ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನುಷ್ಯ ಸಂಬಂಧಗಳ ಶೋಧ

Last Updated 19 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

‘ಬೇಲಾಡಿ ಹರಿಶ್ಚಂದ್ರ’ ಗೋಪಾಲಕೃಷ್ಣ ಪೈಗಳ ಸಣ್ಣ ಕಥೆಗಳ ಹೊಸ ಸಂಕಲನ. ಪೈಗಳು 1965ರಿಂದಲೂ ಕಥೆಗಳನ್ನು ಬರೆಯುತ್ತಿರುವವರು. ಅವರ ‘ಮೂರು ಮತ್ತಿಷ್ಟು’ ಎಂಬ ಸಮಗ್ರ ಕಥಾಸಂಕಲನವೂ ಪ್ರಕಟವಾಗಿದೆ. ಸಾಕಷ್ಟು ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಪತ್ರಿಕೆಗಳಲ್ಲಿ ಪ್ರಕಟವಾದ ಅವರ ಕಥೆಗಳು ನೂರಕ್ಕೂ ಹೆಚ್ಚಿವೆ. ಅವುಗಳಲ್ಲಿ ಅರ್ಧದಷ್ಟನ್ನು ಮಾತ್ರ ಅವರು ಈತನಕ ಸಂಕಲನಗಳಾಗಿ ಪ್ರಕಟಿಸಿರಬಹುದು.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕಾದಂಬರಿ ‘ಸಪ್ನ ಸಾರಸ್ವತ’ ಹಲವಾರು ಮರು ಮುದ್ರಣಗಳನ್ನು ಕಂಡು ಓದುಗರ ಮನಸ್ಸಿಗೆ ಇಳಿದ ಮೇಲೆ ಜನರು ಅವರನ್ನು ಕಾದಂಬರಿಕಾರ ಎಂದೇ ಗುರುತಿಸುವುದು ಹೆಚ್ಚಾಗಿದೆ. ಅದರ ಜೊತೆ ಅವರ ಸಿನಿಮಾ ಪ್ರಶಸ್ತಿಗಳೂ ಸೇರಿ ಕಥೆಗಳಿಗಿಂತಲೂ ಹೆಚ್ಚಾಗಿ ಅವರ ಇತರ ಸೃಜನಶೀಲ ಕೆಲಸಗಳು ಹೆಚ್ಚಿನ ಗಮನ ಸೆಳೆದಿವೆ. ‘ಬೇಲಾಡಿ ಹರಿಶ್ಚಂದ್ರ’ ಎಂಬ ಕಥೆಯನ್ನು ಅನನ್ಯ ಕಾಸರವಳ್ಳಿಯವರು ‘ಹರಿಕಥಾಪ್ರಸಂಗ’ ಎಂಬ ಹೆಸರಿನಲ್ಲಿ ಸಿನಿಮಾ ಮಾಡಿದ್ದಾರೆ. ಹಾಗಾಗಿ ಅವರ ಹಲವು ಬರಹಗಳು ಸಿನಿಮಾಗಳ ಮೂಲಕವೂ ಪರಿಚಿತವಾಗಿವೆ.

ಈ ಸಂಕಲನದಲ್ಲಿ ಒಟ್ಟು 13 ಕಥೆಗಳಿವೆ. ಇಲ್ಲಿನ ಎಲ್ಲಾ ಕಥೆಗಳಲ್ಲೂ ಮನುಷ್ಯ ಸಂಬಂಧ ಹಾಗೂ ನಡವಳಿಕೆಗಳಲ್ಲಿ ನಿಗೂಢತೆ ಇದೆ. ಅದರಿಂದ ಹುಟ್ಟುವ ವಿಸ್ಮಯ ಅವುಗಳ ಸ್ಥಾಯಿ ಭಾವಗಳಲ್ಲಿ ಒಂದು. ಅವುಗಳನ್ನು ಅರಿಯಲು ಮನುಷ್ಯ ಸಂಬಂಧಗಳ ಶೋಧಕ್ಕೆ ಇಳಿದಂತೆ ಕಥೆಗಾರನ ತಾತ್ವಿಕತೆಯ ಆಳ ಅಗಲಗಳು ಗೋಚರಿಸುತ್ತವೆ.

‘ದಾಂಪತ್ಯ ಗೀತೆಗಳು’ ಕಥೆಯಲ್ಲಿ ಹಾಸನ ಜಿಲ್ಲೆಯ ರಾಯರಕೊಪ್ಪಲು ಎಂಬ ಸಣ್ಣ ಊರಿನಲ್ಲಿ ಬ್ಯಾಂಕ್‌ ಅಧಿಕಾರಿಯಾದ ನಿರೂಪಕನಿಗೆ ಬಡವರಿಗೆ ಸಿಗುವ ಸರ್ಕಾರಿ ಪಿಂಚಣಿ ಪಡೆಯುತ್ತಿದ್ದ ಚೆಂಚಮ್ಮ ಎಂಬ ಮುದುಕಿ ಊರಿನ ಎಸ್ಟೇಟ್‌ ಗೌಡನ ಹೆಂಡತಿ ಎಂದು ತಿಳಿಯುತ್ತದೆ. ಆ ಎಸ್ಟೇಟ್‌ ಗೌಡ ಚೆಂಚಮ್ಮನನ್ನು ಬಿಟ್ಟು ಕಟ್ಟಿಕೊಂಡವಳಂತಿದ್ದ ಇನ್ನೊಬ್ಬಳ ಜೊತೆ ಅದೇ ಊರಲ್ಲಿ ಬೇರೆ ಮನೆ ಮಾಡಿಕೊಂಡವನು. ಚೆಂಚಮ್ಮ ಹುಚ್ಚಿಯಂತಾಗಿದ್ದಳು. ಅವನ ಇಳಿವಯಸ್ಸಿನಲ್ಲಿ ಎರಡನೇ ಹೆಂಡತಿ ತೀರಿಕೊಂಡಾಗ ಎಸ್ಟೇಟ್‌ ಗೌಡ ಮೊದಲ ಪತ್ನಿ ಚೆಂಚಮ್ಮನ ಮನೆಗೆ ಮರಳುತ್ತಾನೆ. ಅವರ ಸಂಸಾರ ಚಿಗುರೊಡೆಯುತ್ತದೆ. ಬ್ಯಾಂಕ್‌ ಉದ್ಯೋಗದಲ್ಲಿ ವರ್ಗವಾದರೂ ಮರೆತು ಹೋಗದ ಆ ನೆನಪು ತನ್ನ ಬಾಲ್ಯದ ಹಳ್ಳಿ ಮನೆಯಲ್ಲಿದ್ದ ಚೋಮು ಹಾಗೂ ಸ್ವಂತ ಅಜ್ಜನ ಸಂಬಂಧವನ್ನು ಬಿಡಿಸಿ ಹೇಳುತ್ತದೆ. ಅಜ್ಜ ಸತ್ತ ಬಳಿಕ ಅಜ್ಜಿಯ ಪ್ರೇರಣೆಯಿಂದ ನಿರೂಪಕನ ಅಪ್ಪನೇ ಚೋಮುವನ್ನು ಒಕ್ಕಲೆಬ್ಬಿಸಿ ಓಡಿಸಿದ ಹಿನ್ನೆಲೆ ಸ್ಪಷ್ಟವಾಗುತ್ತದೆ.

ಕಥೆ ಹಾಗೂ ನಿರೂಪಣೆಗಳೆರಡೂ ಒಂದಾಗಿ ಕಥಾನಕ ರೂಪಕದ ಸ್ವರೂಪವನ್ನು ಪಡೆಯುವುದು ಪೈಗಳ ಕಥೆಗಳ ಪ್ರಮುಖ ಲಕ್ಷಣ. ಅಲ್ಲಿನ ಚಿತ್ರೀಕರಣ ಸರಳವಾಗದೆ ಸಾವಯವ ಶಿಲ್ಪದ ಸಮಗ್ರೀಕರಣವಾಗಲು ಪ್ರಯತ್ನಿಸುತ್ತದೆ. ‘ಬೇಲಾಡಿ ಹರಿಶ್ಚಂದ್ರ’ ಯಕ್ಷಗಾನದಲ್ಲಿ ಯಶಸ್ವಿ ಸ್ತ್ರೀ ಪಾತ್ರಗಳನ್ನು ಮಾಡುವ ಪುರುಷ. ಹಲವು ಕಾರಣಗಳಿಂದ ಅವನು ಸಲಿಂಗ ಕಾಮಿ. ಅವನನ್ನು ಇಚ್ಛಿಸಿದ ಇನ್ನೊಬ್ಬ ಗಂಡಿನ ಜೊತೆ ಸಲಿಂಗರತಿ ಸಹಬಾಳ್ವೆಯ ಕುಟುಂಬ ಜೀವನಕ್ಕೆ ಸಮಾಜ ಅವಕಾಶ ಕೊಡುವುದಿಲ್ಲ. ಅವನ ಬದುಕು ದುರಂತಮಯವಾಗುತ್ತದೆ. ಕಥೆ ವ್ಯಕ್ತಿಯೊಬ್ಬನೊಳಗೆ ಬೆಳೆಯುವ ಲೈಂಗಿಕತೆಯ ಹಲವು ಆಯಾಮಗಳನ್ನು ಪರೀಕ್ಷಿಸುತ್ತದೆ. ವಿರುದ್ಧ ಲಿಂಗಿಗಳ ಆಕರ್ಷಣೆ ಹೇಗೆ ನೈಸರ್ಗಿಕವೋ ಹಾಗೆಯೇ ಸಲಿಂಗಿಗಳ ಆಕರ್ಷಣೆಯೂ ಕೆಲವರಿಗೆ ಪ್ರಕೃತಿ ಸಹಜ; ಇನ್ನು ಕೆಲವರಿಗೆ ಸಾಮಾಜಿಕ ಅನಿವಾರ್ಯ ಎಂಬುದನ್ನು ಕಥೆಯೊಳಗಿನ ಅನುಭವವಾಗಿ ಕಾಣಿಸುತ್ತದೆ. ಲೈಂಗಿಕತೆಯ ಜಾತಕ ಬರೆಯುವ ಅಸಹಜ ಅಪ್ರಬುದ್ಧ ಚಿತ್ರಣವಾಗಲಿ, ಸಲಿಂಗರತಿಯ ನಾಟಕೀಯ ವಿವರಣೆಗಳಾಗಲಿ ಇಲ್ಲದೆ ಅವನ್ನೊಂದು ಸಾಮಾಜಿಕ, ಸಾಂದರ್ಭಿಕ ಸಹಜ ಪ್ರಕ್ರಿಯೆಯಾಗಿ ಕಥೆ ಸಾದರಪಡಿಸುತ್ತದೆ.

‘ಇನ್ನೊಬ್ಬನ ನೆನಪುಗಳನ್ನು ಕದಿಯುವವನು’ ಇಂದಿನ ರಾಜಕೀಯ ಸ್ಥಿತಿಯನ್ನು ಸಾಂಕೇತಿಕವಾಗಿ ನೆನಪಿಸುವ ಕಿರುಗಥೆ. ‘ಅಪ್ಪುಗೆ’ ಅಂತಹುದೇ ಇನ್ನೊಂದು ಆಪ್ತ ಕಿರುಗಥೆ. ಬುರ್ಖಾ ಧರಿಸದ ಹೆಂಡತಿ, ಮಗಳೊಡನೆ ಹೋಟೆಲಿಗೆ ಹೋಗಿದ್ದಾಗ ದಿಟ್ಟಿಸಿದ ಹುಡುಗನನ್ನು ಪ್ರಶ್ನಿಸಿದಾ‌ಗ ಆ ಹುಡುಗ ಹೇಳಿದ್ದು ‘ನಮ್ಮ–ನಿಮ್ಮ ಹೆಣ್ಣು ಮಕ್ಕಳ ನಡುವೆ ವ್ಯತ್ಯಾಸವಿಲ್ಲ’ ಎಂದು. ಕಥಾ ನಾಯಕ ‘ಮು’ ಎದ್ದುಬಂದು ತರುಣನನ್ನು ಗಟ್ಟಿಯಾಗಿ ಅಪ್ಪಿಕೊಂಡ ಎಂಬಲ್ಲಿಗೆ ಕಥೆ ಮುಗಿಯುತ್ತದೆ.

ಕಥೆಗಳೊಳಗೆ ಭಾವ–ಬುದ್ಧಿಗಳೆರಡೂ ಸೇರಿಕೊಂಡು ಓದುಗನ ವಿಚಕ್ಷಣೆ, ವಿಶ್ಲೇಷಣೆಗಳನ್ನು ಹೇಗೆ ಪ್ರೇರೇಪಿಸ
ಬಲ್ಲದು ಎಂಬುದನ್ನು ಪೈಗಳ ಕಥೆಗಳು ತೋರಿಸಿಕೊಡುತ್ತವೆ. ‘ಬಾಯಕ್ಕ ಬಾಯಕ್ಕ ಬಾಗಿಲು ತೆರೆಯೇ’ ಕೊನೆವರೆಗೆ ಮಗುವಿನ ಮನಸ್ಸು ಮತ್ತು ಪ್ರಬುದ್ಧ ಲೋಕವನ್ನು ಪ್ರತ್ಯೇಕವಾಗಿಡಬಲ್ಲ ಕಥೆ. ನವ್ಯ ಪ್ರಕಾರದಲ್ಲಿ ಕಥೆಗಳನ್ನು ಬರೆಯತೊಡಗಿದ ಪೈಗಳು ನವ್ಯೋತ್ತರದ ಹಲವು ನೆಲೆಗಳನ್ನು ಅರಗಿಸಿಕೊಂಡಿದ್ದಾರೆ. ನವ್ಯದ ಅನುಭವ ಪ್ರಧಾನ ನೆಲೆಗಳನ್ನೂ ಅವುಗಳಿಗೆ ಅಗತ್ಯವಾದ ರೂಪಕಗಳ ಶಕ್ತಿಯನ್ನೂ ಕಾಪಿಟ್ಟುಕೊಂಡು ಕಥೆಗಾರನಾಗಿ ಹೊಸದಾಗಿ ಬೆಳೆಯುವುದು ಈ ಸಂಕಲನದಲ್ಲಿ ಅವರಿಗೆ ಸಾಧ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT