ಸಂವಿಧಾನ ಓದಿ

7

ಸಂವಿಧಾನ ಓದಿ

Published:
Updated:

ಯುವಕರು ಮತ್ತು ವಿದ್ಯಾರ್ಥಿಗಳು ದೇಶದ ಸಂವಿಧಾನವನ್ನು ಓದುವಂತೆ ಮಾಡಬೇಕು ಎನ್ನುವ ಉದ್ದೇಶದಿಂದ ಪ್ರಕಟವಾದ ‘ಸಂವಿಧಾನದ ಓದು’ ಪುಸ್ತಕ ಹೊಸ ಮಜಲೊಂದನ್ನು ದಾಟಿದೆ. ಈ ವರ್ಷದ ಆಗಸ್ಟ್‌ 25ರಂದು ಮೊದಲ ಮುದ್ರಣ ಕಂಡ ಈ ಪುಸ್ತಕ ಇದುವರೆಗೆ 42 ಸಾವಿರ ಪ್ರತಿಗಳಷ್ಟು ಮಾರಾಟವಾಗಿದೆ!

ಅಷ್ಟೇ ಅಲ್ಲ. ಹಿಂದಿ, ಇಂಗ್ಲಿಷ್ ಸೇರಿದಂತೆ ಒಟ್ಟು ಆರು ಭಾಷೆಗಳಿಗೆ ಇದು ಅನುವಾದ ಆಗಲಿದೆ. ಈ ಪುಸ್ತಕದಲ್ಲಿನ ಆಶಯಗಳನ್ನು ಒಟ್ಟು ಹತ್ತು ಸಾವಿರ ಜನ ವಿದ್ಯಾರ್ಥಿಗಳು ಹಾಗೂ ಯುವಕರಿಗೆ ತಲುಪಿಸುವ ಆಶಯದೊಂದಿಗೆ ಆರಂಭವಾದ ‘ಸಂವಿಧಾನದ ಓದು ಅಭಿಯಾನ’ ಈಗ ಒಂದು ಲಕ್ಷ ಜನರನ್ನು ತಲುಪಬೇಕು ಎಂದು ಗುರಿ ವಿಸ್ತರಿಸಿಕೊಂಡಿದೆ.

ಈ ಪುಸ್ತಕವನ್ನು ಬರೆದವರು ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್. ಪುಸ್ತಕ ಪ್ರಕಟಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕೆರೆಕೋಣದ ‘ಸಹಯಾನ’ ಸಂಘಟನೆ. ‘ಯಾರೋ ಆಡಿದ ಮಾತು ಕೇಳಿಸಿಕೊಂಡು ಸಂವಿಧಾನದ ವಿರುದ್ಧ ಮಾತನಾಡುವವರಿಗೆ ಉತ್ತರ ನೀಡಬೇಕು, ವಿದ್ಯಾರ್ಥಿಗಳು ಹಾಗೂ ಯುವಜನರ ನಡುವೆ ಸಂವಿಧಾನದ ಓದು ನಡೆಯಬೇಕು ಎಂಬ ಉದ್ದೇಶದಿಂದ ಇದನ್ನು ಪ್ರಕಟಿಸಿದೆವು’ ಎನ್ನುತ್ತಾರೆ ಸಂಘಟನೆಯ ಕಾರ್ಯದರ್ಶಿ ವಿಠ್ಠಲ ಭಂಡಾರಿ.

ಈ ಪುಸ್ತಕದ ಮೊದಲ ಮುದ್ರಣದ ಅಷ್ಟೂ ಪ್ರತಿಗಳು ಬಿಡುಗಡೆ ಆದ ದಿನವೇ ಮಾರಾಟ ಆದವಂತೆ. ಧಾರವಾಡ ಜಿಲ್ಲೆಯ ರೈತರೊಬ್ಬರು ಪುಸ್ತಕದ 300ಕ್ಕೂ ಹೆಚ್ಚು ಪ್ರತಿಗಳನ್ನು ಖರೀದಿಸಿ, ಅದನ್ನು ಹಂಚುವ, ಉಡುಗೊರೆ ರೂಪದಲ್ಲಿ ಕೊಡುವ ಕೆಲಸ ಆರಂಭಿಸಿದ್ದಾರೆ. ಅದಕ್ಕಿಂತ ಹೆಚ್ಚಾಗಿ, ‘ಸಂವಿಧಾನ ವಿರೋಧಿ ಚಳವಳಿಯಲ್ಲಿ ಇದ್ದ ಯುವಕನೊಬ್ಬ ಈ ಪುಸ್ತಕವನ್ನು ಓದಿದ. ಓದಿದ ನಂತರ, ಸಂವಿಧಾನ ಸುಡಬೇಕು ಅನಿಸುವಂಥದ್ದು ಏನಿದೆ ಎಂದು ಪ್ರಶ್ನಿಸುತ್ತಿದ್ದಾನೆ’ ಎಂದು ಹೇಳುತ್ತಾರೆ ಭಂಡಾರಿ.

ಈ ಅಭಿಯಾನದ ಅಡಿ, ನೋಂದಣಿ ಮಾಡಿಸಿಕೊಂಡವರಿಗೆ ನಾಗಮೋಹನ ದಾಸ್ ಅವರು ತರಬೇತಿ ನೀಡುತ್ತಾರೆ. ಅವರಿಂದ ತರಬೇತಿ ಪಡೆದವರು ತಮ್ಮ ಊರುಗಳಿಗೆ ತೆರಳಿ, ಅಲ್ಲಿ ಕನಿಷ್ಠ 100 ಜನರಿಗೆ ಸಂವಿಧಾನದ ಕುರಿತು ಮಾಹಿತಿ ನೀಡಬೇಕು. ಇದು ಅಭಿಯಾನ ನಡೆಯುತ್ತಿರುವ ಬಗೆ. ಅವರು ಇದುವರೆಗೆ 11 ಜಿಲ್ಲೆಗಳಲ್ಲಿ ಇಂತಹ ತರಬೇತಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಇನ್ನೂ 13 ಜಿಲ್ಲೆಗಳಲ್ಲಿ ಕಾರ್ಯಕ್ರಮ ನಡೆಸುವವರಿದ್ದಾರೆ.

ಹಾಗೆಯೇ, ರಾಜ್ಯದ ಹಲವು ವಿಶ್ವವಿದ್ಯಾಲಯಗಳಲ್ಲಿ ಈ ರೀತಿಯ ತರಬೇತಿ ಕಾರ್ಯಕ್ರಮ ಆಯೋಜಿಸುವ ಉದ್ದೇಶ ‘ಸಹಯಾನ’ ಸಂಘಟನೆಗೆ ಇದೆ. ‘ಸಹಯಾನ’ದ ಈ ಕಾರ್ಯದಲ್ಲಿ ‘ಸಮುದಾಯ’ ಸಂಘಟನೆ ಕೂಡ ಪಾಲ್ಗೊಂಡಿದೆ. ‘ಈ ದೇಶ ಅರ್ಥವಾಗದೆ, ಸಂವಿಧಾನ ಅರ್ಥವಾಗದು. ಸಂವಿಧಾನ ಅರ್ಥವಾಗದಿದ್ದರೆ ಅದರ ಮೂಲ ತತ್ವಗಳನ್ನು ತಿಳಿದುಕೊಳ್ಳಲು ಆಗುವುದಿಲ್ಲ. ಸಂವಿಧಾನವನ್ನು ಓದಿ, ಅದರ ಆಶಯದಂತೆ ನಾವು ಬದುಕಬೇಕು ಎಂಬುದು ನಮ್ಮ ಆಶಯ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತೆ ಕೆ.ಎಸ್. ವಿಮಲಾ.

ಅಭಿಯಾನದ ಅಂಗವಾಗಿ ವಿವಿಧೆಡೆ ಸಂವಾದ ನಡೆಯುತ್ತಿವೆ. ಸಂವಾದದಲ್ಲಿ ಪಾಲ್ಗೊಳ್ಳುವ ಯುವಕರು ಕೇಳುತ್ತಿರುವ ಪ್ರಶ್ನೆಗಳಲ್ಲಿ ಕೆಲವು ಸಮಾನ ಅಂಶಗಳು ಇವೆ ಎನ್ನುತ್ತಾರೆ ಭಂಡಾರಿ. ‘ಅವರು ಹೆಚ್ಚಾಗಿ ಮೀಸಲಾತಿ, ಭ್ರಷ್ಟಾಚಾರ, ಕಾಶ್ಮೀರ ಸಮಸ್ಯೆ, ಸಂವಿಧಾನದ ತಿದ್ದುಪಡಿ ಕುರಿತ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ’ ಎನ್ನುವುದು ಅವರು ಕಂಡುಕೊಂಡಿರುವ ಸಮಾನ ಅಂಶಗಳು.

ಪುಸ್ತಕದ ಬಗ್ಗೆ
ಸಂವಿಧಾನದ ಮೂಲಭೂತ ಅಂಶಗಳನ್ನು, ಸಂವಿಧಾನದಲ್ಲಿ ಹೇಳಿರುವ ಪ್ರಮುಖ ಅಂಶಗಳನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಸಂವಿಧಾನ ರಚನೆಯ ಪ್ರಕ್ರಿಯೆ ಕುರಿತೂ ವಿವರಗಳು ಇವೆ. ‘ಸಂವಿಧಾನದ ವಿವಿಧ ವಿಧಿಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಪ್ರಶ್ನೆಗಳು ಮೂಡಬೇಕು. ಅವುಗಳಿಗೆ ಸಂಬಂಧಿಸಿದ ವ್ಯಾಖ್ಯಾನಗಳು ಇರುವ ಬರಹಗಳನ್ನು ಅವರೇ ಹುಡುಕಿ ಓದುವಂತೆ ಆಗಬೇಕು ಎಂಬ ಆಶಯ ಕೂಡ ನಮ್ಮಲ್ಲಿ ಇದೆ’ ಎನ್ನುತ್ತಾರೆ ವಿಮಲಾ. 

ಕೃತಿ: ಸಂವಿಧಾನದ ಓದು
ಲೇಖಕ: ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್
ಪ್ರಕಾಶನ: ಸಹಯಾನ- ಸಮುದಾಯ
ಪುಟ: 100
ಬೆಲೆ: ₹ 50

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !