ಮನಸುಗಳ ಅನುಸಂಧಾನ

7

ಮನಸುಗಳ ಅನುಸಂಧಾನ

Published:
Updated:
Prajavani

ಇಂಡಿಯಾ ಮತ್ತು ಇರಾನ್ ಈ ಎರಡು ಹೆಸರುಗಳ ಸಂಯುಕ್ತ ಪದವೇ ‘ಇಂಡಿರಾನ್’. ಹವ್ಯಾಸಿ ಲೇಖಕ ಎಚ್.ಎಸ್. ಮಂಜುನಾಥ ಅವರು ರಚಿಸಿರುವ ಈ ಕಿರುಕಾದಂಬರಿ, ಇಂಡಿಯಾ ಮತ್ತು ಇರಾನ್ ದೇಶದ ಇಬ್ಬರು ಪ್ರಜೆಗಳು- ಇರಾನಿನ ಹೆಣ್ಣು ಮತ್ತು ಇಂಡಿಯಾದ ಗಂಡಿನ ಮುಖಾಮುಖಿ ನಿರೂಪಿಸುವ ಕಥಾಹಂದರ ಒಳಗೊಂಡಿದೆ. ಇದು ಪರಸ್ಪರ ಪತ್ರ ವ್ಯವಹಾರದ ಮೂಲಕ ಕುದುರುವ ಮನಸುಗಳ ಅನುಸಂಧಾನ.

ಕಾದಂಬರಿಯ ನಿರೂಪಕ ಮತ್ತು ಇರಾನಿನ ಹೆಣ್ಣು ಮಗಳು ಅಂದರೆ ಕಾದಂಬರಿಯ ಕಥಾ ನಾಯಕಿ ರೋಫೆ ಇಬ್ಬರೂ ಹದಿಹರೆಯಯಲ್ಲಿರುವಾಗ ಪರಸ್ಪರ ಸಂಧಿಸಿ, ಪರಿಚಯಿಸಿಕೊಂಡ ನೆನಪು ಮತ್ತು ಆ ನೆನಪಿನ ಮುಂದುವರಿಕೆಯಾಗಿ ದೀರ್ಘಾವಧಿಯ ಉದ್ದಕ್ಕೂ ನಡೆಸಿದ ಇಮೇಲ್ ವಿನಿಮಯದಿಂದ ಉಳಿದುಕೊಂಡ ಸಂಬಂಧವೇ ಕಾದಂಬರಿಯ ಕೇಂದ್ರ ವಸ್ತುವಾಗಿದೆ.

ಇಬ್ಬರ ಬದುಕಿನ ನೋಟದ ಆಚೆಗೆ, ಕಥಾ ನಾಯಕಿ ರೋಫೆ ಇರಾನ್ ಚರಿತ್ರೆಯ ಒಂದು ತಿರುವಿನಲ್ಲಿ ತನ್ನ ವೈಯಕ್ತಿಕ ಬದುಕಿನಲ್ಲೂ ಎದುರಿಸುವ ಬಿಕ್ಕಟ್ಟುಗಳನ್ನು ನಿರೂಪಕ ಇಲ್ಲಿ ತೆರೆದಿಟ್ಠಿದ್ದಾರೆ. ಅಷ್ಟೆ ಅಲ್ಲ, ರೋಫೆ ಮತ್ತು ನಿರೂಪಕ ಇಬ್ಬರ ಸಮಾನ ಆಸಕ್ತಿ ಸಂಗತಿಯಾದ ಕಲಾತ್ಮಕ ಸಿನಿಮಾಗಳ ಕುರಿತ ಅವರ ಕುತೂಹಲ, ಅಭಿರುಚಿ ಹಾಗೂ ಚರ್ಚೆ ಇರಾನಿನ ಮಹಾನ್ ಚಲನಚಿತ್ರ ನಿರ್ದೇಶಕರ ಸಾಧನೆಗಳ‌ ಕಿರು ನೋಟವು ಓದಿಗೆ ದಕ್ಕುವಂತೆ ಮಾಡಿದೆ.

ಸಿನಿಮಾ ಎಂಬ ವಿಶಿಷ್ಟ ಕಲಾ ಪ್ರಕಾರದಲ್ಲಿ ಆಸಕ್ತಿ ಉಳ್ಳವರಿಗೆ ಇದೂ ಒಂದು ಅಧ್ಯಯನದ ಆಕರವಾಗಬಲ್ಲದು. ಚರ್ಚೆ ವೈಯಕ್ತಿಕ ಬದುಕು, ಸಿನಿಮಾಗಷ್ಟೆ ಸೀಮಿತವಾಗುವುದಿಲ್ಲ. ಇರಾನಿನ ರಾಜಕಾರಣ, ರಾಜಕೀಯ ಬಿಕ್ಕಟ್ಟು, ತೈಲ, ಭಾರತ- ಇರಾನ್ ದ್ವಿಪಕ್ಷೀಯ ಸಂಬಂಧ, ಇರಾನ್ ಸಂಸ್ಕೃತಿ, ಸಾಮಾಜಿಕ ಬದುಕಿನ ಬಗ್ಗೆಯೂ ಹೊರಳಿಕೊಂಡು ಕಾದಂಬರಿ ವಸ್ತು ವಿಸ್ತಾರದ ಪರಿಧಿ ಹೆಚ್ಚಿಸಿಕೊಂಡಿದೆ.

ಇಬ್ಬರ ಇ ಮೇಲ್ ಪತ್ರ ಸಂಭಾಷಣೆಯಲ್ಲಿ ಪ್ರಸ್ತಾಪವಾಗುವ ಇರಾನಿನ ನಿರಂಕುಶ ರಾಜಸತ್ತೆ ಇಸ್ಲಾಮಿಕ್ ಧಾರ್ಮಿಕ ಸರ್ವಾಧಿಕಾರ ಸತ್ತೆಯ ಕಡೆಗೆ ಹೊರಳುವುದು, ಆ ನಂತರ ಧರ್ಮಗುರುಗಳ
ಬಿಗಿ ಹಿಡಿತದಿಂದ ಪಾರಾಗಲು ದೇಶ ಹೆಣಗಾಡುವುದು, ಇಬ್ಬರ ನಡುವಿನ ಪತ್ರಮಿತ್ರ ಚರ್ಚೆಗೆ ಸೀಮಿತವಾಗುವುದಿಲ್ಲ.

ಒಂದು ದೇಶದ, ಒಂದು ಕಾಲಘಟ್ಟದ
ಚರಿತ್ರೆಯ ಇಂತಹ ಪ್ರಮುಖ ಘಟನಾವಳಿಗಳನ್ನು ದಾಖಲಿಸುವ ಮೂಲಕ ನಿರೂಪಕ, ಆ ಸಂದರ್ಭದ ಸನ್ನಿವೇಶಕ್ಕೆ ಕಾದಂಬರಿಯನ್ನು ಸಾಕ್ಷಿ ಕನ್ನಡಿಯಾಗಿಸಿದ್ದಾರೆ.

ಈ ಕಿರು ಕಾದಂಬರಿಯ ಜತೆಗೆ ಈ ಸಂಗ್ರಹದಲ್ಲಿ ಲೇಖಕರ ಇತರ ಮೂರು ಕಥೆಗಳಿವೆ.

ಇಂಡಿರಾನ್ ಮತ್ತು ಇತರ ಕಥೆಗಳು

ಲೇ: ಎಚ್.ಎಸ್.ಮಂಜುನಾಥ

ಪ್ರ.ನವಕರ್ನಾಟಕ ಪ್ರಕಾಶನ, ಬೆಂಗಳೂರು

ಪುಟ: 104

₹ 80

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !