ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಅನುಭವಗಳ ಬುತ್ತಿಯ ‘ಇಸ್ಕೂಲು’

Last Updated 28 ಜನವರಿ 2023, 19:30 IST
ಅಕ್ಷರ ಗಾತ್ರ

ಇಸ್ಕೂಲು
ಲೇ: ಅಕ್ಷತಾ ಕೃಷ್ಣಮೂರ್ತಿ
ಪ್ರ: ಜನ ಪ್ರಕಾಶನ
ಸಂ: 9632329955

ಅಂಕಣ ಬರಹವಾಗಿ ಮಾಸಪತ್ರಿಕೆಯಲ್ಲಿ ಪ್ರಕಟವಾದ ಅಕ್ಷತಾ ಕೃಷ್ಣಮೂರ್ತಿ ಅವರ ಲೇಖನಗಳ ಗುಚ್ಛ ಇದೀಗ ‘ಇಸ್ಕೂಲು’ ಎಂಬ ಕೃತಿ ರೂಪ ಪಡೆದಿದೆ.

‘ಇಸ್ಕೂಲು’ ಹಲವು ನೆನಪುಗಳ ಬುತ್ತಿ ಬಿಚ್ಚಿಡುವ ಪದ. ಸ್ಲೇಟು, ಬಳಪ, ನೀರ್‌ಕಡ್ಡಿ ಮನಸ್ಸಿನಾಳದಿಂದ ಹೊರಬರುವ ಗಳಿಗೆಯದು. ನೆನಪಿನ ಅಲೆಯನ್ನು ಹಬ್ಬಿಸಿ ಹರಿವ ಹೊಳೆ ‘ಇಸ್ಕೂಲು’. ಅಕ್ಷತಾ ಅವರು ತಾವು ಅಧ್ಯಾಪಕಿಯಾಗಿ ಕೆಲಸ ಮಾಡುವ ಜೋಯಿಡಾ ತಾಲ್ಲೂಕಿನ ‘ಅಣಶಿ’ ಎಂಬ ಹಳ್ಳಿಶಾಲೆಯಲ್ಲಿನ ಅನುಭವಗಳನ್ನು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಆರಂಭದಲ್ಲೇ ಬಾವುಟ ಹಾರಿಸಿ, ಮಕ್ಕಳೊಂದಿಗೆ ಪ್ರವಾಸಕ್ಕೆ ತೆರಳಿ, ಮೊದಲ ದಿನ ಮೌನವಾಗಿ, ಶೈಕ್ಷಣಿಕ ವರ್ಷದ ಅಂತ್ಯದಲ್ಲಿ ಕಣ್ಣಂಚಲ್ಲಿ ನೀರು ತುಂಬಿಕೊಂಡು, ಇಲಿಯಣ್ಣ ಬಂದಾಗ ಬೆದರಿ, ಗಾಂಧಿ ಜಯಂತಿಗೆ ಪೇಪರ್‌ ಟೋಪಿ ಮಾಡಿ, ಚಾರಣದ ಕಥೆ ಹೇಳುತ್ತಾ ಇಲ್ಲಿನ ‘ರಾಧಕ್ಕೋರು’ ಅನುಭವಗಳ ಮೂಸೆ ತೆರೆದಿದ್ದಾರೆ. ಇಡೀ ಕೃತಿಯಲ್ಲಿ ಈ ‘ರಾಧಕ್ಕೋರು’ ಶಾಲಾ ಮಕ್ಕಳ ಜೊತೆ ಒಡನಾಡುತ್ತಲೇ ಶೈಕ್ಷಣಿಕ ಮಾದರಿಯಾಗಿ ಕಾಣಿಸುತ್ತಾರೆ. ಲೇಖನಗಳು ಶಾಲೆಗೆ ಸೀಮಿತವಾಗದೆ, ಸುತ್ತಲಿನ ಪರಿಸರ, ಅದರ ವೈಶಿಷ್ಟ್ಯವೂ ಸೂಚ್ಯವಾಗಿ ಅಡಕವಾಗಿದೆ.

ಇಲ್ಲಿನ ಬರಹಗಳಲ್ಲಿ ಆತ್ಮೀಯತೆ ಇದೆ. ವಿವರವಾದ ನಿರೂಪಣೆ, ಸೃಜನಾತ್ಮಕ ಬರವಣಿಗೆಯೂ ಇಲ್ಲಿದೆ. ಶಿಕ್ಷಕಿಯಾಗಿ ಮಕ್ಕಳಿಗೆ ಹತ್ತಿರವಾಗಿರುವ ಅಕ್ಷತಾ ಅವರು ಲೇಖಕಿಯಾಗಿ ಓದುಗರಿಗೂ ಇಷ್ಟವಾಗುತ್ತಾರೆ. ಲಾಕ್‌ಡೌನ್‌ ಸಂದರ್ಭದಲ್ಲಿ ಶಾಲಾಕಟ್ಟಡಗಳು ಮಾತನಾಡಿದ ಮಾತಿಗೂ ‘ರಾಧಕ್ಕೋರು’ ಕಿವಿಯಾಗಿದ್ದಾರೆ! ಆದರೆ, ಈ ‘ರಾಧಕ್ಕೋರು’ ಯಾರು ಎನ್ನುವ ಗುಟ್ಟನ್ನು ಮುನ್ನುಡಿಯಲ್ಲೇ ಬರಗೂರು ರಾಮಚಂದ್ರಪ್ಪನವರು ರಟ್ಟು ಮಾಡಿದ್ದಾರೆ. ‘ಈ ಕೃತಿಯನ್ನು ನಮ್ಮ ಸಚಿವರು, ಶಾಸಕರು, ಅಧಿಕಾರಿಗಳು ಮತ್ತು ಅಧ್ಯಾಪಕರು ಒಮ್ಮೆಯಾದರೂ ಓದಬೇಕು’ ಎನ್ನುವ ಬರಗೂರು ಅವರ ಮಾತಿಗೆ ಸಹಮತವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT