ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಸರಳವಾಗಿ ಕಾಣುವ ಸಂಕೀರ್ಣವಾದ ‘ಮುತ್ತು’

Last Updated 30 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಮೇಲುನೋಟಕ್ಕೆ ತೀರ ಸರಳವೆನ್ನಿಸುವ ‘ಸಕೀನಾಳ ಮುತ್ತು’ ಇವತ್ತಿನ ಹಿಂಸಾಮೂಲಗಳನ್ನು ಸುಲಭವಾಗಿ ಗ್ರಹಿಸಲಾಗದ ಮಧ್ಯಮ ವರ್ಗದವರ ಆಶೋತ್ತರಗಳನ್ನು ಮತ್ತು ದುರಂತಗಳನ್ನು ತನ್ನೊಡಲಲ್ಲೇ ನೇಯ್ದುಕೊಂಡಿರುವ ಒಂದು ಸಂಕೀರ್ಣ ಕಾದಂಬರಿ. ದೇಶದ ರಾಜಕೀಯ ವಾಸ್ತವಕ್ಕೆ ಹೇಗೋ ಹಾಗೆ ಜನರ ದಿನದಿನದ ಅಸ್ತಿತ್ವಕ್ಕೂ ಪ್ರತಿಕ್ರಿಯಿಸುತ್ತಿರುವ ಈ ಕೃತಿ ತಾನು ಹೇಳಿದ್ದಕ್ಕಿಂತಲೂ ಹೆಚ್ಚಿನದನ್ನು ಧ್ವನಿಸುತ್ತದೆ. ವಿವೇಕ ಶಾನಭಾಗರು ಇಲ್ಲಿ ಪ್ರೀತಿ ಮತ್ತು ವಿಶ್ವಾಸಘಾತುಕತೆಯ ಬಗ್ಗೆ, ಭರವಸೆ, ಭಯಗಳಿಂದ ವಿಘಟನೆಗೊಂಡ ಕುಟುಂಬಗಳ ಬಗ್ಗೆ, ಸಹಜ ಜೀವನವನ್ನೇ ಅಸಾಧ್ಯಗೊಳಿಸುತ್ತಿರುವ ರಾಜಕೀಯ ಮತ್ತು ಹಿಂಸೆಯ ಬಗ್ಗೆ ಸೂಕ್ಷ್ಮ ವ್ಯಂಗ್ಯದಿಂದ ಹೇಗೋ ಹಾಗೆ ಸ್ಫಟಿಕದಷ್ಟು ಸ್ಪಷ್ಟತೆಯಿಂದಲೂ ಬರೆಯುತ್ತಾರೆ.

ಕಾದಂಬರಿಯಲ್ಲಿರುವುದು ಒಂದು ಘಟನೆ, ಒಂದು ಭಾವ, ಒಂದು ಪ್ರತಿಕ್ರಿಯೆ, ಒಂದು ಪರಿವರ್ತನಶೀಲ ಕ್ಷಣ. ಇವುಗಳ ಸುತ್ತ ವ್ಯಕ್ತಿತ್ವಗಳು, ಸಂಬಂಧಗಳು, ಬೆಳವಣಿಗೆಗಳು ಬೆಳಕಿಗೆ ಬರುತ್ತಿರುವ ಹಾಗೆಯೇ ಒಂದಿಡೀ ಕಥನ ಆಕಾರ ಪಡೆದುಕೊಳ್ಳುತ್ತದೆ. ವಿಭಿನ್ನ ಕ್ರಿಯಾಕ್ಷೇತ್ರಗಳಲ್ಲಿ ನಡೆಯುವ ಇಲ್ಲಿನ ಕಿರುಗತೆಗಳಂಥ ಘಟನೆಗಳು ಸಮಕಾಲೀನ ವಾಸ್ತವದ ಸಂಕೀರ್ಣವಾದೊಂದು ಅನುಭವಕ್ಷೇತ್ರವನ್ನು ಹಂಚಿಕೊಳ್ಳುವ ಮೂಲಕ ಆತ್ಮಾವಲೋಕನವನ್ನೂ ಮನುಷ್ಯಲೋಕ ಕಳೆದುಕೊಂಡಂತಿರುವ ಭರವಸೆಯ ಸೂಚನೆಯನ್ನೂ ಒಟ್ಟಿಗೆ ಹಿಡಿದುಕೊಡುತ್ತವೆ. ಇತರರ ಬಗ್ಗೆ ಹೇಳುತ್ತ ನಮ್ಮ ಬಗ್ಗೆಯೇ ನಾವು ಗ್ರಹಿಸಿರದ ಏನನ್ನೋ ತಿಳಿಸಿಕೊಡುವ ಈ ಕಾದಂಬರಿ ನಮ್ಮ ಮನಸ್ಸಿನ ಕತ್ತಲು ಕವಿದ ಮೂಲೆಗಳ ಮೇಲೆ ಚೆಲ್ಲುವ ಬೆಳಕು ತುಂಬ ಪ್ರಖರವಾದದ್ದು.

ಈ ಕೃತಿಗೆ ಬಹುಮಟ್ಟಿಗೆ ಮಿನಿಮಲಿಸ್ಟ್ ಎನ್ನಬಹುದಾದ ಕಥಾ ಸಂವಿಧಾನವಿದ್ದು ಅದು ತೀರಾ ದೈನಿಕ ಎನ್ನಿಸುವಂಥ ಸನ್ನಿವೇಶಗಳಿಗೆ ವಿಲಕ್ಷಣ ಗುಣ ತಂದುಕೊಟ್ಟಿದೆ. ಭಾವನೆಗಳ, ಅನುಭವಗಳ ಒಂದಿಡೀ ಶ್ರೇಣಿಯನ್ನು ಒಳಗೊಂಡಿರುವ ಕೃತಿಯಲ್ಲಿ ಜೀವನದ ಕ್ರಮರಹಿತ ಗತಿಯೇ ಅಭಿವ್ಯಕ್ತಿ ಪಡೆದುಕೊಂಡಂತಿದೆ. ಪ್ರೀತಿಯ ಹೆಂಡತಿ, ಒಬ್ಬ ಮಗಳೊಡನೆ ಸಾಕಷ್ಟು ನೆಮ್ಮದಿಯಿಂದಿರುವ ವೆಂಕಟರಮಣ ಎಂಬ ವ್ಯಕ್ತಿಯ ಜೀವನದಲ್ಲಿ ಹಠಾತ್ತನೆ ಒಂದೆರಡು ಸಣ್ಣ ಪುಟ್ಟ ಘಟನೆಗಳು ನಡೆದುಬಿಡುತ್ತವೆ. ಕಾದಂಬರಿಯ ವರ್ತಮಾನದಲ್ಲಿ ಅವನು ಮುಖಾಮುಖಿಯಾಗುವ ಹುಡುಗರ ಒಂದು ಗುಂಪಿದೆ; ಅವನ ಚಿಕ್ಕಪ್ಪ ಅಂತಣ್ಣ, ಸಿಡಿನುಡಿ ವಾರಪತ್ರಿಕೆಯ ಸುರೇಶ, ಅವನ ಅಪಾರ್ಟ್‌ಮೆಂಟ್‌ನ ಜನ ಇದ್ದಾರೆ. ಜೊತೆಗೆ ಉದ್ದಕ್ಕೂ ಅವನ ತಲ್ಲಣಗಳನ್ನು ಹೆಚ್ಚಿಸುವ ಮಗಳು ರೇಖಾಳ ಇಂಗ್ಲಿಷ್ ಅಧ್ಯಾಪಕ ಸುರೇಂದ್ರನ, ಅವನ ತಂದೆಯ ಸ್ವಾರ್ಥಸಾಧನೆಯ,ಬಂಡುಕೋರ ಸೋದರಮಾವ ರಮಣನ ಹಾಗೂ ಅವನ ನಿಗೂಢ ಸಾವಿನ ನೆನಪುಗಳೂ ಗಾಢವಾಗಿವೆ.

ರೇಖಾ, ವೆಂಕಟರಮಣನ ಊರು ಮಾವನ ಮನೆಗೆ ಹೋಗಿದ್ದಾಳೆ ಎನ್ನುವಲ್ಲಿಂದ ಪ್ರಾರಂಭವಾಗುವ ಕಾದಂಬರಿ ಒಂದಕ್ಕೊಂದು ತಳುಕುಹಾಕಿಕೊಳ್ಳುವ ಕೆಲವೊಂದು ವಿದ್ಯಮಾನಗಳನ್ನು ಬಹಿರಂಗಗೊಳಿಸುವ ಕ್ರಮದಲ್ಲೇ ಕಾಲೇಜು ಹುಡುಗರ ರಾಜಕೀಯ, ರಾಜಕಾರಣಿಗಳ ಗೂಂಡಾಗಿರಿ, ನಕ್ಸಲರು ಮತ್ತು ಪೊಲೀಸರ ನಡುವಣ ಘರ್ಷಣೆ, ಸಮೂಹ ಮಾಧ್ಯಮಗಳ ಚಿತಾವಣೆ, ನೈತಿಕ ಪೊಲೀಸ್‌ಗಿರಿ, ಹೀಗೆ ಇವತ್ತಿನ ಹಲವು ಸಮಸ್ಯೆಗಳ ಮೂಲವನ್ನೂ ಕೆದಕುತ್ತದೆ. ಇಲ್ಲಿ ಕೆಲವು ಸಂಗತಿಗಳು ಪುನರಾವರ್ತನೆಗೊಂಡಿವೆ ಅನ್ನಿಸಬಹುದು. ಆದರೆ ಅದು ಕೇವಲ ತೋರಿಕೆಯಷ್ಟೆ.

ಉದಾಹರಣೆಗೆ, ಪ್ರಾರಂಭದಲ್ಲೇ ರಾಜಾನ ಮಾತಿನಲ್ಲಿ ಮುಖ ತೋರಿಸುವ ಯೂ ರಿಪೋರ್ಟರ್ ಪತ್ರಿಕೆಯ ‘ರಂಗಣ್ಣಾವ್ರು’. ಈತ ಗೂಂಡಾಗಳ ಬಲದಿಂದ ರಾಜಕಾರಣ ಮಾಡುತ್ತಿರುವವನು. ಆದರೆ ಸಿಡಿನುಡಿ ಪತ್ರಿಕೆಯ ಸುರೇಶನಿಗೆ ಭ್ರಷ್ಟ ಪ್ರಭುತ್ವವನ್ನು ಬದಲಾಯಿಸಬೇಕೆಂಬ ಉದ್ದೇಶವಿದ್ದಂತಿದೆ. ಹೀಗೆಯೇ ನೈತಿಕ ಪೊಲೀಸುಗಿರಿಗೆ ಸಂಬಂಧಿಸಿದಂತೆ ಪುಟ 45ರಲ್ಲೂ ಪುಟ 136ರಲ್ಲೂ ಇರುವ ಹೇಳಿಕೆಗಳಿಗೆ ವಿಭಿನ್ನ ಅರ್ಥಛಾಯೆಗಳಿರುವುದನ್ನು ಗಮನಿಸಬೇಕು. ಹಾಗೆ ನೋಡಿದರೆ, ಈ ಕಾದಂಬರಿಯ ಕ್ರಿಯೆಯಿರುವುದು ಏನು ನಡೆಯಿತು, ಏನು ನಡೆದಿರಬಹುದು ಎಂಬುದರ ನಡುವೆ. ‘ಕಾಣ್ಕೆ ಕಣ್ಕಟ್ಟುಗಳ ನಡುವೆ ಗೆರೆ ಬಲು ತೆಳುವು’. ಈ ಮಾತಿಗೆ ಕಾದಂಬರಿಯ ಶೀರ್ಷಿಕೆಯೂ ಹೊರತಲ್ಲ.

ಓದುಗರನ್ನು ಗಾಢವಾಗಿ ಚಿಂತನೆಗೆ ಹಚ್ಚುವ, ಬಹುಮಟ್ಟಿಗೆ ಭಾವಗೀತಾತ್ಮಕವಾಗಿರುವ ಈ ಸಫಲ ಕೃತಿಯಲ್ಲಿ ಈ ಕಾದಂಬರಿಕಾರರ ಚಿಂತನೆಗೆ ಕಾರಣವಾಗಿರುವುದು ಸಾಮಾನ್ಯ ಘಟನೆಗಳಷ್ಟೇ ಅಲ್ಲ. ಆ ಘಟನೆಗಳು ಹೇಗೆ ನಮ್ಮ ಪ್ರಜ್ಞೆಯ ಹಾಗೂ ನಮ್ಮ ಕಲ್ಪನೆಯ ಮೇಲೆ ತಮ್ಮ ಪ್ರಭಾವ ಬೀರುತ್ತವೆ, ಅಸ್ತಿತ್ವದಲ್ಲಿರುವ ನಮ್ಮ ಜಗತ್ತು ಹೇಗೆ ಅತ್ಯಂತ ಸೂಕ್ಷ್ಮವಾಗಿ ನಮ್ಮ ಇಂದ್ರಿಯಗಳನ್ನು ಪ್ರವೇಶಿಸುತ್ತದೆ, ಮನುಷ್ಯರಾಗುವುದೆಂದರೆ ಏನು, ಇತ್ಯಾದಿ ಪ್ರಶ್ನೆಗಳು ಕೂಡ. ವೆಂಕಟರಮಣನ ದೃಷ್ಟಿಕೋನದಲ್ಲೇ ಸಾಗುವ ಇಲ್ಲಿನ ನಿರೂಪಣೆ ಅವನ ಭಯ, ಆತಂಕಗಳು ಮಧ್ಯಮ ವರ್ಗದ ಎಲ್ಲರ ಭಯ, ಆತಂಕಗಳಾಗುವಷ್ಟು ಶಕ್ತವಾಗಿದೆ ಎನ್ನಬೇಕು.

ವಿವೇಕರು ಸಮೃದ್ಧ ದೃಶ್ಯವೊಂದರ ಒಂದೊಂದೇ ಪಾರ್ಶ್ವವನ್ನು ತೋರಿಸುತ್ತ, ಆ ಒಂದೊಂದೇ ಪಾರ್ಶ್ವಗಳು ಕ್ರಮೇಣ ಬಹುಸ್ತರದ ಒಂದೇ ಸಂಪೂರ್ಣ ಚಿತ್ರವಾಗುವಂತೆ ಮಾಡಬಲ್ಲ ಕ್ಯೂಬಿಸ್ಟ್ ಕಲಾವಿದನ ಹಾಗೆ. ಅವರು ಕಲ್ಪಕತೆಯ ದೂರ ಸರಹದ್ದುಗಳಲ್ಲಿ ನಿಂತು, ಇದುವರೆಗೂ ನಮ್ಮ ಭಾಷೆಯಿಂದ ನುಣುಚಿಕೊಂಡಂತಿದ್ದ ಅನುಭವವನ್ನು ಸಾಕಾರಗೊಳಿಸುತ್ತಿರುವ ಲೇಖಕರೆನಿಸುತ್ತದೆ. ಇವತ್ತು ಬದುಕುತ್ತಿರುವ ಅನೇಕರ ಬದುಕಿನ ವಿಸ್ತೃತ ದರ್ಶನವಾಗಿರುವ ಈ ಕೃತಿ ಜನರನ್ನು ಅವರಿರುವ ಹಾಗೆಯೇ ತೋರಿಸುತ್ತಿರುವ, ಯಾವುದೇ ವಿರೂಪವಿಲ್ಲದ ಕನ್ನಡಿ. ಈ ಕನ್ನಡಿ ನಾವು ಬಹುಮಟ್ಟಿಗೆ ಅಡಗಿಸಿಡುವ ಅಥವಾ ನಿಗ್ರಹಿಸುವ ನಮ್ಮ ಬದುಕಿನ ದೈನಿಕಗಳನ್ನು ಪಡಿಮೂಡಿಸುವ ಹೊತ್ತಿಗೇ, ನಮ್ಮ ಜೀವನವೆಂದರೆ ನಮ್ಮ ಅತೃಪ್ತಿ, ಬಳಲಿಕೆ, ಇರುಸುಮುರುಸು, ಭಯಭೀತಿ, ಇವೇ ಮುಂತಾದವು ಎಂಬುದನ್ನು ಹಠಾತ್ತಾಗಿ ನಾವೇ ಅರಿತುಕೊಳ್ಳುವಂತೆಯೂ ಮಾಡುತ್ತದೆ.

ಕಾದಂಬರಿಯ ಕೊನೆಕೊನೆಗೆ ಬರುವ ವೆಂಕಟರಮಣನ ಸ್ವಗತದಂಥ ಈ ಮಾತುಗಳು ನಮ್ಮೆಲ್ಲರ ಮಾತುಗಳೂ ಆಗಲಿಕ್ಕೆ ಸಾಕು: ‘ಎಲ್ಲವೂ ಸುಸೂತ್ರವಿದ್ದ ಸ್ಥಳದಲ್ಲಿ ಯಾವುದೋ ಅವ್ಯವಸ್ಥೆಗಾಗಿ, ಎಂಥದೋ ಕಳಂಕಕ್ಕಾಗಿ ಹುಡುಕಾಡುತ್ತಿದ್ದೆ. ಏನೋ ಆಗಿದೆ, ಏನಂತ ಗೊತ್ತಾಗುತ್ತಿಲ್ಲ. ರಕ್ತದ ಪಸೆ ಕೂಡ ಕಾಣದಷ್ಟು ವೇಗದಲ್ಲಿ ಹರಿತವಾದ ಚೂರಿಯೊಂದು ಹೊಕ್ಕು ಹೊರಟುಹೋಗಿದೆ; ಮುಂದಿನ ಯಾವ ಕ್ಷಣದಲ್ಲಾದರೂ ರಕ್ತ ಛಿಲ್ಲನೇ ಚಿಮ್ಮಿ ಎಲ್ಲೋ ಅಡಗಿದ ಗಾಯವು ಪ್ರಕಟವಾಗಲು ನಾನು ಕಾಯುತ್ತಿದ್ದೇನೆ ಅನಿಸಿತು.’ (ಪುಟ 130)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT