ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ‘ಶ್ರೇಷ್ಠ’ ವ್ಯಸನದ ಗೋಡೆ ಮೇಲಿನ ನೆತ್ತರ ಕಲೆ !

ನಕ್ಷತ್ರಗಳ ಸುಟ್ಟ ನಾಡಿನಲ್ಲಿ ಪ್ರವಾಸ ಕಥನ
Last Updated 22 ಅಕ್ಟೋಬರ್ 2021, 6:24 IST
ಅಕ್ಷರ ಗಾತ್ರ

ಹಿಟ್ಲರ್‌ ಜಗತ್ತು ಕಂಡ ಕ್ರೂರಿ ಇಂದಿಗೂ ವಿಶ್ವದ ಯಾವುದೇ ಭಾಗದಲ್ಲಿ ಕ್ರೌರ್ಯ, ದಬ್ಬಾಳಿಕೆ ಮತ್ತು ಸರ್ವಾಧಿಕಾರಿ ಧೋರಣೆಗಳನ್ನು ಟೀಕಿಸಲು ಬಳಸುವ ಪದವೂ ಹೌದು.

ಭಾರತಿ ಬಿ.ವಿ ಅವರುಪೋಲೆಂಡ್‌ನಲ್ಲಿ ಪ್ರವಾಸ ಮಾಡಿ, ಕಟ್ಟಿಕೊಟ್ಟಿರುವ ‘ನಕ್ಷತ್ರಗಳ ಸುಟ್ಟ ನಾಡಿನಲ್ಲಿ’ (ಇದು ಪೋಲೆಂಡ್‌ನ ಕಾಡುವ ಪ್ರವಾಸ ಕಥನ) ಪುಸ್ತಕ ಓದಲು ಪ್ರಾರಂಭಿಸಿದರೆ, ಹಿಟ್ಲರ್‌ನ ಬಗ್ಗೆ ನಾವು ತುಂಬಾ ಕಡಿಮೆ ತಿಳಿದುಕೊಂಡಿದ್ದೇವೆ, ನಾವು ಅಂದಾಜಿಸಿದ್ದಕ್ಕಿಂತ ಸಾವಿರ ಪಟ್ಟು ಅವನು ಮತ್ತು ಅವನ ಜೊತೆಗಿದ್ದವರು ಕ್ರೂರಿಗಳು, ವಿಕೃತರು ಆಗಿದ್ದರು ಎನ್ನುವುದು ಸಾಬೀತಾಗುತ್ತದೆ.

ಚರಿತ್ರೆಯಲ್ಲಿ ದಾಖಲಾದ ಅಮಾನುಷ ಜ್ಯೂ ದ್ವೇಷಕ್ಕೆ ಬಲಿಯಾದವರ ಸಂಖ್ಯೆ (ಯುರೋಪ್‌ನಲ್ಲಿ) 60 ಲಕ್ಷ. ವಿಷ ವರ್ತುಲದಲ್ಲಿ ಸತ್ತವರ ಅಂಕಿ– ಅಂಶ, ಅವರನ್ನು ಕೊಂದ ವಿಧಾನಗಳನ್ನು ಓದುವಾಗ ಶವಗಳ ಸಮುದ್ರದ ಮಧ್ಯೆ ಸಿಲುಕಿದ ಅನುಭವ ಆಗುತ್ತದೆ. ಹಿಟ್ಲರ್‌ನ ವಿಷ ಕೋಟೆಯಲ್ಲಿ ಸಿಲುಕಿದವರಲ್ಲಿ ಅಲ್ಲೇ ಕೊನೆ ಉಸಿರೆಳೆದವರೇ ಹೆಚ್ಚು.

ಯಾರಿಗೂ ಸಹಾಯ ಮಾಡಲಾಗದ ಅಸಹಾಯಕತೆ. ಕಣ್ಣ ಮುಂದೆ ತಮ್ಮವರು ಸಾವನ್ನಪ್ಪುತ್ತಿದ್ದರೂ, ಸಾಯುವ ಪಾಳಿ ನಾಳೆಗೆ ಮುಂದೂಡಿದೆ. ಮತ್ತೊಂದು ದಿನ ಬದುಕಬಹುದು ಎನ್ನುವ ಅಲ್ಪತೃಪ್ತಿ. ಬೆಂಕಿ ಶಾಖದಲ್ಲೇ ಬೆಚ್ಚಗಿದ್ದೇವೆ ಎಂಬ ಭ್ರಮೆಗಳಲ್ಲಿ ಲಕ್ಷಾಂತರ ಜ್ಯೂಗಳು ಜೀವ ಕಳೆದುಕೊಳ್ಳುತ್ತಾರೆ.

ಪ್ರಯೋಗ ಕ್ಯಾಂಪ್‌ಗಳಲ್ಲಿ ವ್ಯಕ್ತಿಗೆ ಜೀವಂತ ಇರುವಾಗಲೇ ಅಂಗಾಂಗಗಳನ್ನು ಬೇರ್ಪಡಿಸಲಾಗುತ್ತದೆ. ಕಣ್ಣು ಕೀಳುವುದು, ಮೂಳೆ ಮುರಿಯುವುದು, ದೇಹದಿಂದ ಉಸಿರು ಹೋಗುವವರೆಗೆ ರಕ್ತ ಹೀರಿಕೊಳ್ಳುವುದು, ಅವಳಿ ಮಕ್ಕಳನ್ನು ಮಿಲನ ಮಾಡಿಸಿ ಅವರಿಂದ ಹುಟ್ಟಿದ ಮಗುವೊಂದನ್ನುಬೆಂಕಿ(ಓವನ್‌)ಗೆ ಎಸೆಯಲಾಗುತ್ತಿತ್ತು ಎನ್ನುವುದನ್ನು ಕಣ್ಣಿಗೆ ಕಟ್ಟುವಂತೆ ಬರೆಯಲಾಗಿದೆ.

ಜಗತ್ತಿನ ದೊಡ್ಡ ಸ್ಮಶಾನ ಎಂದೇ ಕುಖ್ಯಾತಿ ಗಳಿಸಿರುವ ಆಶ್ವಿಟ್ಜ್‌ ಸ್ಮಶಾನ ಸುತ್ತಾಡಿ, (ಆರು ಎಕ್ಸ್‌ ಟರ್ಮಿನೇಷನ್‌ ಕ್ಯಾಂಪ್‌ಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜ್ಯೂಗಳನ್ನು ಕೊಂದ ಸ್ಥಳ)ದ ಬಗ್ಗೆ ವಿವರಿಸುವ ಮುನ್ನ ಐಸಿಯುನಲ್ಲಿರುವ ಕೊನೆಯ ಕ್ಷಣಗಳ ಬಗ್ಗೆ ವೈದ್ಯರು ಎಚ್ಚರಿಸಿ, ಎಲ್ಲ ಕಳೆದುಕೊಳ್ಳುವಿಕೆಗೂ ಮಾನಸಿಕವಾಗಿ ಸಿದ್ಧರಾಗಿರಿ ಎಂದು ದೃಢ ದನಿಯಲ್ಲಿ ಹೇಳುವಂತೆ ಲೇಖನಗಳಿವೆ.

ಈ ಸ್ಮಶಾನದ ಬಗ್ಗೆ ಚರಿತ್ರಕಾರ ರಾಬರ್ಟ್‌ ಹೇಳಿರುವಂತೆ ‘ನಾವು ಈ ಸ್ಥಳವನ್ನು ಸಂರಕ್ಷಿಸದೆ ಹಾಗೆಯೇ ಉಳಿಸಿ, ಅಲ್ಲಿನ ಶೂನ್ಯತೆಯನ್ನು ಕಾಪಿಡಬೇಕು. ಅಲ್ಲಿ ಕಾಲಿಡುವವರಿಗೆ ಅಂಥ ಹೀನಚರಿತ್ರೆ ಎಂದಿಗೂ ಪುನರಾವರ್ತನೆ ಆಗಬಾರದು ಎನ್ನುವ ತೀವ್ರವಾದ ಭಾವನೆ ಹುಟ್ಟಬೇಕು. ಅದೇ ಅಲ್ಲಿ ಸತ್ತವರಿಗೆ ತಕ್ಕುದಾದ ಸ್ಮಾರಕ’ ಎನ್ನುತ್ತಾರೆ.

ಇತಿಹಾಸವನ್ನು ಏಕೆ ಓದಬೇಕು ಎನ್ನುವ ಕುರಿತು ಸಹ ವಿವರಿಸಲಾಗಿದೆ. ಇತಿಹಾಸದಿಂದ ಪಾಠ ಕಲಿಯಲು ಅದರ ಕರಾಳತನ ಮರುಸೃಷ್ಟಿ ಆಗದಂತೆ ಕಾಪಾಡಲು ಅದರ ಅಧ್ಯಯನ ಅವಶ್ಯ ಎಂದು ಉಲ್ಲೇಖಿಸಲಾಗಿದೆ.

ರಸಾಯನ ಶಾಸ್ತ್ರಜ್ಞ ಫ್ರಿಟ್ಜ್‌ ಹಾಬರ್‌ ಕಂಡುಹಿಡಿದವಿಷಾನಿಲ ‘ಜೈಕ್ಲೋನ್‌ ಬಿ’ ಹರಳನ್ನು ಬಳಸಿಯೇ ಗ್ಯಾಸ್‌ ಛೇಂಬರ್‌ಗಳಲ್ಲಿ ಲಕ್ಷ ಲಕ್ಷ ಜನರನ್ನುಉಸಿರುಗಟ್ಟಿಸಿ ಕೊಲ್ಲಲಾಗಿತ್ತು. ಈ ವಿಷ ಅನಿಲ ತಾಗಿದ ಹತ್ತೇ ನಿಮಿಷದಲ್ಲಿಲಿಕ್ವಿಡ್‌ ಗಾಳಿಗೆ ಸೊಳ್ಳೆಗಳು ನೆಲಕ್ಕುರುಳುವಂತೆ ಸಾವಿರಾರು ಜನ ಸಾವನ್ನಪ್ಪುತ್ತಿದ್ದರು!ಅಷ್ಟೆಲ್ಲ ಜ್ಯೂಗಳನ್ನು ಕೊಲ್ಲಲು ವಿಷ ಉಣಿಸಿದವನು ಸಹ ಒಬ್ಬ ಜ್ಯೂ!

ಕ್ರೌರ್ಯದ ಪರಾಕಾಷ್ಠೆಯ ಪ್ರಯೋಗಗಳು: ಯಾವ ಗಾಯಕ್ಕೆ ಯಾವ ಮದ್ದು ನೀಡಿದರೆ ವಾಸಿಯಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳಲು ಮೊದಲು ಜ್ಯೂಗಳಿಗೆ ರೋಗ ತಗುಲಿಸಿ, ಮೂಳೆ ಮುರಿದು ಅವುಗಳ ಮೇಲೆ ಮದ್ದು ಕಂಡು ಹಿಡಿಯುವ ಪ್ರಯೋಗಗಳುವೈದ್ಯಕೀಯ ಪ್ರಯೋಗ ಬ್ಲಾಕ್‌ಗಳಲ್ಲಿ ನಡೆದಿತ್ತು. ಜ್ಯೂಗಳಿಗೆ ಮಕ್ಕಳು ಆಗದಂತೆ ತಡೆಯಲು ನಡೆಸಿದಪ್ರಯೋಗಗಳು ಮತ್ತೊಂದು ಕ್ರೌರ್ಯ. ಗರ್ಭಕಂಠದ ಮೂಲಕ ವಿಷಪೂರಿತ ವಸ್ತುವನ್ನು ಚುಚ್ಚುವುದು ಮತ್ತು ಕ್ಷ– ಕಿರಣಗಳನ್ನು ಹಾಯಿಸಿ ಸಂತಾನೋತ್ಪತ್ತಿ ಅಂಗಾಂಗಗಳನ್ನು ಸುಡುವ ವಿಧಾನ ಅನುಸರಿಸಲಾಗುತ್ತಿತ್ತು!

ನಾಜಿಗಳಷ್ಟೇ ಶೇಷ್ಠರು ಎನ್ನುವ ವ್ಯಸನ ತುಂಬಿದ ಹಿಟ್ಲರ್‌ ಚಿಮ್ಮಿಸಿದ ನೆತ್ತರ ಕಲೆ ಶತಮಾನಗಳ ಮಳೆಯಿಂದಲೂ ಅಳಿಸಲಾಗದಷ್ಟು ಗಾಢವಾಗಿ ಉಳಿದು ಬಿಟ್ಟಿವೆ. ಜ್ಯೂಗಳನ್ನು ‘ಒರೆಸ’ಲು ಎನ್ನುವ ಪದವನ್ನು ಲೇಖಕಿ ಉದ್ದೇಶಪೂರ್ವಕವಾಗಿಯೇ ಬಳಸಿದ್ದಾರೆ. ಪುಸ್ತಕ ಕೇವಲ ಪ್ರವಾಸ ಕಥನವಾಗಿಲ್ಲ. ಇದಕ್ಕೆ ಅಧ್ಯಯನವೂ ನಡೆದಿದೆ ಎನ್ನುವುದನ್ನು ಅವರು ನೀಡುವ ವಿವರಗಳು ಹೇಳುತ್ತವೆ.

ಕೊನೆಯದಾಗಿ ಮುಖಪುಟದ ಚಿತ್ರ ಪೊಲೇಂಡ್‌ನದ್ದೇ ಆಗಿದ್ದರೆ ಚಂದವಿತ್ತು. ಚಿತ್ರಶೀರ್ಷಿಕೆಗಳು ಇರಬೇಕಿತ್ತು. ಇವೆರಡನ್ನು ಬಿಟ್ಟರೆ ಇದೊಂದು ಅತ್ಯುತ್ತಮ ಪುಸ್ತಕ ಎನ್ನುವುದರಲ್ಲಿ ಯಾವ ಅನುಮಾನವೂ ಉಳಿಯುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT