ಗುರುವಾರ , ಫೆಬ್ರವರಿ 25, 2021
23 °C

‘ಶಿವನ ಕುಣಿತ’ಕ್ಕೆ ನೂರು ವರ್ಷ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Deccan Herald

ಸೃಷ್ಟಿ ಹೇಗಾಯಿತು? ಇದು ಎಲ್ಲ ಕಾಲದ ಕುತೂಹಲ. ಈಗ ವಿಜ್ಞಾನಯುಗ. ಹೀಗಾಗಿ ಇದು ಇಂದಿನ ವಿಜ್ಞಾನಿಗಳ ದೊಡ್ಡ ಪ್ರಶ್ನೆ. ವಿಜ್ಞಾನ ಈ ಪ್ರಶ್ನೆಯನ್ನು ಎತ್ತಿಕೊಳ್ಳುವ ಮೊದಲೇ ಇದು ತತ್ತ್ವಶಾಸ್ತ್ರದ ಪ್ರಶ್ನೆಯಾಗಿತ್ತು; ಎಂದರೆ ಜನಮಾನಸದ ಸಹಜವಾದ ಪ್ರಶ್ನೆಯಾಗಿತ್ತು. ಈ ಪ್ರಶ್ನೆಯನ್ನು ಎಲ್ಲ ಪ್ರಾಚೀನ ಸಂಸ್ಕೃತಿಗಳೂ ತಮಗೆ ತಾವೇ ಹಾಕಿಕೊಂಡಿವೆ. ಭಾರತೀಯ ಸಂಸ್ಕೃತಿ ಈ ಪ್ರಶ್ನೆಗೆ ಹಲವು ಉತ್ತರಗಳನ್ನು ಕಾಣಿಸಿದೆ. ಅವುಗಳಲ್ಲೊಂದು ‘ಶಿವನ ಕುಣಿತ’.

ತ್ರಿಮೂರ್ತಿಗಳಲ್ಲಿ ಒಬ್ಬ ಶಿವ; ಅವನು ನೃತ್ಯಪ್ರಿಯ. ಅವನ ನರ್ತನದ ಫಲವೇ ಈ ಸೃಷ್ಟಿ. ಅವನ ಕುಣಿತಕ್ಕೆ ಲಯವೊಂದನ್ನು ಒದಗಿಸಿಕೊಳ್ಳಲು ಡಮರುಗವನ್ನು ನುಡಿಸುತ್ತಾನೆ. ನುಡಿಸಾಣಿಕೆ ಹದಿನಾಲ್ಕು ಸೂತ್ರಗಳನ್ನು ಉಸುರಿತು. ಅವೇ ಮಾಹೇಶ್ವರಸೂತ್ರಗಳು ಎನಿಸಿಕೊಂಡವು. ಅವುಗಳ ದೆಸೆಯಿಂದಾಗಿಯೇ ಭಾಷೆ ಹುಟ್ಟಿತು. ಭಾಷೆ ಎಂದರೆ ವಿಶ್ವ ತಾನೆ? ಡಮರುಗವು ಸ್ಪಂದವನ್ನು ಉಂಟುಮಾಡಿತು; ಆ ನಾದದ ಫಲವೇ ಜಗತ್ತು; ಎಲ್ಲ ಸೃಷ್ಟಿ. ಇಂಥದೊಂದು ಸಿದ್ಧಾಂತ ನಮ್ಮಲ್ಲಿದೆ. ಎಂದು ಆದಿಶಿವ ಡಮರುಗವನ್ನು ನುಡಿಸಿದನೋ, ನರ್ತನದ ಹೆಜ್ಜೆಗಳನ್ನು ಹಾಕಿದನೋ– ನಮಗೆ ತಿಳಿಯದು. ಆದರೆ, ನೂರು ವರ್ಷಗಳ ಹಿಂದೆ ಶಿವ ಮತ್ತೊಮ್ಮೆ ಕುಣಿದ. ಆ ಕುಣಿತದಲ್ಲಿ ಮೂಡಿದ ವಿಚಾರದ ಸ್ಪಂದನವು ಭಾರತೀಯ ಕಲಾಮೀಮಾಂಸೆ ಮತ್ತು ತತ್ತ್ವಮೀಮಾಂಸೆಗಳ ಪುನರುತ್ಥಾನದ ಅಭಿಯಾನವನ್ನೇ ಸೃಷ್ಟಿಸಿತು. ಈ ನೃತ್ಯವೇ ‘ದಿ ಡಾನ್ಸ್‌ ಆಫ್‌ ಶಿವ’ (The Dance of Shiva). ಇದು ಅಕ್ಷರರೂಪದಲ್ಲಿ ನಡೆದ ಭಾರತೀಯತೆಯ ಮೂಲತತ್ತ್ವಗಳ ವಿಚಾರಸ್ಪಂದನ. ಇದರ ಕರ್ತೃ ಆನಂದ ಕುಮಾರಸ್ವಾಮಿ; ಕಲಾತತ್ತ್ವಮಹರ್ಷಿ ಎಂದು ಪ್ರಸಿದ್ಧರಾದವರು. ಈ ಕೃತಿ ಪ್ರಕಟವಾದದ್ದು 1918ರಲ್ಲಿ; ಒಂದು ಶತಮಾನದ ಬಳಿಕವೂ ಇದು ಇಂದಿಗೂ ಪ್ರಸ್ತುತವಾಗಿದೆ. ಕುಮಾರಸ್ವಾಮಿ ಇದನ್ನು ಮುಖ್ಯವಾಗಿ ಪಾಶ್ಚಾತ್ಯ ವಿದ್ವಾಂಸರನ್ನು ಗಮನದಲ್ಲಿರಿಸಿಕೊಂಡು ಬರೆದರು; ಆದರೆ ಕುಮಾರಸ್ವಾಮಿಯವರ ಚಿಂತನೆಗಳು ಇಂದು ಪ್ರಧಾನವಾಗಿ ಬೇಕಾಗಿರುವುದು ಭಾರತೀಯರಿಗೇ ಹೌದು. ನೂರು ವರ್ಷಗಳಲ್ಲಿ ಸಂಭವಿಸಿರುವ ವ್ಯತ್ಯಾಸ ಇಷ್ಟೇ! 

‘ದಿ ಡಾನ್ಸ್‌ ಆಫ್‌ ಶಿವ’– ಪ್ರಕಟವಾಗುವುದಕ್ಕೂ ಮೊದಲು ಕುಮಾರಸ್ವಾಮಿಯವರ ಹಲವು ಪುಸ್ತಕಗಳು, ಪ್ರಬಂಧಗಳು ಪ್ರಕಟವಾಗಿದ್ದವು. ಆ ವೇಳೆಗಾಗಲೇ ಅವರು ಸಾಕಷ್ಟು ಪ್ರಸಿದ್ಧರೂ ಆಗಿದ್ದರು. ಆದರೆ, ಈ ಕೃತಿ ಪ್ರಕಟವಾದ ಬಳಿಕ ಭಾರತೀಯ ಕಲೆ ಮತ್ತು ತತ್ತ್ವಜ್ಞಾನವನ್ನು ಗ್ರಹಿಸುವ ವಿಧಾನದಲ್ಲಿಯೇ ಕ್ರಾಂತಿಕಾರಕವಾದ ಪಲ್ಲಟ ನಡೆಯಿತು ಎಂದರೆ ಅದೇನೂ ತಪ್ಪಾಗಲಾರದು. ‘ದಿ ಡಾನ್ಸ್‌ ಆಫ್‌ ಶಿವ’ – ಎಂಬ ಶೀರ್ಷಿಕೆಯಲ್ಲಿಯೇ ಪ್ರಬಂಧವೊಂದಿದೆ. ಶಿವನ ನೃತ್ಯರೂಪವಾದ ನಟರಾಜತತ್ತ್ವವನ್ನು ವಿಶ್ಲೇಷಿಸಿದೆ ಈ ಪ್ರಬಂಧ. ಗ್ರಂಥದ ಆಶಯವನ್ನು ಇದು ಎತ್ತಿಹಿಡಿದಿದೆ. ಪ್ರಾಚೀನ ಭಾರತೀಯ ಕಲೆಯ ಎಲ್ಲ ತಾತ್ತ್ವಿಕತೆಯ ಮೂಲವನ್ನು ನಟರಾಜನ ಕಲ್ಪನೆಯಲ್ಲಿ ಕಾಣಲಾದೀತು. ಕಲೆ ಮಾತ್ರವಲ್ಲ, ಭಾರತೀಯ ದರ್ಶನದ ಮೂಲತತ್ತ್ವಗಳೂ ಈ ಕಲ್ಪನೆಯಲ್ಲಿ ನೆಲೆಗೊಂಡಿವೆ. ಸೃಷ್ಟಿ, ಸ್ಥಿತಿ, ಲಯ, ತಿರೋಭಾವ ಮತ್ತು ಅನುಗ್ರಹ– ಈ ಐದು ತತ್ತ್ವಗಳೇ ಈ ನೆಲದ ಕಲಾಮೀಮಾಂಸೆಗೂ ಜೀವನಮೀಮಾಂಸೆಗೂ ಮೂಲವಾಗಿರುವಂಥವು. ಭಾರತೀಯ ಕಲಾಮೀಮಾಂಸೆಯ ಲೋಕ ಅದರ ಸೌಂದರ್ಯವನ್ನೂ ಶಕ್ತಿಯನ್ನೂ ಕಳೆದುಕೊಳ್ಳುತ್ತಿದ್ದಾಗ ಅದಕ್ಕೆ ಜೀವವನ್ನು ತುಂಬಿದವರು ಕಾಶ್ಮೀರದ ಕಾವ್ಯಮೀಮಾಂಸಕರು; ಆನಂದವರ್ಧನ, ಅಭಿನವಗುಪ್ತ ಮುಂತಾದವರು. ಈ ಎಲ್ಲ ಪ್ರತಿಭಾಶಾಲಿಗಳಿಗೂ ಭಾರತೀಯ ಕಲಾದರ್ಶನದ ಪ್ರತ್ಯಭಿಜ್ಞಾನಕ್ಕೆ ಸ್ಫೂರ್ತಿಯನ್ನು ಒದಗಿಸಿದ್ದೇ ನಟರಾಜನ ಕಲ್ಪನೆ. ಹೀಗೆಯೇ ನಮ್ಮ ಕಾಲದಲ್ಲಿ ಸಹ ಕಲೆಯಲ್ಲಿಯೂ ತತ್ತ್ವಚಿಂತನೆಯಲ್ಲೂ ಭಾರತೀಯತೆಯ ದಿಟವಾದ ಸೊಗಡು ಮರೆಯಾಗಿದ್ದಾಗ ಅದನ್ನು ಬೆಳಕಿಗೆ ತಂದವರು ಆನಂದ ಕುಮಾರಸ್ವಾಮಿ. ಅವರಿಗೂ ನೆರವಿಗೆ ಬಂದದ್ದು ಕೂಡ ನಟರಾಜನೇ ಹೌದು.


ಆನಂದ ಕುಮಾರಸ್ವಾಮಿ

ಹೀಗೆ ಭಾರತೀಯ ಚಿಂತನೆಗೆ ಹೊಸ ದಿಕ್ಕನ್ನು ನೀಡಿದ ಕೃತಿಗೆ ಅವರು ‘ದಿ ಡಾನ್ಸ್‌ ಆಫ್‌ ಶಿವ’ ಎಂದು ಒಕ್ಕಣಿಸಿದ್ದು ಮಾತ್ರವೇ ಅಲ್ಲ, ಅದರಲ್ಲಿ ಹದಿನಾಲ್ಕು ಪ್ರಬಂಧಗಳನ್ನು ಅಡಕಗೊಳಿಸಿದ್ದು– ಮಾಹೇಶ್ವರಸೂತ್ರಗಳಿಗೆ ಸಂವಾದಿಯಾಗಿ– ಕೂಡ ಉದ್ದೇಶಪೂರ್ವಕವೂ ಇರಬಹುದು. ಹೇಗಾದರೂ ಇರಲಿ, ಭಾರತೀಯತೆಗೆ ಹೊಸ ಕಾಣ್ಕೆಯನ್ನು ನೀಡಿದ ಕೃತಿಯಾದದ್ದು ಮಾತ್ರ ಐತಿಹಾಸಿಕ ಸಂಗತಿಯೇ ಹೌದು.  ಇಂದಿಗೂ ಆನಂದ ಕುಮಾರಸ್ವಾಮಿ ಎಂದರೆ ‘ದಿ ಡಾನ್ಸ್‌ ಆಫ್‌ ಶಿವ’, ‘ದಿ ಡಾನ್ಸ್‌ ಆಫ್‌ ಶಿವ’  ಎಂದರೆ ಆನಂದ ಕುಮಾರಸ್ವಾಮಿ– ಎನ್ನುವಷ್ಟರ ಮಟ್ಟಿಗೆ ಸಂಬಂಧಸೂತ್ರವೊಂದು ನೆಲೆಗೊಂಡಿದೆ ಎನ್ನುವುದು ಈ ಕೃತಿಯ ಮಹತ್ವಕ್ಕೆ ಸಾಕ್ಷ್ಯ. ಆದರೆ, ಇದೊಂದು ರೀತಿಯಲ್ಲಿ ಮಿತಿಯೂ ಆಯಿತು. ಏಕೆಂದರೆ ಇಂದು ಕುಮಾರಸ್ವಾಮಿಯವರನ್ನು ಪ್ರಶಂಸಿಸುವವರೂ, ಟೀಕಿಸುವವರೂ ಬಹುಪಾಲು ಸಂದರ್ಭದಲ್ಲಿ ಆಶ್ರಯಿಸುವುದು ಕೇವಲ ‘ದಿ ಡಾನ್ಸ್‌ ಆಫ್‌ ಶಿವ’. ಈ ಕೃತಿಯ ಅನಂತರದಲ್ಲಿ ಅವರು ಬರೆದ ಬರಹಗಳೂ ಇನ್ನೂ ಪ್ರೌಢವೂ ಶ್ರೇಷ್ಠವೂ ಪ್ರಧಾನವೂ ಆಗಿದ್ದರೂ ಅವುಗಳ ಅಧ್ಯಯನ ನಡೆದಿರುವುದು ಕಡಿಮೆ. 

ಈ ಕೃತಿಯಲ್ಲಿ ಭಾರತೀಯತೆಯ ಹಲವು ಆಯಾಮಗಳ ಚಿಂತನೆಯಿದೆ. ಭಾರತೀಯ ಸಂಸ್ಕೃತಿ, ಶಿಲ್ಪಕಲೆ– ಸಂಗೀತ, ಬೌದ್ಧದರ್ಶನ, ತತ್ತ್ವದರ್ಶನ, ಶಿಕ್ಷಣ, ಸ್ತ್ರೀಯರು ಮತ್ತು ಮಹಿಳೆಯರು– ಹೀಗೆ ವಿಷಯಗಳ ಹರವು ದೊಡ್ಡದು. ವಿಷಯ ನಿರೂಪಣೆಯೂ ಅಪಾರ ಅಧ್ಯಯನ ಮತ್ತು ಹೊಳಹುಗಳಿಂದ ಪಾಕಗೊಂಡಿರುವಂಥದ್ದು. ನೀತ್ಸೆ ಬಗ್ಗೆಯೂ ಒಂದು ಲೇಖನ ಇರುವುದು ಗಮನಾರ್ಹ. ಎಲ್ಲ ಪ್ರಬಂಧಗಳೂ ವಿಚಾರಪ್ರಚೋದಕವಾಗಿವೆ, ದಿಟ. ಹೀಗಿದ್ದರೂ ಮೊದಲನೆಯ ಪ್ರಬಂಧ ಪ್ರತಿಕ್ಷಣವೂ ನಮ್ಮ ಎಚ್ಚರವನ್ನು ಕಾಪಾಡುವಂಥದ್ದು. ಜಗತ್ತಿನ ಕಲ್ಯಾಣಕ್ಕೆ ಭಾರತ ಕೊಟ್ಟ ಕೊಡುಗೆ ಏನು– ಎಂಬ ಪ್ರಶ್ನೆಯನ್ನು ಎತ್ತಿಕೊಂಡು ವಿಶ್ಲೇಷಿಸು ತ್ತಾರೆ, ಕುಮಾರಸ್ವಾಮಿ. ಅದಕ್ಕೆ ಅವರು ಕೊಟ್ಟಿರುವ ಉತ್ತರವೂ ಮನನೀಯವಾದುದು: ‘ಭಾರತೀಯತೆಯೇ ಭಾರತವು ಜಗತ್ತಿಗೆ ನೀಡಿರುವ ಕೊಡುಗೆ.’ ಹಾಗಾದರೆ ‘ಭಾರತೀಯತೆ ಎಂದರೇನು?’ ಈ ಪ್ರಶ್ನೆಗೆ ಉತ್ತರವನ್ನು ಸಾಕ್ಷಾತ್ಕರಿಸಿಕೊಳ್ಳಲು ನಮಗೆ ಅವರ ಬರಹಗಳೇ ಶ್ರೀರಕ್ಷೆ. ಅವರ ಬರಹಗಳ ಅಧ್ಯಯನದ ತಪಸ್ಸಿಗೆ ತೊಡಗಿದರೆ ಭಾರತೀಯತೆಯ ಅರಿವೂ ಆನಂದವೂ ಒದಗುವುದು ಖಂಡಿತ.

ಆನಂದ ಕುಮಾರಸ್ವಾಮಿ ಅವರು ತೀರಿಕೊಂಡದ್ದು 1947ರ ಸೆಪ್ಟೆಂಬರ್‌ 9ರಂದು (ಜನನ: ಆಗಸ್ಟ್‌ 22, 1877). ಅವರು ಪ್ರಾಣವನ್ನು ತ್ಯಜಿಸುವ ಕೆಲವೇ ಕ್ಷಣಗಳ ಮುನ್ನ ‘ದಿ ಡಾನ್ಸ್‌ ಆಫ್‌ ಶಿವ’ ಕೃತಿಯನ್ನು ಪರಿಷ್ಕರಿಸಿ, ಮುದ್ರಣಕ್ಕೆ ಸಿದ್ಧಗೊಳಿಸಿದ್ದರಂತೆ. ಶಿವನ ಕುಣಿತ ಎನ್ನುವುದು ಅವರ ಬದುಕಿನಲ್ಲಿ ಜೀವಂತ ಸಂಕೇತವಾಗಿ ಒದಗಿಬಂದದ್ದು ಆಕಸ್ಮಿಕ ಅಲ್ಲವೆನಿಸುತ್ತದೆ. ಅವರ ವಿಚಾರಯಜ್ಞದಲ್ಲಿ ತೊಡಗಿಕೊಳ್ಳುವುದು ಎಂದರೆ ಅದು ಎಂದೂ ನಿಲ್ಲದ ಶಿವನ ಕುಣಿತದಲ್ಲಿ ನಾವೂ ಭಾಗಿಯಾದಂತೆಯೇ ಹೌದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.