ಜಗದ ಕವಿಗಳ ಕಾವ್ಯ ಕಥೆಗಳು

ಭಾನುವಾರ, ಮೇ 26, 2019
22 °C

ಜಗದ ಕವಿಗಳ ಕಾವ್ಯ ಕಥೆಗಳು

Published:
Updated:
Prajavani

ಹಿಂದೂ– ಮುಸ್ಲಿಂ ಎಂಬ ಎರಡು ಶರಧಿಗಳನ್ನು ಒಂದಾಗಿಸುವ ಯತ್ನದಲ್ಲಿ ಖುರಾನ್ ಮತ್ತು ಉಪನಿಷತ್‌ಗಳಲ್ಲಿ ಅನಾವರಣಗೊಂಡ ಶಕ್ತಿ ಆ ದೇವರ ಎರಡು ವಿಚಾರ ವಿಸ್ತಾರ ಮಾತ್ರ ಎಂದವನ ಮೇಲೆ ಅದಕ್ಕಾಗಿ ಫತ್ವಾ ಘೋಷಣೆಯಾಗಿತ್ತು! 1656ರಲ್ಲಿ ಮೊಘಲ್ ದೊರೆ ದಾರಾಶಿಕೊ ಬರೆದ ‘ಮಜಮಾ ಉಲ್‌ ಬಹರೈನ್’ ಪ್ರಕಟವಾಗಿ ಮೂರು ವರ್ಷಕ್ಕೆ ದೆಹಲಿಯ ಬೀದಿಗಳಲ್ಲಿ ಇವನ ಮೆರವಣಿಗೆ ನಡೆಯಿತು. ಮಗನ ಎದುರೇ ಶಿರಚ್ಛೇದ ಮಾಡಿ ತಟ್ಟೆಯೊಂದರಲ್ಲಿ ಶಿರವನ್ನಿಟ್ಟು ಇವನ ತಂದೆಗೆ ಕಳಿಸಿಕೊಟ್ಟ ದಾರುಣ ಅಂತ್ಯ ಇವನದು. ‘ನಿಜವಾದ ಪ್ರೇಮಿಗೆ ಸಾವಿನ ಅಂಜಿಕೆಯಿಲ್ಲ, ಒಮ್ಮೆ ಕೊಂದವನನ್ನು ಮತ್ತೆ ಕೊಲ್ಲಲಾಗದು’ ಎಂದಿದ್ದನವ. ಪುಸ್ತಕ ಬರೆದು ಕೊಲೆಯಾದ ಏಕೈಕ ದೊರೆ ಇವನಿರಬೇಕು. 

ಇವನ ಕವನದ ‘ಪ್ರೀತಿಯ ಕಸಾಯಿಖಾನೆಯಲ್ಲಿಯೇ ನಂಬಿಗಸ್ತರ ನೆತ್ತರು ಹರಿಯುತ್ತದೆ’ ಎಂಬ ಸಾಲು ಬಹುಶಃ ಯಾರಿಗೂ ಜೀವನದಲ್ಲಿ ಒಮ್ಮಿಲ್ಲೊಮ್ಮೆ ನೆನಪಾಗಿಯೇ ಇರುತ್ತದೇನೊ. ದಾರಾಶಿಕೊ ಬೆಂಬಲಿಸಿದ್ದ ಅವನ ಗುರು ಸರ್ಮದ್ ಕೂಡ ಇದನ್ನೇ ಬರೆದಿದ್ದ. ಸರ್ಮದ್ ಇರಾನಿನ ಜೂ ಜನಾಂಗದವನಾದರೂ ಇಸ್ಲಾಂಗೆ ಮಾರು ಹೋದವನು. ಪರ್ಷಿಯನ್‌ ಭಾಷೆಯಲ್ಲಿ ರುಬಾಯಿಗಳನ್ನು ಬರೆದವ. ಇಸ್ಲಾಂ ಅನ್ನು ಹಿಂದೂ ತತ್ವ ಪ್ರಣಾಳಿಕೆಗಳ ಮೂಲಕ ಓದಿಸುವ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದ. ಇವನಿಗೂ ಔರಂಗಜೇಬ ಸಾರ್ವಜನಿಕವಾಗಿ ತಲೆದಂಡದ ಆಜ್ಞೆ ಹೊರಡಿಸುತ್ತಾನೆ. ‘ಯಾವ ರೂಪದಲ್ಲಿ ಬಂದರೂ ಸ್ವಾಗತವೇ. ನಿನ್ನೆಲ್ಲ ರೂಪಗಳಲ್ಲಿ ನಿನ್ನನ್ನು ವರಿಸಿದ್ದೇನೆ ನನ್ನೊಲವೇ’ ಎನ್ನುತ್ತ ‘ಖಡ್ಗದ ಅಂಚಿನ ಮೇಲೆ ಕುಳಿತು ಬರುವ ಪ್ರೀತಿಗೆ ಪ್ರೀತಿಯಿಂದ ಕತ್ತು ಕೊಟ್ಟಿದ್ದೇನೆ’ ಎಂದ ಸಾಲು ಮನ ಕಲುಕದೇ ಇರದು. ದೇಶ– ಕಾಲದ ಪರಿವೆ ಪರಿಧಿ ಇಲ್ಲದೆ ಇಲ್ಲಿ ಹರಡಿಕೊಂಡ ಒಟ್ಟು 47 ಕವಿಗಳ ವಿವರಗಳು, ಅವರ ಕಾವ್ಯಕೃಷಿಗೆ ಸಾಕ್ಷಿಯಾಗುವ ಕವಿತೆಗಳು ಅತ್ಯಂತ ಮಾನವೀಯ ನೆಲೆಯಲ್ಲಿ ನಗುವ ಹೂಗಳಂತಿವೆ. ಹಾಗಾಗೇ ಇವನ್ನು ಪೋಷಿಸುವ ಜಾಡಮಾಲಿಯ ಜೀವ ಕೇಳುವುದಿಲ್ಲ. ಹಲವು ಕವಿಗಳ ಜೀವನ, ವೈವಿಧ್ಯಮಯ ಕಾವ್ಯಭಾವಗಳಿಗೆ ಮುಖಾಮುಖಿಯಾಗುವ ಅವಕಾಶ ಇದೊಂದೇ ಪುಸ್ತಕದಲ್ಲಿ ದೊರೆತುಬಿಡುವುದು ವಿಶೇಷ. ಹೊಸಬರಿಗೆ ಕಾವ್ಯದ ಓದಿಗೆ ತೆರೆದುಕೊಳ್ಳಲು ಪ್ರವೇಶಿಕೆಯಂತಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !