ನಾಳೆಗೂ ಇರಲಿ ನೀರು: ಇಂದೇ ಓದಬೇಕು

7

ನಾಳೆಗೂ ಇರಲಿ ನೀರು: ಇಂದೇ ಓದಬೇಕು

Published:
Updated:

ನ್ಯೂಯಾರ್ಕ್‌ನಲ್ಲಿ ನೆಲೆಸಿರುವ ವಕೀಲ, ಉದ್ಯಮಿ ಬರೆದಿರುವ ‘ಲೆಟ್ ದೇರ್ ಬಿ ವಾಟರ್’ ಎಂಬ ಪುಸ್ತಕವನ್ನು ಕಾನೂನು ತಜ್ಞ ರಾಘವೇಂದ್ರ ಹೆಗಡೆ ‘ನಾಳೆಗೂ ಇರಲಿ ನೀರು’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಶೇಕಡ 60ಕ್ಕೂ ಹೆಚ್ಚು ಪ್ರದೇಶದ ಮರುಭೂಮಿಯನ್ನು ಹೊಂದಿರುವ ಹಾಗೂ ಅತ್ಯಂತ ಕಡಿಮೆ ಪ್ರಮಾಣದ ಮಳೆ ಬೀಳುತ್ತಿರುವ ಇಸ್ರೇಲ್ ದೇಶ ಹೇಗೆ ನೀರಿನಲ್ಲಿ ಸ್ವಾವಲಂಬಿಯಾಗಿದೆ ಮತ್ತು ಇತರ ದೇಶಗಳಿಗೆ ನೀರನ್ನು ರಫ್ತು ಮಾಡುತ್ತದೆ ಎನ್ನುವುದು ಈ ಪುಸ್ತಕದ ತಿರುಳು.

ಬೆಂಗಳೂರಿನ ನೀರಿನ ದಾಹ ಇಂಗಿಸಲು ಶರಾವತಿ ನದಿಯಿಂದ ನೀರು ತರುವ ಯೋಜನೆ ಸಿದ್ಧಗೊಳ್ಳುತ್ತಿರುವ ಈ ಹೊತ್ತಿನಲ್ಲಿಯೇ ಕನ್ನಡದಲ್ಲಿ ಪ್ರಕಟವಾದ ಈ ಪುಸ್ತಕ ಎಲ್ಲರೂ ಇಂದೇ ಓದಬೇಕಾದದ್ದು. ಇದರಲ್ಲಿ ಇರುವ ತಂತ್ರಗಳನ್ನು ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ದೊಡ್ಡ ದೊಡ್ಡ ಯೋಜನೆಗಳು, ಕೋಟ್ಯಂತರ ರೂಪಾಯಿ ಟೆಂಡರ್‌ಗಳ ಬಗ್ಗೆಯೇ ಆಲೋಚಿಸುವ ಮಂತ್ರಿ ಮಹೋದಯರು, ಅಧಿಕಾರಿಗಳಿಗೂ ಇದನ್ನು ಓದಿ ಮನದಟ್ಟು ಮಾಡಿಕೊಳ್ಳಬೇಕು.

1948ರಲ್ಲಿ ಅಸ್ತಿತ್ವಕ್ಕೆ ಬಂದ ಇಸ್ರೇಲ್ ಜನಸಂಖ್ಯೆ ಈಗ ಹತ್ತುಪಟ್ಟು ಹೆಚ್ಚಾಗಿದೆ. ಎರಡನೇ ಮಹಾಯುದ್ಧದ ನಂತರ ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಇಸ್ರೇಲ್‌ ಕೂಡ ಸೇರಿದೆ. ಹವಾಮಾನ ವೈಪರೀತ್ಯದಿಂದ ಇಸ್ರೇಲ್‌ನಲ್ಲಿಯೂ ಮಳೆ ಪ್ರಮಾಣ ಕಡಿಮೆಯಾಗಿದೆ. ಆದರೆ ಜನ ನೀರಿನ ನಿರ್ವಹಣೆಯನ್ನು ಅತ್ಯುತ್ತಮ ರೀತಿಯಲ್ಲಿ ಮಾಡುತ್ತಿರುವುದರಿಂದ ವಿಶ್ವದಲ್ಲಿಯೇ ಜಲ ಸ್ವಾವಲಂಬಿ ದೇಶ ಅದು.

ಇಸ್ರೇಲಿನ ಹನಿ ನೀರಾವರಿಯ ಹರಿಕಾರ ಸಿಂಚಾ ಬ್ಲಾಸ್, 3ನೇ ಪ್ರಧಾನಮಂತ್ರಿ ಲೇವಿ ಎಶ್ಕೋಲ್, ಮುಖ್ಯ ಎಂಜಿನಿಯರ್ ಅರಾನ್ ಮೀರನ್ ಮುಂತಾದವರ ಹೋರಾಟದ ಕತೆ ಇಲ್ಲಿದೆ.

ಇಸ್ರೇಲಿನಲ್ಲಿ ಬಾಲ್ಯದಲ್ಲಿಯೇ ಮಕ್ಕಳಿಗೆ ನೀರಿನ ಮಹತ್ವದ ಬಗ್ಗೆ ಪಾಠ ಮಾಡಲಾಗುತ್ತದೆ. ಅದೂ ಶಾಲೆಯಲ್ಲಿ ಅಲ್ಲ. ಮನೆಯಲ್ಲಿ. ನೀರು ಉಳಿತಾಯದ ಶಿಕ್ಷಣ ಮನೆಯಲ್ಲಿಯೇ ಸಿಗುವುದರಿಂದ ನೀರನ್ನು ಪೂಜಿಸುವ ಮತ್ತು ಉಳಿಸುವ ಸಂಸ್ಕೃತಿ ಅಲ್ಲಿ ಬೇರುಬಿಟ್ಟಿದೆ. ಶಾಲೆಗಳಲ್ಲಿಯೂ ನೀರನ್ನು ಉಳಿಸುವ ಪಾಠಗಳ ಜೊತೆಗೆ ಕಾರ್ಯಸಾಧ್ಯ ತಂತ್ರಗಳನ್ನೂ ಹೇಳಿಕೊಡಲಾಗುತ್ತದೆ. ನೀರನ್ನು ಮಿತವಾಗಿ ಬಳಸುವುದು ಮತ್ತು ಪೋಲಾಗುವುದನ್ನು ತಪ್ಪಿಸುವುದು ಪ್ರತಿ ವ್ಯಕ್ತಿಯ ಜವಾಬ್ದಾರಿ. ಇಸ್ರೇಲಿನ ನಾಣ್ಯ, ಕರೆನ್ಸಿ, ಅಂಚೆಚೀಟಿ ಎಲ್ಲದರಲ್ಲಿಯೂ ನೀರಿನ ಮಹತ್ವದ ಬಗ್ಗೆ ಪಾಠವಿದೆ. ಸಂದೇಶವಿದೆ.

ಇಸ್ರೇಲಿನಲ್ಲಿ ನೀರು ಯಾರೊಬ್ಬರ ಸ್ವತ್ತೂ ಅಲ್ಲ. ಅದು ದೇಶದ ಆಸ್ತಿ. ಜನರ ಅವಶ್ಯಕತೆ ಮತ್ತು ನೀರಿನ ಬಳಕೆಯ ಅತ್ಯುತ್ತಮವಾದ ಮಾರ್ಗ ಯಾವುದೆಂದು ನಿರ್ಧರಿಸಿ ಯಾರಿಗೆ ಎಷ್ಟು ನೀರಿನ ಅಗತ್ಯವಿದೆ, ಹೇಗೆ ಖರ್ಚು ಮಾಡಬೇಕು ಎನ್ನುವುದನ್ನು ಕಾನೂನು ಬದ್ಧಗೊಳಿಸಲಾಗಿದೆ.

1955ರಲ್ಲಿಯೇ ಇಸ್ರೇಲಿನಲ್ಲಿ ನಾಗರಿಕರು ಕೊಳವೆ ಬಾವಿ ಕೊರೆಸುವುದನ್ನು ನಿಷೇಧಿಸಲಾಗಿದೆ. ಇಸ್ರೇಲಿನಲ್ಲಿ ನದಿ, ಕೆರೆ, ಸರೋವರ, ತೊರೆ ಮತ್ತು ಮಳೆ ನೀರೂ ಸಹ ಸರ್ಕಾರಿ ಸ್ವತ್ತು ಎಂದು ಘೋಷಿಸಲಾಗಿದೆ. ಸರ್ಕಾರದ ಅಪ್ಪಣೆ ಇಲ್ಲದೆ ಯಾವುದೇ ಕಾರಣಕ್ಕೂ ಯಾರೂ ನೀರನ್ನು ಉಪಯೋಗಿಸುವ ಹಾಗೆ ಇಲ್ಲ.

ಭೂಮಿ ನಮ್ಮದಾದರೂ ಅದರ ಒಡಲಲ್ಲಿ ಇರುವ ನೀರು ಹಾಗೂ ಅದರ ಮೇಲೆ ಬೀಳುವ ಮಳೆ ನೀರಿನ ಅಧಿಕಾರ ಭೂ ಮಾಲೀಕರಿಗೆ ಇಲ್ಲ. ಇಸ್ರೇಲಿನಲ್ಲಿ ಇರುವುದು ಕೂಡ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯನ್ನು ಪೋಷಿಸುವ ಸರ್ಕಾರ. ಆದರೆ ನೀರಿನ ವಿಷಯದಲ್ಲಿ ಅದು ತನ್ನ ಕಟ್ಟುಪಾಡನ್ನು ಸಡಿಲಿಸಿಲ್ಲ. ಜನ ಕೂಡ ಅದಕ್ಕೆ ಹೊಂದಿಕೊಂಡಿದ್ದಾರೆ. ನೀರಿನ ಕೊರತೆ ಅಲ್ಲಿ ಇಲ್ಲ. ಆದರೆ ಪೋಲು ಮಾಡುವುದಿಲ್ಲ. ‘ಇಸ್ರೇಲಿನಲ್ಲಿ ಮನೆಯ ಮೇಲೆ ಬಿದ್ದ ಮಳೆ ನೀರನ್ನು ಯಾರಾದರೂ ಬಕೆಟ್‌ನಲ್ಲಿ ಹಿಡಿದು ಇಟ್ಟುಕೊಂಡರೆ ಅದು ಅಪರಾಧ’.

ಸಾಮೂಹಿಕ ಜವಾಬ್ದಾರಿಯೇ ನೀರಿನ ನಿರ್ವಹಣೆಗೆ ಸರಿಯಾದ ಮಾರ್ಗ ಎಂದು ಅಲ್ಲಿನ ಜನರು ಅಂದುಕೊಂಡಿದ್ದಾರೆ. ನೀರಿನ ನಿರ್ವಹಣೆಗೆ ಇಸ್ರೇಲ್ ಸಹಕಾರಿ ತತ್ವವನ್ನು ಅಳವಡಿಸಿಕೊಂಡಿದೆ. ಮನುಷ್ಯನ ದೇಹಕ್ಕೆ ರಕ್ತವಿದ್ದಂತೆ ಒಂದು ದೇಶಕ್ಕೆ ನೀರು ಎಂದು ಇಸ್ರೇಲ್ ಪ್ರಧಾನಿಯಾಗಿದ್ದ ಲೆವಿ ಎಶ್ಕೋಲ್ ಹೇಳುತ್ತಾರೆ.

ಜಗತ್ತಿನ ಅಭಿವೃದ್ಧಿಹೊಂದಿದ ದೇಶಗಳಲ್ಲಿಯೂ ನೀರಿನ ಸೋರಿಕೆಯ ಪ್ರಮಾಣ ಸರಿಸುಮಾರು ಶೇ 40ರಷ್ಟು. ಆದರೆ ಇಸ್ರೇಲ್‌ನಲ್ಲಿ ಇದರ ಪ್ರಮಾಣ ಶೇ 16ರಷ್ಟು ಮಾತ್ರ. ಅದನ್ನು ಶೂನ್ಯಕ್ಕೆ ಇಳಿಸುವ ಪ್ರಯತ್ನ ಅಲ್ಲಿ ನಿರಂತರವಾಗಿ ಸಾಗಿದೆ. ಇಸ್ರೇಲಿನಲ್ಲಿ ಎಲ್ಲ ಬೆಳೆಗಳನ್ನೂ ಹನಿನೀರಾವರಿ ಪದ್ಧತಿಯಲ್ಲಿಯೇ ಬೆಳೆಯಲಾಗುತ್ತದೆ. ಇಸ್ರೇಲಿನ ಜಲಮಾನವ ಎಂದೇ ಖ್ಯಾತರಾದ ಸಿಂಚ ಬ್ಲಾಸ್ ಇದರ ಹರಿಕಾರ.

ಇಸ್ರೇಲ್‌ನಲ್ಲಿ ಎಲ್ಲವೂ ಹನಿ ನೀರಾವರಿಯಲ್ಲಿಯೇ ನಡೆಯುತ್ತದೆ. ಇಂತಹ ಹಲವಾರು ರೋಚಕ ಅಂಶಗಳು ಈ ಪುಸ್ತಕದಲ್ಲಿವೆ. ನೀರಿನ ನಿರ್ವಹಣೆಯ ವಿಷಯದಲ್ಲಿ ಇಸ್ರೇಲ್ ಇಡೀ ವಿಶ್ವಕ್ಕೆ ನೈತಿಕ ಸವಾಲನ್ನು ಒಡ್ಡಿದೆ. ಜಲಸಾಕ್ಷರತೆಯಲ್ಲಿ ಅತ್ಯಂತ ಹಿಂದೆ ಉಳಿದಿರುವ ಭಾರತಕ್ಕೆ ಇದೊಂದು ಪಾಠ. ಪುಸ್ತಕದಲ್ಲಿ ಇರುವ ಅಂಶಗಳನ್ನು ಮನದಟ್ಟು ಮಾಡಿಕೊಂಡು ನಾವು ನೀರು ಪೋಲು ಮಾಡುವುದನ್ನು ತಪ್ಪಿಸಿದರೆ ಸಾರ್ಥಕ. ಸಿಗೆಲ್ ಅವರ ಪುಸ್ತಕವನ್ನು ರಾಘವೇಂದ್ರ ಹೆಗಡೆ, ಚೇತನಾ ಭಟ್, ಗಣಪತಿ ಜೋಶಿ, ಗಾಯತ್ರಿ ಜೋಶಿ, ಶರತ್ ಹೆಗಡೆ ಮುಂತಾದವರು ಕನ್ನಡಕ್ಕೆ ತಂದಿದ್ದಾರೆ. ಇವರು ಯಾರೂ ಬರಹಗಾರರೆಂದು ಗುರುತಿಸಿಕೊಂಡವರಲ್ಲ. ನೀರಿನ ಮೇಲಿನ ಮೋಹದಿಂದ ಮತ್ತು ನೀರಿನ ಪಾಠ ಎಲ್ಲರಿಗೂ ದಕ್ಕಬೇಕು ಎಂಬ ಹಂಬಲದಿಂದ ಇದನ್ನು ಭಾಷಾಂತರಿಸಿದ್ದಾರೆ. ಎಲ್ಲರೂ ಅಭಿನಂದನೆಗೆ ಅರ್ಹರು. ಇದೊಂದು ಲೋಕ ಕಲ್ಯಾಣದ ಪುಸ್ತಕ. ಜಲದಾಹದಿಂದ ತತ್ತರಿಸುತ್ತಿರುವ ಜಗತ್ತಿಗೆ ಇಸ್ರೇಲ್ ಪಾಠ ಇದು. ನಮಗೂ ಪಾಠವಾಗಬೇಕು. ಆ ಪಾಠವನ್ನು ನಾವು ಅಳವಡಿಸಿಕೊಳ್ಳಬೇಕು.

ಪುಟಗಳು: 216
ಬೆಲೆ: ₹ 225
ಪ್ರಕಾಶಕರು: ಅಂಕಿತ ಪುಸ್ತಕ

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !