ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಲೋಕನ: ಕಡಲು ನೋಡಿ ಕಥೆಯಾದವಳು

Last Updated 27 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಕಥೆಗಾರ್ತಿ ಫಾತಿಮಾ ರಲಿಯಾ ಅವರ ಪಾಲಿಗೆ ಬರವಣಿಗೆ ಅಂದರೆ ಅದು ನವಿರು ಭಾವಗಳ ಉದ್ಯಾನ. ಇನ್ನೊಂದು ರೀತಿಯಲ್ಲಿ ಅದು ಅವರಿಗೆ ಸರ್ವಜನಾಂಗದ ಶಾಂತಿಯ ತೋಟವೂ ಹೌದು. ಈಗಾಗಲೇ ಕಥೆ ಮತ್ತು ಕಾವ್ಯದ ಮೂಲಕ ಹೆಜ್ಜೆ ಗುರುತು ಮೂಡಿಸಿರುವ ಫಾತಿಮಾ ಇದೀಗ ಪ್ರಬಂಧಗಳ ಸಂಕಲನ ಹಿಡಿದು ಓದುಗರ ಮುಂದೆ ಬಂದಿದ್ದಾರೆ. ‘ಕಡಲು ನೋಡಲು ಹೋದವಳು’ ಅವರ ಚೊಚ್ಚಲ ಕೃತಿ. ಆದರೆ, ಅದರೊಳಗಿನ ಪ್ರಬಂಧಗಳ ಮೇಲೆ ಕಣ್ಣಾಡಿಸಿದರೆ, ‘ಇದು ಚೊಚ್ಚಲ ಕೃತಿಯೆಂದು ಅವರು ಸುಳ್ಳು ಹೇಳುತ್ತಿಲ್ಲ ತಾನೆ’ ಎಂಬ ಅನುಮಾನ ಬರುವಷ್ಟು ಅವರ ಬರಹ ಪ್ರಬುದ್ಧವಾಗಿದೆ.

ಇಲ್ಲಿನ ಬರಹಗಳು ಲಘು ಓಘಕ್ಕೆ ಒಗ್ಗಿಕೊಂಡು, ಗಂಭೀರ ಓದನ್ನೂ ಬಯಸುತ್ತವೆ. ಹೀಗಾಗಿ ಕೃತಿಯ ಶೀರ್ಷಿಕೆಯಡಿ ಇರುವ ‘ಲಲಿತ ಪ್ರಬಂಧಗಳು’ ಎನ್ನುವ ಅಡಿಬರಹಕ್ಕೆ ಓದುಗನ ಗಮನ ಮತ್ತೆ ಮತ್ತೆ ಹೋಗುತ್ತದೆ. ಪುಟ ತಿರುವುತ್ತಾ ‘ಉನ್ಮತ್ತ ಕುರುಕ್ಷೇತ್ರ..’ದತ್ತ ಇಣುಕಿ ನೋಡಿ ಆಳಕ್ಕಿಳಿದು ಚೆನ್ನಪ್ಪಜ್ಜನ ಕಾಲ್ಕೆಳಗೆ ಕುಳಿತು ಅವನ ಕೊಳಲ ದನಿ ಆಲಿಸಿದರೆ, ಗಹನವಾದ ಚರ್ಚೆ ಅಗತ್ಯವೆನಿಸುತ್ತದೆ.

ಲಘುವಾದ ಕಥೆಯಂತೆ ಆರಂಭವಾಗುವ ಕೃತಿಯ ಪ್ರತೀ ಅಧ್ಯಾಯವೂ ಲೇಖಕಿಯ ಅನುಭವದ ಬುತ್ತಿಯನ್ನು ಬಿಚ್ಚಿಡುತ್ತಾ ಗಂಭೀರವಾಗುತ್ತದೆ. ಲೇಖಕಿಯೇ ಹೇಳಿರುವಂತೆ ಇಲ್ಲಿರುವ ಎಲ್ಲ ಬರಹಗಳ ಹಿಂದೆ ಬದುಕನ್ನು ಆಳವಾಗಿ ತಟ್ಟಿದ, ಹಲವು ಪಾಠ ಕಲಿಸಿದ, ಅಂತರಂಗದ ಕಣ್ಣು ತೆರೆಸಲು ನೆರವಾದ, ಸಹಜ ಸೌಹಾರ್ದವನ್ನು ಯಾವ ಆಡಂಬರವೂ ಇಲ್ಲದೆ ಮೈಗೂಡಿಸಿಕೊಳ್ಳಲು ನೆರವಾದ ಘಟನೆಗಳಿವೆ.

ಸ್ವಾತಂತ್ರ್ಯದ ಅಮೃತಘಳಿಗೆಯಲ್ಲೂ ನಡೆಯುತ್ತಿರುವ ಧರ್ಮ, ಸಿದ್ಧಾಂತ, ವ್ಯಕ್ತಿಯಾಧಾರಿತ ಸಂಘರ್ಷ, ಹೆಚ್ಚುತ್ತಿರುವ ದುರಾಸೆ, ಜಾತಿ, ಅಸ್ಪೃಶ್ಯತೆಯ ಒಟ್ಟಾರೆ ಸಂಗತಕ್ಕೆ ಹಿಡಿದ ಕನ್ನಡಿ ಈ ಕೃತಿ. ‘ಉನ್ಮತ್ತ ಕುರುಕ್ಷೇತ್ರವೂ ಬೃಂದಾವನದ ಕೊಳಲೂ...’ ಎಂಬ ಶೀರ್ಷಿಕೆಯೇ ಲೇಖಕಿಯ ಬರವಣಿಗೆಯ ಸತ್ವ, ಶಕ್ತಿಯನ್ನು ತೋರುತ್ತದೆ. ‘ಗೌರಿ’ಯ ಮುಗ್ಧ ಪ್ರಶ್ನೆಗೆ ಉತ್ತರವೀಯುತ್ತಾ ಲೇಖಕಿ ಬಿಚ್ಚಿಡುವ ವಾಸ್ತವ ಕರಾವಳಿಯಲ್ಲಿ ಕ್ಷಣಕ್ಷಣಕ್ಕೊಮ್ಮೆ ಸ್ಫೋಟಿಸಿ ತಣ್ಣಗಾಗುವ ಧರ್ಮ ಸಂಘರ್ಷದ ಕಿಡಿಗೆ ಸಾಕ್ಷಿ. ‘ಕೆಂಪಿ’ಯೂ ಧರ್ಮ ಬದಲಿಸದೇ ಹೇಳುವ ಉಪ್ಪಾಪನ ಕಥೆ ಸಂಘರ್ಷದ ಈ ಹೊತ್ತಿನಲ್ಲಿ ಮದರಂಗಿಯಂತೆ ಶಾಶ್ವತ ಅಚ್ಚಾಗಿ ಉಳಿದರೆ ಹಲವು ಜೀವಗಳು ಉಳಿದಾವು.

ಕೃತಿಯ ಶೀರ್ಷಿಕೆಯನ್ನು ಹೊತ್ತ ಅಧ್ಯಾಯದಲ್ಲಿ ಹಲವು ಪ್ರಶ್ನೆಗಳನ್ನು ತನಗೆ ತಾನೇ ಹಾಕಿಕೊಳ್ಳುತ್ತಾ, ಓದುಗರ ಮನಸ್ಸಿನೊಳಗೂ ಹಲವು ಪ್ರಶ್ನೆಗಳನ್ನು ಇಳಿಸುತ್ತಾ ಸಾಗುತ್ತಾರೆ ಫಾತಿಮಾ. ಕರಾವಳಿ ಮತ್ತು ಕಡಲಿನ ವರ್ಣನೆ ಇಲ್ಲಿ ಅದ್ಭುತ. ಕಣ್ಣಿಗೆ ಕಂಡದನ್ನು ನೋಡಿ ಊಹಿಸಿದರೆ, ಯೋಚಿಸಿದರೆ ಆಗುವ ಆಪತ್ತನ್ನು ಬಿಚ್ಚಿಡುತ್ತಾ ಚಹಾ ಕಪ್‌ ಕೆಳಗಿಡುತ್ತಾರೆ ಲೇಖಕಿ.

ಆಪ್ತವಾದ ಪದಗಳು ಕೂಡಿ ವಾಕ್ಯವಾದಾಗ ಓದಿನ ಓಘವೂ ಹೆಚ್ಚುತ್ತದೆ. ಪುಟ್ಟ ಗೌರಿಯ ಕಣ್ಣಲ್ಲಿನ ಹಬ್ಬದ ಸಂಭ್ರಮವನ್ನು ವಿವರಿಸುತ್ತಾ, ‘ಅಲ್ಲೆಲ್ಲೋ ಶರಶಯ್ಯೆಯ ಮೇಲಿನ ಭೀಷ್ಮ ಪಿತಾಮಹ ಇವಳ ಸಂಭ್ರಮವನ್ನು ಕಣ್ಣು ತುಂಬಿಕೊಳ್ಳುವುದಕ್ಕಾಗಿಯೇ ಇಷ್ಟು ಹೊತ್ತು ಉಸಿರಿಡಿದು ಮಲಗಿದ್ದನೇನೋ ಅನ್ನುವ ಭಾವ’ ಎಂದು ದಾಖಲಿಸುವ ಲೇಖಕಿ, ಖುದಾನಿಗೆ ಕೃತಜ್ಞತೆ ಸಲ್ಲಿಸುವಾಗ ಆಸ್ಪತ್ರೆ ಎಂಬ ಯೂನಿವರ್ಸಿಟಿಗಳು ಕಲಿಸಿದ ಬದುಕಿನ ಪಾಠವನ್ನು ಗಂಟಲುಕಟ್ಟಿ ಬರೆದಿದ್ದಾರೆ. ನೂರು ಮುಡಿ ಭತ್ತದ ಆಸ್ತಿಯಿದ್ದ ಚಂದ್ರಕಲಾ ಶೆಟ್ಟಿಯ ದುಡ್ಡಿನ ಮದ ಆಸ್ಪತ್ರೆಯಲ್ಲಿ ಕರಗಿದ ಕಥೆ ಸಾವಿನ ಖಾಲಿತನ ತೆರೆದಿಟ್ಟಿದೆ. ಗಂಭೀರವಾಗಿ ಯೋಚಿಸಬೇಕಾದ, ಚಿಂತನೆಗೆ ಹಚ್ಚುವ ವಿಚಾರಗಳೇ ಇಲ್ಲಿನ ಕೃತಿಗಳಲ್ಲಿ ತುಂಬಿವೆ.

ಕೃತಿ: ಕಡಲು ನೋಡಲು ಹೋದವಳು

ಲೇ: ಫಾತಿಮಾ ರಲಿಯಾ

ಪ್ರ: ಅಹರ್ನಿಶಿ ಪ್ರಕಾಶನ

ಸಂ: 9449174662

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT