ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು: ಹಾಲಕ್ಕಿ ಬದುಕಿನ ಹಾಡು ಹಾಲಕ್ಕಿ ರಾಕು

Last Updated 17 ಜುಲೈ 2022, 0:00 IST
ಅಕ್ಷರ ಗಾತ್ರ

ಇಡೀ ಕಥಾ ಸಂಕಲನದಲ್ಲಿ ‘ಹಾಲಕ್ಕಿ ರಾಕು’ ಕಥೆಯೂ ಹೌದು, ಹಾಲಕ್ಕಿ ಸಮುದಾಯದ ಕುಲಮೂಲದ ನಿರೂಪಣೆಯೂ ಹೌದು. ಹಾಲಕ್ಕಿಗಳೆಂದರೆ ಕಾಡಿನ ವಾಸಿಗಳು, ಆದಿವಾಸಿಗಳು ಎಂಬ ವಿವರಗಳನ್ನಷ್ಟೇ ಗಮನಿಸಿದವರಿಗೆ ಇದು ಆಳದ ನೋಟ ತೆರೆದಿಡುತ್ತದೆ. ಪಾರ್ವತಿ ಚೆಲ್ಲಿದ ಹಾಲು ಅನ್ನದಿಂದ ಮನುಷ್ಯನ ಗೊಂಬೆ ತಯಾರಿಸಿದ ಶಿವ ಅದಕ್ಕೆ ಜೀವ ಕೊಟ್ಟದ್ದು, ಹಾಲು–ಅಕ್ಕಿಯ ದಂತಕಥೆ ಇಲ್ಲಿ ತೆರೆದುಕೊಂಡಿದೆ. ಕೂಲಿಯಾಗಿ ಹಾಲು–ಅಕ್ಕಿಯನ್ನೇ ಪಡೆಯುತ್ತಿದ್ದವರು ಹಾಲಕ್ಕಿಗಳು ಎಂದು ಕರೆಸಿಕೊಂಡ ಅಪರೂಪದ ಮಾಹಿತಿಯೂ ಇಲ್ಲಿದೆ.

ಹಾಲಕ್ಕಿಗಳ ಪರಂಪರೆಯ ಹಿರಿಮೆಯನ್ನು ಕಟ್ಟಿಕೊಡಲು ಶ್ರೀಧರ ಗೌಡರು ಕಥನ ಮಾರ್ಗವನ್ನು ಕಂಡುಕೊಂಡಿದ್ದಾರೆ. ಹಾಲಕ್ಕಿ ಒಕ್ಕಲಿಗರ ದಿನಚರಿ, ಬದುಕಿನ ವಿಧಾನವನ್ನು ಕಥೆಗಳ ಮೂಲಕ ತೆರೆದಿಡುವ ಯತ್ನವನ್ನು ಅವರು ಮಾಡಿದ್ದಾರೆ. ಮೊದಲ ಕಥೆ ‘ಅಂತರ’ ಆ ಸಮುದಾಯದಲ್ಲಾದ ಸಂಬಂಧಗಳ ಪಲ್ಲಟ, ನಗರ ಸಂಸ್ಕೃತಿಯ ಪ್ರಭಾವ, ಬದಲಾದ ಕಾಲಘಟ್ಟದ ದಟ್ಟ ವಿವರಗಳಿವೆ. ವಿಷಾದದ ಛಾಯೆಯೂ ಅಲ್ಲಲ್ಲಿ ಇದೆ.

ನಾಗಪ್ಪ, ಮಂಜ, ಮಾಸ್ತಿ ಗೌಡರಂಥ ಪಾತ್ರಗಳು ನಿಜ ಜೀವನದ ಪ್ರತಿನಿಧಿಗಳೂ ಹೌದು. ಇಲ್ಲಿ ಬಳಸಿರುವ ಹಾಲಕ್ಕಿ ಒಕ್ಕಲಿಗರ ಮೂಲಭಾಷೆಯೇ ಒಮ್ಮೆ ಉತ್ತರ ಕನ್ನಡದ ಕಾಡು, ಕಡಲುಗಳತ್ತ ಸುತ್ತಾಡಿಸಿ ಬರುತ್ತದೆ. ‘ಕೋಟಿ ಸೂರ್ಯದ ದುಡ್ಡು’, ಬೊಮ್ಮನ ಕಾಲಕ್ಕೂ ಅವನ ಮೊಮ್ಮಗನ ಕಾಲಕ್ಕೂ ಈಗಿನವರ ಮನಸ್ಥಿತಿಗೂ ಇರುವ ಅಂತರವನ್ನು ಕಾಣಿಸುವ ಕಥೆ. ಗೋಕರ್ಣ ಹಾಗೂ ಕೋಟಿ ತೀರ್ಥವನ್ನು ಬಲ್ಲವರಿಗೆ ಹೆಚ್ಚು ಆಪ್ತವಾಗುತ್ತದೆ. ಕೆಲವು ಕಥೆಗಳು ವಸ್ತುವಿನ ದೃಷ್ಟಿಯಿಂದ ಗಟ್ಟಿಯಾಗಿವೆ. ಆದರೆ, ನಿರೂಪಣೆಯನ್ನು ಸ್ವಲ್ಪ ಕಿರಿದಾಗಿಸಬಹುದಿತ್ತು. ಶ್ರಮ ಸಂಸ್ಕೃತಿಯ ಸಮುದಾಯದ ಬದುಕು–ಬಣ್ಣ–ಬವಣೆಯನ್ನು ಕಟ್ಟಿಕೊಡಲು ಪ್ರಯತ್ನಿಸಿದ ಈ ಕಥಾ ಸಂಕಲನಕ್ಕೆ ಅದೇ ಶಕ್ತಿಯೂ ಹೌದು, ಮಿತಿಯೂ ಹೌದು.

ಕೃತಿ: ಹಾಲಕ್ಕಿ ರಾಕು

ಲೇ: ಡಾ.ಶ್ರೀಧರ ಗೌಡ ಉಪ್ಪಿನಗಣಪತಿ

ಪ್ರ: ಕೆ.ಕೆ. ಪ್ರಿಂಟರ್ಸ್‌ ಆ್ಯಂಡ್‌ ಪಬ್ಲಿಷರ್ಸ್‌ ಬೆಂಗಳೂರು

ಸಂ: 9902703144

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT