ಬುಧವಾರ, ಜೂನ್ 23, 2021
22 °C

ಚರಿತ್ರೆಯ ವರ್ತಮಾನವಾಗಿಸುವ ‘ಸೂಡಿ’

ದೇವು ಪತ್ತಾರ್‌ Updated:

ಅಕ್ಷರ ಗಾತ್ರ : | |

Prajavani

ಕಾಡ ಸೆರಗಿನ ಸೂಡಿ
ಲೇ:
ಮಂಜುನಾಥ್‌ ಚಾಂದ್‌
ಪ್ರ: ಅಕ್ಷರ ಮಂಡಲ
ಮೊ: 9449238154
ಪುಟಗಳು: 192, ಬೆಲೆ: ₹ 180

ಪತ್ರಕರ್ತ- ಕತೆಗಾರ ಮಂಜುನಾಥ್ ಚಾಂದ್‌ ಅವರು ಹೊಸ ಕಾದಂಬರಿಯೊಂದಿಗೆ ಬಂದಿದ್ದಾರೆ. ‘ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ’ಯಲ್ಲಿ ಮೂರು ಬಾರಿ ಬಹುಮಾನ ಪಡೆದಿರುವ ಅವರು, ಈ ಮೊದಲು ‘ಕದ ತೆರೆದ ಆಕಾಶ’ ಎಂಬ ಕತೆಗಳ ಸಂಕಲನ ಪ್ರಕಟಿಸಿದ್ದರು. ಅಲ್ಲದೇ, ಅವರ ‘ಅಮ್ಮ ಕೊಟ್ಟ ಜಾಜಿ ದಂಡೆ’ ಎನ್ನುವ ಲಲಿತ ಪ್ರಬಂಧಗಳ ಸಂಕಲನ ಕೂಡ ಓದುಗರ ಪ್ರೀತಿಗೆ ಪಾತ್ರವಾಗಿದೆ. ಅನುವಾದ-ಕಿರುಚಿತ್ರ ಹೀಗೆ ಹಲವು ಕ್ಷೇತ್ರಗಳಲ್ಲಿ ಆಸಕ್ತರಾಗಿರುವ ಚಾಂದ್ ಅವರ ಪತ್ರಕರ್ತನ ಕುತೂಹಲ ಮತ್ತು ಹುಡುಕಾಟದ ಪರಿಣಾಮವಾಗಿ ಹೊಸ ಕಾದಂಬರಿ ಓದುಗರ ಮುಂದಿದೆ. ‘ಕಾಡ ಸೆರಗಿನ ಸೂಡಿ’ ಎಂಬ ಕಾವ್ಯಾತ್ಮಕ ಹೆಸರಿನ ಕಾದಂಬರಿಯು ದಕ್ಷಿಣ ಕನ್ನಡದ ಅದರಲ್ಲೂ ವಿಶೇಷವಾಗಿ ಕುಂದಾಪುರ ಪ್ರದೇಶದ ಕಥಾವಸ್ತುವನ್ನು ಒಳಗೊಂಡಿದೆ. ಹಾಗೆಯೇ ಈ ಕಾದಂಬರಿಯೊಳಗಿನ ‘ಘಟನೆ’ಗಳು  1930- 35ರ ಕಾಲಘಟ್ಟದವು. 

ಸ್ವಾತಂತ್ರ್ಯ ಹೋರಾಟದ ಕಾವು ತೀವ್ರವಾಗಿದ್ದ 1934ರಲ್ಲಿ ಮಹಾತ್ಮ ಗಾಂಧಿ ಕುಂದಾಪುರಕ್ಕೆ ಬಂದಿದ್ದರು ಎಂಬ ಇತಿಹಾಸದ ಎಳೆಯ ಸುತ್ತ ಕಟ್ಟಲಾದ ಕಾಲ್ಪನಿಕ ಕತೆಯಿದು. 24 ಅಧ್ಯಾಯಗಳಲ್ಲಿ ಕತೆಯನ್ನು ಕಟ್ಟಿಕೊಡಲಾಗಿದೆ. ‘ಕಾದಂಬರಿ’ ಎಂದು ಕರೆದಿದ್ದರೂ ನೀಳ್ಗತೆಯ ಸ್ವರೂಪದಲ್ಲಿದೆ. ಪ್ರತಿ ಅಧ್ಯಾಯವೂ ಸ್ವತಂತ್ರ ಕಥೆಯಂತೆ ಓದಿಸಿಕೊಳ್ಳುತ್ತದೆ. ಹಾಗೆಯೇ ಕಥೆಯನ್ನು ಮುಂದುವರಿಸುವುದಕ್ಕೆ ಅನುವು ಮಾಡಿಕೊಡುತ್ತದೆ. ಬಿಡಿಬಿಡಿಯಾದ ಕತೆಗಳನ್ನು ಕೂಡಿಸಿ ಹೆಣೆದ ಹಾಗೆ ಈ ‘ಕಾದಂಬರಿ’ಗೆ ನೀಳ್ಗತೆಯ ಹೆಣಿಗೆಯಿದೆ.

ಲೇಖಕರು ‘ಸೂಡಿ’ ಎಂಬ ಪದವನ್ನು ಶ್ಲೇಷೆಯಾಗಿ ಬಳಸಿದ್ದಾರೆ. ದೊಂದಿ, ಪಂಜು ಎಂಬ ಅರ್ಥ ಇರುವ ಸೂಡಿ, ಬೆಳಕು ನೀಡುವ ಜ್ಯೋತಿಯಾಗಿರುವ ಹಾಗೆಯೇ ಪ್ರತಿಭಟನೆಯ ‘ಕೊಳ್ಳಿ’ಯೂ ಆಗಿದೆ. ಸೂಡಿ ಅಷ್ಟಕ್ಕೇ ಸೀಮಿತವಾಗಿಲ್ಲ. ಕಾದಂಬರಿಯಲ್ಲಿ ಅದು ಪತ್ರಿಕೆಯೊಂದರ ಹೆಸರು ಕೂಡ. ಅದೀಗ ‘ಕಾಡ ಸೆರಗಿನ ಸೂಡಿ’. ಚರಿತ್ರೆಯೊಂದು ವರ್ತಮಾನವಾಗುವುದು ಹೀಗೆ. ಪ್ರತಿಭಟನೆಯ ‘ಕೆಂಡ’ ಸೃಷ್ಟಿಸುವ ಕೊಳ್ಳಿಯು ತನ್ನನ್ನು ತಾನೇ ಸುಟ್ಟುಕೊಳ್ಳುತ್ತಿರುತ್ತದೆ. ಬೆಳಕು ಹತ್ತಿಕ್ಕುವ ಪ್ರಭುತ್ವದ ಅಹಂಕಾರ ಅದಕ್ಕೆ ಮುಖಾಮುಖಿಯಾಗುವ ‘ಬದುಕು’ ಕೇವಲ ನಿನ್ನೆಯ ಕತೆಯಲ್ಲ. ‘ಸೂಡಿ’ ಎಂಬ ಹೆಸರಿನ ಪತ್ರಿಕೆಯು ಹೋರಾಟದ ಕಿಚ್ಚು ಹಚ್ಚಲು ನೆರವು ನೀಡುತ್ತಿರುತ್ತದೆ.

ಕಾಡಿನ ನಡುವೆ ಬೆಳಕು-ಕಿಡಿ ಹರಡಲು ಕಾರಣವಾಗುವ ‘ಸೂಡಿ’ಯ ಬಗೆಗಿನ ಪ್ರಭುತ್ವದ ಅಸಹನೆಯು ಹಿಂಸೆಯ ಮೂಲಕ ಹತ್ತಿಕ್ಕುವುದಕ್ಕೆ ಎಡೆ ಮಾಡಿಕೊಡುತ್ತದೆ. ಕಾದಂಬರಿ ಅಲ್ಲಿಗೇ ನಿಲ್ಲುವುದಿಲ್ಲ ಎಂಬುದು ವಿಶೇಷ. ಪ್ರಭುತ್ವದ ಪ್ರತಿನಿಧಿಯಾದ ಬ್ರಿಟಿಷ್‌ ಪೊಲೀಸ್ ಅಧಿಕಾರಿ ರಾಬರ್ಟ್‌ ಕೇವಿನ್‌, ಹಿಂಸೆಯಿಂದ ಅಹಿಂಸೆಯತ್ತ ಮುಖ ಮಾಡುತ್ತಾನೆ. ಕೋವಿ ಹಿಡಿದ ಕೈ ಚರಕ ಹಿಡಿಯುವ ಹಾಗೆ ಆಗುತ್ತದೆ. ಈ ಬದಲಾವಣೆ-ಬೆಳವಣಿಗೆಯು ಚಾಂದ್‌ ಅವರ ಆಲೋಚನಾ ಕ್ರಮದ ದ್ಯೋತಕ. ಅವರು ಕತೆ ಹೇಳುವುದಕ್ಕೆ ಮಾತ್ರ ಸೀಮಿತಗೊಳಿಸಿಕೊಂಡಿಲ್ಲ. ಕತೆಯನ್ನು ‘ನೆಪ’ವಾಗಿಟ್ಟುಕೊಂಡು ಬದುಕು ಕಟ್ಟುವ ಕ್ರಿಯೆಯಲ್ಲಿ ತೊಡಗಿದ್ದಾರೆ.

ಪೊಲೀಸು ಠಾಣೆಯ ‘ಹೊಲಸು’ ಬಳಿಯುವ ಮುಗ್ಧ ತನಿಯ ದಟ್ಟಕಾಡಿನ ಮಧ್ಯೆ ಜೀವಿಸುವವ. ತನಿಯನಿಗೆ ಸರಿಜೋಡಿಯಾದ ಸನಿಯಾರು ಪ್ರೀತಿ-ಆರ್ದ್ರತೆಯ ಪ್ರತೀಕ. ಪ್ರಭುತ್ವದಿಂದ ದುರ್ಬಳಕೆಯಾಗುವ ತನಿಯನ ಅಮಾಯಕತೆಯು ಅನ್ನ ನೀಡುತ್ತಿದ್ದ ಒಡೆಯನ ಅವಸಾನಕ್ಕೆ ಕಾರಣವಾಗುತ್ತದೆ. ಅದು ಅರಿವಾದ ಮೇಲೆ ಸೇಡಾಗಿ ಪರಿವರ್ತನೆಗೊಳ್ಳುತ್ತದೆ. ಪೊಲೀಸರ ಹತ್ಯೆಗೆ ಕಾರಣವಾಗುತ್ತದೆ. ಒಡೆಯನ ಪತ್ನಿ ಗಿರಿಜಾ ಅವರ ಮಧ್ಯಪ್ರವೇಶದಿಂದ ‘ಗಾಂಧಿ’ಯ ಅಹಿಂಸೆಯ ಪರಿಚಯವಾಗುತ್ತದೆ. ಹೀಗೆ ಕಥೆಯಲ್ಲಿನ ಚಲನಶೀಲಗುಣವು ಓದಿನ ಖುಷಿಯ ಜೊತೆಗೆ ವಿಭಿನ್ನ ಆಯಾಮ ಕೂಡ ಒದಗಿಸಲು ಕಾರಣವಾಗುತ್ತದೆ. ಕುಂದಗನ್ನಡದ ಆಡುಮಾತು ಹಾಗೂ ಜೀವಂತ ಸ್ತ್ರೀಪಾತ್ರಗಳು ಈ ಕಾದಂಬರಿಯ ಮತ್ತೊಂದು ವಿಶೇಷ.

‘ಕುಂದಾಪ್ರ ಭಾಷೆ, ಕಥೆಯ ಬಂಧ ಮತ್ತು ನಿರೂಪಣಾ ಶೈಲಿ ನಮ್ಮನ್ನು ಮೂವತ್ತರ ದಶಕಕ್ಕೆ ಒಯ್ಯುವ ಶಕ್ತಿಯನ್ನು ಹೊಂದಿವೆ. ಸನ್ನಿವೇಶಗಳು ಮತ್ತು ಪಾತ್ರಗಳು ಚಾಂದ್‌ ಬಿಡಿಸಿರುವ ಚಿತ್ತಾರದಲ್ಲಿ ಸಶಕ್ತವಾಗಿದ್ದು ಓದುಗನನ್ನು ಮರುಳುಗೊಳಿಸುತ್ತವೆ’ ಎಂಬ ಚಿತ್ರನಿರ್ದೇಶಕ ಪಿ. ಶೇಷಾದ್ರಿ ಅವರ ಬೆನ್ನುಡಿಯ ಮಾತುಗಳು ಸೂಕ್ತವಾಗಿವೆ.

ಲೇಖಕ ಮಂಜುನಾಥ್‌ ಅವರು ಈ ಕಾದಂಬರಿಯನ್ನು ಇತ್ತೀಚೆಗೆ ಅಗಲಿದ ಕವಿ ಕೆ.ಎಸ್‌. ನಿಸಾರ್‌ ಅಹಮದ್‌ ಅವರಿಗೆ ಅರ್ಪಿಸಿದ್ದಾರೆ. ಹಿರಿಯ ಪತ್ರಕರ್ತ ಜಗದೀಶ ಕೊಪ್ಪ ಅವರ ಮುನ್ನುಡಿಯ ಮಾತುಗಳು ಕಾದಂಬರಿಯ ಓದಿಗೆ ಸೂಕ್ತ ಪ್ರವೇಶಿಕೆ ಒದಗಿಸುತ್ತವೆ. ಸೊಗಸಾದ ಮುಖಪುಟ ಹಾಗೂ ಮುದ್ರಣ ಗಮನ ಸೆಳೆಯದೇ ಇರಲಾರದು. ಸುಧಾಕರ ದರ್ಬೆಯವರ ರೇಖೆಗಳು ಮತ್ತು ಚಿತ್ರಗಳು ಕಾದಂಬರಿ ಸೊಬಗು-ಸೊಗಸು ಹೆಚ್ಚಿಸಿವೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು