ಶನಿವಾರ, ಫೆಬ್ರವರಿ 27, 2021
25 °C

ಆನೆಗಳೇ ಜೀವನವಾದವನ ಕತೆ

ಸಂದೀಪ ನಾಯಕ Updated:

ಅಕ್ಷರ ಗಾತ್ರ : | |

Deccan Herald

1920ರಲ್ಲಿ ಬರ್ಮಾದಲ್ಲಿ ತೇಗದ ಮರಗಳನ್ನು ಕಡಿದು ಸಾಗಿಸುವ ಬಾಂಬೇ ಬರ್ಮಾ ಟ್ರೇಡಿಂಗ್‌ ಕಾರ್ಪೊರೇಷನ್‌ಗೆ ಬಿಲ್ಲಿ ವಿಲಿಯಮ್ಸ್‌ ಎಂಬ ಬ್ರಿಟಿಷ್‌ ಹುಡುಗನೊಬ್ಬ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಅವನು ಅದಕ್ಕೂ ಮುನ್ನ ಬ್ರಿಟಿಷ್‌ ಸೇನೆಯಲ್ಲಿ ಕ್ಯಾಪ್ಟನ್‌ ಆಗಿ ಕೆಲಸ ಮಾಡಿದವನು. ತೇಗದ ದಿಮ್ಮಿಗಳನ್ನು ಸಾಗಿಸಿ ನದಿಗೆ ತಳ್ಳುವ ಆನೆಗಳ ಸನಿಹದ ಸಹವಾಸಕ್ಕಾಗಿ ಅವನು ಈ ನೌಕರಿಯನ್ನು ಆಯ್ದುಕೊಂಡಿರುವುದು. ಅದನ್ನು ಅವನು ಉದ್ದೇಶಪೂರ್ವಕವಾಗಿ, ತನ್ನ ಬದುಕಿನ ಗುರಿ, ಅರಿವಿನ ದಾರಿಯನ್ನಾಗಿಸಿಕೊಂಡವನು.

ಆನೆಗಳ ಬಗ್ಗೆ ಅವನಿಗೆ ತೀರದ ಕುತೂಹಲ, ಪ್ರೀತಿ. ಅವುಗಳ ಒಡನಾಟ ಅವನಿಗೆ ಬಹಳಷ್ಟನ್ನು ಕಲಿಸುತ್ತದೆ. ದಿಮ್ಮಿಗಳನ್ನು ಸಾಗಿಸುವ ಕೆಲಸ ಮಾಡಿಕೊಂಡಿರುವ ಈ ಬೃಹತ್‌ ಜೀವಿಗಳಲ್ಲಿ ಇರುವ ಸ್ನೇಹಪರತೆ, ಬುದ್ಧಿವಂತಿಕೆ, ತಮಾಷೆ, ಪ್ರೀತಿಯ ಅರಿವು ಅವನಿಗೆ ಅವುಗಳ ಸಹವಾಸದಲ್ಲಿ ಆಗುತ್ತದೆ. ಮುಂದೆ ಇದೇ ಆನೆಗಳು ಬಿಲ್ಲಿ ವಿಲಿಯಮ್ಸ್‌ನ ಬದುಕಿನಲ್ಲಿ ಬೇರೆ ಮಾಡಲಾಗದಂತೆ ಹೆಣೆದುಕೊಳ್ಳುತ್ತವೆ; ಅವನು ಸಹ ಅವುಗಳ ಜೀವ, ಜೀವನಕ್ಕೆ ಹಲಬಗೆಯಲ್ಲಿ ನೆರವಾಗುತ್ತಾನೆ. ಇದು ಒಂದು ಬಗೆಯಲ್ಲಿ ಬಿಲ್ಲಿ ವಿಲಿಯಮ್ಸ್‌ನ ಜೀವನಚರಿತ್ರೆ; ಇನ್ನೊಂದು ರೀತಿಯಲ್ಲಿ ಗಜಸಂಹಿತೆ.

ಓದುಗರಿಗೆ ಗೊತ್ತಿಲ್ಲದ ಆನೆಗಳ ಕುರಿತ ವಿವರಗಳು ಪುಸ್ತಕದುದ್ದಕ್ಕೂ ಬರುತ್ತವೆ. ಲೇಖಕಿ ವಿಕಿ ಕ್ರುಕ್‌ ಇಂಗ್ಲಿಷ್‌ನಲ್ಲಿ ಬರೆದ ‘ಎಲಿಫಂಟ್‌ ಕಂಪನಿ’ ಎಂಬ ಪುಸ್ತಕವನ್ನು ರಾಜಶ್ರೀ ಕುಳವರ್ಮ ಕನ್ನಡಕ್ಕೆ ‘ಬಂಡೂಲ’ ಎಂಬ ಹೆಸರಿನಲ್ಲಿ ತಂದಿದ್ದಾರೆ. ತುಂಬ ಕುತೂಹಲಕರ, ಆಸಕ್ತಿಕರ ಆನೆಗಳ ಕಥನ ಇದರಲ್ಲಿದೆ. ಈ ಅನುವಾದ ರಾಜಶ್ರೀ ಅವರ ಮೊದಲ ಅನುವಾದ. ಅದು ಭಿನ್ನ ಧಾಟಿಯನ್ನು ತಳೆದಿರುವ, ವಿಶಿಷ್ಟ ದಾರಿಯನ್ನು ತುಳಿದ ಅನುವಾದವೂ ಹೌದು. ಕನ್ನಡದಲ್ಲಿ ಸಾಧನೆಯ ತುತ್ತೂರಿ ಊದುವ ಆತ್ಮಕತೆ, ಜೀವನಚರಿತ್ರೆಗಳನ್ನು ಓದಿದವರಿಗೆ ಈ ಪುಸ್ತಕ ಕೊಂಚ ಬದಲಾವಣೆ ತರಬಲ್ಲದು; ಬೇರೆ ರುಚಿಯನ್ನು ಕೊಡಬಹುದು. ಏಕೆಂದರೆ ಈ ಜೀವನಚರಿತ್ರೆ ವ್ಯಕ್ತಿಕೇಂದ್ರಿತ ಅಲ್ಲ; ಅದು ಹಲವು ಜೀವಿಗಳನ್ನು ಒಳಗೊಂಡ ಸಮೂಹಕೇಂದ್ರಿತ ಬರವಣಿಗೆಯಾಗಿದೆ.

ಬ್ರಿಟಿಷ್‌ ಸಾಮ್ರಾಜ್ಯಶಾಹಿಯ ಇತಿಹಾಸದ ಸಣ್ಣಭಾಗವಾಗಿಯೂ ‘ಬಂಡೂಲ’ ಇದೆ. ಇದಕ್ಕೆ ಬಿಲ್ಲಿ ವಿಲಿಯಮ್ಸ್‌ನ ಆನೆಗಳ ಕುರಿತ ಕಾಳಜಿಯ ಮುಖ ಇರುವಂತೆಯೇ ಬ್ರಿಟಿಷರ ಹಗಲು ದರೋಡೆಯ ಅಮಾನವೀಯ ಮುಖವೂ ಇದೆ. ಅದು ಈಗ ಜಾಗತೀಕರಣ ಎಂದು ಗುರುತಿಸಲಾಗುವ ಲೂಟಿಯೇ ಮೂಲಸೂತ್ರವಾಗಿರುವುದರ ಅನಾದಿರೂಪವೂ ಹೌದು.

ಅಷ್ಟು ಅಗಾಧ ಪ್ರಮಾಣದಲ್ಲಿ ಬರ್ಮಾದ ಕಾಡುಗಳಿಂದ ತೇಗದ ಮರಗಳನ್ನು ಕಡಿದು ಸಾಗಿಸಲಾಗುತ್ತದೆ. ಅದಕ್ಕೆ ಬಳಕೆಯಾಗುವುದು ಬರ್ಮಾದ ಸಾವಿರಕ್ಕೂ ಹೆಚ್ಚು ಆನೆಗಳು, ಊಜೀಗಳು (ಮಾವುತರು). ಇದು ದರೋಡೆ ಎಂಬುದನ್ನು ಲೇಖಕಿ ಎಲ್ಲೂ ಉಲ್ಲೇಖಿಸುವುದಿಲ್ಲ; ಅದು ಅವರ ಉದ್ದೇಶವೂ ಅಲ್ಲ. ಅವರು ನೇರವಾಗಿ ಹೋಗುವುದು ಬಿಲ್ಲಿ ವಿಲಿಯಮ್ಸ್‌ ಆನೆಗಳ ಜೊತೆಗೆ ಮಾಡಿದ ಮತ್ತು ಅವುಗಳಿಗೆ ಮಾಡಿದ ಕೆಲಸಗಳ ಕಡೆಗೆ. ಹಾಗಾಗಿ ಇದಕ್ಕೊಂದು ವೇಗವಾದ ಓಟದ ಶೈಲಿಯೂ ದಕ್ಕಿದೆ.

ಇದನ್ನು ಮೂರು ಭಾಗಗಳಲ್ಲಿ ವಿಂಗಡಿಸಿಕೊಳ್ಳಬಹುದು. ಆರಂಭದ ಭಾಗ ಬಿಲ್ಲಿ ವಿಲಿಯಮ್ಸ್‌ ಮಾಡಿದ ಆನೆಗಳ ಅಧ್ಯಯನ, ಅವುಗಳ ಸ್ನೇಹ ಬೆಳೆಸಿದ್ದು, ಅವುಗಳಿಗೆ ವೈದ್ಯಕೀಯ ಸೇವೆ ಮಾಡಿದ್ದು, ತೇಗದ ಕಂಪನಿಯ ಕೆಲಸಗಳು ಇದರಲ್ಲಿ ಬರುತ್ತವೆ. ಅವನು ಆನೆಗಳ ಶಾಲೆ ತೆರೆದದ್ದು ಇನ್ನೊಂದು ಭಾಗ. ಹೌದು, ತೇಗದ ಕಂಪನಿಯಲ್ಲಿ ಕೆಲಸ ಮಾಡುವ ಆನೆಗಳಿಗೆ ಹುಟ್ಟಿದ ಮರಿಗಳಿಗೆ ಬಿಲ್ಲಿ ವಿಲಿಯಮ್ಸ್‌ ಮುಂದಿನ ‘ನೌಕರಿ’ಗಾಗಿ ತಯಾರು ಮಾಡುವ ಶಾಲೆಯನ್ನು ತೆರೆಯುತ್ತಾನೆ. ಆ ಶಾಲೆಯಲ್ಲಿ ಕಲಿತ ಮರಿಗಳು ಮುಂದೆ ಕಂಪನಿಗೆ ಉಪಯೋಗವೂ ಆಗುತ್ತವೆ. ಅವನು ಮಾಡಿದ ಈ ಶಾಲೆಯಿಂದ ಎರಡು ಬಗೆಯ ಪ್ರಯೋಜನಗಳಾಗುತ್ತವೆ. ಖೆಡ್ಡಾದಲ್ಲಿ ಕೆಡವಿ ಆನೆಗಳನ್ನು ಹಿಡಿಯುವ ಹಿಂಸಾತ್ಮಕ ಕ್ರಮಗಳು ಕಡಿಮೆ ಆಗುವುದು ಒಂದಾದರೆ, ಇನ್ನೊಂದು ಕಡಿಮೆ ಬಂಡವಾಳದಲ್ಲಿ ಆನೆಗಳು ಕಂಪನಿಗೆ ಸಿಗುತ್ತವೆ.

ಮುಂದಿನ ಭಾಗ ಎರಡನೇ ಮಹಾಯುದ್ಧದಲ್ಲಿ ಜಪಾನಿನ ವಿರುದ್ಧ ಹೋರಾಡಲು ಬ್ರಿಟಿಷ್‌ ಸೇನೆಗೆ ಆನೆಗಳ ಅಗತ್ಯ ಬೀಳುತ್ತದೆ. ಈ ಕೆಲಸಕ್ಕಾಗಿ ಬ್ರಿಟಿಷ್‌ ಸೇನೆ ಬಿಲ್ಲಿ ವಿಲಿಯಮ್ಸ್‌ನನ್ನು ನೇಮಿಸಿಕೊಳ್ಳುತ್ತದೆ. ಈ ಭಾಗ ಮತ್ತು ಇದಕ್ಕೂ ಮುನ್ನ ಬ್ರಿಟಿಷ್‌ ಆಳ್ವಿಕೆಯಲ್ಲಿದ್ದ ಬರ್ಮಾವನ್ನು ಹಂತಹಂತವಾಗಿ ಆಕ್ರಮಿಸಿಕೊಳ್ಳುತ್ತ ಬರುವ ಜಪಾನ್‌ ಸೇನೆಯಿಂದ ಬರ್ಮಾದ ಜನರು ಮತ್ತು ಆನೆಗಳನ್ನು ರಕ್ಷಿಸಿಕೊಳ್ಳಲು ಬಿಲ್ಲಿ ವಿಲಿಯಮ್ಸ್‌ ಮಾಡುವ ಭಾರತದ ಕಡೆಗಿನ ಪಲಾಯನ ಅತ್ಯಂತ ದಾರುಣವಾಗಿದೆ.

ಜೀವದ ಉಳಿವಿಗಾಗಿನ ಆ ಪಲಾಯನದಲ್ಲಿ ಅಸಂಖ್ಯ ಜನರು ಸಾಯುತ್ತಾರೆ. ಈ ಎಲ್ಲ ಸಂಗತಿಗಳಿಂದಾಗಿ ಇದು ಆನೆಗಳ ಕುರಿತ ರೋಚಕ ಕಥನ ಮಾತ್ರವಾಗಿ ಉಳಿಯುವುದಿಲ್ಲ; ಇತಿಹಾಸದ ಬೇರೊಂದು ಮುಖವನ್ನು ಕಾಣಿಸುವ ದಾಖಲೆಯೂ ಆಗುತ್ತದೆ. ಇಲ್ಲೆಲ್ಲ ಬಿಲ್ಲಿ ವಿಲಿಯಮ್ಸ್‌ ಮಾಡುವ ಕೆಲಸಗಳು, ಜನರಿಗೆ ನೆರವಾಗುವ, ಆನೆಗಳನ್ನು ಕಾಪಾಡಿಕೊಳ್ಳುವ ರೀತಿ ಅವನನ್ನು ನಿಜವಾದ ಕಥಾನಾಯಕನನ್ನಾಗಿಸುತ್ತವೆ. ಬಿಲ್ಲಿ ಮಾತ್ರ ಇದರ ನಾಯಕನಲ್ಲ. ‘ಬಂಡೂಲ’ (ಇದು ಬ್ರಿಟಿಷರ ವಿರುದ್ಧ ಹೋರಾಡಿದ ಬರ್ಮಾದ ಮಹಾಯೋಧನ ಹೆಸರು) ಎಂಬ ಅಸಾಮಾನ್ಯ ದೇಹದ ಬುದ್ಧಿವಂತ ಆನೆಯೂ ಈ ಜೀವನಚರಿತ್ರೆಯ ಮುಂಚೂಣಿಯಲ್ಲಿದೆ. ಅದು ಅವನ ವೃತ್ತಿಯ ಉದ್ದಕ್ಕೂ ಜೊತೆಯಾಗಿರುತ್ತದೆ. ಅದು ಅಸಾಧಾರಣ ಮಾತ್ರವಲ್ಲ, ಆನೆಗಳಲ್ಲೇ ವಿಶಿಷ್ಟವಾದದ್ದು ಕೂಡ. ಇದರ ಕೊನೆ ಮಾತ್ರ ಯಾರೂ ಊಹಿಸದ ರೀತಿಯಲ್ಲಿ ಆಗುತ್ತದೆ. ಇದೂ ಸೇರಿದಂತೆ ಅನೇಕ ಯಾತನೆಯ ಕ್ಷಣಗಳು ಇದರಲ್ಲಿವೆ. ಆನೆ ಮನುಷ್ಯನ ಈ ಕತೆಯನ್ನು ಲೇಖಕಿ ವಿಕಿ ಕ್ರುಕ್‌ ಅವರು ಬಿಲ್ಲಿ ವಿಲಿಯಮ್ಸ್‌ ಬರೆದ ಐದು ಪುಸ್ತಕಗಳು, ಬರೆದುಕೊಂಡ ಟಿಪ್ಪಣಿಗಳು, ಅವನ ಹೆಂಡತಿ ಸೂಸಾನ್ ಬರೆದ ಪುಸ್ತಕ, ತೇಗದ ಕಂಪನಿಯ ದಾಖಲೆಗಳು ಮತ್ತು ಬಿಲ್ಲಿ ವಿಲಿಯಮ್ಸ್‌ನ ಮಗ ಟ್ರೀವ್ ಕೊಟ್ಟ ದಾಖಲೆಗಳನ್ನು ಆಧರಿಸಿ ಬರೆದಿದ್ದಾರೆ. ಅದು ಜೀವನಚರಿತ್ರೆಯ ಕುರಿತ ನಮ್ಮ ಕಲ್ಪನೆಯನ್ನು ಕೊಂಚ ಪಲ್ಲಟಗೊಳಿಸುವುದರೊಂದಿಗೆ ಆನೆಗಳ ಕುರಿತ ತಿಳಿವನ್ನೂ ಕೊಡುತ್ತದೆ. ಅದಕ್ಕೂ ಮಿಗಿಲಾಗಿ ಒಂದು ಓದಬಲ್ಲ ಮಾನವೀಯ ಕಥನವನ್ನು ನಿರೂಪಿಸುತ್ತದೆ. 

**

ಬಂಡೂಲ

ಮೂಲ: ವಿಕಿ ಕಾನ್‌ಸ್ಟಂಟೇನ್‌ ಕ್ರುಕ್

ಲೇಖಕರು: ರಾಜಶ್ರೀ ಕುಳಮರ್ವ

ಪ್ರಕಾಶನ: ಛಂದ ಪುಸ್ತಕ ಬೆಂಗಳೂರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.