ಗೋವಿಂದ ಪೈಗಳ ಗೊಲ್ಗೊಥಾ ಕಾವ್ಯ

ಬುಧವಾರ, ಏಪ್ರಿಲ್ 24, 2019
31 °C

ಗೋವಿಂದ ಪೈಗಳ ಗೊಲ್ಗೊಥಾ ಕಾವ್ಯ

Published:
Updated:
Prajavani

‘ಗೊಲ್ಗೊಥಾ’ ಮಂಜೇಶ್ವರ ಗೋವಿಂದ ಪೈಗಳ ಒಂದು ಮಹಾಕಾವ್ಯಖಂಡ. (377 ಸಾಲುಗಳು). ಗೊಲ್ಗೊಥಾ ಎನ್ನುವುದು ಜೆರುಸಲೇಂ ನಗರದ ಅಗಸೆಯ ಹೊರಗಿನ ದಿನ್ನೆ. ಯೇಸುವನ್ನು ರೋಮನ್ ಚಕ್ರಾಧಿಪತಿ ಕೈಸರನ ಪ್ರತಿನಿಧಿ ಪಿಲಾತನು ವಿಚಾರಣೆ ನಡೆಸಿ ಬಲವಂತವಾಗಿ ಮರಣದಂಡನೆಗೆ ಗುರಿಪಡಿಸಿದ್ದು, ಮುಂದೆ ಪರಿಸಾಯರು ಅದನ್ನು ಕಾರ್ಯರೂಪಕ್ಕೆ ತಂದು ಶಿಲುಬೆಗೇರಿಸಿದ್ದು ಇಲ್ಲಿನ ವಸ್ತು.

ಇಲ್ಲಿನ ಕಥೆ ಪೈಯವರ ಸ್ವಂತ ಸೃಷ್ಟಿಯೇನೂ ಅಲ್ಲ. ಬೈಬಲ್‌ನ ಕ್ರಿಯೆಗಳನ್ನು ಕಾವ್ಯಾತ್ಮಗೊಳಿಸಿದ್ದೇ ಅವರ ಹೆಗ್ಗಳಿಕೆ. ಬೈಬಲ್‌ನ ಹೊಸ ಒಡಂಬಡಿಕೆಯ ಮತ್ತಾಯ, ಮಾರ್ಕ, ಲೂಕ ಹಾಗೂ ಯೋಹಾನ, ಇವರ ನಾಲ್ಕು ಸುವಾರ್ತೆಗಳಲ್ಲಿ ದೊರೆವ ಮಾಹಿತಿಗಳೇ ಈ ಕಾವ್ಯವ್ಯಾಪಾರದ ಬಂಡವಾಳ. ಅದಕ್ಕೆ ಅವರ ಕಾವ್ಯಪ್ರತಿಭೆ ರಕ್ತಪೂರಣ ಮಾಡಿ, ಈ ಮಹಾಕಾವ್ಯಖಂಡವನ್ನು ಭವ್ಯತೆಯಲ್ಲಿ ಮಹಾಕಾವ್ಯದ ಮಟ್ಟಕ್ಕೆ ಏರಿಸಿದೆ. ಸುವಾರ್ತೆಗಳಲ್ಲಿ ಹೇಳಿದ ಗಲಿಲಾಯ ಸಮುದ್ರ, ಯೋರ್ದನ್ ಹೊಳೆ, ಮೃತ ಸಮುದ್ರ ಮುಂತಾದವುಗಳನ್ನು ಅವರ ಚಿತ್ರಗುಪ್ತ ಪ್ರತಿಭೆ ತಕ್ಕಲ್ಲಿ ಬೆಸೆದು ವಾತಾವರಣ ಸೃಷ್ಟಿಯಲ್ಲಿ ಯಶಸ್ವಿಯಾಗಿದೆ.

ನಾಲ್ಕೂ ಸುವಾರ್ತೆಗಳಲ್ಲಿ ನಾವು ಕಾಣುವುದು ಘಟನೆಗಳ ಸರಳ ನಿರೂಪಣೆಯನ್ನು. ಪಾತ್ರಗಳ ಆಂತರಿಕ ಗುಣಧರ್ಮನ್ನಾಗಲೀ, ಅವರ ಒಳಪ್ರಕೃತಿಗೂ ಹೊರಗಿನ ಪ್ರಕೃತಿಗೂ ಕಾಣಿಸುವ ಸಾದೃಶ್ಯದ ಸೊಗಸಾಗಲಿ ಅಲ್ಲಿ ಕಾಣಲಾರೆವು. ಕ್ರಿಯೆಯ ಉದ್ದಕ್ಕೂ ಕೆನೆಗಟ್ಟುತ್ತಾ ಹೋಗುವ ವಿಷಾದದ ಛಾಯೆಯನ್ನು ಪ್ರತಿಮಿಸುವಲ್ಲಿ ಸಶಕ್ತವಾದ ಪ್ರಕೃತಿಯನ್ನು ಬಳಸಿಕೊಂಡುದು ಸುವಾರ್ತೆಗಳಲ್ಲಿ ಕಾಣಿಸದ ಸಂಗತಿ. ಸುವಾರ್ತೆಗಳು ಪ್ರಭುಸಮ್ಮಿತ; ‘ಗೊಲ್ಗೊಥಾ ಸಹಜವಾಗಿ ಕಾಂತಾಸಮ್ಮಿತ. ದೇವಪುತ್ರ ಯೇಸು ತಾನು ಬದುಕಿನಲ್ಲಿ ನಂಬಿಬಂದ ಮೌಲ್ಯದ ಉಳಿವಿಗಾಗಿ ಪ್ರಾಣತೆರಬೇಕಾಯಿತು. ಮನಸ್ಸು ಮಾಡಿದ್ದರೆ, ಬದುಕಿನೊಂದಿಗೆ ರಾಜಿ ಮಾಡಿಕೊಂಡಿದ್ದರೆ ಬದುಕಿ ಉಳಿಯಬಹುದಿತ್ತು. ಫರಿಸಾಯರಿಂದ ಶೋಷಿತನಾದ ಯೇಸು ಶಿಲುಬೆಯ ಮೇಲಿಂದಲೇ ಸತ್ವಯುತವಾದ ಸಂದೇಶವನ್ನು ನೀಡಿದ್ದು; ‘ತನ್ನ ಜೀವನ ಹಾಗೂ ಮರಣದ ಉದ್ದೇಶ ಮಾನವನಲ್ಲಿರುವ ಪ್ರೇಮದ ಅಭಿವ್ಯಕ್ತಿ ಎಂದ ಯೇಸುವಿನ ಉದಾತ್ತ ನಿಲುಮೆ ಹೀಗೆ ಮೂರ್ತರೂಪ ತಾಳಿದೆ: ‘ಕ್ಷಮಿಸಿವರನೆಲೆ ತಂದೆ! ತಾವೇನನೆಸಗಿದಪೆವೆಂದರಿಯರವರು ಯೇಸುವಿನ ಮಹೋನ್ನತ ಉದಾತ್ತ ವ್ಯಕ್ತಿತ್ವನ್ನು ಕವಿ ಒಂದೆಡೆ ಹೀಗೆ ಚಿತ್ರಿಸಿದ್ದಾರೆ.

ಲೋಕವಿವನ ಮನೆ,

ಲೋಕದುದ್ದಾರಣನೆ ಮನೆವಾರ್ತೆ, ಪಾಪದಿಂ

ಪಾಪಿಗಳನೆತ್ತೆ ಬಾಳ್ವೆಯ ತೆತ್ತ ಬೆಸದರೀ

ತನ ಬಳಗವಿಳೆಯ ಹೇರಿದ ಭಾರ ಹೊರುವ ಸಂ

ಕಷ್ಟಗಳ ಮರುವ ದಾಂಟಿಸಿ ಪಾರಗಾಣಿಸುವ

ಒಂಟಿ ಇವನೆಂದಾ ಪಿಲಾತನಕಟರಿವನೇಂ?

ಮೇಲಿನ ಚಿತ್ರಣದ ಹಿನ್ನೆಲೆಯಲ್ಲಿ ಸುವಾರ್ತೆಯ ಕೆಲವು ಮಾತುಗಳನ್ನು ಗಮನಿಸಬೇಕು. ಮನುಷ್ಯಕುಮಾರನಾದ ನಾನು ಸೇವೆ ಮಾಡಿಸಿಕೊಳ್ಳುವುದಕ್ಕಾಗಿ ಬರಲಿಲ್ಲ; ಇತರರಿಗೆ ಸೇವೆ ಮಾಡುವುದಕ್ಕಾಗಿ ಮತ್ತು ನನ್ನ ಪ್ರಾಣವನ್ನೇ ಈಡುಮಾಡುವುದಕ್ಕಾಗಿ ಬಂದಿದ್ದೇನೆ (ಮಾರ್ಕ 10:45) ‘ಇದು ನಿಮಗೋಸ್ಕರ ಕೊಟ್ಟಿರುವ ನನ್ನ ದೇಹ.... ನಾನು ಸುರಿಸಲಿರುವ ರಕ್ತದಿಂದ ಈ ಒಪ್ಪಂದವು ಸ್ಥಾಪಿತವಾಗಿದೆ. (ಲೂಕ 22:19:20). ‘ನನ್ನ ಕುರಿಮಂದೆಗಾಗಿ ನನ್ನ ಪ್ರಾಣವನ್ನೀಯುವ ನಿಷ್ಠಾವಂತ ಕುರುಬ ನಾನು’ (ಯೋಹಾನ 10:11)

ಯೇಸುವಿನ ಬಲಿದಾನದ ಸೂರ್ಯೋದಯದಿಂದ ಕವಿತೆ ಮೊದಲಾಗುತ್ತದೆ. ಯೇಸುವಿಗಾದ ಅನ್ಯಾಯಕ್ಕೆ ಕವಿಯ ಮನಸ್ಸು ಮರುಗುವುದರೊಂದಿಗೆ ಮುಂದೆ ಘಟಿಸಲಿರುವ ದುರಂತಕ್ಕೆ ತಕ್ಕ ವಾತಾವರಣ ನಿರ್ಮಾಣ ಮಾಡುವುದರಲ್ಲಿ ಪ್ರಕೃತಿ ವರ್ಣನೆ ಸಹಕಾರಿಯಾಗಿದೆ. ಫರಿಸಾಯರ ಆಂತರಿಕ ಪ್ರಕೃತಿಯನ್ನು ಹೇಳು ವಲ್ಲಿ ಬಹಿರಂಗದ ಪ್ರಕೃತಿ ವರ್ಣನೆ ಸಹಕಾರಿಯಾಗಿದೆ. ಮೂರನೆಯ ಜಾವದ ಕೋಳಿ ಕೂಗಿದ್ದಾಯಿತು. ಯೇಸುವನ್ನು ಕೊಲ್ಲಬಯಸಿದ ಯೆಹೂದ್ಯನ ಮನಸ್ಸಾಕ್ಷಿಯಂತೆ ಅದು ಸುಮ್ಮಗಾಯಿತಂತೆ. ಯೇಸು ವನ್ನು ಅವನು ಕೊಲ್ಲಲು ನಿರ್ಧರಿಸಿಯಾಗಿದೆ. ಅಂದರೆ ಅವರೊಳಗಿನ ವಿವೇಕ ಮೌನ ತಾಳಿದೆ. ಅದು ಒಳಗಿನ ಹಿಂಸ್ರಾಮತಿಯೊಳಗೆ ಏನೇನೂ ಪ್ರಭಾವ ಬೀರದೆ ಹೋಗಿದೆ. ಅನ್ಯಾಯದ ವಿಚಾರಣೆಗೆ ಹೇಸಿ ಚಂದ್ರನೂ ಮುಳುಗುತ್ತಿದ್ದಾನೆ. ಈ ದುರ್ದಿನವನ್ನು ಎಂತು ಮೂಡಿಸುವೆನೆಂದು ಸೂರ್ಯನಿಗೂ ಸಂಕಟ.

ಪಿಲಾತನ ಅರಮನೆಗೆ ಯೇಸುವನ್ನು ಕರೆದೊಯ್ದು ‘ಇವನು ತಾನೇ ಕ್ರಿಸ್ತನೆಂಬ ರಾಜನೆಂದು ಹೇಳುತ್ತಾ, ಸೀಸರನಿಗೆ ತೆರಿಗೆ ಕೊಡಲಾರದೆಂದು ಬೋಧಿಸುತ್ತಾ ನಮ್ಮ ದೇಶದವರ ಮನಸ್ಸನ್ನು ಕೆಡಿಸುತ್ತಿದ್ದಾನೆ ‘ಎಂದು ದೂರಿತ್ತರು. (ಲೂಕ 23:2) ಈ ಮಾತನ್ನು ಪೈಯವರು ‘ಕೈಸರಗೆ ತೆರಿಗೆಯಂ ತೆರಬಾರದೆಂದು ಮಾಣಿಸಿದವಂ ಎಂದು ಹೇಳಿದ್ದರೂ ವಾಸ್ತವಿಕವಾಗಿ ಲೂಕನ ಸುವಾರ್ತೆಯಲ್ಲಿ ಕೈಸರನದನ್ನು ಕೈಸರನಿಗೆ ಕೊಡಬೇಕೆಂದು ಯೇಸು ಹೇಳಿದುದಾಗಿ ಬರೆದಿದೆ. ಪಿಲಾತನಿಗೆ ಯೇಸುವಿನಲ್ಲಿ ಯಾವುದೇ ತಪ್ಪು ಕಾಣಿಸಲಿಲ್ಲ. ‘ಲೋಕದುರು ಪಾಪಮಂ ಹೊತ್ತ ಕುರಿಮರಿಯಂತೆ (ಯೋಹಾನ 1:29) ಗಿಡುಗಗಳ ನಡುವೆ ತೊಡರಿದ ಕಪೋತಕದಂತೆ ಯೇಸು ಅವನಿಗೆ ಕಾಣಿಸಿದ. ‘ಇವನೊಳೇನುಮಪರಾಧಮಂ ಕಾಣೆ ಎಂದು ಪಿಲಾತ ಸಹಜವಾಗಿ ನುಡಿದಾಗ ಯೇಸುವಿನ ಪ್ರಾಣಕ್ಕಾಗಿ ಹಾತೊರೆದ ಫರಿಸಾಯರು ‘ಶಿಲುಬೆಗೆ ಹಾಕಿಸಿ ಎಂದು ಆರ್ಭಟಿಸಿದ ಸಂಗತಿ ಸುವಾರ್ತೆಗಳಲ್ಲಿ ದೊರೆಯುತ್ತದೆ.

ಪ್ರಜಾಪ್ರತಿನಿಧೀ ಪಿಲಾತನನ್ನು ಝಂಕಿಸಿ ಬೆದರಿಸಬಲ್ಲ ಕುಟಿಲನೀತಿಯನ್ನು ಬಳಸಿದ ತಂತ್ರ ಸುವಾರ್ತೆಗಳಲ್ಲಿ ಇಲ್ಲದ ಪೈಯವರದೇ ಸೃಷ್ಟಿ. (ಪಿಲಾತರು ಹಿಂದೆ ಮೂರು ಸಲ ಯಹೂದ್ಯರ ಮನ ನೋಯಿಸಿದ ಸಂಗತಿ ಪೈಯವರಿಗೆ Dean Farrar’s Life of Christ Clap. Lx ದೊರೆತುದಾಗಿ ತಿಳಿಯುತ್ತದೆ. ನೋಡಿ: ಗೊಲ್ಗೊಥಾ ಟಿಪ್ಪಣಿ 21) ನೀನು ಬಿಡುಗಡೆ ಮಾಡಿದರೆ ಸೀಸರನಿಗೆ ಮಿತ್ರನಲ್ಲ..., ಎಂದು ಬೆದರಿಕೆ ಹಾಕಿದಾಗ ತನ್ನ ಭವಿಷ್ಯವನ್ನು ಎಣಿಸಿಕೊಂಡು ಪಿಲಾತನು ನೆರೆದ ಸಮೂಹ ದಂಗೆಯೆದ್ದೀತು ಎನ್ನುವ ಭಯದಿಂದ ಮರಣದಂಡನೆಗೆ ಒಪ್ಪಿಗೆ ನೀಡುತ್ತಾನೆ. ಇಲ್ಲಿ ಪೈಯವರು ಪಿಲಾತನ ಮನಸ್ಸಿನಲ್ಲಿ ನಡೆದ ಸಂಘರ್ಷವನ್ನು ಸೊಗಸಾಗಿ ಚಿತ್ರಿಸುತ್ತಾರೆ. ಮಿಸುನಿಯ ಒರೆಯಿಂದ ಮಿಸುಕುವ ಅಸಿಧಾರೆಯಂತಿರುವ ಫರಿಸಾಯರ ಮಾತು. ‘ನಮ್ಮ ಜೋಕೆಯಂ ಬಗೆಯದೊಡೆ, ನಿನ್ನ ಜೋಕೆಯನೆ ಮುಂಗಾದುಕೊಳು ಜೀಯಾ.. ಪಿಲಾತ ಮನಸ್ಸಿನ ತುಮುಲದ ಕೊನೆಯಲ್ಲಿ ತನ್ನ ಪೀಠದ ಭದ್ರತೆಯನ್ನೇ ಎಣಿಸಿಕೊಂಡ. ತಾನು ಮರಣದಂಡನೆಗೆ ಒಪ್ಪದಿದ್ದಲ್ಲಿ ‘ಗಂಡೋಲಿಗಳ ಗೂಡಿಗೆಸೆದ ಕಲ್ಲಂತಾಗದಿರದು ಎಂದು ನಿರ್ಧರಿಸಿ ‘ಮುದಿಯ ಮೊಸಳೆಯ ಮಡುವಿಗಿನ್ನೊಮ್ಮೆ ಧುಮುಕುವೆನೆ? ಹಳಗಿಪಡೆ ಹುಲಿಯ ಹಸಿವೆಗೆ ಹೋತನೀವಂತೆ ಈತನೀವೆನ್ ಎನ್ನುವ ಮಾತುಗಳು ಪೈಯವರ ಪ್ರತಿಭೆಯ ಫಲಗಳು.

ಶಿಲುಬೆಯೊಂದಿಗೆ ಮಟಮಟ ಮಧ್ಯಾಹ್ನದ ಹೊತ್ತು ಯೇಸು ಗೊಲ್ಗೊಥಾ ಬೆಟ್ಟಕ್ಕೆ ಬಂದಿದ್ದಾರೆ. ಸೂರ್ಯನ ಕಾಂತಿ ಮಂದವಾಗಿದೆ.(ಲೂಕ 23:44)

ನಡುಹಗಲಸಿರಿಹೊತ್ತು, ಭಾಸ್ಕರನ ಸುಳಿವಿಲ್ಲ

ನೋಡೊಂದೆ ಬರಮೋಡ ಬಾನಗಲ ಚಾಚಿ ನೋಹನ

ಕಾಲದಾ ಪ್ರಲಯ ಮೇಘವನೆ ಮುಚ್ಚಿಹುದು

ನೋಹನ ಕಾಲದಲ್ಲಿ ನಡೆದ ಜಲಪ್ರಳಯವನ್ನು ನೆನಪಿಸಿ ಆ ಕಾಲದ ಕಗ್ಗತ್ತಲೆಯನ್ನು ಅದಕ್ಕೆ ಹೋಲಿಸುತ್ತಾರೆ. ಇದು ಪೈಯವರ ವ್ಯಾಪಕ ಕ್ರೈಸ್ತಸಾಹಿತ್ಯದ ಓದಿನ ಫಲ. ನೋಹ ತನ್ನ ಕಾಲದಲ್ಲಿ ಜಲಪ್ರಳಯವಾದಾಗ ಎಲ್ಲವೂ ಕಳೆದುಹೋದೀತೆಂದು ಜೀವ ಬೀಜಗಳನ್ನು ತನ್ನ ದೋಣಿಯಲ್ಲಿಟ್ಟುಕೊಂಡು ಕಾಪಿಟ್ಟನಂತೆ. ಇಂದು ನೋಹನಂತಿರುವವನು ಯೇಸು. ತನ್ನ ಬಲಿದಾನದ ಮೂಲಕ ಪ್ರಪಂಚಕ್ಕೆ ಅಮೃತತ್ವವನ್ನು ತಂದುಕೊಟ್ಟವನು. ಈ ಬಿಡಿಚಿತ್ರಗಳೆಲ್ಲ ಮುಂದಿನ ದುರಂತಕ್ಕೆ ಗಂಭೀರಾಂಶಗಳನ್ನು ಬೆಸೆಯುತ್ತಾ ಹೋಗುತ್ತವೆ.

ಗಾಳಿಗೂ ಉಸಿರುಕಟ್ಟಿದಂತಾಗಿದೆ. ಗಿಡಮರಗಳು ಸ್ತಬ್ಧವಾಗಿವೆ. ಹಕ್ಕಿಗಳು ಮೂಕವಾಗಿವೆ. ಜನರಾದರೋ ಮಿಡಿತೆಗಳಂತೆ ಗುಂಪುಗೂಡಿ ಗೊಲ್ಗೊಥಾ ಗಿರಿಯೆಡೆಗೆ ಹೊರಟಿದ್ದಾರೆ. ಅಕ್ಕಪಕ್ಕದಲ್ಲಿ ಇಬ್ಬರ ಕಳ್ಳರ ನಡುವೆ ಯೇಸುವನ್ನು ಸಿಲುಬೆಗೇರಿಸಲಾಗಿದೆ.

.....ಹದ್ದು ಬಿಗಿವಿಡಿದ

ಲಾವಿಗೆಯಂತೆ, ಪಡುವಣದಿ ಬಿಳಿಯ

ಬಿದಿಗೆಯ ತಿಂಗಳಂತೆ, ಬಿಲ್ಲಿಗೆ ತೊಟ್ಟ ಸರಳಂತೆ

ಮರಣವೃಕ್ಷದೊಳಮೃತ ಫಲದಂತೆ.

ಇಲ್ಲಿನ ಒಂದೊಂದು ಮಾತೂ ಯೇಸುವಿನ ಸ್ಥಿತಿಯನ್ನು ಅರ್ಥಪೂರ್ಣವಾಗಿ ಧ್ವನಿಸುತ್ತವೆ. ಶಿಲುಬೆಯ ಮೇಲೆ ನೇತಾಡುತ್ತಿರುವ ಯೇಸುವನ್ನು ಕುರಿತು ಹೇಳಿದ ಹೋಲಿಕೆಗಳು ಮೂರ್ತದಿಂದ ಅಮೂರ್ತದೆಡೆಗೆ ಏರೇರುತ್ತಾ ಹೋಗಿ ಅವನ ದಿವ್ಯದರ್ಶನವನ್ನು ಮೂಡಿಸುತ್ತವೆ. ಹದ್ದು ಬಿಗಿವಿಡಿದ ಲಾವಕಹಕ್ಕಿ ಸೌಮ್ಯವಾಗಿ ಸಾವಿಗೆ ಸಿದ್ಧವಾದಂತಿದೆ. ಪಶ್ಚಿಮ ಆಕಾಶದಲ್ಲಿ ಬಿದಿಗೆಯ ಚಂದ್ರನು ಮೂಡಿ ಕೆಂಪು ಬೆಳಕನ್ನು ಬೀರುವಂತೆ ಯೇಸು ಕಾಣಿಸುತ್ತಿದ್ದಾನೆ. ಬಿಲ್ಲಿಗೆ ಹೂಡಿದ ಬಾಣವು ನೇರವಾಗಿ ಗುರಿಯೆಡೆಗೆ ಸಾಗಲು ಸಿದ್ಧವಾದಂತಿದೆ. ಹುತಾತ್ಮಯೇಸುವನ್ನು ಮರಣವೆಂಬ ವೃಕ್ಷದಲ್ಲಿ ಬಿಟ್ಟ ಅಮೃತಫಲ ಎನ್ನುವ ಮಾತು ತುಂಬ ಅರ್ಥಪೂರ್ಣ. ಏಕೆಂದರೆ ಆತ ದೇವಪುತ್ರ ಅಮೃತಪುತ್ರ.

ಶಿಲುಬೆಯಲ್ಲಿ ನೇತಾಡುತ್ತಿದ್ದ ಯೇಸುವಿನ ದೈವಿಕ ಗುಣವನ್ನು ಪೈಯವರು ಹೀಗೆ ಹೇಳಿದ್ದಾರೆ :

...... ತಾಯ ಮೊಗ

ನೋಡೆ ಮಗು ಬೆಸಲಳಲನೋತು ಸೈರಿಸುವಂತೆ

ಚೂಣಿಯ ಭಟಂ ಗಾಯದಳಲ ಲೆಕ್ಕಿಸದೆ ಮುಂ

ಗಾದಾಡಿ ನುಡಿದು ಜಯ ಪಡೆವಂತೆ ತನ್ನ ತೊರೆ

ದರ್ಭಕರ ಹಂಬಲಿಸುವ ಮುಮೂರ್ಷು ಕಾಯಂತೆ

ತನ್ನ ಕಡಿವರ್ಗೆ ತಣ್ನೆಳಲೀವ ಮರದಂತೆ

ನಾಲ್ಕೂ ಸುವಾರ್ತೆಗಳಲ್ಲಿ ಯೇಸು ತಂದೆಯೇ ನನ್ನ ಆತ್ಮವನ್ನು ನಿನಗೆ ಒಪ್ಪಿಸುತ್ತೇನೆ ಎಂದು ಗಟ್ಟಿಯಾಗಿ ಕೂಗಿ ಪ್ರಾಣ ಬಿಟ್ಟನು ಎಂದು ಹೇಳಿದೆ. ಕವಿಗೆ ದೇವಮಾನವನ ಸಾವನ್ನು ಹೇಳಲು ಇಷ್ಟೇ ಮಾತುಗಳು ಸಾಲಲಿಲ್ಲ.

...... ತುದಿ ಬೆಟ್ಟದಿಂ

ಕರೆವ ತಾಯೆಡೆಗೆ ಮರಿಜಿಂಕೆ ಜಿಗಿವಂತೆ

ಸುಗ್ಗಿಯೆಡೆಗಯ್ದುವಾ ಬಾನಕ್ಕಿಯಂತೆ, ದಿನ

ಮುಖದೊಳಿರುಳಿನ ಸೊಡರು ನೇಸರಂಬುಗುವಂತೆ

ಕ್ಷಿತಿಜದಿಂ ಸಿಡಿದು ಮೇಲ್ನೆಗೆವ ಮಿಂಚಂತೆ, ಯೇ

ಸುವಿನಾತ್ಮದೊಡನೆ ಬೆಳಕಿನ ಬೀಡಿಗಯ್ದೆ....

ದೇವಸುತನ ಮೃತಿನಾಟಕದ ಕಡೆಯ ತೆರೆಯಂತೆ ಬಿರುಗತ್ತಲೆ ಯೊಂದು ಭೂವ್ಯೋಮಗಳ ನಡುವೆ ಮುಸುಕಿತು. ಅದು ಕವಿಗೆ ಮಿಸ್ರದೊಂಬತ್ತನೆಯ ಮಾರಿಯಂತೆ ಕಂಡಿತು. (ಸುವಾರ್ತೆಗಳಲ್ಲಿ ಈ ಸಂಗತಿ ಇಲ್ಲ) ಸ್ವಲ್ಪ ಹೊತ್ತಲ್ಲಿ ಈ ಕತ್ತಲೆಯ ಮೋಡ ಸರಿಯಿತು. ಎಳೆಗಾಳ ಸುಳಿಯಿತು. ‘ಗೊಲ್ಗೊಥದ ಹಿಂದಣಿಂದುದಿಸಿದ ಸುಧಾಸೂತಿ ಬೆಳ್ಗೊಡೆಯನಮೃತನಾ ಮೃತಮೂರ್ತಿಗೆತ್ತಿಹಂ ಚಂದ್ರೋದಯವಾದ ಮೇಲೂ ಯೇಸುವಿನ ಕಳೇಬರ ಶಿಲುಬೆ ಯಲ್ಲಿತ್ತೆಂಬ ಹೇಳಿಕೆ ಪೈಯವರೇ ಹೇಳುವಂತೆ ಕವಿಸಮಯ. ಶಿಲುಬೆಗೇರಿಸಿದ ದಿನ ಶುಕ್ರವಾರದ ಸಂಜೆಯಿಂದಲೇ ಸಬ್ಬತು - ಅಂದರೆ ವಿಶ್ರಾಂತಿಯ ದಿನವಾದುದರಿಂದ ಅಂದು ಆ ಶವವನ್ನು ಶಿಲುಬೆಯಲ್ಲಿ ಇರಗೊಡದೆ ಸಂಜೆಯ ಮೊದಲೇ ಇಳಿಸಿದ ವಿವರ ಸುವಾರ್ತೆಗಳಲ್ಲಿ. ಮಗ್ದಲದ ಮರಿಯೆಯನ್ನು ಕುರಿತು ಕವಿ ‘ದಾವೀದ ಕುಲದಾದಿತ್ಯನ ನವಪ್ರಬೋಧನದ ಮುಂಗೋಳಿ ಎನ್ನುವಲ್ಲಿ ಸುವಾರ್ತೆಗಳಲ್ಲಿ ದೊರೆವ ಯೇಸುವಿನ ಪುನರುತ್ಥಾನವು ನೆನಪಾಗುತ್ತದೆ.‌

ಸುವಾರ್ತೆಗಳಲ್ಲಿ ಹೇಳಿದ ಘಟನಾವಳಿಗಳೆಲ್ಲ ‘ಗೊಲ್ಗೊಥಾದಲ್ಲಿ ಕಾವ್ಯವಾದುದು ಬಲುಮಟ್ಟಿಗೆ ಇಲ್ಲಿ ತುಳುಕುತ್ತಿರುವ ಉಪಮೆಗಳಿಂದ. ಅವು ಸೌಂದರ‍್ಯಾನುಭವದ ಅಭಿವ್ಯಕ್ತಿಗಳು. ಪಾಶ್ಚಿಮಾತ್ಯರ ಮಹಾಕಾವ್ಯಗಳಲ್ಲಿ Epic Similie ಎಂದು ಕರೆಯಲಾಗುವ ಮಹೋಪಮೆಗಳಿವೆ. ಮಹಾಕಾವ್ಯಗಳಿಗೆ ಇಂತಹ ಮಹೋಪಮೆಗಳು ಅನಿವಾರ‍್ಯ ಅಂಶಗಳು. ಆದರೆ ಗಾತ್ರದಲ್ಲಿ ಕಿರಿದಾದ ಅತ್ಯಂತ ಕ್ರಿಯಾವೇಗವುಳ್ಳ ಮಹಾಕಾವ್ಯಖಂಡಗಳಲ್ಲಿ ಇಲ್ಲಿನಂತೆ ಹಾಳತವಾಗಿ ಉಪಮೆಯನ್ನು ಬಳಸುವುದು ತಕ್ಕುದಾದುದು. ಮಹೋಪಮೆಯ ಕೆಲಸವನ್ನೆಲ್ಲ ಸೀಮಿತಹರಹಿನ ಖಂಡಕಾವ್ಯದಲ್ಲಿ ಉಪಮೆ ಮಾಡುವುದು ಕಂಡಿತ.

ಬೈಬಲ್‌ನ ಸುವಾರ್ತೆಗಳಲ್ಲಿ ದೊರಕಿದ ಅದುರು ಪೈಯವರ ಕೈಯಲ್ಲಿ ಸಂಸ್ಕರಿತವಾಗಿ ಸೊಗಸಾದ ಮಿಸುನಿಯ ತೊಡವಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !