ಮಂಗಳವಾರ, ಮೇ 17, 2022
27 °C

ಪುಸ್ತಕ ವಿಮರ್ಶೆ: ಭಾವತೀವ್ರತೆಯ ಸಶಕ್ತ ಸಾಲುಗಳು

ಪದ್ಮನಾಭ ಭಟ್‌ Updated:

ಅಕ್ಷರ ಗಾತ್ರ : | |

Prajavani

ಸುಮ್ಮನೆ ಬಿದ್ದಿರುವ ಬಿಕ್ಕುಗಳು
ಲೇಖಕಿ:
ಮೌಲ್ಯ ಸ್ವಾಮಿ
ಪ‍್ರಕಾಶನ: ವಾಗರ್ಥ ಪ್ರಕಾಶನ, ಮೈಸೂರು
ದೂರವಾಣಿ: 9901814238

***

‘ನಾನು ಕಾವ್ಯ ಬರೆಯುವುದಿಲ್ಲ/ ಕೂಡುತ್ತೇನೆ ಖಾಲಿ ಕಾಗದವೆಂಬ ವಧಾಕಾರನಿಗೆ ಮುಖಾಮುಖಿಯಾಗಿ/ ಅವನು ನನ್ನನ್ನು ಕತ್ತರಿಸುತ್ತಾನೆ ತುಂಡು ತುಂಡಾಗಿ/ ಇಲ್ಲ, ನಾನು ಬರೆಯುವುದಿಲ್ಲ/ ನೆತ್ತರಾಗಿ ಹರಿಯುತ್ತೇನೆ’ ಎಂಬ ಧ್ವನಿ ಇರುವ ಇಂಗ್ಲಿಷ್ ಸಾಲುಗಳು ಮೌಲ್ಯ ಸ್ವಾಮಿ ಅವರ ‘ಸುಮ್ಮನೆ ಬಿದ್ದಿರುವ ಬಿಕ್ಕುಗಳು’ ಕವನಸಂಕಲನದ ಆರಂಭದಲ್ಲಿಯೇ ಎದುರಾಗುತ್ತವೆ. ಇಲ್ಲಿನ ಬಹುತೇಕ ಎಲ್ಲ ಕವಿತೆಗಳಲ್ಲಿಯೂ ಎದ್ದು ಕಾಣುವ ಭಾವತೀವ್ರತೆಗೆ ಒಗ್ಗುವ ಸಾಲುಗಳಿವು.

ಈ ಲೋಕದ ವ್ಯಾಪಾರಗಳಿಂದ ದೂರ ನಿಂತು ಗ್ರಹಿಸಿ, ತರ್ಕಿಸಿ ಸ್ಥಿತಪ್ರಜ್ಞರಾಗಿ ಬರೆಯುವ ಕವಿಯಲ್ಲ ಅವರು. ಇವು ಓದುಗರಿಗೆ ಏನೋ ಹೇಳುತ್ತಿದ್ದೇನೆ ಎಂಬ ‘ಎಚ್ಚರ’ದಲ್ಲಿ ಹುಟ್ಟಿದ ಕಾವ್ಯಗಳಲ್ಲ; ಹೇಳಿಕೊಳ್ಳದೆ ಇರಲಾರೆ ಎಂಬ ಭಾವತೀವ್ರತೆಯಲ್ಲಿ, ಭರಿಸಲಾಗದ ಆಳದ ವಿಷಾದದಲ್ಲಿ ಸಿಡಿದ ಸಾಲುಗಳು. ಹಾಗಾಗಿ ಲೋಕದ ಬಗ್ಗೆ ಮಾತಾಡುತ್ತಲೇ ಅದು ತನ್ನದೂ ಆಗಿಬಿಡುವ ಸ್ಥಿತ್ಯಂತರಗಳು ಇಲ್ಲಿನ ಹಲವು ಕವಿತೆಗಳಲ್ಲಿ ಕಾಣುತ್ತವೆ. ‘ಶೀರ್ಷಿಕೆ ಬೇಡದ ಬಿಕ್ಕು’ ಕವಿತೆ ಶುರುವಾಗುವುದು ಪ್ರಥಮ ಪುರುಷ ನಿರೂಪಣೆಯಲ್ಲಿ. ಆದರೆ ಒಂದಿಷ್ಟು ದೂರ ಸಾಗಿದ ನಂತರ ಥಟ್ಟನೇ  ‘ಸ್ವಾಮಿ, ನಾವು ನಿಮ್ಮನ್ನು ಕ್ಷಮಿಸಿಬಿಟ್ಟಿದ್ದೇವೆ’ ಎಂದು ಉತ್ತಮಪುರುಷ ನಿರೂಪಣೆಗೆ ಹೊರಳಿಕೊಂಡುಬಿಡುತ್ತದೆ.

ರಚನೆಯ ದೃಷ್ಟಿಯಿಂದ ಇಲ್ಲಿನ ಕವಿತೆಗಳನ್ನು ಎರಡು ರೀತಿಗಳಲ್ಲಿ ವಿಂಗಡಿಸಬಹುದು. ಒಂದು, ಸಮಾಜಮುಖಿ ರಚನೆಗಳು. ‘ಕಾಣಿಸದ ಬಾಸುಂಡೆಗಳ ಬಗ್ಗೆ/ ಬೀಸಿದ ಕೋಲುಗಳ ಎದುರು/ ದೂರು ನೀಡುತ್ತಿರುವೆ’ (ಬಾನೆತ್ತರದ ಬೇಲಿ) ಎಂಬ ಅಸಹಾಯಕತೆ, ವಿಷಾದ, ಮಡುಗಟ್ಟಿದ ನೋವಿನ ಪ್ರವಾಹದಲ್ಲಿ ಹುಟ್ಟಿದ ರಚನೆಗಳಿವು. ಎರಡನೆಯದ್ದು ಅಂತರ್ಮುಖಿ ರಚನೆಗಳು. ‘ಬಂಗಾರದ ಮೀನಿನ ತುಟಿಗಂಟಿದ/ ದನಿಯ ಸ್ಪರ್ಶಿಸುವ/ ಮೋಡಗಳ ನಿಟ್ಟುಸಿರ ಬಣ್ಣ ಕಲಿಯುವ/ ಕನಸು ಕಾಣುವ ನನಗೆ/ ಅಂಗಳದ ಹಸಿರು ಹುಲ್ಲಿನ ಕಪಾಳಗಳಲ್ಲಿ/ ಜಿನುಗುವ ಬೆವರ ಹನಿಯೂ ಕಂಗೆಡಿಸುತ್ತದೆ’ (ಚಿಟ್ಟೆ ಮತ್ತು ಕತ್ತರಿ) ಎಂಬ ತಲ್ಲಣದಲ್ಲಿ ಹುಟ್ಟಿದ ರಚನೆಗಳು. ಈ ಎರಡೂ ಬಗೆಯ ಕವಿತೆಗಳ ಮೂಲದಲ್ಲಿರುವ ಸಂವೇದನೆ, ಇಬ್ಬನಿಯನ್ನು ಹುಲ್ಲಿನ ಬೆವರಾಗಿ ಕಾಣುವಂಥದ್ದೇ.

ಆಶಯದ ದೃಷ್ಟಿಯಿಂದ, ಕಾಳಜಿಯ ದೃಷ್ಟಿಯಿಂದ ಇಲ್ಲಿನ ಹಲವು ರಚನೆಗಳು ನಮ್ಮ ಗಮನಸೆಳೆಯುತ್ತವೆ; ಮನಸ್ಸನ್ನು ಕಲಕುತ್ತವೆ. ಆದರೆ ಒಂದು ಪದ್ಯ ಯಶಸ್ವಿಯಾಗಬೇಕಾದರೆ ಅದಕ್ಕೊಂದು ವಾಚ್ಯ ಶರೀರವೂ ಅಪೇಕ್ಷಣೀಯ. ಮೂರ್ತಬಿಂಬಗಳ ಮೂಲಕವೇ ಅಮೂರ್ತವನ್ನು ಹಿಡಿದಿಡುವ ಧ್ವನಿಶಕ್ತಿ ಸಿದ್ಧಿಸಬೇಕು. ಈ ಶರೀರ ಮತ್ತು ಧ್ವನಿಶಕ್ತಿ ಎರಡೂ ಇಲ್ಲಿನ ಹಲವು ಕವಿತೆಗಳಲ್ಲಿ ಬಿಡಿಬಿಡಿಯಾಗಿ ಕಾಣಿಸುತ್ತವೆ. ಆದರೆ ಹೇಳಿದ್ದು ಸರಿಯಾಗಿ ಮುಟ್ಟೀತೋ ಇಲ್ಲವೋ ಎಂಬ ಸಂದೇಹದಲ್ಲಿ ಹುಟ್ಟಿಕೊಳ್ಳುವ ವಾಚಾಳಿತನ ಇಲ್ಲಿನ ಹಲವು ಪದ್ಯಗಳ ಧ್ವನಿಶಕ್ತಿಯನ್ನು ಕುಂದಿಸಿದೆ.

‘ಒಂದು ಶ್ರುತಿ ತಪ್ಪಿದ ಚರಮಗೀತೆ’ ಕವಿತೆ ಶುರುವಾಗುವುದೇ ‘ನನ್ನೂರಿನ ನದಿಗಳಿಗೆ  ಗಾಯ/ ಮುಚ್ಚಿಕೊಂಡು ಹರಿಯುವುದು/ ಕರಗತವಾಗಿಲ್ಲ/ ನನ್ನಕ್ಕನಂತೆಯೇ...’ ಎಂಬ ಉಜ್ವಲ ಸಾಲುಗಳಿಂದ.  ಶತಮಾನಗಳಿಂದ ಎದೆಕುದಿಯನ್ನು ಮುಚ್ಚಿಟ್ಟುಕೊಂಡು ಲೋಕಕ್ಕೆ ಕಾಳಜಿಯ ಮೊಲೆಹಾಲನ್ನಷ್ಟೇ ಉಣಿಸುತ್ತ ಬಂದ ತಾಯಂದಿರ ಮಮತೆಯನ್ನು ‘ಅಷ್ಟು ಭಾರದ ಸಾವನ್ನು ಎಷ್ಟೋ ಹಗುರವಾಗಿ/ ಎತ್ತೆತ್ತಿ ಫಿರಂಗಿಯ ರಕ್ಕಸ ಬಾಯಿಗೆ/ ತುತ್ತಿಡುವ’ ಸಹೋದರರ ತಣ್ಣನೆಯ ಆತ್ಮಗಳಿಗೆ ಮುಖಾಮುಖಿಯಾಗಿಸುತ್ತಲೇ ಬೆಳೆಯುತ್ತದೆ ಕವಿತೆ. ಅಂಥವರ ಕೈಮುಳ್ಳುಗಳಿಂದ ತಮ್ಮ ಹೆತ್ತಕುಡಿಗಳ ಹೆಣವನ್ನಾದರೂ ಕಾಪಾಡಲು ಗೋರಿ ಕಟ್ಟುತ್ತಿರುವ ತಾಯಂದಿರಿಗೆ ಕೈಮುಗಿಯಲೂ ಪುರಸತ್ತಿಲ್ಲ. ಇಂಥ ದಾರುಣ ಚಿತ್ರದಲ್ಲಿಯೇ ಕಾವ್ಯ ಮುಗಿಯುತ್ತದೆ. ಆದರೆ ಕವಿ ಅದನ್ನು ಅಲ್ಲಿಗೇ ಮುಗಿಸುವುದಿಲ್ಲ. ಇನ್ನಷ್ಟು ವಿಸ್ತರಿಸುತ್ತಾರೆ. ಹಾಗೆ ಬಲವಂತದಿಂದ ಮುಂದುವರಿಸುತ್ತ ಅವರೇ ಕಟ್ಟಿದ್ದ ಗಟ್ಟಿ ಚಿತ್ರ ತೆಳುಗೊಳಿಸುತ್ತಾರೆ.

‘ಮರುಭೂಮಿಯ ಗಾಯನಕೆ’ ರೀತಿಯ ಪದ್ಯಗಳು ಅಮೂರ್ತವನ್ನು ಹಿಡಿಯುವ ಭರದಲ್ಲಿ ಕಾವ್ಯಕ್ಕೆ ಇರಬೇಕಾದ ಮೂರ್ತಶರೀರವನ್ನು ಕಡೆಗಣಿಸಿದಂತೆ ಕಾಣುತ್ತವೆ. ‘ಸುರಳಿ ಸುತ್ತುವ ನಿದಿರೆಯೊಳಗೆ/ ನಾಳೆಗಳ ಪಸೆ ಹಿಂಗಿಹೋಗಿದೆ/ ಹೂದಳಗಳ ಎದೆಯ ಮೇಲೆ/ ಹಾಗೆಂದು ಯಾರೋ ಭವಿಷ್ಯ ಗೀಚಿಯಾಗಿದೆ’ ಈ ಸಾಲುಗಳಲ್ಲಿನ ನಿರಾಸೆಯ ಭಾವ ನಮ್ಮ ಮನಸ್ಸಿಗೆ ತಾಗುತ್ತದೆ. ಆದರೆ ಶಿಲ್ಪದ ದೃಷ್ಟಿಯಿಂದ, ಕಾವ್ಯಕ್ಕಿರಬೇಕಾದ ವಾಚ್ಯಶರೀರದ ನೆಲೆಗಟ್ಟಿನ ದೃಷ್ಟಿಯಿಂದ ನೋಡಿದರೆ ಕುಸಿಯುತ್ತದೆ. ಮೋಹಕವಾಗಿ ಕಾಣುವ ಇಲ್ಲಿನ ಸಾಲುಗಳಲ್ಲಿ ಭೂತ ಭವಿಷ್ಯ ವರ್ತಮಾನ ಮೂರೂ ಕಾಲಗಳಿವೆ. ಆದರೆ ಅವುಗಳ ಹೊಂದಾಣಿಕೆಯೇ ಸುಸಂಬದ್ಧವಾಗಿಲ್ಲ. ಮೊದಲೆರಡು ಸಾಲಿನಲ್ಲಿರುವ ಭೂತಕಾಲಕ್ಕೂ ನಂತರದ ಸಾಲಿನಲ್ಲಿರುವ ಭವಿಷ್ಯತ್ ಕಾಲದ ಸೂಚನೆಗೂ ಹೊಂದಿಕೆಯೇ ಆಗುವುದಿಲ್ಲ.

ಇಲ್ಲಿನ ಪದ್ಯಗಳಲ್ಲಿನ ಮಿತಿಗಳು ಬರೀ ಮೌಲ್ಯ ಅವರ ಮಿತಿಗಳಷ್ಟೇ ಅಲ್ಲ, ಈ ತಲೆಮಾರಿನ ಬಹುತೇಕ ಕವಿಗಳಲ್ಲಿ ಕಾಣುವ ಮಿತಿಗಳು. ಈ ಮಿತಿಗಳನ್ನು ನಾವು ‘ಈ ಕಾಲದ ಅಭಿವ್ಯಕ್ತಿಯ ಹೊಸ ರೀತಿ’ ಎಂಬಿತ್ಯಾದಿ ಸಬೂಬುಗಳಿಂದ ಮುಚ್ಚಿಕೊಳ್ಳುತ್ತಿದ್ದೇವೆ. ಕಾವ್ಯ ಇಡಿಯಾಗಿ ಮಿಡಿಯುತ್ತ, ಒಂದು ಅನುಭವ ಪ್ರಪಂಚವನ್ನು ಕಟ್ಟಿಕೊಡಬೇಕು ಎಂಬುದನ್ನು ಮರೆತು, ಅಲ್ಲಲ್ಲಿ ಸಿಗುವ ಹೊಳೆಯುವ ಸಾಲುಗಳನ್ನೇ ಮೆಲ್ಲುತ್ತ ನಿಜದ ಕಾವ್ಯದಿಂದ ಮುಖತಪ್ಪಿಸಿಕೊಂಡು ಅಡ್ಡಾಡುತ್ತಿದ್ದೇವೆ. ಆದರೆ ಈ ಸವಾಲುಗಳನ್ನು ದಿಟ್ಟವಾಗಿ ಎದುರಿಸದ ಕವಿ, ತನ್ನ ಕಾವ್ಯಯಾನದಲ್ಲಿ ತುಂಬದೂರ ಸಾಗಲು ಸಾಧ್ಯವಿಲ್ಲ. ಅಚ್ಚಳಿಯದ ಏನನ್ನೂ ಬರೆಯಲು ಸಾಧ್ಯವಿಲ್ಲ. 

‘ನಾನು/ ಹುಟ್ಟು ಕವಿಯಂತೆ/ ಬುದ್ಧಿಯನ್ನು ಮತ್ತೆ ಮತ್ತೆ ಸೋಲಿಸಿ/ ಸುಖಿಸುತ್ತಿದ್ದೇನೆ’ (ಚಿಟ್ಟೆ ಮತ್ತು ಕತ್ತರಿ) ಇದು ಅವರದ್ದೇ ಕವಿತೆಯ ಸಾಲುಗಳು. ಆದರೆ ಒಳ್ಳೆಯ ಕಾವ್ಯ, ಬುದ್ಧಿಯ ಎದುರು ಭಾವವನ್ನು ಗೆಲ್ಲಿಸಿ ಸುಖಿಸುವುದಿಲ್ಲ; ಬದಲಿಗೆ ಬುದ್ಧಿ–ಭಾವಗಳೆರಡರ ಕತ್ತಿಗೆ ನೇಗಿಲ ಹೂಡಿ ಅನುಭವದ ನೆಲವನ್ನು ಉಳುತ್ತದೆ. ಇದು ಮೌಲ್ಯ ಅವರ ಪ್ರತಿಭೆಗೆ ಸಾಧ್ಯವಿದೆ ಎಂಬುದಕ್ಕೆ ದಟ್ಟವಾದ ಸೂಚನೆಗಳು ಇಲ್ಲಿನ ಕವಿತೆಗಳಲ್ಲಿ ಕಾಣುತ್ತವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು