ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ತ್ರೀವಾದ-ಅಂಚಿನಿಂದ ಕೇಂದ್ರದೆಡೆಗೆ | ತಾತ್ವಿಕ ಚಿಂತನೆಗೆ ಉತ್ತಮ ಆಕರ ಗ್ರಂಥ

Last Updated 9 ಜನವರಿ 2022, 2:53 IST
ಅಕ್ಷರ ಗಾತ್ರ

ಸ್ತ್ರೀವಾದ-ಅಂಚಿನಿಂದ ಕೇಂದ್ರದೆಡೆಗೆ
ಮೂಲ: ಬೆಲ್ ಹುಕ್ಸ್
ಕನ್ನಡಕ್ಕೆ: ಶ್ರೀಮತಿ ಎಚ್. ಎಸ್
ಪ್ರ: ಸಂಗಾತ ಪುಸ್ತಕ
ಸಂ: 9341757653

ನವ್ಯೋತ್ತರ ಸಾಹಿತ್ಯದ ಪ್ರಮುಖ ಚಿಂತನೆಗಳಲ್ಲಿ ಒಂದಾದ ಸ್ತ್ರೀವಾದದ ಅಧ್ಯಯನಕ್ಕೆ ಬೇಕಾದ ಮುಖ್ಯಆಕರಗ್ರಂಥಗಳನ್ನು ಕನ್ನಡ ಓದುಗರಿಗೆ ನೀಡಲು ಇತ್ತೀಚಿನ ವರ್ಷಗಳಲ್ಲಿ ವಿದ್ವತ್‌ಪೂರ್ಣವಾದ ಕೆಲಸಗಳನ್ನು ಮಾಡುತ್ತಿರುವವರು ವಿಮರ್ಶಕಿ ಡಾ.ಎಚ್‌.ಎಸ್‌.ಶ್ರೀಮತಿ. ಸ್ತ್ರೀವಾದವು ಕನ್ನಡ ಸಾಹಿತ್ಯ ಮತ್ತು ಪಿತೃ ಪ್ರಧಾನ ಚಿಂತನಾಕ್ರಮವನ್ನು ವಿಮರ್ಶಾತ್ಮಕವಾಗಿ ಹೊಸ ವ್ಯಾಖ್ಯಾನಗಳಿಗೆ ಒಳಪಡಿಸಿರುವಂತೆ ಆ ನಿಟ್ಟಿನಲ್ಲಿ ಜಾಗತಿಕ ಚಿಂತನಾಕ್ರಮಗಳನ್ನೂ ಸ್ತ್ರೀವಾದಿ ಬರಹಗಾರ್ತಿಯರನ್ನೂ ಕನ್ನಡಕ್ಕೆ ಪರಿಚಯಿಸಿದೆ. ಹಲವರು ಕೆಲಸ ಮಾಡುತ್ತಿರುವ ಕನ್ನಡದ ಈ ಚಳವಳಿಗೆ ಶ್ರೀಮತಿಯವರು ಅನುವಾದ ಹಾಗೂ ಸ್ವತಂತ್ರ ಸಂಗ್ರಹಗಳಿಂದ ಈಗಾಗಲೇ ಮಹತ್ತರ ಕೊಡುಗೆ ನೀಡಿದ್ದಾರೆ. ಸೆಕೆಂಡ್‌ ಸೆಕ್ಸ್‌ (ಸಿಮೊನ್‌ ದ ಬುವಾ), ಫೆಮಿನೈನ್‌ ಮಿಸ್ಟಿಕ್‌ (ಬೆಟ್ಟಿ ಫ್ರಿಡನ್‌) ಮುಂತಾದ ಅನುವಾದಗಳು; ‘ಸ್ತ್ರೀವಾದ: ಪಾರಿಭಾಷಿಕ ಕೋಶ’ ಅವುಗಳಲ್ಲಿ ಹೆಸರಿಸಲೇಬೇಕಾದ ಕೃತಿಗಳು.

ಅಮೆರಿಕದ ಬರಹಗಾರ್ತಿ ಸ್ತ್ರೀವಾದಿ ಕಾರ್ಯಕರ್ತೆ ‘ಬೆಲ್‌ ಹುಕ್ಸ್‌’ ಅವರ ‘ಸ್ತ್ರೀವಾದ–ಅಂಚಿನಿಂದ ಕೇಂದ್ರದೆಡೆಗೆ’(Feminist Theory from Margin to Centre) ಎಂಬ ಕೃತಿಯನ್ನೂ ಶ್ರೀಮತಿಯವರು ಕನ್ನಡಕ್ಕೆ ತಂದಿದ್ದಾರೆ.

ಅಮೆರಿಕದ ಕಪ್ಪು ಜನಾಂಗದವರಾದ ಗ್ಲೋರಿಯಾ ಜೀನ್ ವಾಟ್ಕಿನ್ಸ್‌ ತಮ್ಮ ಕಾವ್ಯನಾಮವಾಗಿ, ತಮ್ಮ ಅಜ್ಜಿಯ ಹೆಸರನ್ನು ಬಳಸಿದರು. ಅಮೆರಿಕದ ಬಿಳಿ ಜನಾಂಗದ ಸ್ತ್ರೀವಾದಕ್ಕಿಂತ ಕಪ್ಪು ಜನಾಂಗದ ಸ್ತ್ರೀವಾದ ಯಾಕೆ ಮತ್ತು ಹೇಗೆ ಭಿನ್ನ ಎಂಬುದನ್ನು ಕಾರಣ, ಉದಾಹರಣೆಗಳ ಸಹಿತ ತಾತ್ವಿಕವಾಗಿ ಪ್ರತಿಪಾದಿಸಿದರು. ಕನ್ನಡದಲ್ಲೂ ದಲಿತ ಸ್ತ್ರೀವಾದಿ ಚಿಂತನೆ ಬಗ್ಗೆ ಅರವಿಂದ ಮಾಲಗತ್ತಿ ಮೊದಲಾದವರು ಈಗಾಗಲೇ ಬರೆದಿದ್ದಾರೆ. ಈ ದೃಷ್ಟಿಯಿಂದಲೂ ಬೆಲ್‌ ಹುಕ್ಸ್‌ ಅವರ ಈ ಕೃತಿ ಕನ್ನಡತಾತ್ವಿಕಚಿಂತನೆಗೆಉತ್ತಮಆಕರಗ್ರಂಥವೊಂದನ್ನು ಒದಗಿಸಿದೆ.

ಅಂಚು ಇಲ್ಲದೆ ಸಮಗ್ರವಾಗುವುದಿಲ್ಲ. ಹಾಗೆ ಸಮಗ್ರದ ಭಾಗವಾಗಿದ್ದರೂ ಚೌಕಟ್ಟಿಗೆ ತಾಗಿಕೊಂಡು ಹೊರಗೆ ನಿಲ್ಲಬೇಕಾದ ಸ್ಥಿತಿ ಅಂಚಿನಲ್ಲಿರುವವರದು ಎಂಬುದನ್ನು ಹಲವುತಾತ್ವಿಕ, ಸಾಮಾಜಿಕ ಹಾಗೂ ನೇರವಾಗಿ ಕಂಡು ಅನುಭವಿಸಿದ ಬದುಕಿನ ಉದಾಹರಣೆಗಳಿಂದ ನೀಡುವ ಮೂಲಕ ಬೆಲ್‌ ಹುಕ್ಸ್‌ ತಮ್ಮ ಸಿದ್ಧಾಂತವನ್ನು ಪ್ರತಿಪಾದಿಸುತ್ತಾರೆ. ಅಕಡೆಮಿಕ್‌ ಅಧ್ಯಯನ ರೀತಿಯಲ್ಲಿ ಹಲವು ಆಕರಗಳ ಉಲ್ಲೇಖ, ತಾರ್ಕಿಕ ವಿರೋಧಗಳ ಮೂಲಕ ಅವರು ತಮ್ಮ ವಿಚಾರಗಳನ್ನು ಮಂಡಿಸುತ್ತಾರೆ.

ಸ್ತ್ರೀವಾದವನ್ನು ಈ ಕೃತಿ ಕಪ್ಪು ಜನಾಂಗದ ದೃಷ್ಟಿಯಿಂದ ವ್ಯಾಖ್ಯಾನಿಸುತ್ತದೆ. 1984ರಲ್ಲಿ ಪ್ರಕಟವಾದ ಈ ಕೃತಿಯಲ್ಲಿ ಆತನಕದ ಸ್ತ್ರೀವಾದಿ ಸಿದ್ಧಾಂತಗಳಲ್ಲಿ ಇದ್ದ ಮಿತಿಗಳನ್ನು ಅರಿತು ಹೊಸದಿಕ್ಕುಗಳನ್ನು ಗುರುತಿಸುವ ಪ್ರಯತ್ನವಿದೆ. ಜನಾಂಗೀಯ ಹೋರಾಟಗಳ ಉಪಯುಕ್ತ ಮಾದರಿಗಳನ್ನು ಈ ಕೃತಿ ಕನ್ನಡಕ್ಕೂ ಪರಿಚಯಿಸುತ್ತದೆ. ಸ್ತ್ರೀವಾದದ ತಾತ್ವಿಕತೆಯಂತೆ, ಸ್ತ್ರೀ ಸಮಾನತೆಯ ಹೋರಾಟದ ಕಾರ್ಯಕ್ರಮಗಳಿಗೂ ಬೇಕಾದ ಹಲವು ಪ್ರಾಯೋಗಿಕ ಸೂಚನೆಗಳು ಹಾಗೂ ವಿಶ್ಲೇಷಣೆಗಳು ಈ ಕೃತಿಯ ಮಹತ್ವದ ಅಂಶಗಳಾಗಿವೆ.

ಲೈಂಗಿಕತಾವಾದಿ ದಮನಗಳಿಗೆ ಕಾರಣವಾಗುವ ಮೂರು ಮುಖ್ಯ ಸಂಗತಿಗಳೆಂದರೆ (1) ಸಾಂಸ್ಥಿಕ ಮತ್ತು ಸಾಮಾಜಿಕ ರಚನೆಗಳು, (2) ದಬ್ಬಾಳಿಕೆ, ಶೋಷಣೆ ಮತ್ತು ದಮನಗಳನ್ನು ನಡೆಸುವ ವ್ಯಕ್ತಿಗಳು (3) ಸ್ವತಃ ದಮನಗಳಿಗೆ ಒಳಗಾಗುವವರು. ಅಂತಹ ದಮನಗಳನ್ನು ಎದುರಿಸುವವರ ಮನೋಭಾವ ಮತ್ತು ಸ್ವಭಾವ ಮಹಿಳೆಯರ ರಾಜಕೀಯ ಒಗ್ಗಟ್ಟಿನ ಮಹತ್ವವನ್ನು ಚರ್ಚಿಸುತ್ತಾ, ಈ ಮೂರರಿಂದ ಬಿಡಿಸಿಕೊಳ್ಳಲು ಬೇಕಾದತಾತ್ವಿಕಸಿದ್ಧಾಂತದೊಡನೆ ಅದಕ್ಕೆ ಬೇಕಾದ ಹೋರಾಟ ಕಾರ್ಯಕ್ರಮಗಳ ಅಗತ್ಯಗಳನ್ನೂ ಚರ್ಚಿಸುತ್ತದೆ.

ಈ ಕೃತಿಯನ್ನು ಶ್ರೀಮತಿಯವರು ‘ಅನುವಾದ’ ಎಂದು ಹೆಸರಿಸದೆ ‘ಕನ್ನಡ ಓದು’ ಎಂದಿದ್ದಾರೆ. ಅನುವಾದದ ಸಾಂಪ್ರದಾಯಿಕ ವ್ಯಾಖ್ಯಾನಗಳಿಗೆ ಹೊಂದುವಂತಹ ಅನುವಾದ ಇದಲ್ಲ. ಕನ್ನಡ ಸ್ತ್ರೀವಾದದ ಅಗತ್ಯಗಳಿಗೆ ಹೊಂದುವಂತೆ ವಿಚಾರಗಳ ವಿವರಗಳೂ ಸಂಕ್ಷಿಪ್ತ ಸಂಗ್ರಹ ಗುಣವೂ ಇಲ್ಲಿದೆ. ಅನುವಾದದಲ್ಲಿ ತನಗೆ ತಾನೇ ಅನುವಾದಕ ಸ್ಪಷ್ಟಪಡಿಸಿಕೊಳ್ಳುವ ಕ್ರಮವೂ ಅಂತರ್ಗತವಾಗಿರುತ್ತದೆ. ಶ್ರೀಮತಿಯವರು ಅನುವಾದದ ಈ ಗುಣವನ್ನು ವಿಸ್ತರಿಸಿಕೊಂಡು ಕನ್ನಡದ ಅಗತ್ಯಕ್ಕೆ ತಕ್ಕಂತೆ ಮೂಲಕೃತಿಯನ್ನು ವಿವರಿಸಿದ್ದಾರೆ. ಮೂಲದ ಅನುಕರಣೆಗಿಂತಲೂ ಹೆಚ್ಚು ಕನ್ನಡ ಓದಿನಲ್ಲಿ ಸಿಗಬೇಕಾದ ವೈಚಾರಿಕ ಸ್ಪಷ್ಟನೆಗೆ ಅನುವಾದಕಿ ಒತ್ತುಕೊಟ್ಟಿದ್ದಾರೆ. ಆದ್ದರಿಂದ ಇದು ಓದಿ ಅರ್ಥೈಸಿಕೊಂಡ ರೀತಿಯ ವಿಶಿಷ್ಟ ಅನುವಾದ. ಹಾಗಾಗಿ ಇದು ಅಮೆರಿಕದ ಜನಾಂಗೀಯ ಸ್ತ್ರೀವಾದವನ್ನು ವಿವರಿಸುವ ಕನ್ನಡ ಕೃತಿಯೊಂದನ್ನು ಓದಿದ ಅನುಭವ ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT