ಶನಿವಾರ, ಜುಲೈ 2, 2022
25 °C

ಪುಸ್ತಕ ವಿಮರ್ಶೆ: ತಂತ್ರಜ್ಞಾನ ಕಥನಗಳ ಸಂಕಲನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜ್ಞಾನ ವಿಷಯಗಳ ಕುರಿತು ಬರವಣಿಗೆ ಅಷ್ಟು ಸುಲಭವಲ್ಲ. ಕಬ್ಬಿಣದ ಕಡಲೆಯಂಥ ವಿಷಯವನ್ನು ಸಾಮಾನ್ಯ ಓದುಗರಿಗೂ ಅರ್ಥವಾಗುವಂತೆ ಸರಳವಾಗಿ ಹೇಳಿ ರುಚಿ ಹತ್ತಿಸುವುದು ಅಲ್ಲಿನ ಕಷ್ಟ. ಆದರೆ, ವೃತ್ತಿಯಲ್ಲಿ ಗಣಿತ ಅಧ್ಯಾಪಕರಾಗಿರುವ ಗುರುರಾಜ್‌ ಎಸ್‌. ದಾವಣಗೆರೆ ಅವರು ವಿಜ್ಞಾನದ ಬರವಣಿಗೆಯನ್ನೂ ರುಚಿಸುವಂತೆ ರಸಪಾಕ ಮಾಡಿಕೊಡುವುದರಲ್ಲಿ ಸಿದ್ಧಹಸ್ತರು. ‘ಸುಧಾ’ ವಾರಪತ್ರಿಕೆಯಲ್ಲಿ ವಿಜ್ಞಾನ ವಿಷಯಗಳ ಕುರಿತು ಅವರು ಬರೆದ ಲೇಖನಗಳ ಸಂಗ್ರಹವೇ ‘ಡೇಟಾ ದೇವರು ಬಂದಾಯ್ತು’. 

ಈ ಶತಮಾನದಲ್ಲಿ ಇಡೀ ವಿಶ್ವವನ್ನೇ ಆಳುತ್ತಿರುವ ನವನವೀನ ತಂತ್ರಜ್ಞಾನ ಇಲ್ಲಿನ ಲೇಖನಗಳ ಮೂಲ ವಿಷಯ. ಹೊಸ ತಂತ್ರಜ್ಞಾನಗಳು, ವಿಜ್ಞಾನ ಕ್ಷೇತ್ರದಲ್ಲಿನ ಬೆಳವಣಿಗೆಗಳು ಸಾಮಾನ್ಯರಿಗೂ ಕುತೂಹಲ ಹೆಚ್ಚಿಸುವ ಸಂಗತಿಗಳು. ಕೃತಕ ಬುದ್ಧಿಮತ್ತೆ ಮತ್ತು ಅದರ ಪ್ರಯೋಜನದ ಬಗ್ಗೆ ಕಿಂಚಿತ್ತು ಮಾಹಿತಿಯನ್ನಾದರೂ ತಿಳಿಯಲು ಜನ ಬಯಸುತ್ತಾರೆ. ಇಂತಹ ವಿಷಯಗಳನ್ನು ‘ಡೇಟಾ ದೇವರು ಮತ್ತು ಅಲ್ಗೊರಿಧರ್ಮ’, ‘ಮುಂದಿದೆ ಅತಿಮಾನವರ ಕಾಲ’, ‘ನಾನವನಲ್ಲ ಮಾನವನಲ್ಲ’ ಮುಂತಾದ ಲೇಖನಗಳಲ್ಲಿ ಲೇಖಕರು ಪ್ರಸ್ತುತಪಡಿಸಿದ್ದಾರೆ. ವಿಷಯಕ್ಕೆ ತಕ್ಕ ಚಿತ್ರಗಳೂ ಓದಿಗೆ ಪೂರಕವಾಗಿವೆ.

ಮದುವೆ ಮನೆಗಳಿಂದ ಹಿಡಿದು ರಕ್ಷಣೆ, ಕೃಷಿ ಕ್ಷೇತ್ರದಲ್ಲೂ ಬಳಕೆಯಾಗುತ್ತಿರುವ ಡ್ರೋನ್‌ಗಳ ಬಗ್ಗೆಯೂ ಇಲ್ಲಿ ಭರಪೂರ ಮಾಹಿತಿ ಇದೆ. ಪ್ಲಾಸ್ಟಿಕ್‌ ಫ್ಯಾಕ್ಟ್‌ಶೀಟ್‌ನಲ್ಲಿನ ಆಘಾತಕಾರಿ ಅಂಶಗಳು ಪ್ಲಾಸ್ಟಿಕ್‌ ಬಳಕೆಯ ದುಷ್ಪರಿಣಾಮವನ್ನು ವಿವರಿಸುತ್ತವೆ. ಮೃತದೇಹವನ್ನು ಮಣ್ಣು ಮಾಡುವ ವಿಧಾನಕ್ಕೂ ಕಾಲಿಟ್ಟ ತಂತ್ರಜ್ಞಾನದ ಕುರಿತ ‘ಬರಲಿದೆ ಸಾವಯವ ಶವಸಂಸ್ಕಾರ’ ಲೇಖನ, ‘ನೀನಾರಿಗಾದೆಯೋ ಎಲೆ ಮಾನವ’ ಎಂಬ ಪ್ರಶ್ನೆಗೆ ಉತ್ತರದಂತಿದೆ. ಈ ಕೃತಿ ವಿಜ್ಞಾನ ಕ್ಷೇತ್ರದಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತ ಮಾಹಿತಿಯ ಕೋಶವಾಗಿದೆ.    

ಕೃತಿ: ಡೇಟಾ ದೇವರು ಬಂದಾಯ್ತು!

ಲೇ: ಗುರುರಾಜ್‌ ಎಸ್‌. ದಾವಣಗೆರೆ

ಪ್ರ: ಭೂಮಿ ಬುಕ್ಸ್‌, ಬೆಂಗಳೂರು

ಸಂ: 9449177628

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು