ಮಂಗಳವಾರ, ಜನವರಿ 18, 2022
16 °C

ಒಳನೋಟ: ‘ದೇವುಡು’ ಬರೆದ ಶಾಸ್ತ್ರವೂ ಕಾವ್ಯವೇ!

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ದೇವುಡು ಲೋಕಕಥನ
(ದೇವುಡು ಸಮಗ್ರ ಲೇಖನಗಳ ಮಹಾಸಂಪುಟ)

ಸಂ: ಮಲ್ಲೇಪುರಂ ಜಿ. ವೆಂಕಟೇಶ

ಪ್ರ: ಅನ್ನಪೂರ್ಣ ಪಬ್ಲಿಷಿಂಗ್‌ ಹೌಸ್‌

ಸಂ: 9448291802

‘ದೇವುಡು’ ಎಂದ ಕೂಡಲೇ ಕನ್ನಡದ ಸಹೃದಯ ಓದುಗರಿಗೆ ನೆನಪಾಗುವುದು ‘ದರ್ಶನತ್ರಯ’ – ಮಹಾಬ್ರಾಹ್ಮಣ, ಮಹಾಕ್ಷತ್ರಿಯ ಮತ್ತು ಮಹಾದರ್ಶನ. ಈ ಕಾದಂಬರಿಗಳನ್ನಷ್ಟೇ ಅಲ್ಲದೆ, ಹಲವು ಪ್ರಕಾರಗಳಲ್ಲಿ ಹತ್ತಾರು ಮೌಲಿಕ ಕೃತಿಗಳನ್ನು ಅವರು ರಚಿಸಿದ್ದಾರೆ. ಆದರೆ ಅವರನ್ನು ಸಾರಸ್ವತಲೋಕದಲ್ಲಿ ಧ್ರುವತಾರೆಯಂತೆ ಸ್ಥಾಪಿಸಿದ್ದು ಈ ದರ್ಶನತ್ರಯವೇ ಹೌದು. ಕನ್ನಡದಲ್ಲಿ ಅವರಂತೆ ನಮ್ಮ ಭಾರತೀಯ ಪುರಾಣಪ್ರಪಂಚವನ್ನು ಕಟ್ಟಿಕೊಟ್ಟವರು ಮತ್ತೊಬ್ಬರಿಲ್ಲ ಎನ್ನಬಹುದು. ಅವರ ಈ ಕಾದಂಬರಿಗಳಲ್ಲಿ ಕಲ್ಪನೆಯೊಂದೇ ಸಮೃದ್ಧವಾಗಿಲ್ಲ, ಶಾಸ್ತ್ರಪ್ರಪಂಚದ ಸೂಕ್ಷ್ಮ ವ್ಯಾಖ್ಯಾನವೂ ಅಷ್ಟೇ ಸಮೃದ್ಧವಾಗಿದೆ. ಪ್ರಾಚೀನ ಭಾರತದ ವಿದ್ಯಾಪರಂಪರೆಯನ್ನೂ ಶಾಸ್ತ್ರೀಯ ತಿಳಿವಳಿಕೆಯನ್ನೂ ಗಟ್ಟಿ ಮಾಡಿಕೊಳ್ಳಲು ನಮಗೆ ಅವರ ಈ ಬರಹಗಳು ತುಂಬ ನೆರವಾಗುತ್ತವೆ. ಅವರ ಪ್ರತಿಭೆ ಮತ್ತು ಪಾಂಡಿತ್ಯಗಳಿಗೆ ಅವರ ಲೇಖನಗಳೂ ಸಾಕ್ಷಿಯಾಗಿವೆ. ಹಲವು ಕಡೆ ಚೆದುರಿಹೋಗಿದ್ದ, ಸಂಪಾದಿಸಲು ಕಷ್ಟಸಾಧ್ಯವಾದ ಹಲವು ಲೇಖನಗಳನ್ನು ಶ್ರಮಪಟ್ಟು ಸಂಪಾದಿಸಿದ್ದಾರೆ, ಮಲ್ಲೇಪುರಂ ಜಿ. ವೆಂಕಟೇಶ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಪ್ರಕಟವಾಗಿದ್ದ ಈ ಕೃತಿ ಹೊಸ ಹೆಸರಿನಲ್ಲಿ ಈಗ ಇನ್ನಷ್ಟು ಅಚ್ಚುಕಟ್ಟಾಗಿ ಪ್ರಕಟವಾಗಿದೆ.

‘ದೇವುಡು ಲೋಕಕಥನ’ – ಈ ಕೃತಿಯಲ್ಲಿ ದೇವುಡು ನರಸಿಂಹಶಾಸ್ತ್ರಿಗಳ 59 ಬಿಡಿ ಲೇಖನಗಳು ಸಂಕಲನಗೊಂಡಿವೆ. ಇವುಗಳಲ್ಲಿ ಮುಕ್ಕಾಲು ಭಾಗ ಭಾರತೀಯ ಪ್ರಾಚೀನ ಸಂಸ್ಕೃತಿ ಮತ್ತು ಜ್ಞಾನಪರಂಪರೆಗೆ ಮೀಸಲಾಗಿದೆ; ಇದೇ ಈ ಕೃತಿಯ ವಿಶೇಷ ಕೂಡ. ಏಕೆಂದರೆ ಪ್ರಾಚೀನ ಭಾರತೀಯ ಸಂಸ್ಕೃತಿಯ ಅರಿವನ್ನು ದೇವುಡು ಅವರು ಉಣಬಡಿಸುವ ರೀತಿ ಅಪೂರ್ವವಾಗಿದೆ. ಆಳವಾದ ಅಧ್ಯಯನ, ಸೂಕ್ಷ್ಮವಾದ ಲೋಕಾನುಭವ, ಅಂತರಂಗಕ್ಕೆ ಇಳಿದಿರುವ ಅರಿವಿನ ಸೌರಭವನ್ನು ಅವರ ಬರಹಗಳಲ್ಲಿ ಸಮೃದ್ಧವಾಗಿ ಕಾಣಬಹುದು. ಅವರ ಗದ್ಯದ ಶೈಲಿ ಅತ್ಯಂತ ಸರಳ; ಆದರೆ ತುಂಬ ಸುಂದರ. ಶಾಸ್ತ್ರವನ್ನು ಸತ್ಯವಾಗಿಯೂ ಸುಂದರವಾಗಿಯೂ ಶಿವವಾಗಿಯೂ ಅವರಂತೆ ನಿರೂಪಿಸಿದವರು ಕಡಿಮೆ. ಶಾಸ್ತ್ರವಿಷಯ ಇರಲಿ, ಸಾಮಾನ್ಯ ಸಂಗತಿಗಳನ್ನೂ ಅವರು ಲಕ್ಷಣೀಕರಿಸುವ, ವಿವರಿಸುವ ರೀತಿ ಮನೋಜ್ಞವಾದುದು. ಉದಾಹರಣೆಗೆ: ಬಂಧು ಎಂದರೆ ಯಾರು? ನಾವು ಏನೆಲ್ಲ ತರ್ಕಗಳ ಮೂಲಕ, ಭಾವಭಂಗಿಗಳ ಮೂಲಕ ಬಂಧುತ್ವದ ಲಕ್ಷಣವನ್ನು ವಿವರಿಸಲು ಮುಂದಾಗುತ್ತೇವೆ. ಆದರೆ ದೇವುಡು ಅವರು ನಿರೂಪಿಸುವ ರೀತಿ ಹೀಗೆ: ಬಂಧು ಎಂದರೆ ‘ಮನೆಯಲ್ಲಿ ಹಬ್ಬವಾಗಿ ಪಾಯಸ ಮಾಡಿದರೆ, ತಿಥಿಯಾಗಿ ವಡೆ ಮಾಡಿದರೆ, ಎರಡೂ ತಿನ್ನುವುದಕ್ಕೆ ಬರುವ, ಬರಬೇಕಾದ ಜನ.’

ವೇದಗಳು, ಉಪನಿಷತ್ತುಗಳು, ವೇದಾಂತ, ಭಗವದ್ಗೀತೆ, ಶಾಂಕರಸಿದ್ಧಾಂತ, ರಾಮಾಯಣ, ಕಾಲಿದಾಸ, ಪಂಚತಂತ್ರ – ಈ ವಿಷಯಗಳ ಅಂತರಂಗವನ್ನು ಕಾಣಬೇಕಾದರೆ ಇಲ್ಲಿರುವ ದೇವುಡು ಅವರ ಪ್ರಬಂಧಗಳನ್ನು ಓದಲೇಬೇಕು. ಇವುಗಳ ಜೊತೆಗೆ ನಾಟಕಕಲೆ, ಕರ್ನಾಟಕದ ಏಕೀಕರಣ, ಗ್ರಾಮವಿದ್ಯಾಭ್ಯಾಸ, ನಮ್ಮ ಕೆಲಸ – ಇವುಗಳನ್ನು ಕುರಿತ ಬರಹಗಳೂ ಇವೆ; ಕಾದಂಬರೀಕಾರರ ಸಮ್ಮೇಳನದಲ್ಲಿ ಅವರು ಮಾಡಿದ ಅಧ್ಯಕ್ಷ ಭಾಷಣ, ‘ಭೇರುಂಡೇಶ್ವರ’ವನ್ನು ಕುರಿತ ಬರಹಗಳೂ ತುಂಬ ಮೌಲಿಕವಾಗಿವೆ; ‘ಕರ್ಣಾಟಕ ಶಿಕ್ಷಾ’ ಕನ್ನಡಭಾಷೆಯ ಬಗ್ಗೆ ವಿಶಿಷ್ಟ ಪ್ರಬಂಧವಾಗಿದೆ.

ನಮಗೆ ಶಾಸ್ತ್ರಗಳ ಅಧ್ಯಯನ ಏಕೆ ಬೇಕು? ಈ ಪ್ರಶ್ನೆಗೆ ಉತ್ತರವೋ ಎಂಬಂತೆ ದೇವುಡು ಅವರು ಗೀತೆಯನ್ನು ಕುರಿತಂತೆ ಹೇಳಿರುವ ಈ ಮಾತುಗಳನ್ನು ನೋಡಬಹುದು: ‘ಸಂಜೆಗಳು ಎರಡು. ಸಾಯಂಸಂಧ್ಯೆಯೊಂದು ಪ್ರಾತಸ್ಸಂಧ್ಯೆಯೊಂದು. ಸಾಯಂಸಂಧ್ಯೆಯನ್ನೇ ನಾವು ಸಂಜೆಯೆನ್ನುವುದು. ಕೊಂಚ ಪ್ರಯತ್ನಪಟ್ಟರೆ ಸಾಯಂಸಂಧ್ಯೆಯನ್ನು ಪ್ರಾತಃಸಂಧ್ಯೆ ಮಾಡಿಕೊಳ್ಳಲು ಸಾಧ್ಯ. ಸಾಯಂಸಂಧ್ಯೆಯಲ್ಲಿ ಕತ್ತಲಿನ ಪ್ರಭಾವ ಹೆಚ್ಚು. ಪ್ರಾತಃಸಂಧ್ಯೆಯಲ್ಲಿ ಬೆಳಗಿನ ಪ್ರಭಾವ ಹೆಚ್ಚು.’

ನಮ್ಮ ಜೀವನದಲ್ಲಿ ಎದುರಾಗುವ ಕತ್ತಲೆಯನ್ನೂ ಅದರ ಭಯವನ್ನೂ ಹೋಗಲಾಡಿಸಬಲ್ಲದ್ದು ಶಾಸ್ತ್ರಗಳಿಂದ ಒದಗುವ ಸರಿಯಾದ ತಿಳಿವಳಿಕೆ ಎಂಬುದು ದೇವುಡು ಅವರ ಸಂದೇಶ. ಇದನ್ನು ಸ್ಪಷ್ಟಪಡಿಸುವುದಕ್ಕಾಗಿ ಅವರು ನಮ್ಮ ನಿತ್ಯಜೀವನದ ಉಪಮೆ–ರೂಪಕಗಳ ಮೂಲಕವೇ ನಮಗೆ ಅರಿವಿನ ಬೆಳಕನ್ನು ತಮ್ಮ ಬರಹಗಳ ಮೂಲಕ ದಾಟಿಸುತ್ತಿರುತ್ತಾರೆ. ಈ ವಿವರಗಳು ಎಷ್ಟು ಸಹಜವಾಗಿಯೂ ಶಕ್ತವಂತವಾಗಿಯೂ ಇರುತ್ತವೆ ಎಂದರೆ ಶಾಸ್ತ್ರವೇ ಮಾನುಷಾಕಾರವನ್ನು ತಾಳಿ, ನಮ್ಮೆದುರು ನಿಂತು ಸಂಭಾಷಿಸುತ್ತಿರುವಂತೆ ಆಹ್ಲಾದಕಾರಿಯಾಗಿರುತ್ತವೆ. ಇಲ್ಲಿಯ ಬರಹಗಳು ಶಾಸ್ತ್ರ ಎಂದವರಿಗೆ ಶಾಸ್ತ್ರ, ವಿದ್ಯೆ ಎಂದವರಿಗೆ ವಿದ್ಯೆ, ಕಾವ್ಯ ಎಂದವರಿಗೆ ಕಾವ್ಯ, ಜೀವನದರ್ಶನ ಎಂದವರಿಗೆ ಜೀವನದರ್ಶನ.

ದೇವುಡು ಅವರಂಥವರ ಅನುಭವನಿಷ್ಠವಾದ ಅರಿವು ನಮ್ಮ ಪರಂಪರೆಯ ದಿಟವಾದ ಗೊತ್ತು–ಗುರಿಗಳನ್ನು ಕಾಣಿಸಬಲ್ಲದ್ದು. ಇಂದಿನ ಕಾಲಕ್ಕೆ ಬೇಕಾದ ವಿವೇಕವನ್ನು ಶಾಸ್ತ್ರಗಳು ಹೇಗೆ ಒದಗಿಸಬಲ್ಲದ್ದು ಎಂಬುದನ್ನು ಅವರು ಹೀಗೆಂದಿದ್ದಾರೆ:

‘ಈಗ ಬೇಕಾಗಿರುವುದು ಇಳಿದ ಶ್ರುತಿಯ ತಂತಿಯನ್ನು ಬಿಗಿಮಾಡಿ ಶ್ರುತಿಯನ್ನು ಏರಿಸುವ ಕೆಲಸ. ಅದು ಹೋರಾಡುವ ಸಿದ್ಧಾಂತಗಳಿಗಿಂತ, ಸಮನ್ವಯ ಸಿದ್ಧಾಂತದಿಂದ ಸುಲಭವಾಗುವುದು. ಸಮನ್ವಯ ಸಿದ್ಧಾಂತವು ತೆರೆದ ಮನಸ್ಸಿನ ವಿಚಾರಲಹರಿ. ಅದು ತಲೆಗಳು ಒಡೆದು ರಕ್ತಪ್ರವಾಹ ಹರಿಯಿಸುವ ಕಡೆ ತಿರುಗುವುದಿಲ್ಲ. ಶ್ರೀ ಭಗವಾನ್‌ ವ್ಯಾಸರು ಬ್ರಹ್ಮಸೂತ್ರಗಳಲ್ಲಿ ರಚಿಸಿದ ನಾಲ್ಕು ಅಧ್ಯಾಯಗಳಲ್ಲಿ ಮೊದಲನೆಯದರ ಹೆಸರು ಸಮನ್ವಯ; ಎರಡನೆಯದು ಅವಿರೋಧ. ಅದು ನೆನಪಿನಲ್ಲಿರಬೇಕು.’

ಒಂದು ಮೌಲಿಕ ಕೃತಿಯನ್ನು ಸಂಪಾದಿಸಿ, ನಮಗೆ ಒದಗಿಸಿರುವ ಮಲ್ಲೇಪುರಂ ಜಿ. ವೆಂಕಟೇಶ ಪ್ರಶಂಸಾರ್ಹರೇ ಹೌದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು