ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಕೆಶಿ ಸಹೋದರರ ಪ್ರತಿಕೃತಿ ದಹನ: ವಿಷ ಸೇವನೆ

ಡಿಬಿಆರ್ಗೆ ಟಿಕೆಟ್‌ ತಪ್ಪಿದ್ದಕ್ಕೆ ಆಕ್ರೋಶ
Last Updated 16 ಏಪ್ರಿಲ್ 2018, 11:29 IST
ಅಕ್ಷರ ಗಾತ್ರ

ಕುಣಿಗಲ್: ಸಚಿವ ಡಿ.ಕೆ.ಶಿವಕುಮಾರ್‌, ಸಂಸದ ಡಿ.ಕೆ.ಸುರೇಶ್ ಅವರು ತಮ್ಮ ಸಂಬಂಧಿ ಡಾ. ರಂಗನಾಥ್ ಅವರಿಗೆ ಟಿಕೆಟ್  ಕೊಡಿಸುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ ಮುಖಂಡ ಬಿ.ಬಿ.ರಾಮಸ್ವಾಮಿ ಗೌಡ (ಬಿಬಿಆರ್‌) ಅವರ ಬೆಂಬಲಿಗರು ಪಟ್ಟಣದಲ್ಲಿ ಭಾನುವಾರ ಅರೆಬೆತ್ತಲೆ ಮೆರವಣಿಗೆ ನಡೆಸಿದರು. ಡಿಕೆಶಿ ಸಹೋದರರ ಪ್ರತಿಕೃತಿ ದಹಿಸಿದರು. ಇಬ್ಬರು ಬೆಂಬಲಿಗರು ವಿಷ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿದರು. ರಾತ್ರಿ ಪ್ರಕಟವಾದ ಕಾಂಗ್ರೆಸ್‌ ಪಟ್ಟಿಯಲ್ಲಿ ರಾಮಸ್ವಾಮಿ ಗೌಡ ಅವರಿಗೆ ಟಿಕೆಟ್‌ ಕೈ ತಪ್ಪಿರುವುದು ದೃಢವಾಯಿತು.

ನಿಂಗರಾಜು ಎಂಬುವವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದಾಗ ಕೆಲವರು ತಡೆದರು. ತಕ್ಷಣ ಪೊಲೀಸರು ಅವರನ್ನು ಆಸ್ಪತ್ರೆಗೆ ಸಾಗಿಸಿದರು. ಸಂತೋಷ್ ಎಂಬುವವರು ಕಚೇರಿ ಮುಂಭಾಗದ ಓವರ್‌ಹೆಡ್ ಟ್ಯಾಂಕ್ ಮೇಲೆ ಹತ್ತಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದರು. ನಂತರ ಅವರನ್ನು ಉಪಾಯದಿಂದ ಕೆಳಗಿಳಿಸಲಾಯಿತು. ನಂತರ ಅವರೂ ವಿಷ ಸೇವಿಸಿದರು. ಅವರನ್ನು ಆಸ್ಪತ್ರೆಗೆ ದಾಖಲಿಸಿ, ಪ್ರಥಮ ಚಿಕಿತ್ಸೆಯ ನಂತರ ಬೆಂಗಳೂರಿಗೆ ಕಳುಹಿಸಲಾಯಿತು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡ ಶಿವಣ್ಣ ಗೌಡ, ’ತಾಲ್ಲೂಕಿನಲ್ಲಿ 40 ವರ್ಷಗಳಿಂದ ಪಕ್ಷವನ್ನು ಕಟ್ಟಿ ಬೆಳೆಸಿದ ಮಾಜಿ ಶಾಸಕ ಬಿಬಿಆರ್‌ ಅವರಿಗೆ ದೊರೆಯಬೇಕಾಗಿದ್ದ ಟಿಕೆಟ್ ಅನ್ನು ಡಿಕೆಶಿ ಸಹೋದರರು ತಪ್ಪಿಸಿದ್ದಾರೆ. ಟಿಕೆಟ್‌ ನೀಡದಿದ್ದರೆ ಪ್ರತಿ ಗ್ರಾಮ ಪಂಚಾಯಿತಿ ಮುಂದೆಯೂ ಪ್ರತಿಭಟನೆ ಮಾಡಲಾಗುವುದು’ ಎಂದು ಹೇಳಿದರು.

’ಡಿಕೆಶಿ ಸಹೋದರರು ದೆಹಲಿಯಲ್ಲಿ ಕುಳಿತು, ಬಿಜೆಪಿಗೆ ಸೇರುವಂತೆ ಬಿಬಿಆರ್ ಅವರಿಗೆ ಸಲಹೆ ನೀಡಿದ್ದಾರೆ. ಬಿಜೆಪಿ ಏಜೆಂಟರಂತೆ ವರ್ತಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ಮುಖಂಡರಾದ ತಮ್ಮಣ್ಣ, ರಾಜಣ್ಣ, ಶ್ರೀನಿವಾಸ್, ಹೇರೂರು ಶಂಕರ್, ಬಾಬು, ಕೇಶವ್, ವಿನೋದ್‌ ಗೌಡ, ಹರೀಶ್, ಶಿವಣ್ಣ ಇದ್ದರು.

ಟಿಕೆಟ್ ಗದ್ದಲ ಇದೇ ಮೊದಲಲ್ಲ

ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದಾಗ ಆಕಾಂಕ್ಷಿಗಳು ದಾಂಧಲೆ ನಡೆಯುತ್ತಿರುವುದು ಕ್ಷೇತ್ರದಲ್ಲಿ ಇದೇ ಮೊದಲಲ್ಲ. ಈ ಹಿಂದೆ ಎಸ್.ಪಿ.ಮುದ್ದಹನುಮೇಗೌಡ ಅವರಿಗೆ ಟಿಕೆಟ್ ಕೈ ತಪ್ಪಿ ಕೆ.ಲಕ್ಕಪ್ಪ ಅವರಿಗೆ ದೊರೆಯಿತು. ನಾಮಪತ್ರ ಸಲ್ಲಿಕೆಗೆ ಬಂದಾಗ ವಾಹನಗಳ ಮೇಲೆ ಕಲ್ಲು ತೂರಿ, ಬೆಂಕಿ ಹಚ್ಚುವ ಪ್ರಯತ್ನಗಳು ನಡೆದಿದ್ದವು. ಲಕ್ಕಪ್ಪ ತಮ್ಮ ಚತುರತೆಯಿಂದ ನಾಮಪತ್ರ ಸಲ್ಲಿಸಿ ಚುನಾವಣೆಯಲ್ಲಿ ಗೆದ್ದದ್ದು ಇತಿಹಾಸ.

ಕುಣಿಗಲ್ ಮತ್ತು ಹುಲಿಯೂರುದುರ್ಗ ವಿಧಾನಸಭಾ ಕ್ಷೇತ್ರಗಳು ಒಂದಾಗಿ ಕುಣಿಗಲ್ ಕ್ಷೇತ್ರಕ್ಕೆ ಬಿ.ಬಿ.ರಾಮಸ್ವಾಮಿಗೌಡ ಮತ್ತು ಎಸ್.ಪಿ.ಮುದ್ದಹನುಮೇಗೌಡ ಅವರ ನಡುವೆ ಕೈ ಟಿಕೆಟ್‌ಗಾಗಿ ಪೈಪೋಟಿ ನಡೆದು ಬಿಬಿಆರ್ ಅವರಿಗೆ ಟಿಕೆಟ್ ದೊರೆತಾಗ ಅಸಮಾಧಾನಗೊಂಡ ಮುದ್ದಹನುಮೇಗೌಡರ ಬೆಂಬಲಿಗರು ಟೈರ್‌ಗಳಿಗೆ ಬೆಂಕಿ ಹಚ್ಚಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT