ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಲೋಕನ | ಮಹಾಭಾರತ - ಪ್ರಾಚೀನ ಕಾವ್ಯದ ಮೇಲೆ ಹೊಸ ಬೆಳಕು

Last Updated 2 ಜುಲೈ 2022, 19:45 IST
ಅಕ್ಷರ ಗಾತ್ರ

‘ಮಹಾಭಾರತ’ವು ಜಗತ್ತಿನ ಅತಿದೊಡ್ಡ ಮತ್ತು ಸಾಂಸ್ಕೃತಿಕವಾಗಿ ತುಂಬಾ ಮಹತ್ವ ಪಡೆದಿರುವ ಮಹಾಕಾವ್ಯವಾಗಿ ಪ್ರಸಿದ್ಧಿ ಪಡೆದಿದೆ. ಭಾರತೀಯರಲ್ಲಿ ಮಹಾಕಾವ್ಯವನ್ನು ಇತಿಹಾಸ, ಪುರಾಣ, ಪ್ರಬಂಧ ಎಂದು ಗುರುತಿಸುವ ಪರಿಪಾಟವಿದ್ದರೆ ಪಾಶ್ಚಾತ್ಯರಲ್ಲಿ Epic, Heroic poetry, Classic, Great poetry ಎಂಬ ಹೆಸರುಗಳಿಂದ ಕರೆಯಲಾಗುತ್ತದೆ. ರವೀಂದ್ರನಾಥ ಟ್ಯಾಗೋರ್‌ ಅವರು ಕಾವ್ಯದಲ್ಲಿ ‘ಒಬ್ಬ ಕವಿಯ ಮಾತುಗಳು’, ‘ಒಂದು ದೊಡ್ಡ ಸಮುದಾಯದ ಮಾತುಗಳು’ ಎಂದು ಎರಡು ಭಾಗಮಾಡಿ ಗುರುತಿಸುತ್ತಾರೆ. ಮಹಾಭಾರತವು ‘ಒಂದು ದೊಡ್ಡ ಸಂಪ್ರದಾಯದ ಮಾತುಗಳು’ ಗುಂಪಿಗೆ ಸೇರುತ್ತದೆ.

ದೊಡ್ಡ ಸಂಪ್ರದಾಯದ ಮಾತಿನ ಕಾವ್ಯ ಒಂದು ಸಮಗ್ರ ರಾಷ್ಟ್ರ ತನ್ನ ಸಂವೇದನೆಯನ್ನು, ಹೃದಯವನ್ನು ಅಭಿಜ್ಞತೆಯಲ್ಲಿ ಅಭಿವ್ಯಕ್ತಿಸಿ ಅದನ್ನು ಮನುಷ್ಯನ ಬದುಕಿನ ಶಾಶ್ವತ ವಸ್ತುವನ್ನಾಗಿ ಮಾಡಿಬಿಡುತ್ತದೆ. ಇಂತಹ ಮಹಾಕಾವ್ಯವನ್ನು ಕುರಿತು ಭಾರತದ ಸಾಹಿತ್ಯ ಮತ್ತು ಸಂಸ್ಕೃತಿ ಚಿಂತಕರಲ್ಲಿ ಒಬ್ಬರಾದ ಜಿ.ಎನ್. ದೇವಿಯವರು ‘Mahabharata:The Epic and the nation’ ಎಂಬ ಕೃತಿಯನ್ನು ಬರೆದಿದ್ದಾರೆ. ಎಂ.ಜಿ. ಹೆಗಡೆಯವರು ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಮಹಾಭಾರತದ ಕಥನ ವೀರರ ಸಾಹಸಾದ್ಭುತಗಳನ್ನು ಕುರಿತಾಗಿದ್ದರೂ ಅದು ಒಂದು ನಾಗರಿಕತೆಯನ್ನು, ಸಾಂಸ್ಕೃತಿಕ ಪರಿಸರವನ್ನು ಕುರಿತದ್ದಾಗಿದೆ. ಇದರಿಂದಾಗಿ ಇದು ತನ್ನಷ್ಟಕ್ಕೆ ತಾನೇ ರಾಷ್ಟ್ರೀಯ ಮಹತ್ವವನ್ನು ಪಡೆದುಕೊಂಡಿದೆ. ಇದರಿಂದಾಗಿ ಜನಾಂಗಿಕ ಹಾಗೂ ರಾಷ್ಟ್ರೀಯ ಪ್ರಜ್ಞೆ ಇದರಲ್ಲಿದೆ. ಜೊತೆಗೆ ಇಡೀ ಇತಿಹಾಸವನ್ನೇ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇದರಲ್ಲಿ ಇತಿಹಾಸ ಮತ್ತು ಪುರಾಣಗಳು ಬೆಸೆದುಕೊಂಡಿರುವುದರಿಂದ ಇದು ಏಕಕಾಲಕ್ಕೆ ಪುರಾಣ, ಇತಿಹಾಸ, ಮಹಾಕಾವ್ಯ ಈ ಮೂರೂ ಹೌದು. ಇದರಿಂದಾಗಿ ಮಹಾಭಾರತವು ಜಗತ್ತಿನ ಬೃಹತ್ ಗಾತ್ರದ ಅತ್ಯುತ್ತಮ ಮಹಾಕಾವ್ಯವಾಗಿ ಜನಮಾನಸದಲ್ಲಿ ಉಳಿದಿದೆ.

ದೇವಿಯರು ಎರಡು ಭಾಗಗಳಲ್ಲಿ ಅಧ್ಯಯನ ಮಾಡಿದ್ದಾರೆ 1. ಮಹಾಶೋಧ 2. ಚಕ್ರ. ಮಹಾಶೋಧದಲ್ಲಿ ಮಹಾಕಾವ್ಯದ ಸ್ಥಾನ ನಿರ್ದೇಶನ, ಗತಸ್ಮರಣೆ, ಅಂತ್ಯವಿಲ್ಲದ ಸಂವಿಧಾನ, ಆರಂಭ ಮತ್ತು ಅಂತ್ಯ ಎಂಬ ಉಪಶೀರ್ಷಿಕೆಗಳಲ್ಲಿ ಮಹಾಭಾರತದ ಹುಟ್ಟು ಬೆಳವಣಿಗೆ, ಅದರ ಸಂವಿಧಾನ, ಕಥನದ ಸಾಂಸ್ಕೃತಿಕ ಮಹತ್ವವನ್ನು ಪಾಶ್ಚಾತ್ಯ ಮತ್ತು ಪೌರಾತ್ಯ ಮಹಾಕಾವ್ಯಗಳೊಂದಿಗೆ ತೌಲನಿಕವಾಗಿ ಅಧ್ಯಯನ ನಡೆಸಿದ್ದಾರೆ. ಇದು ಮಹಾಭಾರತದ ಸಾಂಸ್ಕೃತಿಕ ಪರಿಸರವನ್ನು ಗ್ರಹಿಸಿಕೊಳ್ಳಲು ಉತ್ತಮವಾದ ಒಳನೋಟಗಳನ್ನು ಒದಗಿಸುತ್ತದೆ.

ಮಹಾಭಾರತದಲ್ಲಿ ವ್ಯಕ್ತವಾಗುವ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ, ಆರ್ಥಿಕ, ಧಾರ್ಮಿಕ ವಿಚಾರಗಳನ್ನು ವಿಶ್ಲೇಷಿಸುವಾಗ ಭಾರತದ ಅರವಿಂದ, ವಿವೇಕಾನಂದರಂತಹ ದಾರ್ಶನಿಕರು ಮತ್ತು ಹಲವಾರು ಚಿಂತಕರು ಮಹಾಭಾರತದ ಬಗ್ಗೆ, ಅದರ ಪ್ರಸ್ತುತತೆಯ ಬಗ್ಗೆ ಹೇಳಿರುವ ವಿಚಾರಗಳನ್ನು ಬಳಸಿಕೊಂಡು ಅಧ್ಯಯನ ಮಾಡಿರುವುದರಿಂದ ಇದಕ್ಕೊಂದು ಸ್ವೋಪಜ್ಞತೆ ಬಂದಿದೆ. ಉದಾಹರಣೆಗಾಗಿ ಈ ಹೇಳಿಕೆಯನ್ನು ಗಮನಿಸಬಹುದು. ‘ಹರಪ್ಪಾ ನಾಗರಿಕತೆಯ ನಂತರದ ಕಾಲದಿಂದ ಗೌತಮಬುದ್ಧನ ಕಾಲದವರೆಗಿನ, ನಮ್ಮ ಕಾಲಕ್ಕಿಂತ ಇಪ್ಪತ್ತಾರರಿಂದ ನಲವತ್ತಾರು ಶತಮಾನಗಳ ಪೂರ್ವದ ಅವಧಿಯ ಭಾರತೀಯರ ವಿಕಾಸದ ಕುರಿತು ಕೆಲವು ಉಪಯುಕ್ತವಾದ ಒಳನೋಟಗಳನ್ನು ನೀಡುತ್ತದೆ’ (ಪುಟ 45). ಇಂತಹ ಮಾತುಗಳಲ್ಲಿ ದೇವಿಯವರ ವಿಶ್ಲೇಷಣೆಯ ಸ್ವರೂಪವನ್ನು ಅರಿಯಬಹುದು.

ಎರಡನೆಯ ಭಾಗ ‘ಚಕ್ರ’ದಲ್ಲಿ ‘ಪುರಾಣ ಮತ್ತು ಧರ್ಮ’, ‘ವರ್ಣ, ರಾಷ್ಟ್ರ ಮತ್ತು ಮಹಾಕಾವ್ಯ’, ‘ಕಾಲ’ ಎಂಬ ಶೀರ್ಷಿಕೆಯ ಲೇಖನಗಳಿವೆ. ‘ಮಹಾಭಾರತವು ಯಾವುದೇ ಒಂದು ಕ್ರಿಯೆ ಅಥವಾ ಘಟನೆಯನ್ನು ಆರಂಭ ಬಿಂದುವೆಂದು ಗುರುತಿಸಲು ನಿರಾಕರಿಸುತ್ತದೆ. ಆದಿಪರ್ವದಲ್ಲಿ ಹಲವು ಆರಂಭಗಳಿವೆ. ಕಥೆ ಎಲ್ಲಿಂದ ಪ್ರಾರಂಭವಾಗುತ್ತದೆ ಎಂದು ಹೇಳಲೇ ಸಾಧ್ಯವಿಲ್ಲದಂತಾಗಿದೆ. ಇದೇ ರೀತಿ ಯುದ್ಧದ ಪರಿಸಮಾಪ್ತಿಯ ನಂತರವೂ -ಪೌರಾಣಿಕವಾದ ಸ್ವರ್ಗಾರೋಹಣದ ನಂತರ ಕೂಡ- ಹಲವು ಪರ್ವಗಳು ಬಂದು ನಿರಂತರ ಪರಿಭ್ರಮಣದಲ್ಲಿರುವ ಬಾಳ ಚಕ್ರಕ್ಕೆ ಅಂತ್ಯವಿಲ್ಲ ಎಂದೇ ಸೂಚಿಸುತ್ತವೆ.

ನಿಜಕ್ಕೂ ಮಹಾಭಾರತವು ನಿರಂತರವಾಗಿ ಚಲಿಸುತ್ತಿರುವ ಚಕ್ರವನ್ನು ಕೇಂದ್ರ ಪ್ರತೀಕವಾಗಿಸುತ್ತದೆ. ಮಹಾಭಾರತಕ್ಕೆ ಈ ಚಲನೆಯೇ ಧರ್ಮದ ಸಾರ. ಈ ಚಕ್ರದ ಪರಿಕಲ್ಪನೆ ಮಹಾಭಾರತಲ್ಲಿ ಒಂದು ಮಹಾನ್ ಪ್ರತಿಮೆಯಾಗಿ ಬರುತ್ತದೆ. ಮಹಾಭಾರತದ ಕವಿ ಇದನ್ನು ಬೌದ್ಧ ಸಂಕೇತಗಳಿಂದ ಪಡೆದಿರಬಹುದು. ಏಕೆಂದರೆ ಇಡೀ ಕಾವ್ಯದುದ್ದಕ್ಕೂ ಬೌದ್ಧ ಸಂಕೇತಗಳನ್ನು ಜೀರ್ಣಿಸಿಕೊಂಡು ನಿರೂಪಣೆಯಲ್ಲಿ ಸಮಾವೇಶಗೊಳಿಸಿರುವ ಸಾಧ್ಯತೆಗಳಿವೆ. ಮೂರು ಸಿಂಹಗಳು ಮತ್ತು ಕಾಲ ಚಕ್ರವನ್ನು ಹೊಂದಿರುವ ಸಾರಾನಾಥದ ಸ್ತೂಪವನ್ನು ಸ್ವತಂತ್ರ ಭಾರತದ ಲಾಂಛನವಾಗಿ ಸ್ವೀಕರಿಸಿದ್ದೇವೆ. ಚಕ್ರ ಮತ್ತು ಕುದುರೆ ಚೈತನ್ಯಶಾಲಿ ಪ್ರತಿಮೆಗಳು. ಇವು ಒಳಗೊಳ್ಳುವಿಕೆ ಮತ್ತು ಅಹಿಂಸೆಯನ್ನು ಎತ್ತಿಹಿಡಿಯುವುದರ ಸಂಕೇತ. ಇಂದು ಚಕ್ರದ ಪ್ರತಿಮೆಯೇ ಒಳಗೊಳ್ಳುವಿಕೆ ಮತ್ತು ಅಹಿಂಸೆಯನ್ನು ಭವಿಷ್ಯದ ಪೀಳಿಗೆಗೆ ರವಾನಿಸುತ್ತಾ ಬರುತ್ತಿದೆ. ಇದೇ ಮಹಾಭಾರತದ ಹೆಗ್ಗಳಿಕೆ.

ಪುರಾಣ, ಧರ್ಮ, ಚರಿತ್ರೆ, ಧರ್ಮ ಇವುಗಳು ಹದವಾಗಿ ಬೆರೆತು ಕಾಲಾತೀತವೂ ಸದಾ ಪ್ರಸ್ತುತವೂ ಆಗುವಂತೆ ಮಹಾಭಾರತವು ನಿರೂಪಣೆಗೊಂಡು ಕಲಾತ್ಮಕವಾಗಿದೆ. ಪುರಾಣಗಳನ್ನು ಸಿಗ್ಮಂಡ್ ಫ್ರಾಯ್ಡ್, ಕಾರ್ಲ್ ಯೂಂಗ್ ಇವರನ್ನು ಬಳಸಿಕೊಂಡು ಅಧ್ಯಯನ ಮಾಡಿರುವ ಕ್ರಮ ಅನನ್ಯವಾಗಿದೆ. ವರ್ಣ, ಜಾತಿ, ರಾಷ್ಟ್ರ ಮತ್ತು ಮಹಾಕಾವ್ಯ ಎಂಬ ಲೇಖನದಲ್ಲಿ ‘ಇಪ್ಪತ್ತೊಂದನೇ ಶತಮಾನದ ಪ್ರೇಕ್ಷಕರು ಅಥವಾ ಓದುಗರು ಕೇಳುವ ಸಾಧ್ಯತೆಯಿರುವ ಪ್ರಶ್ನೆಯೆಂದರೆ ಇದು ಸಾಮಾಜಿಕ ತಾರತಮ್ಯವನ್ನು ಸಮರ್ಥಿಸುತ್ತದೆಯೇ? ಮತ್ತು ಅದು ಸಮರ್ಥಿಸುತ್ತದೆ ಎಂದಾದರೆ ನಾವದನ್ನು ರಾಷ್ಟ್ರೀಯ ಮಹಾಕಾವ್ಯವೆಂದು ಪರಿಗಣಿಸುವುದನ್ನು ಮುಂದುವರಿಸಬಹುದೇ?’ ಎಂಬುದು.

ಮೇಲಿನ ಪ್ರಶ್ನೆಗೆ ಉತ್ತರ ಕೊಡುವ ಪ್ರಯತ್ನ ಮಾಡುವಾಗ ಅಂಬೇಡ್ಕರ್ ಅವರ ‘ಜಾತಿ ವಿನಾಶ’ದ ಕೃತಿಯ ಭಾಗಗಳನ್ನು ಉದಾಹರಿಸಿ ಚರ್ಚಿಸುತ್ತಾರೆ ಲೇಖಕರು. ಇದು ಚರ್ಚಾಸ್ಪದವಾಗಿದ್ದು, ಚರ್ಚೆಯನ್ನು ಮುಂದುವರಿಸಲು ಓದುಗನಿಗೆ ಅವಕಾಶ ಮಾಡಿ ಕೊಡುತ್ತದೆ. ‘ಮಹಾಭಾರತ ಎಂಬ ಈ ಭೂಮ ಕಾವ್ಯವು ನಮ್ಮನ್ನು ಯಾವುದೇ ಕಲ್ಪಿತವಾದ, ಸೀಮಾಬದ್ಧವಾದ ರಾಷ್ಟ್ರವಾಗಿ ಒಂದುಗೂಡಿಸುವುದಿಲ್ಲ. ಅದು ನಮ್ಮನ್ನು ಒಗ್ಗೂಡಿಸುವುದು ಕಾಲ ಚಕ್ರದಿಂದ ಸಂಕೇತಿಸಲ್ಪಟ್ಟ ಕಾಲದ ಕಲ್ಪನೆಯಿಂದ. ಮಹಾಭಾರತದ ಈ ಅಪ್ರತಿಮ ಸಂಕೇತವು ಪ್ರತಿಯೊಂದನ್ನೂ ಸಂಪೂರ್ಣ ನಮ್ರತೆಯಿಂದ ಒಪ್ಪಿಕೊಳ್ಳುವ ಶ್ರೇಷ್ಠವಾದ ಸ್ವೀಕಾರ ಮನೋಭಾವವನ್ನು ಕಲಿಸುತ್ತದೆ’.

ಇಂತಹ ಹತ್ತು ಹಲವು ವಿಚಾರಗಳು ಒಳನೋಟಗಳು ಈ ಕೃತಿ ಒಳಗೊಂಡಿದ್ದು ಮಹಾಭಾರತವನ್ನು ಇಂದು ಯಾವ ರೀತಿ ಓದಬಹುದು ಎಂಬುದಕ್ಕೆ ಹಲವಾರು ದಾರಿಗಳನ್ನು ತೋರಿಸುತ್ತದೆ. ಈಗಾಗಲೇ ದೇವಿಯವರ ಮುಖ್ಯ ಲೇಖನಗಳನ್ನು ಅನುವಾದಿಸಿ ಪ್ರಕಟಿಸಿರುವ ಹೆಗಡೆಯವರು ಮಹಾಭಾರತದ ಈ ಮರುಓದಿನ ಕೃತಿಯನ್ನು ಕನ್ನಡಕ್ಕೆ ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲದಂತೆ ಅನುವಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT