ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು: ‘ಶ್ರೀಮಂತ’ ನೆನಪುಗಳ ಮೆರವಣಿಗೆ

Last Updated 28 ಮೇ 2022, 19:31 IST
ಅಕ್ಷರ ಗಾತ್ರ

ದೇವಕಿ ಜೈನ್ ಎಂಬ ಹೆಸರು ಕನ್ನಡಿಗರಿಗೆ ಅಷ್ಟೇನೂ ಪರಿಚಿತವೇನಲ್ಲ. ಆದರೆ ಅರ್ಥಶಾಸ್ತ್ರಜ್ಞೆಯಾಗಿ, ಚಿಂತಕಿಯಾಗಿ, ಸ್ತ್ರೀವಾದಿ ಅಭಿಮತ ರೂಪಿಸುವಲ್ಲಿ ಅವರು ಮಾಡಿದ ಕೆಲಸಗಳನ್ನು ತಿಳಿದುಕೊಂಡರೆ, ಅವರು ಬೆಂಗಳೂರಿನವರು ಎಂಬ ಸಂಗತಿ ಹೆಮ್ಮೆಯನ್ನು ಹುಟ್ಟಿಸದೇ ಇರದು. ‘ದಿ ಬ್ರಾಸ್ ನೋಟ್‌ ಬುಕ್‌’ ಎಂಬುದು ದೇವಕಿ ಜೈನ್ ನೆನಪುಗಳನ್ನೊಳಗೊಂಡ ಪುಸ್ತಕದ ಹೆಸರು. ಅದನ್ನೇ ಕೋಡಿಬೆಟ್ಟು ರಾಜಲಕ್ಷ್ಮಿ ಅವರು ‘ಹಿತ್ತಾಳೆ ಬಣ್ಣದ ಪುಸ್ತಕ’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ. ಆ ಮೂಲಕ ದೇವಕಿ ಜೈನ್ ಅವರನ್ನು ಕನ್ನಡದ ಮನಸ್ಸುಗಳಿಗೆ ಪರಿಚಯಿಸಿದ್ದಾರೆ.

ದೇವಕಿ ಅವರ ತಂದೆ ಎಂ.ಎ. ಶ್ರೀನಿವಾಸನ್ ಅವರು ಮೈಸೂರು ರಾಜ್ಯದಲ್ಲಿ ಮೇಯರ್ ಹಾಗೂ ಸಂಪುಟ ಸಚಿವರಾಗಿದ್ದವರು. ಶ್ರೀಮಂತ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿ ಬೆಳೆದ ಅವರ ಬಾಲ್ಯದ ದಿನಗಳು ಅನುಭವದ ದೃಷ್ಟಿಯಿಂದಲೂ ಶ್ರೀಮಂತವಾಗಿಯೇ ಇದ್ದವು. ನಿರ್ಭಿಡೆ ಮತ್ತು ದಿಟ್ಟತನವನ್ನು ರಕ್ತದಲ್ಲಿಯೇ ಹೊಂದಿದ್ದ ಅವರು, ಈ ಗುಣಗಳಿಂದಾಗಿಯೇ, ಕುಟುಂಬ, ಸಮಾಜ ಹೇರುವ ಹಲವು ಕಟ್ಟುಪಾಡುಗಳನ್ನು ತುಂಬ ಸಲೀಸಾಗಿ ಮುರಿದವರು. ಪ್ರಭಾವ, ಪ್ರತಿಭೆಯನ್ನು ಬಳಸಿಕೊಂಡು ಜಗತ್ತೆಲ್ಲ ಸುತ್ತುತ್ತ, ಆ ಕ್ಷಣದ ಬದುಕನ್ನು ಪ್ರೀತಿಸುತ್ತ, ಮುಕ್ತವಾಗಿ ಅನುಭವಿಸುತ್ತ ಬೆಳೆದವರು.

ತಮ್ಮ ಎಂಬತ್ತೇಳನೇ ವಯಸ್ಸಿನಲ್ಲಿ ಬದುಕಿನ ನಡಿಗೆಯನ್ನು ಹಿಂತಿರುಗಿ ನೋಡಿ, ಆಗ ಕಂಡಿದ್ದನ್ನು ‘ದಿ ಬ್ರಾಸ್ ನೋಟ್‌ ಬುಕ್‌’ ಆಗಿ ಪ್ರಕಟಿಸಿದ್ದಾರೆ. ಇಲ್ಲಿರುವುದು ದೇವಕಿ ಅವರ ಬದುಕಿನ ವಿವರವೇ ಆಗಿದ್ದರೂ, ಅದು ಅವರದೇ ದೃಷ್ಟಿಕೋನದಿಂದಲೇ ನಿರೂಪಿತಗೊಂಡಿದ್ದರೂ ಆತ್ಮಕತೆಯ ಸ್ವರೂಪದಲ್ಲಿಲ್ಲ. ನೆನಪುಗಳನ್ನು ಅಚ್ಚುಕಟ್ಟಾಗಿ, ಹಲವು ವಿಭಾಗಗಳಲ್ಲಿ ವಿಂಗಡಿಸಿ, ಜೋಡಿಸಿ ನಮ್ಮ ಮುಂದೆ ಇಡುತ್ತಾರೆ. ಹಾಗಾಗಿಯೇ ಅದು ವಾಸ್ತವದ ಬದುಕಿನಲ್ಲಿ ಇರುವ ಹಾಗೇ ಒಂದಕ್ಕೊಂದು ಹೆಣೆದುಕೊಂಡಿಲ್ಲ, ಬದಲಿಗೆ ಒಂದಾದ ಮೇಲೆ ಒಂದು ವಿಂಗಡಣೆಗೊಂಡು ಶಿಸ್ತಾಗಿ ಕೂತಿವೆ. ಉದಾಹರಣೆಗೆ, ಅವರು ಆಕ್ಸ್‌ಫರ್ಡ್‌ನಲ್ಲಿರುವ ಹೊತ್ತಿನಲ್ಲಿ, ಶಿಕ್ಷಕಿಯಾಗಿ ಕೆಲಸ ಮಾಡಿದ ಅವಧಿಯಲ್ಲಿನ ನೆನಪುಗಳನ್ನು ಹೇಳುವಾಗ, ಅವರ ಬದುಕಿನ ಲೈಂಗಿಕ ಅನುಭವ ಹೇಳುವಾಗ, ಕುಟುಂಬದ ವಿವರಗಳು ಅಪ್ಪಿತಪ್ಪಿಯೂ ನುಸುಳುವುದಿಲ್ಲ. ಕೌಟುಂಬಿಕ ತಳಮಳಗಳ ಕುರಿತು ಬರೆಯುವಾಗ ಅದೇ ಕಾಲದಲ್ಲಿ ಅವರ ಬದುಕಿನ ಭಾಗವಾಗಿದ್ದ ಇತರ ವಿಷಯಗಳ ಕುರಿತು ಏನನ್ನೂ ಹೇಳುವುದಿಲ್ಲ. ಈ ವಿಂಗಡಣೆಯ ಕಾರಣಕ್ಕೇ ಈ ಪುಸ್ತಕ ನಮಗೆ ಬದುಕಿನ ಇಡೀತನವನ್ನು, ಅದರಲ್ಲಿ ಅಂತರ್ಗತವಾಗಿರುವ ದರ್ಶನವನ್ನೂ ಕಾಣಿಸಲು ವಿಫಲವಾಗುತ್ತದೆ.

ಬದುಕಿನ ನೆನಪುಗಳನ್ನು ತುಂಬ ಲವಲವಿಕೆಯಿಂದ ಹೇಳುತ್ತ ಹೋಗುವ ತಾಜಾತನ ಮತ್ತು ದೇವಕಿ ಒಡನಾಡಿದ ಆ ಕಾಲದ ಜಗತ್ತಿನ ಗಣ್ಯರನೇಕರ ಉಲ್ಲೇಖಗಳು, ಮತ್ತು ಅಂಥ ಗಣ್ಯರ ನಡುವೆಯೂ ದೇವಕಿ ತನ್ನ ಗಟ್ಟಿ ಮತ್ತು ದಿಟ್ಟಧ್ವನಿಯ ಮೂಲಕ ಎಂಥ ಛಾಪು ಮೂಡಿಸಿದ್ದರು ಎಂಬುದನ್ನು ತಿಳಿಯುವುದಕ್ಕೋಸ್ಕರ ಈ ಪುಸ್ತಕವನ್ನು ಓದಿ ಆನಂದಿಸಬಹುದು.

ಕೃತಿ: ಹಿತ್ತಾಳೆ ಬಣ್ಣದ ಪುಸ್ತಕ

ಲೇ: ದೇವಕಿ ಜೈನ್‌, ಕನ್ನಡಕ್ಕೆ: ಕೋಡಿಬೆಟ್ಟು ರಾಜಲಕ್ಷ್ಮಿ

ಪು: 244 ಬೆ: ₹ 270

ಪ್ರಕಾಶನ: ಅಹರ್ನಿಶಿ ಪ್ರಕಾಶನ, ಶಿವಮೊಗ್ಗ

ದೂ: 9449174662 / 9448628511

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT