ಪುಸ್ತಕ ವಿಮರ್ಶೆ: ಸಾವಿತ್ರಿಬಾಯಿಯ ಸೇವಾಜೀವನ

ಸಾವಿತ್ರಿಬಾಯಿ ಫುಲೆ ಮತ್ತು ನಾನು
ಮೂಲ: ಸಂಗೀತಾ ಮುಳೆ
ಕನ್ನಡಕ್ಕೆ: ಕೆಸ್ತಾರ ವಿ ಮೌರ್ಯ, ವಿಕಾಸ್ ಆರ್.ಮೌರ್ಯ
ಪ್ರ: ಅಹರ್ನಿಶಿ ಪ್ರಕಾಶನ, ಶಿವಮೊಗ್ಗ
ಸಂ: 9449174662
ದೀನೋದ್ಧಾರಕಿ, ಭಾರತದ ಮಹಿಳೆಯರ ಬಾಳಿಗೆ ಹೊಸಬೆಳಕಾದ ಸಾವಿತ್ರಿಬಾಯಿ ಫುಲೆ ಕುರಿತು ರಚನೆಯಾದ ಸಾಹಿತ್ಯಕ್ಕೆ ಲೆಕ್ಕವುಂಟೇ...? ಆ ಸಾಲಿನಲ್ಲಿ ಮತ್ತೊಂದು ಕೃತಿ, ‘ಸಾವಿತ್ರಿಬಾಯಿ ಫುಲೆ ಮತ್ತು ನಾನು’. ಆದರೆ ಇದು ಹತ್ತರೊಳಗೆ ಮತ್ತೊಂದು ಎನ್ನುವಂತಹ ಕೃತಿಯಲ್ಲ. ಫುಲೆ ಅವರ ಜೀವನಗಾಥೆಯನ್ನು ವಿಶಿಷ್ಟ ರೀತಿಯಲ್ಲಿ ನಿರೂಪಿಸಿರುವುದು ಇದರ ಹೆಗ್ಗಳಿಕೆ.
ಮೀಸಲಾತಿಯ ಸೌಲಭ್ಯದಿಂದ ಓದುವುದಕ್ಕಾಗಿ ಪಟ್ಟಣ ಸೇರಿದ ಶಬರಿ ಎಂಬ ಹೆಣ್ಣುಮಗಳೊಬ್ಬಳು ಅನುಭವಿಸುವ ಸಮಸ್ಯೆ, ದೊಡ್ಡವರ ಕಾಟ, ನಂತರ ಸ್ವಂತ ಶಕ್ತಿಯಿಂದ ಬದಲಾವಣೆಗೆ ತೆರೆದುಕೊಳ್ಳುವುದು ಮತ್ತು ಸಮಾಜದಲ್ಲಿ ಸೇವಾಕೈಂಕರ್ಯದಲ್ಲಿ ತೊಡಗಿಕೊಳ್ಳುವುದು ಕೃತಿಯ ವಸ್ತು. ಇದನ್ನು ಕಥಾನಕದ ಶೈಲಿಯಲ್ಲಿ ಹೆಣೆಯುವ ಮೂಲಕ ಲೇಖಕಿ ಹೊಸತನ ಮೆರೆದಿದ್ದಾರೆ.
ಶೋಧ, ಸಂಯೋಜನೆ ಮತ್ತು ಬಂಡಾಯ ಎಂಬ ಭಾಗಗಳ ಮೂಲಕ ಕೃತಿ ಸಾಗುತ್ತದೆ. ಶಬರಿಗೆ ಸಿಕ್ಕಿದ, ಸಾವಿತ್ರಿಬಾಯಿ ಅವರದು ಎಂದು ತೋರುವ ದಿನಚರಿಯ ಘಟನೆಗಳು ಮತ್ತು ಶಬರಿಯ ಶೈಕ್ಷಣಿಕ ಸಂಸ್ಥೆಯ ಘಟನಾವಳಿಗಳು ಒಂದಕ್ಕೊಂದು ಸಂವಾದಿಯಾಗಿ ಮುಂದೆ ಸಾಗುವುದು ಕೃತಿಗೆ ಕಾವ್ಯಾತ್ಮಕ ಸೊಬಗನ್ನು ತಂದುಕೊಟ್ಟಿವೆ. ಜ್ಯೋತಿಬಾ ಹಾಗೂ ಸಾವಿತ್ರಿಬಾಯಿ ದಂಪತಿಯ ಋಣ ಸಮಾಜದ ಮೇಲೆ ದೊಡ್ಡದಾಗಿದೆ. ಅದನ್ನು ತೀರಿಸುವ ಪುಟ್ಟ ಯತ್ನವಿದು ಎನ್ನುತ್ತಾರೆ ಮೂಲ ಲೇಖಕಿ ಸಂಗೀತಾ ಮುಳೆ. ಕೆಸ್ತಾರ ಮತ್ತು ವಿಕಾಸ್ ಮೌರ್ಯ ದಂಪತಿ ಈ ಕೃತಿಯನ್ನು ಅಷ್ಟೇ ಸೊಗಸಾಗಿ ಕನ್ನಡಕ್ಕೆ ತಂದಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.