ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು | ಕೃಷ್ಣಲೀಲೆಯಲ್ಲಿ ಅಲಂಕಾರ ದರ್ಶನ

Last Updated 4 ಜೂನ್ 2022, 19:45 IST
ಅಕ್ಷರ ಗಾತ್ರ

ಅಲಂಕಾರ ಎಂಬುದು ಕಾವ್ಯಲೋಕದ ವಿಶಿಷ್ಟ ಭಾಷೆ. ಅಲಂಕಾರವಿಲ್ಲದೆ ಕಾವ್ಯ ಇರಲು ಸಾಧ್ಯವೇ ಇಲ್ಲ. ಸಂಸ್ಕೃತಸಾಹಿತ್ಯದಲ್ಲಿ ಅಲಂಕಾರಗಳ ಚರ್ಚೆ ತುಂಬ ನಡೆದಿದೆ; ಕಾವ್ಯಮೀಮಾಂಸೆಯನ್ನು ಅಲ್ಲಿ ‘ಅಲಂಕಾರಶಾಸ್ತ್ರ’ ಎಂದೂ ಕರೆಯುವ ವಾಡಿಕೆಯಿದೆ.

ಅಲಂಕಾರ ಎಂದರೆ ಸೌಂದರ್ಯವನ್ನು ತುಂಬುವ ಪ್ರಕ್ರಿಯೆ. ಕಾವ್ಯದಲ್ಲಿ ಇದನ್ನು ಬಗೆಬಗೆಯಾಗಿ ತುಂಬಬಹುದು. ಹೀಗಾಗಿ ಅಲಂಕಾರಗಳನ್ನು ನೂರಾರು ಹೆಸರುಗಳಲ್ಲಿ ವರ್ಗೀಕರಣ ಮಾಡಬಹುದು. ಸಂಸ್ಕೃತದಲ್ಲಿ ‘ಕುವಲಯಾನಂದ’ದಂಥ ಗ್ರಂಥವು ಅಲಂಕಾರಗಳ ಲಕ್ಷಣವನ್ನೂ ಅದರ ಉದಾಹರಣೆಯನ್ನೂ ಒದಗಿಸುತ್ತದೆ. ನಮ್ಮ ಮಧ್ಯೆ ಇರುವ ಸಂಸ್ಕೃತದ ಶ್ರೇಷ್ಠ ವಿದ್ವಾಂಸರಲ್ಲಿ ಒಬ್ಬರೆನಿಸಿರುವ ಎಚ್‌. ವಿ. ನಾಗರಾಜ್ ರಾವ್‌ ಅವರು ಈಗ ವಿಶಿಷ್ಟ ಕೃತಿಯೊಂದನ್ನು ರಚಿಸಿ ಕಾವ್ಯವ್ಯಾಸಂಗಿಗಳಿಗೆ ಉಪಕಾರ ಮಾಡಿದ್ದಾರೆ. ನೂರು ಅಲಂಕಾರಗಳ ಲಕ್ಷಣವನ್ನು ಅವರು ಪದ್ಯರೂಪದಲ್ಲಿಯೇ ರಚಿಸಿ‘ಶತಾಲಂಕಾರಕೃಷ್ಣಶತಕ’ ಎಂಬ ಹೆಸರಿನಲ್ಲಿ ಪ್ರಕಟಿಸಿದ್ದಾರೆ. ಈ ಕೃತಿಯ ಇನ್ನೊಂದು ವೈಶಿಷ್ಟ್ಯ ಎಂದರೆ ಎಲ್ಲ ಪದ್ಯಗಳೂ ಕೃಷ್ಣನನ್ನೇ ವಸ್ತುವನ್ನಾಗಿಸಿಕೊಂಡಿರುವುದು. ಕೃಷ್ಣನ ಚರಿತ್ರೆ ನಮಗೆ ಸುಲಭವಾಗಿ ದಕ್ಕುವುದರಿಂದ ಅಲಂಕಾರಗಳ ಲಕ್ಷಣಗಳು ಸುಲಭವಾಗಿಯೂ ಅರ್ಥವಾಗುತ್ತವೆ. ಮೂಲ ಸಂಸ್ಕೃತ ಪದ್ಯಗಳ ಜೊತೆಗೆ ಅವುಗಳ ಕನ್ನಡ ಅನುವಾದ ಮತ್ತು ಅಲಂಕಾರಗಳ ಲಕ್ಷಣವಿವರಣೆಯನ್ನೂ ನೀಡಿದ್ದಾರೆ.

ಈ ಅಲಂಕಾರಪದ್ಯಗಳ ಜೊತೆಗೆ ಪುಸ್ತಕದಲ್ಲಿ ‘ಶಾರ್ದೂಲವಿಕ್ರೀಡಿತಶತಕ’ ಎಂಬ ಪದ್ಯಗುಚ್ಛವನ್ನೂ ಸೇರಿಸಿದ್ದಾರೆ. ಶಾರ್ದೂಲವಿಕ್ರೀಡಿತವೃತ್ತದಲ್ಲಿ ನೂರು ಪದ್ಯಗಳನ್ನು ಸುಭಾಷಿತಗಳಾಗಿ ಸಂಸ್ಕೃತದಲ್ಲಿ ರಚಿಸಿ, ಅವುಗಳ ಕನ್ನಡ ಅನುವಾದವನ್ನೂ ಒದಗಿಸಿದ್ದಾರೆ. ಪ್ರಾಚೀನ ಪರಂಪರೆಯಲ್ಲಿರುವಂತೆ ಈ ಸುಭಾಷಿತಗಳನ್ನು ಸಮಸ್ಕಾರಪದ್ಧತಿ, ವಿದ್ವತ್ಪದ್ಧತಿ, ಕವಿಪದ್ಧತಿ, ಧನಪದ್ಧತಿ, ಭಕ್ತಿಪದ್ಧತಿ, ಶೃಂಗಾಪದ್ಧತಿ, ಗುರುಶಿಷ್ಯಪದ್ಧತಿ, ವೈರಾಗ್ಯಪದ್ಧತಿ ಎಂದು ಹಲವು ಪದ್ಧತಿಗಳಲ್ಲಿ ವಿಂಗಡಿಸಲಾಗಿದೆ. ನಾಗರಾಜರಾಯರ ಈ ಕೃತಿಗೆ ಟಿ. ವಿ. ವೆಂಕಟಾಚಲಶಾಸ್ತ್ರಿ ಅವರ ಮುನ್ನುಡಿಯಿದೆ.

ಕೃತಿ: ಶತಾಲಂಕಾರಕೃಷ್ಣಶತಕ ಮತ್ತು ಶಾರ್ದೂಲವಿಕ್ರೀಡಿತಶತಕ

ಲೇ: ಎಚ್‌. ವಿ. ನಾಗರಾಜರಾವ್‌

ಪ್ರ: ಚಾರು ಸಾಂಸ್ಕೃತಿಕ ಪ್ರಕಾಶನ

ಪುಟಗಳು: 104

ಬೆಲೆ: ₹ 100

ಸಂ: 97403 28196

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT