ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕದಳಿ ಹೊಕ್ಕು ಬಂದೆ

Last Updated 22 ಜನವರಿ 2020, 19:30 IST
ಅಕ್ಷರ ಗಾತ್ರ

‘ಕದಳಿ ಹೊಕ್ಕು ಬಂದೆ’ ಎಂಬುದು ರಹಮತ್ ತರೀಕೆರೆ ಅವರ ಪ್ರವಾಸ ಕಥನವಷ್ಟೆ ಅಲ್ಲ. ಕದಳಿ ಎಂಬುದು ಜಿಜ್ಞಾಸೆಯ ರೂಪಕವಾಗಿ ಪರಿಭಾವಿಸಿಕೊಂಡರೆ ಪ್ರವಾಸ ಹುಟ್ಟುಹಾಕುವ ಜಿಜ್ಞಾಸೆಗಳ‌‌ ಕದಳಿಯನ್ನು ಹೊಕ್ಕಿಬಂದಷ್ಟೆ ಅನುಭವ ನೀಡುತ್ತದೆ ಈ ಪುಸ್ತಕ.

ಪ್ರವಾಸವೆಂಬುದು ಪ್ರದರ್ಶನವಲ್ಲ ಅದೊಂದು ಅಧ್ಯಯನಶೀಲತೆಯನ್ನು ರೂಢಿಸಿಕೊಳ್ಳಲು ಇರುವ ಮತ್ತೊಂದು ದಾರಿ ಎಂಬುದನ್ನು ಲೇಖಕರ ಪ್ರತಿ ಬರಹವು ಸ್ಪಷ್ಟಪಡಿಸುತ್ತದೆ.

ಕರ್ನಾಟಕದ ಸಂಸ್ಕೃತಿಯ ನಕಾಶೆಯಲ್ಲಿ ಶ್ರೀಶೈಲ, ಮೇಲುಕೋಟೆ ಹೇಗೆಲ್ಲ ಗುರುತಿಸಿಕೊಂಡಿವೆ ಮತ್ತು ಲೇಖಕರು ಅವನ್ನು ಪ್ರವಾಸದಲ್ಲಿ‌ ಮುಖಾಮುಖಿಯಾಗಿರುವ ಬಗ್ಗೆ ಸವಿವರವಾಗಿ ಹೇಳಿದ್ದಾರೆ.

12ನೇ ಶತಮಾನದ ವಚನಕಾರರಾದ ಅಲ್ಲಮಪ್ರಭು ಮತ್ತು ಅಕ್ಕಮಹಾದೇವಿ ಬದುಕಿನ ಕೊನೆಯ ಹಂತದಲ್ಲಿ ಕದಳಿ ಗುಹೆಗೆ ಹೋಗಿದ್ದು, ಯೋಗಸಾಧಕರನ್ನು ಕೈಬೀಸಿ ಕರೆಯುವ ದುರ್ಗಮ ಹಾದಿಯ ತಾಣ ಹೇಗೆಲ್ಲ ಶಾಕ್ತ, ನಾಥ, ಭೈರವ, ಬೌದ್ಧ, ತಾಂತ್ರಿಕ ಪಂಥಗಳಿಗೆ ನೆಲೆಮನೆಯಾಯ್ತು ಎಂಬ ಹೀಗೆ ಹತ್ತು ಹಲವು ರೋಚಕ‌ ಸಂಗತಿಗಳು ಸಿಗುತ್ತವೆ.

ನಿಜಾಮುದ್ದೀನ್ ದರ್ಗಾ, ಪು.ತಿ.ನರಸಿಂಹಾಚಾರ್‌ ಅವರ ಮೇಲುಕೋಟೆ, ಸಕ್ರೆಬೈಲಿನ ಮಾವುತರು, ಮಲೆಗಳಲ್ಲಿ ಮದುಮಗಳು ಎನ್ನುತ್ತ ಕರ್ನಾಟಕದ ಹಲವು ತಾಣಗಳ ಜತೆಗೆ ಕೋಲ್ಕತ್ತದಲ್ಲಿಯೂ ಕನ್ನಡ ಕೊಂಡಿಯನ್ನು ಹುಡುಕಿ ಅದನ್ನು ಅಕ್ಷರ ರೂಪಕ್ಕೆ ಇಳಿಸಿದ್ದಾರೆ. ಈಎಲ್ಲ ಲೇಖನಗಳು ನವಿರಾದ ಭಾಷೆ ಮತ್ತು ಕಥನ ಶೈಲಿಯಿಂದ ಓದಿಸಿಕೊಂಡು ಹೋಗುತ್ತವೆ.

ಪ್ರವಾಸಿಗರೊಬ್ಬರು ಸಂಶೋಧಕರಾಗಿದ್ದರೆ, ಕಂಡ ಪ್ರತಿ ಅಂಶಕ್ಕೂ ಸಂಶೋಧನಾ ದೃಷ್ಟಿಕೋನವೊಂದು ಅನಾಯಾಸವಾಗಿ ಸಿಕ್ಕಿಬಿಡುತ್ತದೆ. ಇದನ್ನು ಓದುತ್ತಾ ಹೋದಂತೆ ಪ್ರವಾಸವೆಂಬುದು ಬರೀ ಮೋಜಿನ ಸಂಗತಿಯಷ್ಟೆ ಅಲ್ಲ. ಜ್ಞಾನಾರ್ಜನೆಯ ಶಾಖೆಯೆಂಬುದನ್ನು ದೃಢಪಡಿಸುತ್ತದೆ. ಬಹುತೇಕ ಬರಹಗಳು ಆಯಾ ಊರಿನ ಇತಿಹಾಸ, ವಾಸ್ತುಶಿಲ್ಪ, ಜನಪದ ಎಲ್ಲಕ್ಕಿಂತ ಹೆಚ್ಚಾಗಿ ಮನುಷ್ಯ ಪ್ರಪಂಚದ ಕಥನಗಳನ್ನು ಪ್ರವಾಸವೆಂಬ ಚೌಕಟ್ಟಿನಲ್ಲಿ ಕಟ್ಟಿ ಕೊಡುತ್ತವೆ.

ಲೇಖಕರು: ರಹಮತ್‌ ತರೀಕರೆ

ಪುಸ್ತಕ: ಕದಳಿ ಹೊಕ್ಕು ಬಂದೆ

ಮುಖಪುಟ: ₹ 110

ಪುಟಗಳು 175

ಪ್ರಕಟಣೆ: ನವಕರ್ನಾಟಕ ಪ್ರಕಾಶನ

www.navakarnataka.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT