ತಪ್ಪಿಗೆ ಶಿಕ್ಷೆಗೊಳಗಾದವರು ಈ ಜನ. ಪಶುಗಳಂತೆ ಸಂತೆಗಳಲ್ಲಿ ಮಾರಲ್ಪಟ್ಟು ಗುಲಾಮರೆಂಬ ಹೆಸರಿನಲ್ಲಿ ದಾರುಣದ ಬಾಳನ್ನೂ ಹೊತ್ತವರು. ಈ ದಾರುಣ ಬದುಕಿನ ಅಳಿದುಳಿದ ಅವಶೇಷಗಳು ಅಮೆರಿಕದಂತಹ ದೇಶದಲ್ಲೂ ಆಗಾಗ ಗೋಚರಿಸುವುದುಂಟು. ಈ ನಿಟ್ಟಿನಲ್ಲಿ ವೊಲೆ ಷೋಯಿಂಕರು ಹೇಳಿದಂತೆ ‘ಕಪ್ಪು ಜನರ ಕ್ಷಮಾಗುಣದಿಂದ ಜಗವು ಪಾಠ ಕಲಿಯಬೇಕು’. ಈ ಮಾತುಗಳು ಬಿಳಿಯರೆಂದು ತಿಳಿದುಕೊಂಡಿರುವ ಮನುಷ್ಯರ ಬಾಯಿಯಿಂದ ಬರುವ ತನಕವೂ ಕಪ್ಪು ಜನರ ಹೋರಾಟಕ್ಕೆ ದಣಿವಿಲ್ಲ. ಆಳುವವರ ಧರ್ಮ, ಭಾಷೆಗಳ ಹೊಡೆತಕ್ಕೆ ಸಿಲುಕಿ ಅಸ್ಮಿತೆಯ ಅಯೋಮಯವನ್ನು ಅನುಭವಿಸಿದ ಜನ, ಅಕ್ಷರವನ್ನು ಎದೆಯ ದನಿಯ ಸಾಧನವನ್ನಾಗಿ ಮಾಡಿಕೊಂಡು, ಗುಂಡಿಗೆಯ ರಕ್ತದ ಬಿಸಿಯನ್ನು ಕಾಗದದ ಮೇಲೆ ಹೊರಹಾಕುವ ಸಂಕಥನವಿದು.

ವಸಾಹತು ನೀತಿಯ ದಾಸ್ಯ, ವಿಮೋಚನೆಯ ನಂತರದ ಅರಾಜಕ ಸ್ಥಿತಿ, ಸಾಂಸ್ಕೃತಿಕ ತಳಮಳ, ತೃತೀಯ ಜಗತ್ತು  ಅಥವಾ ಅಭಿವೃದ್ಧಿಶೀಲ ಜಗತ್ತು ಎಂಬ ಹೀನ ಬಿರುದುಗಳು ನೀಡಿದ ತಲ್ಲಣಗಳನ್ನೆಲ್ಲ ಹೊರಹೊಮ್ಮಿಸುವುದು ಸುಲಭದ ಹಾದಿಯೇನಲ್ಲ. ಅನುಭವಿಸಿ ಬರೆದ ಸಾಹಿತ್ಯ ಹೆಚ್ಚು ಜೀವಂತವಾಗಿರುತ್ತದೆ ಎನ್ನುವುದಕ್ಕೆ ಇಲ್ಲಿ ಮೂಡಿರುವ ಆಫ್ರಿಕನ್ ಲೇಖಕರ ಸಮತೋಲಿತ ವಿಚಾರಧಾರೆಗಳೇ ಸಾಕ್ಷಿ. ಕೃತಿಯ ಅನುವಾದದ ಗಮ್ಯವು ಯಾವುದೇ ದೇಶದ ಓದುಗನನ್ನು (ಆಯಾ ಭಾಷೆಗಳಲ್ಲಿ) ತನ್ನ ಸಮಕಾಲೀನ ಜಗತ್ತನ್ನು ವಿಮರ್ಶಾತ್ಮಕವಾಗಿ ನೋಡುವಂತೆ ಸಹ ಪ್ರಚೋದಿಸುತ್ತದೆ.

ವರ್ಣಭೇದ ನೀತಿಯ ವಿರುದ್ಧದ ಹೋರಾಟ, ಸೆರೆಮನೆವಾಸದ ದಮನಿತ ಅನುಭವ ಕಲ್ಪನಾತೀತ. ಅಂತಹ ಹೋರಾಟದಲ್ಲಿ ಅರಳಿದ ನೆಲ್ಸನ್ ಮಂಡೇಲಾ ಮತ್ತು ವಂಗಾರಿ ಮಥಾಯಿಯಂಥವರ ಬದುಕಿನ ಸಾರ್ಥಕತೆ ಆಧ್ಯಾತ್ಮಿಕವಾಗಿಯೂ ಸಂಘರ್ಷಗಳಿಗೆ ದಕ್ಕಿದ ನೊಬೆಲ್ ಪುರಸ್ಕಾರಗಳು ಲೌಕಿಕವಾಗಿಯೂ ಓದುಗನನ್ನು ಚಿಂತನೆಗೆ ಹಚ್ಚುತ್ತವೆ. ಪ್ರಶಸ್ತಿ ಪಡೆಯುವಾಗ ಅವರು ಮಾಡಿದ ಭಾಷಣಗಳು ಆದರ್ಶದ ಬದುಕಿನ ಮೌಲ್ಯ ಮತ್ತು ಸೂಕ್ಷ್ಮ ಪರಿಸರದ ಸಂವೇದನೆಯನ್ನು ಮುಂದಿನ ಪೀಳಿಗೆಗೆ ನಾವು ಕಲಿಸುತ್ತಿದ್ದೇವೆಯೇ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವಂತಿವೆ.

ವಂಗಾರಿಯವರ ಜೀವಪರ ಸಂವೇದನೆಯ ನವಿರಾದ ಬಾಲ್ಯದ ನೆನಪು ಓದುಗನ ಮನ ಮಿಡಿಯುವಂತೆ ಮಾಡುತ್ತದೆ. ನದಿಯ ದಡದಲ್ಲಿ ಮೊಟ್ಟೆಗಳನ್ನು ಮುತ್ತುಗಳೆಂದು ತಿಳಿದು ಹಿಡಿಯಲು ಹೋದಾಗ ಅವುಗಳಿಂದ ನೂರಾರು ಕಪ್ಪೆಗಳು ಹೊರಬರುವುದನ್ನು ವಿಸ್ಮಯದಂತೆ ಕಾಣುವ ಲೇಖಕಿಯ ಮುಗ್ಧತೆಯನ್ನು ಅನುವಾದಕ ಮಳಗಿಯವರು ಅಷ್ಟೇ ವಿಸ್ಮಯಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ. ಇಂತಹ ‘ಮರಳಿ ಕಪ್ಪೆಗಳ ಲೋಕ’ವನ್ನು ಸಂಪಾದಿಸುವುದು ಕನಸಿನಂತೆ ಕಂಡು, ನದಿಯ ಬತ್ತುವಿಕೆಗೆ ತೋರುವ ಅಳಲು ಸದಾ ಕಾಡುವಂಥದ್ದು.

ಕಪ್ಪಿನ ಜೊತೆಗೆ ಹೆಣ್ಣು ಎಂಬುದನ್ನು ಕೂಡ ಇಲ್ಲಿ ಕಳಂಕ ರೂಪದಲ್ಲಿ ಹೊರಿಸಲಾಗಿದೆ. ಈ ಹೊರೆಯಿಂದ ಹೊರಬರುವ ಕಪ್ಪುನೆಲದ ಬರಹಗಾರ್ತಿಯರ ಸಾಹಸ ದೊಡ್ಡದು. ಅಡುಗೆ ಮನೆ ಸಾಹಿತ್ಯವೆಂದು ಲೇವಡಿಗೊಳಗಾಗುವ ದೌರ್ಭಾಗ್ಯ ಬಹುಶಃ ಇವತ್ತಿನ ಕಾಲಕ್ಕೂ ಪೂರ್ತಿಯಾಗಿ ನಿಂತಿಲ್ಲವೇನೋ! ಎಲ್ಲ ನಿರ್ಬಂಧಗಳನ್ನು ಮೀರಿಯೂ ತನ್ನ ಅಂತಃಸತ್ವದ ಶಕ್ತಿಯನ್ನು ನೂರ್ಮಡಿಸಿಕೊಂಡು ಹೊಮ್ಮುವ ಅಕ್ಷರ ಕುಲುಮೆಗೊಡ್ಡಿದ ಕಬ್ಬಿಣದಂತೆ ಗಟ್ಟಿ ಎಂಬುದನ್ನು ಲೇಖಕಿಯರ ವಿಚಾರಗಳು ಪ್ರತಿಫಲಿಸುತ್ತವೆ. ವಿಶೇಷವಾಗಿ ಆಫ್ರಿಕನ್ ಲೇಖಕಿಯರು ಬೌದ್ಧಿಕವಾಗಿ ಪುರುಷ ಸಾಹಿತಿಗಳಿಗೆ ಸರಿಸಮಾನವಾದ ಜಾಗತಿಕ ಸಾಹಿತ್ಯ ಮನ್ನಣೆಗಾಗಿ ಪ್ರಶ್ನೆ ಎತ್ತುವಂತಹ ನಿಷ್ಠುರ ಮನೋಭಾವವನ್ನು ತೋರುತ್ತಾರೆ.

ಆಮಾ ಆತಾ ಆಯಿದೊ ಅವರು ಬರೀ ಹೊರುವುದು, ಹೆರುವುದಕ್ಕಷ್ಟೇ ಸೀಮಿತಗೊಳ್ಳದೆ ಸೃಜನಶೀಲ ಶಕ್ತಿಯಾಗಿಯೂ ಹೆಣ್ಣು ರೂಪುಗೊಂಡ ಬಗೆಯ ಕುರಿತು ಬರೆಯುತ್ತಾರೆ. ತಾಯ್ತನದ ಹಿರಿಮೆಯೊಂದಿಗೇ, ಪುರುಷರು ಮಹಿಳೆಯ ಮೇಲೆಸಗಿದ ಅತಿರೇಕದ ಶೋಷಣೆಯ ಕ್ಷಮಿಸದಿರುವಿಕೆ ಕೂಡ ನೇರನುಡಿಯಾಗಿ, ಗಟ್ಟಿದನಿಯಾಗಿ ಅನುರಣಿಸುತ್ತದೆ. ಪಾರಂಪರಿಕ ದೃಷ್ಟಿಕೋನದಲ್ಲಿ ಬರೆದ ಪುರುಷ ಸಾಹಿತಿಗಳು ಹೆಣ್ಣಿನ ಕುರಿತು ಉದಾತ್ತ ಚಿಂತನೆಯನ್ನು ಅಭಿವ್ಯಕ್ತಿಸಲಿಲ್ಲ ಎಂಬ ಹಳಹಳಿಕೆ ಅಲ್ಲಲ್ಲಿ ಕಂಡರೂ ಅದು ಪುರುಷಶಾಹಿಯ ನಿರಂತರ ಶೋಷಣೆಗೊಳಗಾದ ಮಹಿಳೆಯ ಆರ್ತನಾದದಂತಿದೆ. ಇದು ಸಾಕಷ್ಟು ಓದುಗರಿಗೆ ಕಿರಿಕಿರಿಯೆನಿಸಬಹುದು. ಆದರೆ ಕಗ್ಗತ್ತಲೆಯ ಖಂಡದ ಕಡುಕಷ್ಟದ ಮಹಿಳೆಯ ಶೋಷಣೆಯನ್ನು ಅರ್ಥೈಸಿಕೊಂಡಾಗ ಇದು ಹಳಹಳಿಕೆ ಎನಿಸದು. ಮುಕ್ತ ಚಿಂತನೆ ಮತ್ತು ಸ್ವತಂತ್ರ ಆಲೋಚನೆಯ ಹೆಣ್ಣು ವರ್ಜ್ಯವೆಂಬ ನಕಾರಾತ್ಮಕ ವಿಚಾರವು ಬರಹದೊಂದಿಗೆ ಖಂಡನೀಯವಾಗಿ ಬಿಂಬಿತವಾಗಿದೆ.

ಹೊಸ ಓದುಗರಿಗಾಗಿ ಜ್ಞಾನದ ಒರತೆಯನ್ನು ಹೆಚ್ಚಿಸುವಂತೆ ಮಾಡುವಲ್ಲಿ ಮಳಗಿ ಅವರ ಈ ಕೃತಿಯು ಮಹತ್ವದ್ದೆನಿಸುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು