ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ತತ್ತ್ವಶಾಸ್ತ್ರದ ಬೆಳಂದಿಗಳು

Last Updated 8 ಜೂನ್ 2019, 19:30 IST
ಅಕ್ಷರ ಗಾತ್ರ

ಭಾರತೀಯ ಸಂಸ್ಕೃತಿ–ಪರಂಪರೆ ವೈವಿಧ್ಯ ಪೂರ್ಣವಾದುದಷ್ಟೆ ಅಲ್ಲ, ಸಂಕೀರ್ಣವಾದುದೂ ಹೌದು; ಮಾತ್ರವಲ್ಲ, ಹರಹು ಕೂಡ ವಿಶಾಲವಾದುದು. ಭಾರತೀಯ ತತ್ತ್ವಶಾಸ್ತ್ರದ ಹಿನ್ನೆಲೆ ಇಲ್ಲದಿದ್ದರೆ ಈ ನೆಲದ ಪರಂಪರೆಯ ಮಾನಸಿಕತೆಯನ್ನೂ, ಚಿಂತನೆಯ ಆಯಾಮಗಳನ್ನೂ, ಸಂಸ್ಕೃತಿಯ ರೀತಿ–ನೀತಿಗಳನ್ನೂ ಅರ್ಥಮಾಡಿಕೊಳ್ಳುವುದು ಸುಲಭವಲ್ಲ. ಆದರೆ ದುರಂತವೆಂದರೆ ನಮ್ಮ ದೇಶದ ಹಲವು ವಿಶ್ವವಿದ್ಯಾಲಯಗಳಲ್ಲಿ ತತ್ತ್ವಶಾಸ್ತ್ರದ ಅಧ್ಯಯನವೇ ಮಾಯವಾಗಿದೆ. ಹೀಗಿರುವಾಗ ಭಾರತೀಯ ತತ್ತ್ವಶಾಸ್ತ್ರವನ್ನು ಅರಿಯಲು ಇರುವ ಪರ್ಯಾಯ ಮಾರ್ಗವಾದರೂ ಏನು? ಪುಸ್ತಕಗಳನ್ನೇ ಆಶ್ರಯಿಸಬೇಕಷ್ಟೆ!

ಭಾರತೀಯ ತತ್ತ್ವಶಾಸ್ತ್ರದ ಬಹುಪಾಲು ಮೂಲಕೃತಿಗಳು ಇರುವುದು ಸಂಸ್ಕೃತದಲ್ಲಿಯೇ; ಪಾಳಿ ಮತ್ತು ಪ್ರಾಕೃತ ಭಾಷೆಗಳಲ್ಲಿ ಬೌದ್ಧ–ಜೈನಮತಗಳ ಕೃತಿಗಳಿವೆ (ಬೌದ್ಧ–ಜೈನದರ್ಶನದ ಹಲವು ಕೃತಿಗಳೂ ಸಂಸ್ಕೃತದಲ್ಲೂ ಇವೆಯೆನ್ನಿ!). ಒಟ್ಟಿನಲ್ಲಿ ಇಂದಿನ ನಮ್ಮ ಸಂವಹನಭಾಷೆಗೆ ದೂರವಾಗಿರುವ ಭಾಷೆಯಲ್ಲಿಯೇ ತತ್ತ್ವಶಾಸ್ತ್ರದ ಗ್ರಂಥಗಳು ಇವೆ ಎಂದಾಯಿತು. ಸಮಸ್ಯೆ ಇಲ್ಲಿಗೇ ಮುಗಿಯಲಿಲ್ಲ; ಇಲ್ಲಿಯ ಒಂದೊಂದು ತತ್ತ್ವಶಾಸ್ತ್ರದ ಪ್ರಸ್ಥಾನಕ್ಕೂ ಹಲವು ಶಾಖೆಗಳು; ಆ ಒಂದೊಂದು ಶಾಖೆಗೂ ಹತ್ತಾರು ಪ್ರಮಾಣಗ್ರಂಥಗಳು. ಇದರ ತಾತ್ಪರ್ಯ: ಭಾರತೀಯ ತತ್ತ್ವಶಾಸ್ತ್ರದ ಪರಂಪರೆಯನ್ನು ಈ ಎಲ್ಲ ಕಾರಣಗಳಿಂದಾಗಿ ಸುಲಭವಾಗಿ ತಿಳಿದುಕೊಳ್ಳುವುದು ಸಾಮಾನ್ಯರಿಗಿರಲಿ, ವಿದ್ವಾಂಸರಿಗೇ ಸುಲಭಸಾಧ್ಯವಲ್ಲ ಎಂಬುದು!

ಕಳೆದ ನೂರು–ನೂರೈವತ್ತು ವರ್ಷಗಳಿಂದ ಭಾರತೀಯ ತತ್ತ್ವಶಾಸ್ತ್ರದ ಮೂಲಗ್ರಂಥಗಳನ್ನು ಬೇರೆ ಬೇರೆ ಭಾಷೆಗಳಿಗೆ ಅನುವಾದಿಸುವ ಕಾರ್ಯ ನಡೆದು ಬಂದಿದೆ; ಇಲ್ಲಿಯ ತತ್ತ್ವಶಾಸ್ತ್ರದ ಪರಂಪರೆಯನ್ನು ಸಂಗ್ರಹವಾಗಿ ತಿಳಿಸಿಕೊಡುವ ಕೃತಿಗಳನ್ನೂ ವಿದ್ವಾಂಸರು ಪ್ರಕಟಿಸುತ್ತ ಬಂದಿದ್ದಾರೆ. ಇಂಗ್ಲಿಷ್‌ ಮತ್ತು ಹಿಂದಿ ಭಾಷೆಯಲ್ಲಿ ಇಂಥ ಕೃತಿಗಳು ಸಾಕಷ್ಟಿವೆ. ಆದರೆ ಕನ್ನಡದಲ್ಲಿ ಭಾರತೀಯ ತತ್ತ್ವಶಾಸ್ತ್ರವನ್ನು ಕುರಿತಂತೆ ಬಂದಿರುವ ಕೃತಿಗಳ ಸಂಖ್ಯೆ ಕಡಿಮೆ ಎಂದೇ ಹೇಳಬೇಕು.

ಪ್ರೊ. ಎಂ. ಹಿರಿಯಣ್ಣ, ಬಲದೇವ ಉಪಾಧ್ಯಾಯ, ನರೇಂದ್ರದೇವ, ಆರ್‌.ಡಿ. ರಾನಡೆ, ಎಸ್‌.ರಾಧಾಕೃಷ್ಣ, ದೇವೀಪ್ರಸಾದ ಚಟ್ಟೋಪಾಧ್ಯಾಯ, ಮತಿಲಾಲ್‌ ಮುಂತಾದ ಖ್ಯಾತನಾಮರ ಕೆಲವು ಕೃತಿಗಳು ಕನ್ನಡಕ್ಕೆ ಅನುವಾದವಾಗಿವೆ. ‘ಕಲ್ಚರಲ್‌ ಹೆರಿಟೇಜ್‌ ಆಫ್‌ ಇಂಡಿಯಾ’ದ ನಾಲ್ಕು ಸಂಪುಟಗಳು ಅನುವಾದವಾಗಿವೆ. ಲಕ್ಷ್ಮೀಪುರಂ ಶ್ರೀನಿವಾಸಾಚಾರ್ಯ, ಸಚ್ಚಿದಾನಂದೇಂದ್ರ ಸರಸ್ವತೀಸ್ವಾಮಿಗಳು, ಎನ್. ರಂಗನಾಥಶರ್ಮಾ, ಜಿ. ಹನುಮಂತರಾವ್‌, ಕೆ.ಟಿ. ಪಾಂಡುರಂಗಿ, ಸಾ.ಕೃ. ರಾಮಚಂದ್ರರಾವ್‌, ಬನ್ನಂಜೆ ಗೋವಿಂದಾಚಾರ್ಯ, ಎಂ.ಎ. ಹೆಗಡೆ, ಆರ್‌.ಗಣೇಶ್‌, ಕೆ.ವಿ. ಅಕ್ಷರ, ಜಿ.ರಾಮಕೃಷ್ಣ ಮುಂತಾದವರ ಲೇಖನಗಳು–ಪುಸ್ತಕಗಳು ಕೂಡ ಉಲ್ಲೇಖನೀಯ. ಸರ್ವದರ್ಶನಸಂಗ್ರಹ, ತರ್ಕಸಂಗ್ರಹ ಮುಂತಾದವು, ಶಂಕರ–ರಾಮಾನುಜ–ಮಧ್ವರ ಕೃತಿಗಳು, ಬೌದ್ಧ–ಜೈನರ್ದಶನದ ಕೆಲವು ಮೂಲಗ್ರಂಥಗಳೂ ಕನ್ನಡಕ್ಕೆ ಬಂದಿವೆ. ಇಷ್ಟಿದ್ದರೂ ಸಾಲದು ಎನ್ನುವಂತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಖಾಲಿತನವನ್ನು ಸ್ವಲ್ಪವಾದರೂ ತುಂಬುವಲ್ಲಿ ಯಶಸ್ವಿಯಾಗಿದೆ – ಇತ್ತೀಚೆಗಷ್ಟೇ ಕನ್ನಡಕ್ಕೆ ಅನುವಾದವಾಗಿರುವ, ಖ್ಯಾತ ವಿದ್ವಾಂಸ ಚಂದ್ರಧರಶರ್ಮಾ ಅವರ ಕೃತಿ. ಅವರ ‘ಭಾರತೀಯ ದರ್ಶನ: ಆಲೋಚನ್‌ ಔರ್‌ ಅನುಶೀಲನ್‌’ ಎಂಬ ಹಿಂದಿ ಕೃತಿಯನ್ನು ಕನ್ನಡಕ್ಕೆ ಸಮರ್ಥವಾಗಿ ಅನುವಾದಿಸಿದ್ದಾರೆ, ಸಿದ್ಧರಾಮ ಸ್ವಾಮಿಗಳು.

ಚಂದ್ರಧರ ಶರ್ಮಾ ಭಾರತದ ಶ್ರೇಷ್ಠ ವಿದ್ವಾಂಸರಲ್ಲಿ ಒಬ್ಬರು. ಭಾರತೀಯ ತತ್ತ್ವಶಾಸ್ತ್ರದ ಬಗ್ಗೆ ಅವರು ಬರೆದಿರುವ ‘ಎ ಕ್ರಿಟಿಕಲ್‌ ಸರ್ವೇ ಆಫ್‌ ಇಂಡಿಯನ್‌ ಫಿಲಾಸಫಿ’ (1960) ತುಂಬ ಪ್ರಸಿದ್ಧ ಕೃತಿ. ಅದರ ಪರಿಷ್ಕೃತರೂಪವಾಗಿ ಹಿಂದಿಯಲ್ಲಿ ‘ಭಾರತೀಯ ದರ್ಶನ: ಆಲೋಚನ್‌ ಔರ್‌ ಅನುಶೀಲನ್‌’ ಎಂಬ ಕೃತಿಯನ್ನು ಪ್ರಕಟಿಸಿದರು. ಅದರ ಕನ್ನಡ ಅನುವಾದವೇ ‘ಭಾರತೀಯ ತತ್ತ್ವಶಾಸ್ತ್ರ – ವಿಮರ್ಶಾತ್ಮಕ ಅಧ್ಯಯನ.’ ಈ ಕೃತಿಯ ಅನುವಾದಕರಾದ ಸಿದ್ಧರಾಮ ಸ್ವಾಮಿಗಳು ತತ್ತ್ವಶಾಸ್ತ್ರವನ್ನು ಅಧ್ಯಯನ ಮಾಡಿರುವವರು; ಈಗಾಗಲೇ ತತ್ತ್ವಶಾಸ್ತ್ರದ ಕೆಲವು ಕೃತಿಗಳನ್ನು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಪ್ರಸ್ತುತ ಕೃತಿಯನ್ನು ಅವರ ಪ್ರೀತಿಯಿಂದಲೂ ಶ್ರದ್ಧೆಯಿಂದಲೂಕನ್ನಡಕ್ಕೆ ಕೊಟ್ಟಿದ್ದಾರೆ. ಅವರ ಈ ಕೊಡುಗೆಗಾಗಿ ಕನ್ನಡ ಸಾರಸ್ವತಲೋಕ ಅವರಿಗೆ ಕೃತಜ್ಞವಾಗಿರುತ್ತದೆ.

ಶಾಸ್ತ್ರಗ್ರಂಥಗಳನ್ನು ಅನುವಾದ ಮಾಡುವುದು ಸುಲಭವಲ್ಲ; ಇದಕ್ಕೆ ಕಾರಣ ಭಾಷೆಯ ತೊಡಕು ಮಾತ್ರವೇ ಅಲ್ಲ, ವಿಷಯವೂ ಕಾರಣ. ಮೂಲಕೃತಿಯ ಎಷ್ಟೋ ಪದಗಳನ್ನು ಅನುವಾದದಲ್ಲೂ ಉಳಿಸಿಕೊಳ್ಳಬೇಕಾಗುತ್ತದೆ; ಭಾವಾನುವಾದಕ್ಕೆ ಕೈ ಹಾಕಿದರೆ ವಿಷಯದ ಖಚಿತತೆಗೆ ಸಡಿಲಿಕೆಯುಂಟಾಗುತ್ತದೆ. ಹೀಗಿದ್ದರೂ ಪ್ರಸ್ತುತ ಕೃತಿಯನ್ನು ‘ಕನ್ನಡ’ವಾಗಿಸುವಲ್ಲಿ ಸ್ವಾಮಿಗಳು ಸಾಕಷ್ಟು ಯಶಸ್ಸನ್ನು ಪಡೆದಿದ್ದಾರೆ.

‘ಭಾರತೀಯ ತತ್ತ್ವಶಾಸ್ತ್ರ’ ಇಪ್ಪತ್ತು ಅಧ್ಯಾಯಗಳಲ್ಲಿ ಹರಡಿಕೊಂಡಿದೆ. ‘ವೇದ ಮತ್ತು ಉಪನಿಷತ್ತು’ಗಳಿಂದ ಆರಂಭವಾಗಿ ‘ಶೈವ ಮತ್ತು ಶಾಕ್ತ ಸಂಪ್ರದಾಯಗಳು’ ತನಕ ವಿವಿಧ ದಾರ್ಶನಿಕ ಮಾರ್ಗಗಳ ವಿಶ್ಲೇಷಣೆಯಿದೆ. ಇಲ್ಲೆಲ್ಲ ಅವುಗಳ ಇತಿಹಾಸವನ್ನು ಮಾತ್ರವೇ ಗುರುತಿಸುವ ತವಕಕ್ಕಿಂತಲೂ, ಅವುಗಳ ಸಿದ್ಧಾಂತಗಳನ್ನು ವಿವರಿಸುವ, ವಿಶ್ಲೇಷಿಸುವ ಮನೋಧರ್ಮವೇ ಎದ್ದುಕಾಣುತ್ತದೆ. ಮೂಲಲೇಖಕರ ಆಳವಾದ ಅಧ್ಯಯನ ಮತ್ತು ಒಳನೋಟಗಳಿಂದ ಕೃತಿ ಸಮೃದ್ಧವಾಗಿದ್ದು, ಆಸಕ್ತರಿಗೂ ವಿದ್ವಾಂಸರಿಗೂ ಸಂಶೋಧಕರಿಗೂ ಒದಗುವಂತಿದೆ. ಇಷ್ಟೇ ಅಲ್ಲ, ಈಗಾಗಲೇ ಒಪ್ಪಿತವಾಗಿರುವ ಹಲವು ವಿವರಗಳನ್ನು ಸಕಾರಣವಾಗಿ ವಿಶ್ಲೇಷಿಸಿ, ಅವುಗಳನ್ನು ಮೌಲ್ಯಮಾಪನ ಮಾಡಿರುವುದು ಈ ಕೃತಿಯ ವಿಶೇಷವಾಗಿದೆ.

ಗ್ರಂಥಭಾಗದ 570 ಪುಟಗಳಲ್ಲಿ ಬೌದ್ಧದರ್ಶನಕ್ಕೆ ಸಿಂಹಪಾಲು, ಎಂದರೆ ಸುಮಾರು 140 ಪುಟಗಳು ಮೀಸಲಾಗಿರುವುದು ಗಮನಾರ್ಹವಾದುದು. ಈ ದರ್ಶನದ ಬಗ್ಗೆ ಮಹತ್ವಪೂರ್ಣವಾದ ಜಿಜ್ಞಾಸೆಯನ್ನು ಇಲ್ಲಿ ಕಾಣುತ್ತೇವೆ. ಉದಾಹರಣೆಗೊಂದು ಮಾತು: ‘ಭಗವಾನ್‌ ಬುದ್ಧನ ದರ್ಶನವು ಚಿದದ್ವೈತ ಅಥವಾ ನಿರಪೇಕ್ಷತತ್ತ್ವವಾದವಾಗಿದೆ... ಈ ಅದ್ವೈತವಾದಕ್ಕೆ ಆಧಾರವು ಉಪನಿಷತ್ತುಗಳಾಗಿರುವುದರಿಂದ ಬುದ್ಧನು ಉಪನಿಷತ್ತುಗಳಿಗೆ ಋಣಿಯಾಗಿದ್ದಾನೆ. ಬುದ್ಧನು ಸ್ವತಃ ಹೇಳಿರುವುದೇನೆಂದರೆ – ‘ನಾನು ಯಾವುದೇ ಹೊಸಧರ್ಮದ ಉಪದೇಶವನ್ನೇನೂ ಕೊಡುತ್ತಿಲ್ಲ. ಪ್ರಾಚೀನ ಜ್ಞಾನಿಗಳು ಮತ್ತು ಋಷಿಗಳು ಸಾಕ್ಷಾತ್ಕರಿಸಿಕೊಂಡಿದ್ದ ಸತ್ಯವನ್ನೇ ನಾನೂ ಸ್ವತಃ ಅನುಭವಿಸಿದ್ದು, ಅದೇ ಅನುಭವದ ಉಪದೇಶವನ್ನು ಕೊಡುತ್ತಿದ್ದೇನೆ.’

ಅದೇ ಬೌದ್ಧದರ್ಶನದ ಬಗ್ಗೆ ಅನುವಾದಕರ ಮಾತೊಂದು ಹೀಗಿದೆ: ‘ಇಂದಿಗೆ ಎರಡು ಸಾವಿರ ವರ್ಷಗಳ ಹಿಂದೆ ಜನ್ಮತಾಳಿದ ಭಗವಾನ್‌ ಮಹಾವೀರ ಮತ್ತು ಭಗವಾನ್‌ ಬುದ್ಧರು ಸ್ಥಾಪಿತ ವೈದಿಕ ಮೌಲ್ಯಗಳನ್ನು ವಿರೋಧಿಸಿ ಹೊಸ ವಿಚಾರಧಾರೆಯನ್ನು ಪ್ರಾರಂಭಿಸಿದರು.’ ಮೂಲಲೇಖಕರ ಅಭಿಪ್ರಾಯದೊಂದಿಗೆ ಅನುವಾದಕರಿಗೆ ಸಹಮತ ಇದೆಯೋ ಇಲ್ಲವೋ – ಎನ್ನುವುದು ಇಲ್ಲಿ ಸ್ಪಷ್ಟವಾಗದು, ದಿಟ; ಆದರೆ, ಮೂಲಕೃತಿಯನ್ನು ಮಾತ್ರ ಮೂಲಕೃತಿಕಾರರ ನಿಲುವಿಗೆ ಅಡ್ಡಿಯಾಗದಂತೆ ಸಿದ್ಧರಾಮ ಸ್ವಾಮಿಗಳು ಅನುವಾದಿಸಿರುವುದಂತೂ ಎದ್ದುಕಾಣುತ್ತದೆ.

ಮುದ್ರಣದೋಷಗಳಿಂದ ಮುಕ್ತವಾಗಿರುವುದು ಈ ಕೃತಿಯ ಇನ್ನೊಂದು ಪ್ರಧಾನಗುಣ. ಅಂತೆಯೇ ‘ಪದಕೋಶ’ ಮತ್ತು ‘ಪಾರಿಭಾಷಿಕ ಪದಕೋಶ’ಗಳು ಕೃತಿಯ ಪ್ರಯೋಜನವನ್ನು ಇನ್ನಷ್ಟು ಹೆಚ್ಚಿಸಿವೆ. ಭಾರತೀಯ ತತ್ತ್ವಶಾಸ್ತ್ರದಲ್ಲಿ ಆಸಕ್ತರಾದವರೆಲ್ಲರೂ ಓದಲೇಬೇಕಾದ ಕೃತಿ: ‘ಭಾರತೀಯ ತತ್ತ್ವಶಾಸ್ತ್ರ: ವಿಮರ್ಶಾತ್ಮಕ ಅಧ್ಯಯನ.’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT