ಮಲಯಾಳ ಸಮಾಜ ಮತ್ತು ಸಂಸ್ಕೃತಿ ಹಾಗೂ ಇತರೆ ಪುಸ್ತಕಗಳು

ಗುರುವಾರ , ಮಾರ್ಚ್ 21, 2019
26 °C

ಮಲಯಾಳ ಸಮಾಜ ಮತ್ತು ಸಂಸ್ಕೃತಿ ಹಾಗೂ ಇತರೆ ಪುಸ್ತಕಗಳು

Published:
Updated:
Prajavani

ಮಲಯಾಳ ಸಮಾಜ ಮತ್ತು ಸಂಸ್ಕೃತಿ

ಲೇ: ಡಾ.ಮೋಹನ ಕುಂಟಾರ್

ಪ್ರ: ಯಾಜಿ ಪ್ರಕಾಶನ, ಹೊಸಪೇಟೆ

ಪುಟ: 204

ಬೆಲೆ: 200

ಕನ್ನಡ ಭಾಷೆಯಲ್ಲಿ ಕೇರಳದ ಸಂಸ್ಕೃತಿ ಕುರಿತು ಕಳೆದ ಎರಡು ದಶಕಗಳಿಂದ ಗಂಭೀರವಾದ ಅಧ್ಯಯನಗಳನ್ನು ಪ್ರಕಟಿಸುತ್ತಿರುವ ವಿದ್ವಾಂಸರ ಪೈಕಿ ಮೋಹನ ಕುಂಟಾರ್‌ ಕೂಡ ಒಬ್ಬರು. ಅವರ ‘ಮಲಯಾಳ ಸಮಾಜ ಮತ್ತು ಸಂಸ್ಕೃತಿ‘ ಪುಸ್ತಕ ಕೂಡ ಕೇರಳದ ಭಾಷೆ, ಸಾಹಿತ್ಯ, ಸಮಾಜ, ಧರ್ಮ ಮತ್ತು ರಂಗಭೂಮಿ ಬಗ್ಗೆ ಓದುಗರಿಗೆ ಅರಿವು ಮೂಡಿಸುತ್ತದೆ.

ಇಲ್ಲಿರುವ ಹತ್ತು ಲೇಖನಗಳಿಗೆ ಸಮಾಜಶಾಸ್ತ್ರೀಯ ಮತ್ತು ಸೌಂದರ್ಯಾತ್ಮಕ ನೆಲೆಗಟ್ಟು ಇದೆ. ಓದುಗರಿಗೆ ಕೇರಳದ ವಿಶಿಷ್ಟ ಸಂಸ್ಕೃತಿಯ ಹೊಸ ತಿಳಿವನ್ನು ಉಣಬಡಿಸುತ್ತವೆ. ಮಲಯಾಳ ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಕುತೂಹಲ ಹೊಂದಿದವರಿಗೆ, ಅಧ್ಯಯನಾಸಕ್ತರಿಗೆ ಇದು ಉಪಯುಕ್ತ ಕೃತಿ.

***‌

ಹೈದರಾಬಾದ ಕರ್ನಾಟಕದ ವಚನಸಾಹಿತ್ಯ ಚರಿತ್ರೆ

ಲೇ: ಡಾ.ಬಸವರಾಜ ಸಬರದ

ಪ್ರ: ಶ್ರೀಬಾಲಲೀಲಾ ಮಹಾಂತ ಶಿವಯೋಗೀಶ್ವರ ಗ್ರಂಥಮಾಲೆ

ಧಾರವಾಡ

ಪುಟ: 225 

ಬೆಲೆ: 150

ಧಾರವಾಡದ ಮುರುಘಾಮಠದ ಉಚಿತ ಪ್ರಸಾದ ನಿಲಯಕ್ಕೆ ನೂರು ವರ್ಷ ಸಾರ್ಥಕ ಸೇವೆ ಸಲ್ಲಿಸಿದ ಸಂಭ್ರಮ. ಇದರ ಶತಮಾನೋತ್ಸವದ ಅರ್ಥಪೂರ್ಣ ಯೋಜನೆಗಳಡಿ ಹಮ್ಮಿಕೊಂಡಿದ್ದ ಶತಮಾನೋತ್ಸವ ಪ್ರಕಟಣೆಯಡಿ ಈ ಪುಸ್ತಕವನ್ನು ಹೊರತರಲಾಗಿದೆ.

ಬಸವರಾಜ ಸಬರದ ಅವರು ಹೈದರಾಬಾದ್‌ ಕರ್ನಾಟಕ ಭಾಗದ ವಚನ ಸಾಹಿತ್ಯ ಚರಿತ್ರೆಯನ್ನು ಈ ಪುಸ್ತಕದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಬಸವಯುಗದ ವಚನಕಾರರು, ಬಸವೋತ್ತರ ಯುಗದ ವಚನಕಾರರು, ಆಧುನಿಕ ಯುಗದ ವಚನಕಾರರು ಮತ್ತು ಸಮಾರೋಪ ಹೀಗೆ ನಾಲ್ಕು ಅಧ್ಯಾಯಗಳಿವೆ. ರಾಯಚೂರು, ಕೊಪ್ಪಳ, ಕಲಬುರ್ಗಿ, ಬೀದರ್‌, ಯಾದಗಿರಿಯ ಜಿಲ್ಲೆಯ ಪ್ರಾತಿನಿಧಿಕ ವಚನಕಾರರನ್ನು ಆಯ್ದು ಅವರ ಸಂಕ್ಷಿಪ್ತ ಪರಿಚಯವನ್ನೂ ಕೊಡಲಾಗಿದೆ.

***

ಆರ್ಯವೀರ್ಯ

(ಕಥಾ ಸಂಕಲನ)

ಡಾ.ಕೆ.ಎನ್‌. ಗಣೇಶಯ್ಯ

ಪುಟ152

ಬೆಲೆ: 150

ಆರ್ಯ ವೀರ್ಯ ಮಿನಿ ಕಾದಂಬರಿ ಅಥವಾ ಸುದೀರ್ಘ ನೀಳ್ಗತೆ ಎನಿಸಿಕೊಳ್ಳಬಲ್ಲ ಗಾತ್ರದ ಕಥನ. ಹಿಟ್ಲರ್‌ ಕಾಲದ ಶುದ್ಧ ಆರ್ಯತನವನ್ನೇ ಹುಡುಕಿಕೊಂಡು ಹೊರಟ ಕಥೆಯಿದು. ಮಾನವೀಯತೆಯ ಮೇಲಿನ ದೌರ್ಜನ್ಯದ ಹಿಂದಿನ ವಾಂಛೆ, ಬಳಸಿಕೊಳ್ಳುವ ಗುಣ, ಒಂದು ಜನಾಂಗದ ದುರ್ಬಳಕೆ, ಮಹಿಳೆಯರನ್ನು ಹೆರುವ ಯಂತ್ರವಾಗಿಸಿದ್ದು, ಅದೆಲ್ಲಕ್ಕೂ ಇತಿಹಾಸ ಸುಮ್ಮನೆ ಸಾಕ್ಷಿಯಾಗಿದ್ದು, ಇವೆಲ್ಲವನ್ನೂ ಒಳಗೊಂಡ ಕಥೆ ಆರ್ಯ ವೀರ್ಯ.

ಗೌರಿಹತ್ಯೆಯ ಹಿಂದಿನ ಥಿಂಕ್‌ ಟ್ಯಾಂಕರ್ಸ್‌ಗಳನ್ನೇ ಕಥೆಯ ಮೂಲವಾಗಿರಿಸಿಕೊಂಡು ಹೆಣೆದಿರುವ ಕಥೆ ಚಿಂತನಾಬೊಗುಣಿ. ರುಂಡ ಕಸಿ ಮಾಡಿದ ವೈಜ್ಞಾನಿಕ ಪ್ರಯೋಗವನ್ನು ಆಧಾರವಾಗಿಸಿಕೊಂಡು ಬರೆದಿರುವ ರುಂಡ ಗಂಡ ಕಥೆಗಳು ಈ ಸಂಕಲನದಲ್ಲಿವೆ. ಚಳಿಗಾಲದ ಇಳಿಸಂಜೆಯನ್ನು ಬಿಸಿಚಹಾ ಗುಟುಕರಿಸುತ್ತ, ಕೂಡಲೇ ಓದಿ ಮುಗಿಸಿದ ಆನಂದ ನೀಡುವಂಥ ಸಣ್ಣ ಓದಿಗೆ ಇವೆರಡೂ ಕಥೆಗಳು ಹೇಳಿ ಮಾಡಿಸಿದಂತಿವೆ. ಕೊನೆಯವರೆಗೂ ಆಸಕ್ತಿಯನ್ನುಳಿಸಿಕೊಳ್ಳುವ ಗಟ್ಟಿಬರಹ ಗಣೇಶಯ್ಯನವರ 18ನೇ ಪುಸ್ತಕದಲ್ಲಿಯೂ ಮುಂದುವರಿದಿದೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !