ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಜಗತ್ತನ್ನೇ ಒಳಗೊಂಡ ಸಂಸಾರ ಕಥನ

Last Updated 26 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಎಸ್ತರ್‌ ಅನಂತಮೂರ್ತಿ ಅವರು ‘ನೆನಪು ಅನಂತ’ ಕೃತಿಯಲ್ಲಿ ಅನಂತಮೂರ್ತಿಯವರ ಪತ್ನಿಯಾಗಿ ಕಂಡ ಸಂಸಾರದ ಚಿತ್ರಗಳ ಮೂಲಕ ಅವರ ಬದುಕು–ಚಿಂತನೆಗಳ ಇನ್ನೊಂದು ಮಗ್ಗುಲನ್ನು ಕಾಣಿಸಿದ್ದಾರೆ. ಆ ಮೂಲಕ ಅನಂತಮೂರ್ತಿ ಸಾಹಿತ್ಯ ವಾಙ್ಮಯಕ್ಕೆ ತಮ್ಮ ಅನುಭವ ಕಥನದ ಹೊಸ ಕೃತಿಯೊಂದನ್ನು ನೀಡಿದ್ದಾರೆ.

ನೆನಪುಗಳ ಸ್ವರೂಪದಲ್ಲಿ ಎರಡು ಸಾಧ್ಯತೆಗಳು ಅಡಗಿಕೊಂಡಿರುತ್ತವೆ. ಮೊದಲನೆಯದಾಗಿ, ಅವು ಅಂದಿನ ಭಾವಗಳನ್ನು ಇಂದು ಉದ್ದೀಪಿಸಿ ಆ ಕಾಲಕ್ಕೆ ನಮ್ಮನ್ನು ಮರಳಿಸುತ್ತವೆ. ಎರಡನೆಯದಾಗಿ, ಇಂದಿನ ಅರಿವಿನಲ್ಲಿ ಹಿಂದಿನ ನೆನಪುಗಳನ್ನು ಹೊಸದಾಗಿ ಅರ್ಥೈಸುತ್ತವೆ. ಎಸ್ತರ್‌ ಅವರ ಈ ಕೃತಿ ಆ ಎರಡೂ ಸಾಧ್ಯತೆಗಳನ್ನು ಅನಂತಮೂರ್ತಿಯವರ ನೆನಪಿನಲ್ಲಿ ಸತತವಾಗಿ ಕಾಣಿಸುತ್ತಾ ಹೋಗುತ್ತದೆ. ಹಾಗಾಗಿ ಇದನ್ನು ಅನಂತಮೂರ್ತಿಯವರ ಜೀವನಕಥನ ‘ಸುರಗಿ’ಯ ಮುಂದುವರಿದ ಭಾಗದಂತೆಯೂ ಗುರುತಿಸಬಹುದು. ‘ಹ್ಯಾಂಡ್‌ಸಮ್‌ ಇಂಗ್ಲಿಷ್‌ ಸರ್‌’ ಬಗ್ಗೆ, ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಸಿದ ಮಿತ ಸ್ಕಾಲರ್‌ಶಿಪ್‌ ಜೀವನದ ಬಗ್ಗೆ, ಮಕ್ಕಳನ್ನು ಬೆಳೆಸಿದ ತಂದೆಯ ಬಗ್ಗೆ ಎಸ್ತರ್‌ ಅವರು ಮಾತ್ರ ನೀಡಬಲ್ಲ ಹಲವು ಒಳನೋಟಗಳು ಇಲ್ಲಿವೆ.

ಎಸ್ತರ್‌ ಹಾಗೂ ಅನಂತಮೂರ್ತಿ ಇಬ್ಬರೂ ಹುಟ್ಟಿನಿಂದ ಪ್ರತ್ಯೇಕ ಧರ್ಮದವರು. ಅಂದಿನ ಸಾಮಾಜಿಕ ಪ್ರವಾಹಕ್ಕೆ ಎದುರಾಗಿ ಈಜಿ ಸಂಸಾರ ಮಾಡಿದವರು. ಹಾಗಾಗಿ ಭಾರತದ ಯಶಸ್ವಿ ಅಂತರ ಧರ್ಮೀಯ ವಿವಾಹವೊಂದಕ್ಕೂ ಈ ಕೃತಿ ಸಾಕ್ಷಿ. ಏಳು ಬೀಳುಗಳ ಸೂಚನೆಯೊಂದಿಗೆ ಪರಸ್ಪರ ಬೆಳೆಯುತ್ತಾ ಹೋದ ಅನುರಾಗದ ಸಾಂಸಾರಿಕ ಚಿತ್ರಣವಾಗಿಯೂ ಇದಕ್ಕೊಂದು ಮಹತ್ವವಿದೆ. ನಿತ್ಯ ಮನೆಗೆ ಬಂದು ಹೋಗುತ್ತಿದ್ದ ಸಾಹಿತಿಗಳು, ಸ್ನೇಹಿತರು, ಹಲವು ಪಕ್ಷಗಳ ನಾಯಕರು ಎಲ್ಲರೂ ಅವರ ಸಂಸಾರ ಕಥನದಲ್ಲಿ ಹಾದು ಹೋಗುತ್ತಾರೆ. ಅನಂತಮೂರ್ತಿಯವರ ಸಾಹಿತ್ಯ ಅಧ್ಯಯನಕ್ಕೂ ಈ ನೆನಪುಗಳು ಪೂರಕ.

ಸರ್ವಸಮಾನ ಭಾವದಲ್ಲಿ ಎಲ್ಲರನ್ನೂ ಆದರಿಸುತ್ತಿದ್ದ ಮೇಷ್ಟ್ರು ಅನಂತಮೂರ್ತಿಯವರು. ಪ್ರೊಫೆಸರ್‌, ವೈಸ್‌ ಚಾನ್ಸಲರ್‌ ಆದ ಬಳಿಕವೂ ಎಸ್ತರ್‌ ಅವರೂ ಸೇರಿದಂತೆ ಎಲ್ಲರಿಗೂ ಅನಂತಮೂರ್ತಿಯವರು ಮೇಷ್ಟ್ರು, ಸ್ನೇಹಿತರಿಗೆ ಮಾತ್ರ ಅನಂತು. ಸದಾ ಅವರ ಮನೆ ತುಂಬಾ ಭೇಟಿಗೆ ಬರುವ ಜನ, ಮಾತು, ಚರ್ಚೆಗಳಿದ್ದರೂ ಮೇಷ್ಟ್ರು ಗಂಭೀರ ವಿಚಾರಗಳಾಚೆಗೆ ಒಂದು ಕ್ಷಣವೂ ಕಳೆದವರಲ್ಲ. ಅವರು ಮಾತಿನ ಮೂಲಕವೇ ಸದಾ ವಿಚಾರ ಧ್ಯಾನದಲ್ಲಿದ್ದವರು. ನಿತ್ಯ ವ್ಯವಹಾರದ ಪ್ರಪಂಚದ ಬಗ್ಗೆ ಅಂತಹ ಗಮನವಿದ್ದವರಲ್ಲ. ಎಸ್ತರ್‌ ಅವರು ಇಲ್ಲಿ ಬರೆದುಕೊಂಡಿರುವಂತೆ, ಅವರು ಮದುವೆಯಾದ ಹೆಚ್ಚಿನ ಎಲ್ಲ ಹೆಣ್ಣುಮಕ್ಕಳ ಹಾಗೆ ಸದಾ ಸ್ಥಿರತೆಯ ಚಿಂತೆಯಲ್ಲಿದ್ದ ಒಬ್ಬ ಗೃಹಿಣಿ. ಪ್ರೀತಿಸಿ ಮದುವೆಯಾದ ಅವರಿಗೂ ಇಂತಹ ಜೀನಿಯಸ್‌ ಬರಹಗಾರ ಪತಿಯೊಡನೆ ಸಂಸಾರ ಮಾಡುವುದು ಸರಳ ವಿಚಾರವಲ್ಲ. ಎಸ್ತರ್‌ ಅವರು ಅನಂತಮೂರ್ತಿಯವರ ಅಂತರಂಗದ ಜೀವದ್ರವ್ಯ ಎಂಬುದರ ಅರಿವು ಅವರಿಗೆ ಇದ್ದುದರಿಂದಲೇ ‘ನನ್ನದೆಂಬುದು ಏನೂ ಇಲ್ಲ, ಎಲ್ಲ ಅವರದ್ದೇ’ ಎಂಬ ಸಮರ್ಪಣ ಭಾವದಲ್ಲಿ ಮೇಷ್ಟ್ರೊಡನೆ ಐದೂವರೆ ದಶಕಗಳ ಕಾಲ ಸುಗ್ಗಿ–ಸಂಕಟಗಳನ್ನು ಹಂಚಿಕೊಂಡು, ಜೀವನ ನಡೆಸಲು ಸಹಾಯ ಮಾಡಿರಬೇಕು ಎಂಬುದು ಈ ಕೃತಿ ಓದಿದಾಗ ವೇದ್ಯವಾಗುತ್ತದೆ.

ಅನಂತಮೂರ್ತಿಯವರ ಆರೋಗ್ಯವನ್ನು ಮೂರು ದಶಕಗಳಿಗೂ ಹೆಚ್ಚು ಕಾಲ ಅವರು ಜತನದಿಂದ ಕಾಪಾಡಿದರು. ಈಗ ಅವರಿಲ್ಲ ಎಂಬ ಅರಿವಿನಲ್ಲಿ ಕಾಡತೊಡಗಿದ ಖಾಲಿತನವೊಂದರಿಂದ ಬಿಡುಗಡೆ ಪಡೆಯುವುದಕ್ಕಾಗಿ ಎಸ್ತರ್‌ ಅವರು ಈ ನೆನಪುಗಳೊಡನೆ ಒಡನಾಡಿದರು. ಆ ನಿರೂಪಣೆಯನ್ನು ಸೊಗಸಾಗಿ ಬರೆದುಕೊಂಡು ಪೃಥ್ವೀರಾಜ ಕವತ್ತಾರು ಕನ್ನಡಕ್ಕೊಂದು ಅಪರೂಪದ ಕೃತಿ ಸಿಗಲು ಕಾರಣವಾದರು.

ಅನಂತಮೂರ್ತಿಯವರು ವೈಚಾರಿಕತೆ ಎಷ್ಟೇ ಇದ್ದರೂ ಅವರು ಸದಾ ಸಮಾನತೆಯ ಬುನಾದಿಯ ಮೇಲಿನ ಆದರ್ಶ ಸಮಾಜದ ಕನಸುಗಾರರು. ಮೈಸೂರಿನ ಸರ್ಕಾರಿ ಮೆಡಿಕಲ್‌ ಕಾಲೇಜಿನಲ್ಲಿ ಸೀಟು ಸಿಕ್ಕಿದ ಮಗಳನ್ನು ಎಂಬಿಬಿಎಸ್‌ಗೆ ಸೇರಿಸಲು ಹೋಗುವಾಗ ಕಾಲೇಜು ಫೀಸು ಕಟ್ಟಲು ಬೇಕಾದ ಐದುನೂರು ರೂಪಾಯಿಗಳನ್ನು ಮರೆತು ಹೋಗಬಲ್ಲವರು. ತಮ್ಮ ಸಾವನ್ನು ಸಂಭ್ರಮಿಸಿದವರನ್ನೂ ಅವರು ಕ್ಷಮಿಸಿಬಿಡಬಲ್ಲರು. ಬದುಕಿನ ಕೊನೆಯ ದಿನಗಳಲ್ಲೂ ಸೈದ್ಧಾಂತಿಕ ದೃಢತೆಯಲ್ಲಿ, ವೈಚಾರಿಕ ತನ್ಮಯತೆಯಲ್ಲಿ ತೊಡಗಿರುತ್ತಿದ್ದ ಅವರ ಸುತ್ತ ಸದಾ ಜನ. ಅವರನ್ನು ‘ವೀಕ್‌ಎಂಡ್‌ ಹಸ್ಬೆಂಡ್‌’ ಎಂದು ತಮಾಷೆ ಮಾಡುತ್ತಿದ್ದ ಎಸ್ತರ್‌ ಅವರು, ನಿರಂತರವಾಗಿ ಅವರ ಆರೋಗ್ಯವನ್ನು ಜತನ ಮಾಡುತ್ತಾ ತಮ್ಮ ಆರೋಗ್ಯವನ್ನು ಕಡೆಗಣಿಸಿದ್ದುಂಟು. ಈ ಎಲ್ಲ ನೆನಪುಗಳ ಮೂಲಕ ಪರಸ್ಪರರ ಸಂಬಂಧದ ಆಪ್ತತೆಯಲ್ಲಿ ಅನಂತಮೂರ್ತಿಯವರ ಸಾಂಸಾರಿಕ, ಸಾಮಾಜಿಕ ಮೌಲ್ಯಗಳನ್ನೂ ಎಸ್ತರ್‌ ಅವರು ಇಲ್ಲಿ ಕಾಣಿಸಿಕೊಡುತ್ತಾರೆ.

ಕೃತಿ: ನೆನಪು ಅನಂತ

ಲೇ: ಎಸ್ತರ್‌ ಅನಂತಮೂರ್ತಿ

ನಿರೂಪಣೆ: ಪೃಥ್ವೀರಾಜ ಕವತ್ತಾರು

ಪ್ರ: ಅಕ್ಷರ ಪ್ರಕಾಶನ, ಹೆಗ್ಗೋಡು

ಸಂ: 8762288023

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT