ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು | ಸಿದ್ಧಾಂತಗಳಿಲ್ಲದ ‘ದೇವ್ರು’

Last Updated 5 ಫೆಬ್ರುವರಿ 2022, 20:15 IST
ಅಕ್ಷರ ಗಾತ್ರ

ಕನ್ನಡದಲ್ಲಿ ಕಾದಂಬರಿಗಳು ನಿರಂತರವಾಗಿ ಪ್ರಕಟವಾಗುತ್ತಲೇ ಇವೆ. ತರುಣಾವಸ್ಥೆಯ ಕಾದಂಬರಿಕಾರರ ಸಂಖ್ಯೆ ಹೆಚ್ಚುತ್ತಿರುವುದು ಕೂಡ ಗಮನಾರ್ಹ. ಇದಕ್ಕೆ ಹೊಸ ಸೇರ್ಪಡೆ ಪದ್ಮನಾಭ ಭಟ್‌ ಶೇವ್ಕಾರ ಅವರ ‘ದೇವ್ರು’. ಕಥೆಗಳಿಂದ ಈಗಾಗಲೇ ಗಮನ ಸೆಳೆದಿದ್ದ ಅವರು, ಈಗ ಮೊದಲ ಕಾದಂಬರಿಯ ಮೂಲಕವೇ ಕಾದಂಬರಿಕಾರರಾಗಿಯೂ ಗಮನ ಸೆಳೆದಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಒಂದು ಸಣ್ಣ ಹಳ್ಳಿಯ ಜನಜೀವನವನ್ನು ವಸ್ತುವನ್ನಾಗಿಸಿಕೊಂಡಿರುವ ‘ದೇವ್ರು’, ನಮ್ಮ ಸಮಕಾಲೀನ ಸಮಾಜದ ಹಲವು ತಲ್ಲಣಗಳನ್ನು ಸೂಕ್ಷ್ಮವಾಗಿ ತನ್ನಲ್ಲಿ ಅಡಗಿಸಿಕೊಂಡಿದೆ. ಬದುಕಿನ ಸೌಂದರ್ಯವನ್ನೂ ಕುರೂಪವನ್ನೂ ಅನಾವರಣ ಮಾಡುತ್ತ ಸಾಗುತ್ತದೆ. ಆದರೆ ಕಾದಂಬರಿಕಾರ ಈ ಸೊಗಸನ್ನು ರಮಿಸುತ್ತ ಮೈ ಮರೆಯುವುದೂ ಇಲ್ಲ; ಸಮಸ್ಯೆಗಳಿಗೆ ಪರಿಹಾರವನ್ನು ಘೋಷಿಸಲು ತವಕಿಸುವುದೂ ಇಲ್ಲ. ಇದು ಒಳ್ಳೆಯ ಪಾತ್ರ, ಇದು ಕೆಟ್ಟ ಪಾತ್ರ – ಎಂಬ ವಿಂಗಡಣೆಯಲ್ಲಿ ಯಾವುದೋ ಪ್ರಚ್ಛನ್ನ ಸಿದ್ಧಾಂತವನ್ನು ಮಂಡಿಸುವ ಉತ್ಸಾಹ ಈ ಕಾದಂಬರಿಗೆ ಇಲ್ಲದಿರುವುದೇ ಇದರ ವಿಶೇಷತೆ. ಬರಹದಲ್ಲಿ ಕಾದಂಬರಿಕಾರ ಸಾಧಿಸಿರುವ ಸಂಯಮವೇ ಕಾದಂಬರಿಯು ಜೀವನಕ್ಕೆ ಕಲಿಸುತ್ತಿರುವ ಪಾಠ ಎಂಬಂತೆ ರೂಪ–ಸ್ವರೂಪಗಳ ಐಕ್ಯವನ್ನು ಈ ಕೃತಿಯಲ್ಲಿ ಕಾಣಬಹುದು. ‘ಜಗತ್ತಿಗೆ ಕೊಡುವಂಥದ್ದು ನನ್ನಲ್ಲಿ ಏನೇನೋ ಇದೆ’ ಎಂಬ ಪ್ರದರ್ಶನಕ್ಕೆ ತುತ್ತಾಗದೆ, ಇಡಿಯ ಲೋಕವನ್ನು ತನ್ನಲ್ಲಿ ತುಂಬಿಸಿಕೊಂಡು ವಿಸ್ತಾರವಾಗಬೇಕೆಂಬ ಧ್ಯಾನಸ್ಥಸ್ಥಿತಿಯೊಂದು ಕಾದಂಬರಿಯ ಉದ್ದಕ್ಕೂ ಕಾಣುತ್ತೇವೆ. ‘ದೇವ್ರು’ ಕೃತಿಯನ್ನು ಓದಿದ ಬಳಿಕ ‘ಪದ್ಮನಾಭ ಅವರಿಂದ ಇನ್ನಷ್ಟು ಕಾದಂಬರಿಗಳು ಬರಲಿ’ ಎಂದು ಮನಸ್ಸು ಹಾರೈಸುವುದು ಖಂಡಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT