ಬುಧವಾರ, ಸೆಪ್ಟೆಂಬರ್ 29, 2021
20 °C

ಒಳನೋಟ: ‘ಕಾಳುಮೆಣಸಿನ ರಾಣಿ’ಯ ಅನನ್ಯ ಕಥನ

ಅರುಣ್ Updated:

ಅಕ್ಷರ ಗಾತ್ರ : | |

Prajavani

ಚೆನ್ನಭೈರಾದೇವಿ
ಲೇ: ಗಜಾನನ ಶರ್ಮ
ಪ್ರ: ಅಂಕಿತ ಪುಸ್ತಕ
ಸಂ: 080–2661 7100/ 2661 7755

ಐತಿಹಾಸಿಕ ಕಾದಂಬರಿಗಳೆಂದರೆ ಹಿಂದೆಂದೋ ನಡೆದ ಬದುಕನ್ನು, ಘಟನೆಗಳನ್ನು ಸಾಧ್ಯವಿರುವ ಎಲ್ಲ ಆಕರಗಳಿಂದ ಹೊರತೆಗೆದು ಕೃತಿಕಾರ ತನ್ನ ಕಲ್ಪನೆಯ ಮೂಲಕ ರಂಜನೀಯವಾಗಿ ಪುನಃ ಸೃಷ್ಟಿಸುತ್ತ ಹೋಗುವ ಅದ್ಭುತ ಪ್ರಕ್ರಿಯೆ. ವಾಸ್ತವ ಮತ್ತು ಕಲ್ಪನೆಗಳ ಮಿಶ್ರಣ ಸಮತೋಲಿತವಾಗಿದ್ದರೆ ಓದುಗನನ್ನು ತನ್ನತ್ತ ಸೆಳೆದುಕೊಳ್ಳುವಲ್ಲಿ ಕೃತಿಯೊಂದು ಯಶಸ್ವಿಯಾಗುತ್ತದೆ. ಗಜಾನನ ಶರ್ಮರ ಇತ್ತೀಚಿನ ಕಾದಂಬರಿ ‘ಚೆನ್ನಭೈರಾದೇವಿ’ ಅಂಥದೊಂದು ಮಹತ್ವದ ಪರಿಪೂರ್ಣ ಕೃತಿ ಎಂದು ನನಗನಿಸಲು ಹಲವಾರು ಕಾರಣಗಳಿವೆ. ವಸ್ತುವಿನ ಆಯ್ಕೆ, ಕಥಾಹಂದರ, ಪಾತ್ರ ಸೃಷ್ಟಿ, ಭಾಷೆ, ನಿರೂಪಣಾ ಶೈಲಿ ಮುಂತಾದ ಕಾದಂಬರಿಯೊಂದರ ಎಲ್ಲ ಲಕ್ಷಣಗಳನ್ನೂ ಗರಿಷ್ಠ ಮಟ್ಟದಲ್ಲಿ ದುಡಿಸಿಕೊಳ್ಳುವಲ್ಲಿ ಚೆನ್ನಭೈರಾದೇವಿ ಯಶಸ್ವಿಯಾಗಿದೆ.

ಬೇರೆಲ್ಲ ರಾಣಿಯರ ಬಗ್ಗೆ ಇತಿಹಾಸದ ಪುಟಗಳಲ್ಲಿ ಸಾಕಷ್ಟು ವಿವರಗಳಿದ್ದರೂ ಕರ್ನಾಟಕದ ಕರಾವಳಿ ಮತ್ತು ಮಲೆನಾಡಿನ ಅನೇಕ ಭಾಗಗಳನ್ನು ಸಮರ್ಥವಾಗಿ ಮತ್ತು ಜನಾನುರಾಗಿಯಾಗಿ 54 ವರ್ಷಗಳವರೆಗೆ (ಕ್ರಿ.ಶ. 1552ರಿಂದ 1606) ಆಳಿದ ಅವಳ ಮೇಲೆ ಪದೇಪದೇ ಯುದ್ಧ ಮಾಡಿ ಸೋತ ಪೋರ್ಚುಗೀಸರಿಂದಲೇ ‘ಕಾಳುಮೆಣಸಿನ ರಾಣಿ’ ಎಂಬ ಹೆಗ್ಗಳಿಕೆಯನ್ನು ಪಡೆದ ಚೆನ್ನಭೈರಾದೇವಿಯ ಬದುಕಿನ ಬಗ್ಗೆ ವಿಸ್ತೃತವಾದ ಅಧ್ಯಯನ ನಡೆದಿಲ್ಲ. ಅವಳು ಬಾಳಿದ, ಆಳಿದ ನಾಡಿನಿಂದ ಬಂದ ಗಜಾನನ ಶರ್ಮರು ಚೆನ್ನಭೈರಾದೇವಿಯ ಬಗ್ಗೆ ಸಂಶೋಧನೆ, ಕ್ಷೇತ್ರಕಾರ್ಯ ನಡೆಸಿ ಅಪರೂಪದ ಸಾಹಿತ್ಯ ಕೃತಿ ನೀಡಿದ್ದಾರೆ.

ಈ ಕಾದಂಬರಿಯಲ್ಲಿ ನನಗೆ ಮಹತ್ವವೆನಿಸಿದ ಹಲವಾರು ಅಂಶಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ಪ್ರಸ್ತಾಪಿಸುತ್ತೇನೆ. ಕತೆಯ ಹಂದರಕ್ಕೂ ಪಾತ್ರಗಳ ಆಯ್ಕೆಗೂ ನಡುವೆ ಅವಿನಾಭಾವ ಸಂಬಂಧವಿದೆ. ಅದರಲ್ಲೂ ಐತಿಹಾಸಿಕ ಕಾದಂಬರಿಗಳನ್ನು ಬರೆಯುವಾಗ ಸೂಕ್ತ ಪಾತ್ರಗಳನ್ನು ಸೃಷ್ಟಿಸಿಕೊಂಡರೆ ಮಾತ್ರ ಕತೆಯ ಹಂದರ ಹೆಚ್ಚು ಸದೃಢವಾಗಿ ಆಕರ್ಷಕವಾಗಿ ಬೆಳೆಯುತ್ತದೆ. ಆಯ್ದುಕೊಂಡ ಪಾತ್ರಗಳು ತಮ್ಮ ಮಿತಿಯಲ್ಲೇ ಬೆಳೆಯುತ್ತ, ಇಡೀ ಹಂದರವನ್ನು ಕಟ್ಟುವಲ್ಲಿ ಕೈಜೋಡಿಸುತ್ತ, ತಮ್ಮ ಕೆಲಸ ಮುಗಿದಾಗ ಹಿನ್ನೆಲೆಗೆ ಸರಿದರೆ ಕೃತಿ ಹೆಚ್ಚು ಅರ್ಥಪೂರ್ಣವಾಗುತ್ತದೆ. ಇತಿಹಾಸದಲ್ಲಿ ಬದುಕಿದ್ದವರಲ್ಲದೆ ಚೆನ್ನಭೈರಾದೇವಿಯ ಬದುಕಿನ ಚಿತ್ರಣಕ್ಕೆ ಪೂರಕವಾಗಿ ಜಿನದತ್ತ, ಪರಮಯ್ಯ ಸಭಾಹಿತ, ಶಬಲೆ ಮುಂತಾದ ನೂರಾರು ಪಾತ್ರಗಳನ್ನು ಶರ್ಮರು ಸೃಷ್ಟಿಸಿಕೊಂಡಿದ್ದಾರೆ.

ಚೆನ್ನಭೈರಾದೇವಿಯ ವ್ಯಕ್ತಿತ್ವವನ್ನು ರಾಣಿಯ ಹದಕ್ಕೆ ತಿದ್ದುವ ಜಿನದತ್ತ, ಪರಮಯ್ಯ ಸಭಾಹಿತರು, ಅವಳದೇ ಪ್ರತಿರೂಪದಂತಿರುವ ಶಬಲೆ ಪಾತ್ರಗಳು ಕಾದಂಬರಿಯನ್ನು ಸದೃಢಗೊಳಿಸಿವೆ. ಅವಳ ಗೆಳೆಯ, ಹಿತೈಷಿ ಜಿನದತ್ತ ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಪೋರ್ಚುಗಲ್ಲಿಗೆ ಹೋಗುವಂತೆ ಮಾಡುವ ಶರ್ಮರು ಆ ದೇಶದಲ್ಲಿನ ಬೆಳವಣಿಗೆಗಳನ್ನು ಅವನು ರಾಣಿಗೆ ತಲುಪಿಸಿ ಅವಳ ಆರ್ಥಿಕ ಆಡಳಿತಕ್ಕೆ ಆಸರೆಯಾಗಿ ನಿಲ್ಲುವಂತೆ ಮಾಡುತ್ತಾರೆ. ಅಂದು ಬದುಕಿದ್ದ ಅಥವಾ ಕಾದಂಬರಿಗಾಗಿ ಲೇಖಕರು ಸೃಷ್ಟಿಸಿಕೊಂಡ ಪ್ರತೀ ಪಾತ್ರದ ಮಾತು, ನಡವಳಿಕೆ, ಆಲೋಚನೆಗಳು, ಇನ್ನೊಂದು ಪಾತ್ರದೊಡನೆ ಒಡನಾಟ, ಕ್ರಿಯೆಗಳು ಎಲ್ಲಿಯೂ ಅಸಹಜ ಎಂದಾಗಲೀ ಅನವಶ್ಯಕ ಎಂದಾಗಲೀ ಓದುಗನಿಗೆ ಅನಿಸುವುದಿಲ್ಲ. ಪ್ರತೀ ಪಾತ್ರವೂ ತನ್ನಷ್ಟಕ್ಕೇ ಪರಿಪೂರ್ಣವೂ ಸಹಜವೂ ಆಗಿದೆ. ಶರ್ಮರು ಪಾತ್ರಗಳನ್ನು ಈ ರೀತಿ ಔಚಿತ್ಯಪೂರ್ಣವಾಗಿ ಬಳಸುವ, ಬೆಳೆಸುವ ಮತ್ತು ನಿರ್ವಹಿಸುವ ಪ್ರಕ್ರಿಯೆಯಿಂದಾಗಿ ಕಾದಂಬರಿ ಓದುಗನಿಗೆ ಖುಷಿ ಕೊಡುತ್ತದೆ.

ಇನ್ನೊಂದು ಪ್ರಮುಖ ಅಂಶ ಪ್ರಾದೇಶಿಕತೆ. ಈಗಿನ ಉತ್ತರಕನ್ನಡ, ಉಡುಪಿ-ದಕ್ಷಿಣಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳು ಸೇರುವಲ್ಲಿನ ಪ್ರದೇಶದ ಜನಜೀವನದ, ಜೀವವೈವಿಧ್ಯದ ಪ್ರತೀ ವಿವರವನ್ನೂ ಸಮರ್ಥವಾಗಿ ದುಡಿಸಿಕೊಂಡಿದ್ದಾರೆ. ಇತರ ಸಾಹಿತ್ಯ ಪ್ರಕಾರಗಳಿಗೆ ಸಾಧ್ಯವಿಲ್ಲದ, ಕಾದಂಬರಿಗೆ ಮಾತ್ರ ಸಾಧ್ಯವಿರುವ ಪ್ರಾದೇಶಿಕತೆ ಈ ಕೃತಿಯಲ್ಲಿ ಅಂತರಂಗದ ಅಂಶವಾಗಿದೆ. ಉದಾಹರಣೆಗೆ, ಚೆನ್ನಭೈರಾದೇವಿ ರಾಣಿಯಾಗುವ ಮುನ್ನ ಜಿನದತ್ತನೊಡನೆ ಕಾಡಿನಲ್ಲಿ ಅಲೆದಾಡುವಾಗ ಕಾಡುಕೋಣವೊಂದು ಅವಳ ತೊಡೆಯನ್ನು ತನ್ನ ಕೋಡಿನಿಂದ ಸೀಳಿಬಿಡುತ್ತದೆ. ಅದಕ್ಕೆ ಪ್ರಥಮ ಚಿಕಿತ್ಸೆ ನೀಡುವ ಮಾದ, ಬಗಿನೆ ಮರದ ಹೆಡೆಯನ್ನು ಕಡಿದು ತಂದು ಸುಲಿದು ಅದರೊಳಗಿನಿಂದ ಬಿಳಿ ಬಟ್ಟೆಯಂಥ ನಾರನ್ನು ಹೊರತೆಗೆದು ಔಷಧ ಸೇರಿಸಿ ತೊಡೆಗೆ ಕಟ್ಟುವ ವಿವರವಿದೆ. ಈ ಘಟನೆಯಾಗಲೀ ವಿವರವಾಗಲೀ ಉದ್ದೇಶಪೂರ್ವಕವಾಗಿ ತುರುಕಿದಂತೆ ಅನಿಸುವುದೇ ಇಲ್ಲ. ಪ್ರಾದೇಶಿಕತೆ ಎಂಬುದು ಕಾದಂಬರಿಯ ವಸ್ತುವಿನಲ್ಲಿ ಅವಿನಾಭಾವವಾಗಿ ಹರಿದುಬಂದಿದೆ.

ರಾಜ ಅಥವಾ ರಾಣಿಯ ಕುರಿತ ಐತಿಹಾಸಿಕ ಕಾದಂಬರಿಯೆಂದಾಕ್ಷಣ ಕೃತಿಯು ಅವರ ಬದುಕಿನ ಏರಿಳಿತಗಳ ಚೌಕಟ್ಟಿನೊಳಗೇ ಉಳಿದುಬಿಡುವ ಸಾಧ್ಯತೆಗಳಿವೆ. ಆದರೆ ಚೆನ್ನಭೈರಾದೇವಿ ಅಂಥ ಸಾಮಾನ್ಯ ಚೌಕಟ್ಟನ್ನು ಮೀರಿ ಯುದ್ಧತಂತ್ರ, ಸಾಮಾನ್ಯರ ಬದುಕು, ಅಂದಿನ ಸಾಮಾಜಿಕ ಸ್ಥಿತಿಗತಿ, ಆರ್ಥಿಕ ವ್ಯವಹಾರ, ರಾಜಕೀಯ ತಂತ್ರಗಾರಿಕೆ ಸೇರಿದಂತೆ ಅಂದಿನ ಬದುಕಿನ ಸಮಗ್ರ ಚಿತ್ರಣವನ್ನೂ ಓದುಗನ ಮುಂದಿಡುತ್ತದೆ.

ಇವೆಲ್ಲಕ್ಕೂ ಮಿಗಿಲಾಗಿ ಅವರ ಸರಳ ಮತ್ತು ನೇರ ನಿರೂಪಣಾ ಶೈಲಿ ಕೃತಿಯನ್ನು ಹೆಚ್ಚು ಆಕರ್ಷಕವಾಗಿಸಿದೆ, ಆಪ್ತವಾಗಿಸಿದೆ. ಕಾದಂಬರಿಯ ಹೊರಗೇ ನಿಂತು ಕತೆಯನ್ನು ನಿರೂಪಿಸುವಾಗ ತಾವು ಸಂಶೋಧಿಸಿದ ವಾಸ್ತವಿಕ ಸಂಗತಿಗಳಿಗೆ ರಕ್ತ ಮಾಂಸ ತುಂಬಿ ಜೀವಂತಗೊಳಿಸಲು ಅಗತ್ಯವಿರುವ ಕಲ್ಪನೆಗಳನ್ನು ಹದವಾಗಿ ಸಂಮಿಳಿತಗೊಳಿಸುತ್ತ ಎಲ್ಲಿಯೂ ಓದುಗನಿಗೆ ವಾಸ್ತವ ಮತ್ತು ಕಲ್ಪನೆಗಳ ನಡುವೆ ಗೊಂದಲ, ಓದಿನ ಹರಿವಿಗೆ ತಡೆ ಆಗದಂತೆ ಸರಳವಾಗಿ, ಆಪ್ತವಾಗಿ ನಿರೂಪಿಸುತ್ತಾರೆ.

ಇಡೀ ಕೃತಿಯಲ್ಲಿ ಯಾವುದಾದರೂ ಅಂಶ ಅಥವಾ ಪಾತ್ರ ಇಲ್ಲದೇ ಹೋಗಿದ್ದರೆ ನಷ್ಟವೇನೂ ಆಗುತ್ತಿರಲಿಲ್ಲ ಎಂಬುದನ್ನು ತೋರಿಸಲು ಸಾಧ್ಯವೇ ಇಲ್ಲದಂಥ ಬಿಗುವಾದ ನಿರೂಪಣೆ ಇದೆ. ಪ್ರತೀ ವಿವರವನ್ನೂ ಓದುಗನೊಡನೆ ಹಂಚಿಕೊಳ್ಳುವ ಅವರ ಉತ್ಸಾಹ ಗಮನಾರ್ಹ. ಪಟ್ಟಾಭಿಷೇಕದ ಸಿದ್ಧತೆ, ಜೈನ ಪೂಜಾ ವಿಧಿವಿಧಾನ, ಸಲ್ಲೇಖನ ವ್ರತ ಸ್ವೀಕಾರ, ಶವಸಂಸ್ಕಾರ ವಿಧಿ ಮುಂತಾದವು ಅಸಹಜ ಎಂದಾಗಲೀ ಅಥವಾ ಅವುಗಳನ್ನು ನಿರ್ಲಕ್ಷಿಸಿ ಮುಂದೆ ಓದಬೇಕೆಂದಾಗಲೀ ಅನಿಸುವುದೇ ಇಲ್ಲ. ಬದಲಿಗೆ ಶರ್ಮರು ಉತ್ಸಾಹದಿಂದ ವಿವರಿಸುವಾಗ ಓದುಗ ತನ್ಮಯನಾಗಿ ಕೇಳುತ್ತಾನೆ. ಯಾವುದೇ ವಿಚಾರವನ್ನು ಉತ್ಸಾಹದಿಂದ ವಿವರವಾಗಿ ಆತ್ಮೀಯವಾಗಿ ನಿರೂಪಿಸುವ ಅವರ ಶೈಲಿ ಅನನ್ಯ.

ನಾಡು ಹೆಮ್ಮೆ ಪಡಬೇಕಾದ ರಾಣಿಯೊಬ್ಬಳ ಬದುಕಿನ ಬಗ್ಗೆ ಸಾಹಿತ್ಯಿಕವಾಗಿ ಸಂಪದ್ಭರಿತವಾದ, ಪರಿಪೂರ್ಣವಾದ ಕೃತಿಯನ್ನು ಶರ್ಮರು ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು