ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರತ್ವ ತಿದ್ದುಪಡಿ: ಅನುಮಾನ,ಆಕ್ರೋಶದ ಅಭಿವ್ಯಕ್ತಿ

Last Updated 21 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಕನ್ನಡದ ಕ್ರಿಯಾಶೀಲ ಲೇಖಕ ದೇವನೂರ ಮಹಾದೇವ ಬರೆದದ್ದು ಕಡಿಮೆ ಎನ್ನುವುದು ಹಳೇ ದೂರು. ಕಳೆದ ಎರಡು ದಶಕಗಳಲ್ಲಿ ಅವರು ಬರೆದದ್ದಕ್ಕಿಂತ ಸಾರ್ವಜನಿಕವಾಗಿ ಮಾತನಾಡಿದ್ದೇ ಹೆಚ್ಚು ಎನ್ನುವುದೂ ನಿಜ. ಹಾಗೆಂದು ಅವರು ಗಂಟೆಗಳ ಕಾಲ ಮಾತನಾಡುವವರಲ್ಲ. ಹೆಚ್ಚೆಂದರೆ 5ರಿಂದ 10 ನಿಮಿಷ. ಇತ್ತೀಚೆಗೆ ದೇಶದಲ್ಲಿ ಸೈದ್ಧಾಂತಿಕ ಸಂಘರ್ಷವನ್ನು ಹುಟ್ಟುಹಾಕಿರುವ ಎನ್‌ಪಿಆರ್‌ (ರಾಷ್ಟ್ರೀಯ ಜನಸಂಖ್ಯಾ ನೋಂದಣಿ), ಎನ್‌ಆರ್‌ಸಿ (ರಾಷ್ಟ್ರೀಯ ಪೌರತ್ವ ನೋಂದಣಿ) ಮತ್ತು ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ)ಗಳ ಕುರಿತು ಮಹಾದೇವರ ಭಾಷಣ/ ಲೇಖನಗಳ ಸಂಗ್ರಹವಿದು. ರಹಮತ್‌ ತರೀಕೆರೆ ಸಂವಿಧಾನದ ಪೀಠಿಕೆಯ ಕುರಿತು ಬರೆದಿರುವ ಲೇಖನವೊಂದನ್ನು ಆರಂಭದಲ್ಲಿ ಮತ್ತು ಗೌತಮ್‌ ಭಾಟಿಯಾ ‘ಬಾಂಬೆ ಮಿರರ್‌’ನಲ್ಲಿ ಎನ್‌ಪಿಆರ್‌/ ಎನ್‌ಆರ್‌ಸಿ ಕುರಿತು ಬರೆದಿರುವ ಇಂಗ್ಲಿಷ್‌ ಲೇಖನದ ಕನ್ನಡ ಅನುವಾದವನ್ನು ಕೊನೆಯಲ್ಲಿ ಈ ಪುಸ್ತಕಕ್ಕೆ ಜೋಡಿಸಲಾಗಿದೆ. ಇಡೀ ಕೃತಿಯ ಕೇಂದ್ರ ಕಾಳಜಿ ಇವತ್ತು ದೇಶ ಎದುರಿಸುತ್ತಿರುವ ಪೌರತ್ವದ ಸಂಘರ್ಷ ಮತ್ತು ಆರ್ಥಿಕತೆಯ ಬಿಕ್ಕಟ್ಟು.

ಹದ್ದಾಗುವುದು ಬೇಡ, ಹಂಸ ಆಗಲಿ/ ಕಾ ಅಪಶಕುನ, ಎನ್‌ಆರ್‌ಸಿ ಎನ್‌ಪಿಆರ್‌ ಎಂಬ ಸಂಚು/ 99% ಭಾರತೀಯರು, 1 % ಕೋಮುವಾದಿಗಳು/ ನಾವು ಸದ್ಯಕ್ಕೆ ಉಳಿಯುವಂತಾಗಲು../ ಈಗ ಭಾರತ ಮಾತಾಡುತ್ತಿದೆ– ಹೀಗೆ ಐದು ಪುಟ್ಟ ಲೇಖನಗಳ ಸಂಕಲನವಿದು. ಗಂಭೀರವಾದ ವಿಷಯವೊಂದನ್ನು ಹೇಳುವಾಗಲೂ, ತಮ್ಮದೇ ಆದ ವಿಶಿಷ್ಟ ಪ್ರತಿಮೆಗಳನ್ನು ಬದುಕಿನಿಂದ ಎತ್ತಿಕೊಂಡು ಲೇಖನಕ್ಕೆ ಸೃಜನಶೀಲ ಆಯಾಮ ಕೊಡುವ ವಿಶಿಷ್ಟ ‘ದೇವನೂರ ಶೈಲಿ’ ಅಲ್ಲಲ್ಲಿ ಕಾಣಿಸುತ್ತದೆ. ಪೌರತ್ವ ತಿದ್ದುಪಡಿಯನ್ನು ಕಾಯ್ದೆ ಮಾಡಿದ ಬಳಿಕ ಆತಂಕಗೊಂಡ ಜನಸಮುದಾಯಕ್ಕೆ ‘ಆತಂಕಕ್ಕೆ ಒಳಗಾಗಬೇಡಿ, ನನ್ನನ್ನು ನಂಬಿ, ನಾನು ನಿಮ್ಮ ಸೇವಕ’ ಎಂದು ಪ್ರಧಾನಿ ಮೋದಿಯವರು ಮಾಡುವ ಭಾಷಣ, ಮಹಾದೇವ ಅವರಿಗೆ ‘ಸಿಲ್ಲಿ ಲಲ್ಲಿ’ ಟಿವಿ ಸೀರಿಯಲ್‌ನ ಸಮಾಜ ಸೇವಕಿ ಲಲಿತಾಂಬ ಪಾತ್ರವನ್ನು ನೆನಪಿಸುತ್ತದೆ! CAA ಎಂಬ ಕಾಯ್ದೆಯನ್ನು ‘ಕಾ ಎಂಬ ಅಪಶಕುನ’ ಎನ್ನುವಲ್ಲಿನ ವ್ಯಂಗ್ಯ; ಹೈಸ್ಕೂಲಿನಲ್ಲಿ ಮೇಷ್ಟ್ರು ಬೋರ್ಡ್‌ ಮೇಲೆ ‘of the people, by the people, for the people' ಎಂಬುದನ್ನು ಬರೆಯುತ್ತಾ ‘buy the people' ಎಂದು ಒಂದನ್ನು ತಪ್ಪು ಬರೆದು ಮಕ್ಕಳನ್ನು ತಪ್ಪು ಹುಡುಕುವಂತೆ ಹೇಳಿದ್ದು; ‘ನಾನು ಹುಟ್ಟಿದ್ದು ಸೋಮವಾರ ಸಂಜೆ ರೈಲು ದೊಡ್ಡಕವಲಂದೆ ಸ್ಟೇಷನ್‌ನಲ್ಲಿ ನಿಂತು ಹೊರಡುವ ಸಮಯವಂತೆ. ದಿನಾಂಕ ಇರಲಿ, ಇಸವಿಯೂ ಗೊತ್ತಿಲ್ಲ. ನನಗೇ ಹೀಗಿರುವಾಗ ಅಪ್ಪ–ಅಮ್ಮನ ಹುಟ್ಟಿದ ದಿನಾಂಕ ಕೇಳಿದರೆ ಏನನ್ನುವುದು?’ ಮುಂತಾಗಿ ತಮ್ಮ ಗಂಭೀರ ವಾದವನ್ನೂ ಸರಳ ಉದಾಹರಣೆಗಳ ಮೂಲಕ ಮನಮುಟ್ಟುವಂತೆ ಹೇಳುವ ಜಾಣ್ಮೆ ಮಹಾದೇವ ಅವರಿಗೆ ಸಿದ್ಧಿಸಿದೆ. ಪೌರತ್ವ ಕಾಯ್ದೆ ತಿದ್ದುಪಡಿಗಳ ಕುರಿತು ತಮ್ಮ ವಾದಗಳಿಗೆ ಪೂರಕವಾಗಿ ಇತರ ಲೇಖಕರ ಸಮರ್ಥನೆಗಳನ್ನು ಬಳಸಿಕೊಳ್ಳುವ ಮಹಾದೇವ, ದೇಶ ಸದ್ಯ ಎದುರಿಸುತ್ತಿರುವ ಸಂಘರ್ಷದ ಮತ್ತು ತ್ವೇಷಮಯ ಪರಿಸ್ಥಿತಿಗೆ ಇಲ್ಲಿ ಸಮರ್ಥ ಕೈಗನ್ನಡಿ ಹಿಡಿದಿದ್ದಾರೆ.

ಸಂವಿಧಾನದ ಪೀಠಿಕೆಯ ಕುರಿತು ರಹಮತ್‌ ತರೀಕೆರೆ ಬರೆದಿರುವ ಆರಂಭದ ಲೇಖನ ಪೀಠಿಕೆಯ ವಿಸ್ತರಿತ ವ್ಯಾಖ್ಯಾನವೇ ಆಗಿದೆ. ಸಂವಿಧಾನದ ಅಶೋಕಚಕ್ರದ ಲಾಂಛನ ಮತ್ತು ಸತ್ಯಮೇವ ಜಯತೆ ಎಂಬ ಧ್ಯೇಯವಾಕ್ಯಗಳು ಬೌದ್ಧ ಮತ್ತು ಉಪನಿಷತ್‌ ದರ್ಶನದ ಧಾರೆಗಳನ್ನು ಸಮೀಕರಿಸುವುದನ್ನು ಈ ಲೇಖನ ಸೂಕ್ತವಾಗಿ ಗುರುತಿಸಿದೆ. ಸಂವಿಧಾನದ ಪೀಠಿಕೆಯಲ್ಲಿ ನಮೂದಿಸಿರುವ ‘ಸೆಕ್ಯುಲರ್‌’ ಪದವನ್ನು ರಹಮತ್‌ ‘ಧರ್ಮನಿರಪೇಕ್ಷ’ ಎಂದು ಗ್ರಹಿಸಿದ್ದಾರೆ. ಕೃತಿಯ ಆರಂಭದಲ್ಲೇ ಸಂವಿಧಾನದ ಪ್ರಸ್ತಾವನೆಯನ್ನು ಕನ್ನಡದಲ್ಲಿ ಅನುವಾದಿಸಿ ಯಥಾವತ್ತಾಗಿ ಮುದ್ರಿಸಲಾಗಿದೆ. ಈ ಅನುವಾದದಲ್ಲಿ ‘ಸೆಕ್ಯುಲರ್‌’ ಶಬ್ದದ ಅರ್ಥವನ್ನು ಮಹಾದೇವ ಅವರು ‘ಜಾತಿಮತಾತೀತ’ ಎಂದು ಅನುವಾದಿಸಿದ್ದಾರೆ. ‘ಸೆಕ್ಯುಲರಿಸಂ’ ಕುರಿತು ಹಿಂದೂ ಬಲಪಂಥೀಯವಾದಿಗಳ ಆಕ್ಷೇಪಣೆಗಳ ಹಿನ್ನೆಲೆಯಲ್ಲಿ ‘ಸಂವಿಧಾನವಾದಿ’ಗಳ ಶಬ್ದ ವ್ಯಾಖ್ಯಾನ ನಿಖರವಾಗಿದ್ದಷ್ಟೂ ಒಳ್ಳೆಯದು. ಸಂವಿಧಾನದ ಪೀಠಿಕೆಯಲ್ಲಿಯೇ ಬದಲಾವಣೆ ಉಂಟು ಮಾಡುವ ಯತ್ನಗಳು ಇತ್ತೀಚೆಗೆ ಸಂಸತ್ತಿನಲ್ಲೇ ನಡೆಯುತ್ತಿವೆ. ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯ ರಾಕೇಶ್‌ ಸಿನ್ಹಾ, ‘ಸಂವಿಧಾನದ ಪೀಠಿಕೆಯಲ್ಲಿರುವ ಸೋಶಿಯಲಿಸ್ಟಿಕ್‌ ಎನ್ನುವ ಶಬ್ದವನ್ನು ಕಿತ್ತುಹಾಕಬೇಕೆಂದು’ ಖಾಸಗಿ ಮಸೂದೆ ಮಂಡನೆಗೆ ನೋಟಿಸ್‌ ನೀಡಿದ್ದು, ಅದು ಚರ್ಚೆಯ ಹಂತದಲ್ಲಿದೆ. ಇಂತಹ ಸಂದರ್ಭದಲ್ಲಿ ‘ಸಂವಿಧಾನವಾದಿ’ಗಳ ಅರ್ಥವ್ಯಾಖ್ಯಾನದಲ್ಲಿ ಗೊಂದಲ ಇದ್ದರೆ ವಾದ ದುರ್ಬಲವಾಗುವ ಸಾಧ್ಯತೆಯೂ ಇದೆ.

ಈ ಕೃತಿಯಲ್ಲಿ, ಇತ್ತೀಚಿನ ಪೌರತ್ವ ತಿದ್ದುಪಡಿಗಳ ಕುರಿತು ತಮ್ಮ ಅನುಮಾನ ಮತ್ತು ಆಕ್ರೋಶಗಳನ್ನು ಮಹಾದೇವ ತರ್ಕಬದ್ಧವಾಗಿ ಅಭಿವ್ಯಕ್ತಿಸಿದ್ದಾರೆ. ಆದರೆ ಪೌರತ್ವ ತಿದ್ದುಪಡಿಯನ್ನು ಸಮರ್ಥಿಸುತ್ತಿರುವ ಬಣವು ಇಲ್ಲಿ ಎತ್ತಿರುವ ಪ್ರಶ್ನೆಗಳಿಗೆ ನೀಡುತ್ತಿರುವ ಉತ್ತರಗಳನ್ನೂ ನಿಕಷಕ್ಕೆ ಒಡ್ಡಿದ್ದರೆ ಕೃತಿಯ ಮಹತ್ವ ಇನ್ನಷ್ಟು ಹೆಚ್ಚುತ್ತಿತ್ತು. ‘ಈ ಪುಸ್ತಕಕ್ಕೆ ಕಾಪಿರೈಟ್‌ ಇಲ್ಲ. ಯಾರು ಬೇಕಿದ್ದರೂ ಇಲ್ಲಿನ ಲೇಖನಗಳನ್ನು ಬದಲಾವಣೆ ಇಲ್ಲದೆ ಮರುಮುದ್ರಿಸಿ ಹಂಚಬಹುದು’ ಎಂದು ಪ್ರಕಾಶಕರು ಆರಂಭದಲ್ಲೇ ಸೂಚಿಸಿರುವುದು ಗಮನಾರ್ಹ. ಇಲ್ಲಿರುವ ಲೇಖನಗಳು ಹಿಂದೆ ಎಲ್ಲಿ ಪ್ರಕಟಗೊಂಡಿವೆ ಎನ್ನುವುದನ್ನೂ ಅವರು ನಮೂದಿಸಬೇಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT