ಹಗೇವು ಪುಸ್ತಕ: ನೆಲದ ಸೃಜನಶೀಲತೆಯ ಪ್ರತೀಕ

7

ಹಗೇವು ಪುಸ್ತಕ: ನೆಲದ ಸೃಜನಶೀಲತೆಯ ಪ್ರತೀಕ

Published:
Updated:

ಕೃಷಿಯಲ್ಲಿ ‘ಹಗೇವು’ ಪರಂಪರೆ ಬಲು ಮಹತ್ವದ್ದು. ಅಪರೂಪದ ಮತ್ತು ನಿತ್ಯದ ಬಳಕೆಗೆ ಬೇಕಾಗುವ ಬೀಜಗಳ ಸಂರಕ್ಷಣಾ ತಾಣವಾಗಿರುವ ‘ಹಗೇವು’ ರೈತರ ಪಾಲಿನ ಬೀಜಬ್ಯಾಂಕ್. ‘ಹಗೇವು’ ಹೆಸರಿನಲ್ಲಿ ಪ್ರಕಟವಾಗಿರುವ ರಾಯಚೂರು ಜಿಲ್ಲಾ ಪ್ರಾತಿನಿಧಿಕ ಕಥಾಸಂಕಲನ ಆ ಜಿಲ್ಲೆಯ ಮಹತ್ವದ ಕಥೆಗಾರರ ಕಣಜದಂತಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ಅನನ್ಯ ಛಾಪು ಮೂಡಿಸಿರುವ ಶಾಂತರಸರಿಂದ ಹಿಡಿದು ಇತ್ತೀಚಿನ ಯುವ ಕಥೆಗಾರರಾದ ಚಿದಾನಂದ ಸಾಲಿ, ಮಹಾಂತೇಶ ನವಲಕಲ್ ಸೇರಿದಂತೆ 17 ಕಥೆಗಾರರ ಅಪರೂಪದ ಕಥೆಗಳು ಇಲ್ಲಿವೆ.

ಈ ಕೃತಿಯಲ್ಲಿನ ಕಥೆಗಳಲ್ಲಿ ರಜಾಕಾರರ ಹಾವಳಿ, ಸ್ವಾತಂತ್ರ್ಯ ಹೋರಾಟಗಾರರ ಬದುಕಿನ ಚಿತ್ರಣ, ಆಧುನಿಕ ಮೌಲ್ಯಗಳ ಸಂಘರ್ಷ, ಮನೋವಿಶ್ಲೇಷಣಾತ್ಮಕ ಗುಣಗಳು, ಸಾಮಾಜಿಕ ವೈರುಧ್ಯ, ವರ್ತಮಾನದ ತಲ್ಲಣಗಳ ಸಮ್ಮಿಶ್ರ ಗುಣಗಳನ್ನು ಢಾಳಾಗಿ ಗುರುತಿಸಬಹುದು. ಶಾಂತರಸ ಅವರ ‘ನಾಯಿ ಮತ್ತು ಪಿಂಚಣಿ’ ಕಥೆ ವಿಭಿನ್ನ ನಿರೂಪಣಾ ಶೈಲಿ, ಗಟ್ಟಿ ಕಥಾಹಂದರದ ಕಾರಣಕ್ಕಾಗಿ ಇತಿಹಾಸದ ಜತೆಗೆ ವರ್ತಮಾನದ ಮುಖಾಮುಖಿ ಮಾಡಿಸಿದರೆ, ಇತ್ತೀಚಿನ ಕಥೆಗಾರ ಆಂಜನೇಯ ಜಾಲಿಬೆಂಚಿ ಅವರ ‘ಒಂದು ಪತ್ರ’ ಕಥೆ ಹಳ್ಳಿಗಳಲ್ಲಿ ಇಂದಿಗೂ ಪಳೆಯುಳಿಕೆಯಂತೆ ಉಳಿದಿರುವ ಜಾತಿ ವ್ಯವಸ್ಥೆಯ ದರ್ಶನ ಮಾಡಿಸುತ್ತಲೇ ಆಧುನಿಕ ಮನೋಭಾವದ ಗೌರಿಯು ಜಾತೀಯತೆಯನ್ನು ಮೀರುವ ವಾಸ್ತವವನ್ನು ಕಾಣಿಸುತ್ತದೆ.

ಇಲ್ಲಿರುವ ಎಲ್ಲ ಕಥೆಗಳೂ ವಸ್ತುವೈವಿಧ್ಯ, ವಿಭಿನ್ನ ನಿರೂಪಣಾ ಶೈಲಿಯ ಕಾರಣಕ್ಕಾಗಿ ಓದಿಸಿಕೊಳ್ಳುವ ಗುಣ ಹೊಂದಿವೆ. ರಾಯಚೂರು ಜಿಲ್ಲೆಯ ಅಪರೂಪದ ಕಥೆಗಾರರ ಕಥಾ ಕಣಜವಾಗಿರುವ ‘ಹಗೇವು’ ಆ ನೆಲದ ಸೃಜನಶೀಲತೆಯ ಪ್ರತೀಕವಾಗಿದೆ.
***
ಕೃತಿ: ಹಗೇವು (ರಾಯಚೂರು ಜಿಲ್ಲಾ ಪ್ರಾತಿನಿಧಿಕ ಕಥಾ ಸಂಕಲನ) 
ಸಂಪಾದನೆ: ಬಸವಪ್ರಭು ಪಾಟೀಲ್ ಬೆಟ್ಟದೂರು, ಭೀಮನಗೌಡ ಇಟಗಿ, ಡಾ.ದಸ್ತಗೀರ್ ಸಾಬ್ ದಿನ್ನಿ, ಜೆ.ಎನ್.ಈರಣ್ಣ 
ಪುಟಗಳು: 178 
ಪ್ರಕಾಶಕರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ರಾಯಚೂರು 
ಬೆಲೆ: ₹ 200

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !