ಸಾಹಿತ್ಯ ರತ್ನಗಳನ್ನು ಪರಿಚಯಿಸಿದಹಸನ್‌ ನಯೀಂ ಸುರಕೋಡ

7

ಸಾಹಿತ್ಯ ರತ್ನಗಳನ್ನು ಪರಿಚಯಿಸಿದಹಸನ್‌ ನಯೀಂ ಸುರಕೋಡ

Published:
Updated:
Deccan Herald

ಹಸನ್‌ ನಯೀಂ ಸುರಕೋಡರ ಹೆಸರು ಅನುವಾದ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು. ಲೇಖಕರಾದ ಸಾದತ್‌ ಹಸನ್‌ ಮಂಟೊ, ಫೈಜ್ ಅಹ್ಮದ್‌ ಫೈಜ್‌, ಚಿತ್ರ ಸಾಹಿತಿ ಸಾಹಿರ್‌ ಲೂಧಿಯಾನ್ವಿ, ಅಮೃತಾ ಪ್ರೀತಂ, ಪಾಕಿಸ್ತಾನಿ ಕವಯತ್ರಿ ಸಾರಾ ಶಗುಪ್ತಾ, ಆಸ್ಗರ್‌ ಅಲಿ ಎಂಜಿನಿಯರ್‌ ಸೇರಿದಂತೆ ಹತ್ತಾರು ದಿಗ್ಗಜರ ಕೃತಿಗಳನ್ನು ಕನ್ನಡಕ್ಕೆ ತರುವ ಮೂಲಕ ಕನ್ನಡದ ಸಹೃದಯರ ತಿಳಿವಳಿಕೆಯ ಹರವನ್ನು ಹೆಚ್ಚಿಸಿದವರು.

ಲೇಖಕರಾಗಿ, ಅನುವಾದಕರಾಗಿ ದೊಡ್ಡ ಹೆಸರು ಮಾಡಿದ ಸುರಕೋಡ ಅವರು ನವ್ಯ ಕಾಲದ ಹಲವು ಸಾಹಿತಿಗಳಂತೆ ಬಡತನದ ಬವಣೆಯನ್ನು ಅನುಭವಿಸಿದವರು. ಅನಾರೋಗ್ಯಕ್ಕೆ ಒಳಗಾದಾಗ ಉತ್ತಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಆಗದಷ್ಟು ಬಡತನದ ಬೇಗೆಯಲ್ಲಿ ಬೆಂದವರು. ಬರಹದ ಜೊತೆಗೇ ಬದುಕಿನ ಬಂಡಿಯನ್ನು ನಡೆಸಲು ಕುರಿ ಕಾಯ್ದವರು. ಕೋಮು ಗಲಭೆಯೊಂದರಲ್ಲಿ ರಾಮದುರ್ಗದಲ್ಲಿ ಇಟ್ಟುಕೊಂಡಿದ್ದ ಒಂದು ಅಂಗಡಿಯೂ ದುರುಳರು ಇಟ್ಟ ಬೆಂಕಿಗೆ ಆಹುತಿಯಾದಾಗ ಸಾಕಷ್ಟು ನೊಂದುಕೊಂಡವರು.

ಅರ್ಥಶಾಸ್ತ್ರ ವಿಷಯದಲ್ಲಿ ಎಂ.ಎ. ಪದವಿ ಪಡೆದಿರುವ ಸುರಕೋಡ, ಇಂಗ್ಲಿಷ್, ಹಿಂದಿ, ಉರ್ದು ಮತ್ತು ಕನ್ನಡ ಭಾಷೆಗಳಲ್ಲಿ ಪರಿಣತರು. ಸೈದ್ಧಾಂತಿಕವಾಗಿ ಲೋಹಿಯಾರ ಸಮಾಜವಾದಿ ಚಿಂತನೆಗಳನ್ನು ಒಪ್ಪಿದವರು. ಹೀಗಾಗಿ, ಲೋಹಿಯಾ, ಕಿಶನ್ ಪಟ್ನಾಯಕ್, ಮಧು ಲಿಮಯೆ ಮುಂತಾದವರ ಬರಹಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಲೋಹಿಯಾರ ಜೀವನ ಚರಿತ್ರೆಯನ್ನು ಅನುವಾದಿಸಿದ್ದಾರೆ.

ಸಮಾಜವಾದಿ ಚಿಂತನೆಗಳಂತೆಯೇ ಕೋಮು ಸೌಹಾರ್ದ ಕುರಿತಾಗಿ ಆಳವಾಗಿ ಚಿಂತನೆಗೆ ಹಚ್ಚುವಂತಹ ಬರಹಗಳನ್ನು ಸುರಕೋಡರು ಬರೆದಿದ್ದಾರೆ. ಅಂತಹ ಹಲವಾರು ಬರಹಗಳನ್ನು ಬೇರೆ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ವಿಚಾರದಷ್ಟೇ ಕಾವ್ಯಪ್ರಕಾರದಲ್ಲೂ ಅಭಿರುಚಿಯುಳ್ಳ ಹಸನ್ ಸುರಕೋಡರು, ಉರ್ದು ಭಾಷೆಯ ಮಹಾಕವಿ ಫೈಜ್ ಅಹಮದ್ ಫೈಜ್ ಅವರ ಕಾವ್ಯ ಮತ್ತು ಬದುಕು, ಸಾದತ್ ಹಸನ್ ಮಂಟೊ ಕೃತಿಗಳು, ಅಮೃತಾ ಪ್ರೀತಂರ ಆತ್ಮಕಥೆ ರಸೀದಿ ಟಿಕೆಟ್‌, ಅಸ್ಗರ್ ಅಲಿ ಎಂಜಿನಿಯರ್ ಅವರ ವೈಚಾರಿಕ ಬರಹಗಳನ್ನು ಕನ್ನಡಕ್ಕೆ ತಂದಿದ್ದಾರೆ. ಉರ್ದುವಿನ ಕ್ರಾಂತಿಕಾರಿ ಕವಿ ಸಾಹಿರ್ ಲುಧಿಯಾನ್ವಿ ಅವರ ಜೀವನ ಮತ್ತು ಕಾವ್ಯ ಕುರಿತ ‘ಪ್ರೇಮಲೋಕದ ಮಾಯಾವಿ’ ಇವರ ಅಪರೂಪದ ಕೃತಿ.

ಅನುವಾದ, ಸಂಪಾದನೆ, ಸ್ವಂತ ಬರಹವೂ ಸೇರಿದಂತೆ 23 ಕೃತಿಗಳನ್ನು ರಚಿಸಿರುವ ಸುರಕೋಡ ಅವರಿಗೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಗೌರವ ಪ್ರಶಸ್ತಿ ಸಂದಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳೂ ಲಭಿಸಿವೆ. ಜೊತೆಗೆ ಬಿ.ಎ.ಸನದಿ ಪ್ರತಿಷ್ಠಾನದ ‘ಕನ್ನಡಗಡಿ ತಿಲಕ’ ಪ್ರಶಸ್ತಿ, ಶ್ರೀಮತಿ ಚಂದಮ್ಮ ನೀರಾವರಿ ಸ್ಮಾರಕ ಪ್ರಶಸ್ತಿ, ಶ್ರೀ ಕಾಗೋಡು ಪ್ರಶಸ್ತಿ ಮುಂತಾದ ಪ್ರಶಸ್ತಿ ಪುರಸ್ಕಾರಗಳು ಸಂದಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !