ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀತೆಯೊಂದಿಗೆ ರಾಮನನ್ನು ಕಾಣಿಸುವ ಆರ್ದ್ರ–ಆಪ್ತ ಚಿತ್ರಣ

Last Updated 15 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಸೀತಾ
ಮೂಲ:
ದೇವದತ್ತ ಪಟ್ಟನಾಯಕ; ಕನ್ನಡಕ್ಕೆ: ಪದ್ಮರಾಜ ದಂಡಾವತಿ
ಪುಟ: 374; ಬೆ: ರೂ. 700
ಪ್ರಕಾಶನ: ಪ್ರಳ ಮನೋಹರ ಗ್ರಂಥಮಾಲಾ, ಧಾರವಾಡ. ಫೋನ್: 0836–2441822

ಭೂಮಿಯನ್ನು ನೇಗಿಲಲ್ಲಿ ಉಳುಮೆ ಮಾಡಿದರೆ ಹಸುರು–ಸುಗ್ಗಿಯ ಸಂಭ್ರಮ. ಜೆಸಿಬಿಯಲ್ಲಿ ಮಣ್ಣು ಬಗೆದರೆ? ಕೊಡಗಿನಂತಹ ದುರಂತಗಳು. ಪದ್ಮರಾಜ ದಂಡಾವತಿಯವರು ಕನ್ನಡಕ್ಕೆ ತಂದಿರುವ ದೇವದತ್ತ ಪಟ್ಟನಾಯಕರ ‘ಸೀತಾ’, ಜೀವಪರತೆಯ ಬಗ್ಗೆ ನಂಬಿಕೆಯುಳ್ಳ ಲೇಖಕನೊಬ್ಬ ಮಾಡಿರುವ ಉಳುಮೆ ಮಾದರಿಯ ಕೃತಿ.

ರಾಮಾಯಣ ಎನ್ನುವ ರಾಮನ ಕಥೆಯನ್ನು ಭಾರತೀಯ ಸಂಸ್ಕೃತಿಯ ಮೂಲಧಾತುವೊಂದರ ರೂಪದಲ್ಲಿ ಪೋಷಿಸಿಕೊಂಡು ಬಂದಿದ್ದೇವೆ. ಸಾಮಾನ್ಯವಾಗಿ ನಮ್ಮ ಕಥೆಗಳೆಲ್ಲ ಪುರುಷಪ್ರಧಾನವಾದವು. ಅದಕ್ಕೆ ತಕ್ಕನಾಗಿ ರಾಮಾಯಣದ ಕಥೆಯನ್ನೂ ಹೇಳುತ್ತೇವೆ. ರಾಮನ ಜೊತೆಜೊತೆಗೇ ನಮ್ಮ ಪ್ರಜ್ಞೆಯಲ್ಲಿರಬೇಕಾದ ಸೀತೆ ತೆರೆಮರೆಗೆ ಸರಿದುಬಿಡುತ್ತಾಳೆ. ಈ ಅವಜ್ಞೆ ರಾಮಾಯಣದ ನಂತರವೂ ಸೀತೆಗಾಗುತ್ತಿರುವ ಅನ್ಯಾಯ ಮಾತ್ರವಾಗಿರದೆ; ರಾಮನಿಗೆ ಮಾಡುವ ಅನ್ಯಾಯವೂ ಆಗಿದೆ. ನಾಯಕನ ಬಗ್ಗೆಯಷ್ಟೇ ಮಾತನಾಡಿದಾಗ ಸೃಷ್ಟಿಯಾಗುವುದು ಧನುರ್ಧಾರಿ ರಾಮ; ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ ಚಾಲನೆ ದೊರೆತಿರುವ ಸಂದರ್ಭದಲ್ಲಿ ಚಲಾವಣೆಯಲ್ಲಿರುವಂತಹ ಕೋದಂಡರಾಮ. ನಾಯಕಿ ಸೀತೆಯೂ ಜೊತೆಯಿದ್ದಾಗಷ್ಟೇ ಕರುಣಾಮಯಿ ಹಾಗೂ ಪ್ರಜಾವತ್ಸಲ ರಾಮನ ‘ಕೌಟುಂಬಿಕ ಚಿತ್ರ’ ನಮ್ಮೊಂದಿಗಿರುತ್ತದೆ. ಹೀಗೆ ಸೀತೆಯೊಂದಿಗೆ ರಾಮನನ್ನು ಕಾಣಿಸುವ ಗ್ರೂಪ್‌ ಫೋಟೊ ಪಟ್ಟನಾಯಕರ ‘ಸೀತಾ.’

ಇಲ್ಲಿನ ಸೀತೆ, ರಾಮನಷ್ಟೇ ಅಥವಾ ಅವನಿಗಿಂತಲೂ ಹೆಚ್ಚು ಗಟ್ಟಿಗಳು ಹಾಗೂ ಸ್ವತಂತ್ರ ವ್ಯಕ್ತಿತ್ವದವಳು. ಬಾಲಸೀತೆ ಶಿವಧನುಸ್ಸನ್ನು ಒಂದು ಕೈಯಲ್ಲಿ ಎತ್ತಿಕೊಂಡು, ಇನ್ನೊಂದು ಕೈಯಿಂದ ಅದರ ದೂಳು ಒರೆಸುತ್ತಾಳೆ; ಮನೆಯಾಗಲೀ ಸಮಾಜವಾಗಲೀ ಗಂಡಸಿನ ಮನಸಾಗಲೀ – ಎಲ್ಲೆಡೆಯ ಕಸ ತೊಡೆಯುವ ಹೆಣ್ಣಿನ ಸಾಮರ್ಥ್ಯ ಸೂಚಿಸುವಂತೆ. ಅದೇ ಬಿಲ್ಲನ್ನು ರಾಮ ಎತ್ತಿದಾಗ ಅದು ಭಗ್ನಗೊಳ್ಳುತ್ತದೆ – ಗಂಡಸಿನ ದುಡುಕು, ಚಾಂಚಲ್ಯದ ರೂಪಕದಂತೆ.

ಭೂಮಿಯ ಗರ್ಭದೊಳಗೆ ಸೀತೆ ಸೇರಿಕೊಳ್ಳುವ ಹಾಗೂ ಆಕೆಯ ಕೂದಲ ತುದಿಗಳಷ್ಟೇ ಹುಲ್ಲಿನ ರೂಪದಲ್ಲಿ ಭೂಮಿಯ ಮೇಲೆ ಉಳಿಯುವ ಚಿತ್ರಣದೊಂದಿಗೆ ಪಟ್ಟನಾಯಕರ ಕೃತಿ ಆರಂಭಗೊಳ್ಳುತ್ತದೆ. ಆ ಹುಲ್ಲಿನದಳಗಳ ಚಿತ್ರಣವೇ ಸೀತೆಗೆ ನಮ್ಮ ಸಾಮಾಜಿಕಪ್ರಜ್ಞೆಯಲ್ಲಿ ದೊರೆತಿರುವ ಪಾತ್ರವನ್ನು ಸೂಚಿಸುವಂತಿದೆ. ರಾಮನೋ ಆಕಾಶಕ್ಕಡರಿಕೊಂಡ ಬೃಹತ್ ವೃಕ್ಷ. ಆ ವೃಕ್ಷದ ಸುತ್ತಮುತ್ತ ಬೆಳೆದಿರುವ ಹುಲ್ಲು ಸೀತೆ. ಆ ಹುಲ್ಲು ಜೀವಪರವಾದುದು; ಹುಲ್ಲೆಗಳ ಹೊಟ್ಟೆಯನ್ನು ತುಂಬಿಸುವಂತಹದ್ದು ಹಾಗೂ ಹಸು–ಎಮ್ಮೆಗಳ ಕೆಚ್ಚಲಲ್ಲಿ ಹಾಲು ಜಿನುಗಿಸುವಂತಹದ್ದು.

ಭಾರತೀಯ ಪರಂಪರೆ ಪ್ರತಿನಿಧಿಸುವ ಹೆಣ್ಣಿನ ಜನಪ್ರಿಯ ಚಿತ್ರ, ಗಂಡಿನ ಅಪರಿಪೂರ್ಣತೆಯನ್ನು ಪೂರ್ಣಗೊಳಿಸಲಿಕ್ಕಾಗಿ ಬದುಕನ್ನು ಸವೆಸುವ ಸ್ತ್ರೀರೂಪವಾಗಿದೆ. ಪಟ್ಟನಾಯಕರ ಸೀತೆಯೂ ರಾಮನ ಪರಿಪೂರ್ಣತೆಗಾಗಿ ಹಂಬಲಿಸುವ ಹೆಣ್ಣೇ ಆಗಿದ್ದಾಳೆ. ‘ವಿವಾಹದೊಳಗೆ ಸಂತೋಷ ಅರಸುವುದಕ್ಕೆ ಬದಲಾಗಿ ವಿವಾಹದೊಳಗೆ ಸಂತೋಷ ತರಬೇಕು’ ಎನ್ನುವ ಜನಕನ ಮಾತನ್ನು ಅನುಸರಿಸಿ, ‘ತನ್ನ ಗಂಡ ಎಂದೆಂದಿಗೂ ಅಪರಿಪೂರ್ಣ ಎಂದೆನಿಸಬಾರದು’ ಎಂದು ಕಾಡಿಗೆ ಹೊರಟ ರಾಮನ ಜೊತೆಗೆ ನಡೆಯುತ್ತಾಳೆ. ಆ ಪಯಣದಲ್ಲಿ ಆಕೆ ಪ್ರಕೃತಿಯ ಅಂತಃಕರಣವನ್ನು ಮೈಗೂಡಿಸಿಕೊಳ್ಳುತ್ತಾಳೆ. ಗಿಡಮೂಲಿಕೆಗಳ ಬಗ್ಗೆ ಮಾತನಾಡುತ್ತಾಳೆ, ಹುಳುಗಳನ್ನು ಗಾಸಿಗೊಳಿಸದೆ ಜೇನು ತೆಗೆಯುವ ಜಾಣ್ಮೆಯನ್ನು ಅರಿಯುತ್ತಾಳೆ. ಆದರೆ, ರಾಮ ತನ್ನ ಜೀವನದ ಬಹುಮುಖ್ಯ ಭಾಗವನ್ನು ಕಾಡಿನಲ್ಲಿ ಕಳೆದರೂ, ಅವನು ಮೈಗೂಡಿಸಿಕೊಂಡಿರುವುದು ನಗರದ ಸಂಸ್ಕೃತಿಯನ್ನೇ ಹೊರತು ಪ್ರಕೃತಿಯ ನ್ಯಾಯವನ್ನಲ್ಲ. ‘ಪ್ರಕೃತಿಯಲ್ಲಿ ಕಲುಷಿತವಾದುದು ಯಾವುದೂ ಇಲ್ಲ’ ಎನ್ನುವ ಹನುಮಂತನ ಮಾತಿಗೆ, ‘ಸಂಸ್ಕೃತಿಯಲ್ಲಿ ಮಲಿನರು ಸ್ವೀಕಾರಾರ್ಹರಲ್ಲ’ ಎನ್ನುವ ಸೀತೆಯ ಮಾತು, ಋಷಿಯಾಗಬಯಸಿದರೂ ರಾಮನೊಳಗಿರುವುದು ಓರ್ವ ರಾಜ ಎನ್ನುವುದನ್ನು ಧ್ವನಿಸುತ್ತದೆ.

ರಾವಣನ ಸಾವಿನ ನಂತರ ನೇರವಾಗಿ ಪತ್ನಿಯ ಬಳಿಗೆ ಹೋಗದೆ, ತನ್ನ ಬಳಿಗೆ ಬರುವಂತೆ ಸೀತೆಗೆ ಕರೆ ಕಳಿಸುವ ರಾಮ ರಾಜನಂತೆ ವರ್ತಿಸುತ್ತಾನೆಯೇ ಹೊರತು, ಗಂಡನಾಗಿ ಅಲ್ಲ. ಆ ಕಾರಣದಿಂದಲೇ, ರಾಮನ ಬಳಿಗೆ ಹೋಗಬೇಕಾದ ಸಂದರ್ಭ ಸೀತೆಗೆ, ರೇಣುಕೆ–ಅಹಲ್ಯೆಯರನ್ನು ನೆನಪಿಸುತ್ತದೆ.

ಲಂಕೆಯಲ್ಲಿ ರಾವಣನ ಅಂಕೆಯಲ್ಲಿ ಕಳೆಯಬೇಕಾದ ಸಂದರ್ಭ ತನಗೊದಗಿದ ಪರೀಕ್ಷೆ ಎಂದು ಸೀತೆ ಭಾವಿಸುವುದಿಲ್ಲ. ಆಕೆಯ ಪ್ರಕಾರ, ಪಣಕ್ಕಿರುವುದು ರಾಮನ ಗೌರವ. ಆ ಪಣದಲ್ಲಿ ಗಂಡನನ್ನು ತೇರ್ಗಡೆಯಾಗಿಸುವ ಸೀತೆ, ಅಗ್ನಿಪರೀಕ್ಷೆಯ ಮೂಲಕ ಮತ್ತೆ ರಾಮನ ಮರ್ಯಾದೆಯನ್ನು ಎತ್ತಿಹಿಡಿಯುತ್ತಾಳೆ. ಹೀಗೆ ಮತ್ತೆ ಮತ್ತೆ ರಾಮನನ್ನು ಪರಿಪೂರ್ಣನನ್ನಾಗಿಸುತ್ತ, ಆ ಪ್ರಯತ್ನದಲ್ಲಿ ತನ್ನನ್ನೇ ತೇದುಕೊಳ್ಳುವ ಆಕೆ ಕೊನೆಗೆ ತಾನು ಬಂದ ಮಣ್ಣಿನ ಗರ್ಭವನ್ನೇ ಸೇರುತ್ತಾಳೆ. ಬೆಟ್ಟದಡಿಯ ಹುಲ್ಲಾಗುತ್ತಾಳೆ.

ಸೀತೆಯ ಕಥೆಯನ್ನು ಹೇಳಲಿಕ್ಕಾಗಿ, ಜನಪ್ರಿಯ ರಾಮಾಯಣದ ಜೊತೆಗೆ ಜನಪ್ರಿಯವಲ್ಲದ ರಾಮಾಯಣಗಳ ಕವಲುಗಳನ್ನೂ ಪಟ್ಟನಾಯಕರು ಅವಲಂಬಿಸಿದ್ದಾರೆ. ಅವರ ಸೀತಾಕಥನ ಶಿಷ್ಟ ಕಥನಗಳ ಜೊತೆಜೊತೆಗೆ ಜನಪದ ಕಥೆಗಳನ್ನೂ ಒಳಗೊಂಡಿದೆ. ಭಾರತೀಯ ಹೆಣ್ಣಿನ ಅನನ್ಯ ಮಾದರಿಯನ್ನು ಸೀತೆಯ ಮೂಲಕ ಕಟ್ಟಿಕೊಡುವ ಪ್ರಯತ್ನದ ರೂಪದಲ್ಲಿ ನೋಡಬಹುದಾದ ಈ ಕೃತಿ, ತನ್ನ ಹೆಣಿಗೆಯಲ್ಲಿ ಸಣ್ಣಪುಟ್ಟ ಪಾತ್ರಗಳನ್ನೂ ಕಥನದ ಆಶಯಕ್ಕೆ ಪೂರಕವಾಗಿ ಪರಿಣಾಮಕಾರಿಯಾಗಿ ಬಳಸಿಕೊಂಡಿದೆ. ಪರಿಚಿತ ಪಾತ್ರಗಳಾದ ರೇಣುಕೆ, ಅಹಲ್ಯೆಯರ ಜೊತೆಗೆ ಗಂಡನ ದಣಿವನ್ನು ನಿದ್ರೆಯ ರೂಪದಲ್ಲಿ ಭರಿಸುವ ಊರ್ಮಿಳೆ, ಅಳುವ ಹೆಂಗಸನ್ನು ಮನೆಯೊಳಗೆ ಕರೆತರಬೇಡ ಎಂದು ಗಂಡಸಿನ ವಿವೇಕವನ್ನು ಎಚ್ಚರಿಸುವ ಮಂಡೋದರಿ, ರಾಮನ ಜನ್ಮಕ್ಕೆ ಕಾರಣಕರ್ತರಲ್ಲಿ ಒಬ್ಬಳಾದ ಶಾಂತಾ, ತಲೆ ಕಳೆದುಕೊಂಡರೂ ಪ್ರಶ್ನಿಸುವುದನ್ನು ಬಿಡಲಾರೆ ಎನ್ನುವ ಗಾರ್ಗಿ, ಗಂಡನ ಸಾವನ್ನು ಘನತೆಯಿಂದ ಸ್ವೀಕರಿಸುವ ಸುಲೋಚನಾ – ಇವರೆಲ್ಲ ಸ್ವತಂತ್ರ ವ್ಯಕ್ತಿತ್ವಗಳಾಗಿಯೂ, ಸೀತೆಯ ವ್ಯಕ್ತಿತ್ವದ ಬಿಡಿ ಬಿಡಿ ಪಾತ್ರಗಳಂತೆಯೂ ಕೃತಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಕಥೆಯ ಜೊತೆಜೊತೆಗೇ ಕಿಕ್ಕಿರಿದಿರುವ ಪಟ್ಟನಾಯಕರ ಟಿಪ್ಪಣಿಗಳು ಮಹತ್ವದ ಮಾಹಿತಿಯನ್ನು ಒಳಗೊಂಡಿದ್ದರೂ, ಮುಖ್ಯ ಕಥನದ ಓದಿನ ಓಘಕ್ಕೆ ಅಡ್ಡಿಯುಂಟುಮಾಡುತ್ತವೆ. ಲೇಖಕರೇ ಬಿಡಿಸಿರುವ ರೇಖಾಚಿತ್ರಗಳು ಕೃತಿ–ಕಥನದ ಸೌಂದರ್ಯವನ್ನು ಹೆಚ್ಚಿಸಿವೆ. ಆದರೆ, ಅವುಗಳಿಗೆ ಪುಟವಿನ್ಯಾಸದಲ್ಲಿ ಸಲ್ಲಬೇಕಾದ ನ್ಯಾಯ ದೊರಕಿಲ್ಲ. ಆ ನ್ಯಾಯ ಸಂದಿರುವುದು ಅನುವಾದದಲ್ಲಿ; ಪಟ್ಟನಾಯಕರ ಸೀತೆಗೆ ತೊಡಿಸಿರುವ ಕನ್ನಡದ ಆಭರಣದಂತೆ ಪದ್ಮರಾಜ ದಂಡಾವತಿ ಅವರ ಅನುವಾದವಿದೆ. ಆ ಅನುವಾದದಲ್ಲಿ ಕನ್ನಡನುಡಿ ನಿರಾಭರಣ ಸುಂದರಿಯಾಗಿ ಕಂಗೊಳಿಸಿರುವುದರ ಒಂದು ಮಾದರಿ ನೋಡಿ: ‘ಹದಿನಾಲ್ಕು ವರ್ಷ ಎಂದರೆ ಸುಮ್ಮನೆ ಎಂದುಕೊಂಡಿದ್ದೀರಾ? ಬೀಸಣಿಗೆ ಇಲ್ಲದ ಹದಿನಾಲ್ಕು ವರ್ಷಗಳ ಬೇಸಿಗೆ, ಬೆಚ್ಚನೆಯ ಹೊದಿಕೆ ಇಲ್ಲದ ಹದಿನಾಲ್ಕು ವರ್ಷಗಳ ಚಳಿಗಾಲ, ಛತ್ರಿಯಿಲ್ಲದ ಹದಿನಾಲ್ಕು ವರ್ಷಗಳ ಮಳೆಗಾಲವೆಂದರೆ ಏನೆಂದು ನಿಮಗೆ ತಿಳಿದಿದೆಯೇ?’

ನೇರ ಹಾಗೂ ಪ್ರಖರ ಭಾಷೆಯ ಮೂಲಕ ಕನ್ನಡಭಾಷೆಯ ಚೆಲುವಿಗೆ ಸಾಣೆ ಹಿಡಿದಿರುವ ಪತ್ರಕರ್ತರ ಪರಂಪರೆಯೊಂದು ಕನ್ನಡದಲ್ಲಿದೆ. ಆ ಪರಂಪರೆಯ ಸಮರ್ಥ ಪ್ರತಿನಿಧಿಯ ರೂಪದಲ್ಲಿ ಪದ್ಮರಾಜರನ್ನು ಗುರ್ತಿಸುವುದಕ್ಕೆ ‘ಸೀತಾ’ ಕೃತಿಗಿಂತಲೂ ಬೇರೊಂದು ಉದಾಹರಣೆ ಅಗತ್ಯವಿಲ್ಲ.

‘ಸೀತಾ’ ಕೃತಿಯನ್ನು ಭರವಸೆಯ ವ್ಯವಸಾಯವಾಗಿ ಕಂಡರೂ, ಈ ಕೃತಿ ನಾಯಕಿ ಪ್ರಧಾನವಾಗಿದೆಯೇ ಎಂದು ಯೋಚಿಸಿದರೆ, ಹೌದೆನ್ನುವುದು ಕಷ್ಟ. ಅದಕ್ಕೆ ಕಾರಣ ಪಟ್ಟನಾಯಕರಾಗಿರದೆ, ಶತಶತಮಾನಗಳಿಂದ ರಾಮ ನಮ್ಮ ಪ್ರಜ್ಞೆಯನ್ನು ಗಾಢವಾಗಿ ಆವರಿಸಿಕೊಂಡಿರುವುದೇ ಆಗಿದೆ. ಆ ಆವರಣವನ್ನು ಕೊಂಚವಾದರೂ ಸಡಿಲಗೊಳಿಸಿ, ಸ್ತ್ರೀಪ್ರಜ್ಞೆಯನ್ನು ಪರಂಪರೆಯ ಸಮಭಾಗವಾಗಿಸುವ ಮಹತ್ವಾಕಾಂಕ್ಷೆಯ ಪ್ರಯತ್ನದ ರೂಪದಲ್ಲಿ ‘ಸೀತಾ’ ಕೃತಿಯನ್ನು ಗುರ್ತಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT