ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ತ್ಯಾಗವೇ ಎಲ್ಲ, ಮತ್ತೇನಿಲ್ಲ...

Last Updated 13 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಎಪ್ಪತ್ತು ಎಂಬತ್ತರ ದಶಕದಲ್ಲಿ ರಾಜ್ಯದಲ್ಲಿ ರೂಪುಗೊಂಡ ‘ದಲಿತ ಚಳವಳಿ’ ದಲಿತರಿಗೆ ಆತ್ಮವಿಶ್ವಾಸದ ಬದುಕನ್ನು ದೊರಕಿಸಿಕೊಡಲು ಹಂಬಲಿಸುವುದರ ಜೊತೆಗೆ, ಆಧುನಿಕ ಕರ್ನಾಟಕದ ವೈಚಾರಿಕತೆಗೆ ಹೊಸ ಆಯಾಮವೊಂದನ್ನು ನೀಡಿತು ಹಾಗೂ ಸಮಾಜವನ್ನು ಹೆಚ್ಚು ಮಾನವೀಯಗೊಳಿಸಲು ಪ್ರಯತ್ನಿಸಿತು. ಈ ಚಳವಳಿಯ ಆಶಯಗಳನ್ನು ಕಾರ್ಯರೂಪಕ್ಕೆ ತರುವುದಕ್ಕಾಗಿ ರೂಪುಗೊಂಡ ‘ದಲಿತ ಸಂಘರ್ಷ ಸಮಿತಿ’ (ಡಿಎಸ್‌ಎಸ್‌) ದಲಿತರ ಆಶೋತ್ತರಗಳಿಗೆ ಧ್ವನಿಯಾಗುವ ಪ್ರಯತ್ನ ನಡೆಸಿತು. ‘ಡಿಎಸ್‌ಎಸ್‌’ ಬೆಳವಣಿಗೆಯ ಹಿಂದೆ ಹಲವಾರು ನಾಯಕರ ಕನಸುಗಳಿವೆ, ಅವಿಶ್ರಾಂತ ದುಡಿಮೆಯಿದೆ. ಅಂಥ ನಾಯಕರಲ್ಲೊಬ್ಬರು ಬಿ.ವಿ. ಚಂದ್ರಪ್ರಸಾದ್‌ ತ್ಯಾಗಿ.

ದಲಿತ ಸಂಘಟನೆಗೆ ಮಹತ್ವದ ಕೊಡುಗೆ ನೀಡಿದ್ದರೂ, ಚಳವಳಿಯ ಆಚೆಗೆ ಹೆಚ್ಚೇನೂ ಪರಿಚಿತ ಮುಖವಲ್ಲದ ತ್ಯಾಗಿ ಅವರ ವ್ಯಕ್ತಿತ್ವ–ಸಾಧನೆಯನ್ನು ದಾಖಲಿಸುವ ಮಹತ್ವಾಕಾಂಕ್ಷೆಯ ಪ್ರಯತ್ನ ‘ತ್ಯಾಗಿ’ ಕೃತಿ. ಪ್ರೊ. ಎಂ.ಎಸ್‌. ಶೇಖರ್‌, ಎಸ್‌. ನರೇಂದ್ರಕುಮಾರ್‌, ಅಪ್ಪಗೆರೆ ಸೋಮಶೇಖರ್‌ ಸಂಪಾದಿಸಿರುವ ಈ ಪುಸ್ತಕವನ್ನು ತ್ಯಾಗಿ ಅವರ ಬದುಕಿನ ಜೊತೆಗೆ ದಲಿತ ಚಳವಳಿ ಸಾಗಿಬಂದ ಹಾದಿಯ ಅವಲೋಕನವಾಗಿಯೂ ನೋಡಲಿಕ್ಕೆ ಸಾಧ್ಯವಿದೆ.

ತ್ಯಾಗಿ ಅವರ ಬದುಕು ಹಾಗೂ ದಲಿತ ಚಳವಳಿಯನ್ನು ಪ್ರತ್ಯೇಕವಾಗಿ ನೋಡುವುದು ಸಾಧ್ಯವಿಲ್ಲ. ಆರ್ಥಿಕ ಭದ್ರತೆಯ ಕೆಲಸ ಹಾಗೂ ಕುಟುಂಬದ ನೆಮ್ಮದಿಗಿಂತ ಸಂಘಟನೆಯ ಕೆಲಸವೇ ಹೆಚ್ಚು ಮುಖ್ಯವಾದುದು ಎಂದು ನಂಬಿದವರು ತ್ಯಾಗಿ. ವೈಯಕ್ತಿಕ ಬದುಕಿಗಿಂತಲೂ ಸಾರ್ವಜನಿಕ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದರಿಂದಲೇ ‘ತ್ಯಾಗಿ’ ಎನ್ನುವ ಹೆಸರುನಾಮಪದವಾಗಿಯಷ್ಟೇ ಉಳಿಯದೆ ಅನ್ವರ್ಥನಾಮವಾಗಿ ಪರಿಣಮಿಸಿದೆ ಹಾಗೂ ಚಳವಳಿಯೊಂದು ಅಪೇಕ್ಷಿಸುವ ಮೌಲ್ಯದ ಸಂಕೇತವಾಗಿದೆ.

ಬಡ ದಲಿತ ಕುಟುಂಬದಲ್ಲಿ ಜನಿಸಿದ ಚಂದ್ರಪ್ರಸಾದ್‌ ತ್ಯಾಗಿ, ಕುಟುಂಬದ ತ್ಯಾಗದ ಫಲವಾಗಿ ವಿದ್ಯಾವಂತರಾಗಿ ಭದ್ರಾವತಿಯ ಕಬ್ಬಿಣ ಕಾರ್ಖಾನೆಯಲ್ಲಿ ಕಾರ್ಮಿಕರಾಗಿ ಸೇರ್ಪಡೆಗೊಂಡರು. ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ಅಸ್ಪೃಶ್ಯತೆಯ ವಿರುದ್ಧದ ಹೋರಾಟಗಳಲ್ಲಿ ತೊಡಗಿಕೊಂಡಿದ್ದರೂ, ಅವರೊಳಗಿನ ನಾಯಕತ್ವದ ಶಕ್ತಿ ಪ್ರಕಟಗೊಳ್ಳಲು ಹಾಗೂ ದಲಿತ ಚಿಂತನೆಗಳಿಗೆ ತಾತ್ವಿಕ ಆಯಾಮ ದೊರೆಯಲು ಕಾರ್ಖಾನೆಯ ಪರಿಸರ ಅವಕಾಶ ಕಲ್ಪಿಸಿತು. ಕಾರ್ಖಾನೆಯ ಎಲ್ಲ ವಿಭಾಗಗಳಲ್ಲಿ ಆಚರಣೆಗೊಳ್ಳುತ್ತಿದ್ದ ಅಸ್ಪೃಶ್ಯತೆಯನ್ನು ವಿರೋಧಿಸುವ ದನಿಗಳೊಂದಿಗೆ ತ್ಯಾಗಿ ಸೇರಿಕೊಂಡರು.

ಬಿ. ಕೃಷ್ಣಪ್ಪನವರು ತ್ಯಾಗಿಯವರನ್ನು ಕಬ್ಬಿಣದ ಮನುಷ್ಯನನ್ನಾಗಿಸಿ ಭದ್ರಾವತಿಯಿಂದ ಹಾಸನಕ್ಕೆ ಕಳಿಸಿದರು ಎನ್ನುವುದು ತ್ಯಾಗಿಯವರ ಬಗ್ಗೆ ಅವರ ಸಹೋದ್ಯೋಗಿಯಾಗಿದ್ದ ಎನ್‌. ಗಿರಿಯಪ್ಪನವರು ಹೇಳುವ ಮಾತು. ಅಸ್ಪೃಶ್ಯತೆ ಸಮಾಜದಲ್ಲಿ ಸಹಜ ಹಾಗೂ ಅನಿವಾರ್ಯ ಎಂದು ನಂಬಿರುವವರು ಈಗಲೂ ಇರುವ ಸಂದರ್ಭದಲ್ಲಿ, ಐದು ದಶಕಗಳ ಹಿಂದೆ ದಲಿತರ ಹಕ್ಕುಗಳಿಗಾಗಿ ಧ್ವನಿ ಎತ್ತುವವರು ಕಬ್ಬಿಣದ ಮನುಷ್ಯರಾಗಿರಲೇಬೇಕು. ಜೀವಭಯದ ಸಂದರ್ಭದಲ್ಲೂ ಸಂಘಟನೆಯ ಕೆಲಸವನ್ನು ಕೈಬಿಡದ ಅವರು, ನಂಬಿ ನಡೆದದ್ದು ಮಾತ್ರ ಅಪ್ಪಟ ಮಾನವೀಯತೆಯನ್ನು. ದಲಿತರಿಂದ ಬೇರೆಯವರಿಗೆ ಅನ್ಯಾಯವಾದಾಗ ಅದರ ವಿರುದ್ಧವೂ ದನಿ ಎತ್ತುತ್ತಿದ್ದ ಅವರ ಮನೋಭಾವದಲ್ಲಿ ಎಲ್ಲರನ್ನೂ ಒಳಗೊಳ್ಳುವ ಆಶಯವನ್ನು ಗಮನಿಸಬಹುದು.

‘ತ್ಯಾಗಿಯವರ ಜೊತೆ ಕೆಲಸ ಮಾಡಿರೋದೆ ನನ್ನಬದುಕಿನ ಅಮೂಲ್ಯ ಕ್ಷಣ’ ಎನ್ನುವುದು ಕೆ.ಟಿ.
ಶಿವಪ್ರಸಾದ್‌ ಅವರ ಉದ್ಗಾರ. ಸಮ ಸಮಾಜದ ಕಾಳಜಿಯುಳ್ಳ ಶಿವಪ್ರಸಾದ್‌ರಂಥ ಬೇರೆ ಬೇರೆ ಹಿನ್ನೆಲೆಯವರು ದಲಿತ ಚಳವಳಿಗೆ ಸೇರುವಲ್ಲಿ ತ್ಯಾಗಿ ಅವರ ಒತ್ತಾಸೆಯಿದೆ.

ದಲಿತರಿಗೆ ಭೂಮಿ ಕೊಡಿಸಲು ನಡೆಸಿದ ಹೋರಾಟಗಳನ್ನು ತ್ಯಾಗಿ ಅವರ ಪ್ರಮುಖ ಸಾಧನೆಯಾಗಿ ಗುರ್ತಿಸಲಾಗುತ್ತದೆ. ದಲಿತರ ಜೀವನದಲ್ಲಿ ಭೂಮಿ ಎಷ್ಟು ಮುಖ್ಯವಾದುದು ಎನ್ನುವುದಕ್ಕೆ ಅವರಿಗೆ ಅವರ ತಂದೆಯದೇ ಉದಾಹರಣೆಯಿತ್ತು. ಭೂಮಿ ಪಡೆಯಲು ಕಾನೂನು ಹೋರಾಟ ನಡೆಸಿದ್ದ ಅವರು, ತಮ್ಮ ಭೂಮಿಯಲ್ಲಿ ತರಕಾರಿ ಬೆಳೆಯುತ್ತಿದ್ದರು. ಅಪ್ಪನ ಭೂಮಿಯ ಹಂಬಲ, ದಲಿತರಿಗೆ ಶಾಪವಿಮೋಚನೆಯ ರೂಪದಲ್ಲಿ ತ್ಯಾಗಿಯವರಿಗೆ ಕಂಡಿರಬೇಕು. ಭೂಮಿಯಿಲ್ಲದ ಅನೇಕ ದಲಿತರಿಗೆ ಭೂಮಿಯನ್ನು ದೊರಕಿಸಿ
ಕೊಡಲು ಅವರು ಪ್ರಯತ್ನಿಸಿದರು. ಸಿದ್ಲಿಪುರ, ಕಾಳನಕಟ್ಟೆ, ಬಿದರೆಕಾವಲು, ಗಂಗೂರು ಸೇರಿದಂತೆ ಹಲವೆಡೆ ಭೂ ಹೋರಾಟಗಳನ್ನು ಸಂಘಟಿಸಿದರು. ಕಾಫಿತೋಟದ ಕೂಲಿ ಕಾರ್ಮಿಕರ ಹಕ್ಕುಗಳಿಗೆ ದನಿಯಾಗಿ ಹೋರಾಟ ನಡೆಸಿದರು.

ಅತಂತ್ರ ಪರಿಸ್ಥಿತಿಯಲ್ಲಿ ಸಮಾಜದ ಓರೆಕೋರೆಗಳ ಬಗ್ಗೆ ಯೋಚಿಸಲು ಹಾಗೂ ಅವುಗಳನ್ನು ಸರಿಪಡಿಸಲು ಶ್ರಮಿಸಿದ ತ್ಯಾಗಿ, ತಮ್ಮ ಜೀವನದ ಕೊನೆಯ ದಿನಗಳನ್ನೂ ಸಂಕಷ್ಟದಲ್ಲಿಯೇ ಕಳೆದುದನ್ನು ಸ್ವಯಂಕೃತಾಪರಾಧ ಎನ್ನುವುದೋ ಚರಿತ್ರೆಯ ವ್ಯಂಗ್ಯ ಎನ್ನುವುದೋ? ಬದುಕಿನ ಕೊನೆಯ ವರ್ಷಗಳಲ್ಲಿ ಸ್ಲಂ ಬೋರ್ಡ್‌ ಅಧ್ಯಕ್ಷರಾಗಿ ತ್ಯಾಗಿ ಕಾರ್ಯ ನಿರ್ವಹಿಸಿದ್ದನ್ನು ಕೆಲವರು ಅವರ ಹೋರಾಟದ ಬದುಕಿನಲ್ಲಿನ ಹಿನ್ನಡೆ, ತಪ್ಪು ನಡೆ ಎಂದು ಸೂಚ್ಯವಾಗಿ ಅಭಿಪ್ರಾಯಪಟ್ಟಿದ್ದಾರೆ. ಆ ಟೀಕೆ ಎಷ್ಟರಮಟ್ಟಿಗೆ ಸರಿಯೆನ್ನುವುದು ಚರ್ಚಾಸ್ಪದ. ಚಳವಳಿಗಾಗಿ ಕೆಲಸವನ್ನೇ ಬಿಟ್ಟುಬಂದ ವ್ಯಕ್ತಿ, ಕೊನೆಗೊಮ್ಮೆ ಅಧಿಕಾರ ಕೇಂದ್ರವೊಂದನ್ನು ಒಪ್ಪಿಕೊಂಡಿದ್ದನ್ನು ತಪ್ಪೆಂದು ಹೇಳುವುದು ದುಬಾರಿ ನಿರೀಕ್ಷೆಯೆನ್ನಿಸುತ್ತದೆ ಹಾಗೂ ಹೀಗೆ ವಿಶ್ಲೇಷಿಸುವಾಗ ನಾವು ನಿಂತ ನೆಲವನ್ನೂ ವಿಮರ್ಶೆಗೊಡ್ಡುವುದು ಅನಿವಾರ್ಯವಾಗುತ್ತದೆ.

ತ್ಯಾಗಿ ಅವರನ್ನು ‘ಜನಪದ ವ್ಯಕ್ತಿ’ ಎನ್ನುವ ಎಚ್‌. ಗೋವಿಂದಯ್ಯನವರು, ನೋವನ್ನು ಸೃಜನಶೀಲಗೊಳಿಸುವ ಶಕ್ತಿ ಅವರಲ್ಲಿತ್ತು ಎಂದು ಗುರ್ತಿಸಿದ್ದಾರೆ. ಮಾತುಗಳಿಂದ, ಹಾಡುಗಳಿಂದ ಜನರನ್ನು ಸೆಳೆಯುತ್ತಿದ್ದ ಅವರೊಬ್ಬ ಅಪೂರ್ವ ಸಂಘಟಕರಾಗಿದ್ದರು ಎನ್ನುವುದಕ್ಕೆ ‘ತ್ಯಾಗಿ’ ಕೃತಿಯ ಬರಹಗಳು ಉದಾಹರಣೆಯಾಗಿವೆ. ಇನ್ನೂರು ವರ್ಷಗಳ ಹಿಂದೆ ತ್ಯಾಗಿ ಹುಟ್ಟಿದ್ದರೆ ಅವರು ಲೆಜೆಂಡ್‌ಆಗುತ್ತಿದ್ದರು. ಅವರ ಬಗ್ಗೆ ದಂತಕಥೆಗಳು, ಲಾವಣಿಗಳು ಹುಟ್ಟಿಕೊಳ್ಳುತ್ತಿದ್ದವು ಎಂದು ದೇವನೂರ ಮಹಾದೇವ ಅಭಿಪ್ರಾಯಪಟ್ಟಿದ್ದಾರೆ. ಈ ಸಂಕಲನದ ಎಲ್ಲ ಬರಹಗಳೂ ದೇವನೂರರ ಮಾತನ್ನು ಸಮರ್ಥಿಸುವಂತಿವೆ. ಸಾಗಿ ಬಂದ ಹಾದಿಯ ಅವಲೋಕನದ ಬಗ್ಗೆ ಅಷ್ಟೇನೂ ಗೌರವವಿಲ್ಲದಂತೆ ಕಾಣಿಸುವ ಸಮಕಾಲೀನ ಸಂದರ್ಭದಲ್ಲಿ ತ್ಯಾಗಿ ಅವರವ್ಯಕ್ತಿತ್ವ–ಸಾಧನೆಯನ್ನು ಗುರ್ತಿಸುವ ಹಂಬಲದ ಈ ಕೃತಿನಾಡಿನ ಚಳವಳಿ ಪರಂಪರೆಯ ಪ್ರಮುಖ ಘಟ್ಟವೊಂದರ ದಾಖಲೆಯೂ ಹೌದು. ದಲಿತ ಚಳವಳಿಯನ್ನು ಪುನಶ್ಚೇತನಗೊಳಿಸುವ ಕನಸುಗಳು ನನಸಾಗುವುದಕ್ಕೆ ಇಂಥ ಕೃತಿಗಳು ಪ್ರೇರಣೆಯಾಗಬಲ್ಲವು.

ಪುಸ್ತಕದಲ್ಲಿ ಕಿಕ್ಕಿರಿದಿರುವ ಬರಹಗಳು ಸಂಪಾದಕರ ಶ್ರಮ ಹಾಗೂ ಬದ್ಧತೆಯನ್ನು ಸೂಚಿಸುವಂತಿವೆ. ತ್ಯಾಗಿ ಅವರ ಬದುಕಿನ ಅನುಕ್ರಮಣಿಕೆ ಇಲ್ಲದಿರುವುದು ಈ ಕೃತಿಯ ಕೊರತೆಗಳಲ್ಲೊಂದು. ಬಿಡಿ ಬಿಡಿ ಲೇಖನಗಳ ಮೂಲಕ ಜೀವನಕಥೆ ಕಟ್ಟಿಕೊಳ್ಳಬಹುದಾದರೂ, ಅವರ ಬದುಕಿನ ಕಥೆಯನ್ನು ಯಾರಾದರೊಬ್ಬರು ಸಂಕ್ಷಿಪ್ತವಾಗಿ ನಿರೂಪಿಸಬಹುದಿತ್ತು. ಛಾಯಾಚಿತ್ರಗಳ ಸಂಪುಟವನ್ನು ಪ್ರತ್ಯೇಕವಾಗಿ ರೂಪಿಸಬಹುದಿತ್ತು. ‘ಇಲ್ಲ’ಎನ್ನುವ ಈ ಕೊರತೆಗಳು ತ್ಯಾಗಿ ಅವರ ಪುಸ್ತಕಕ್ಕೆಸಂಬಂಧಿಸಿದಂತೆ ಅರ್ಥಪೂರ್ಣವೂ ಆಗಿರ
ಬಹುದೇನೊ? ಏಕೆಂದರೆ, ಸಂಘರ್ಷಗಳಲ್ಲೇ ಮುಳುಗಿಹೋದ ನಾಯಕರ ಬದುಕು ಅನುಕ್ರಮಣಿಕೆಯ ಸುವ್ಯವಸ್ಥೆಗೆ ದಕ್ಕುವಂತಿರಬೇಕು ಎಂದು ನಿರೀಕ್ಷಿಸುವುದೂ ಅಸಂಗತ ಅಪೇಕ್ಷೆಯಾಗಿರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT